ಧಾರವಾಡ

ಜೋರಾದ ಸೋಲು-ಗೆಲುವಿನ ಗಣಿತ

Published On :

ಪ್ರಸಕ್ತ ಆಡಳಿತಾವಧಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ಪ್ರವೇಶಿಸುವ ಪುರಪಿತೃಗಳನ್ನು ಮತದಾರ ಈಗಾಗಲೇ ಚುನಾಯಿಸಿದ್ದು, ಈ ಪುರಪಿತೃರು ಯಾರೆಂಬ ಗುಟ್ಟುರಟ್ಟಾಗಲು ಬಾಕಿ ಉಳಿದಿರುವುದು ಇನ್ನೂ ಎರಡೇ ದಿನ.
ಈ ಹಿಂದೆ 2007ರಲ್ಲಿ ಪಾಲಿಕೆಗೆ ನಡೆದಿದ್ದ ಚುನಾವಣೆಯ ಮೀಸಲಾತಿ ಆಧಾರದ ಮೇಲೆಯೇ ಈ ಬಾರಿಯೂ ಚುನಾವಣೆ ನಡೆದಿದ್ದರಿಂದ ಬಹುತೇಕ ವಾರ್ಡ್‌ಗಳಲ್ಲಿ ಹಳಬರೇ ಮತ್ತೆ ಕಣಕ್ಕಿಳಿದಿದ್ದರು. ಕಳೆದ ಬಾರಿ ಪಾಲಿಕೆ ಪ್ರವೇಶಿಸಿದ್ದ ಪುರಪಿತೃಗಳಲ್ಲಿ ಹೆಚ್ಚಿನವರಿಗೇ ರಾಜಕೀಯ ಪಕ್ಷಗಳು ಈ ಬಾರಿಯೂ ಟಿಕೆಟ್ ನೀಡಿದ್ದವು. ಇದೇ ಮೊದಲ ಬಾರಿಗೆ ಪಾಲಿಕೆ ಚುನಾವಣೆಗೆ ವಿವಿಧ ಪಕ್ಷಗಳ ಟಿಕೆಟ್ ಪಡೆದುಕೊಳ್ಳುವ ಮೂಲಕ ರಾಜಕೀಯದಲ್ಲಿ ಅಂಬೇಗಾಲಿಟ್ಟವರೂ ಕೆಲವರಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಪಾಲಿಕೆಯ ಮಾಜಿ ಸದಸ್ಯರೆದುರು ಹೊಸಬರು ಅದೃಷ್ಟ ಪರೀಕ್ಷೆಗೂ ಇಳಿದಿದ್ದಾರೆ. ಇನ್ನೂ ಕೆಲವೆಡೆ ಹಿಂದಿನ ಚುನಾವಣೆಯಲ್ಲಿ ಸೋತವರು ಮತ್ತೆ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಬಾರಿ ಒಂದು ಪಕ್ಷದಲ್ಲಿ ಗುರುತಿಸಿಕೊಂಡು, ಚುನಾವಣೆಯಲ್ಲಿ ಗೆಲವು ಸಾಧಿಸಿದವರು ಈ ಬಾರಿ ಮತ್ತೊಂದು ಪಕ್ಷದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲ ಈ ಬಾರಿ ಪಾಲಿಕೆ ಪ್ರವೇಶಿಸಲೇಬೇಕೆಂಬ ಹಠದಿಂದ ಇದ್ದ ಅಲ್ಪ ಸಮಯದಲ್ಲಿ ಮತದಾರನ ಮನೆಮನೆಗೆ ತೆರಳಿ ಪ್ರಚಾರ ಮಾಡಿದ್ದಾರೆ. ಮತದಾನದ ಹಿಂದಿನ ದಿನವಂತೂ ಹಣ, ಸೀರೆ ಹಾಗೂ ಮತ್ತಿತರ ವಸ್ತುಗಳು ಗುಟ್ಟಾಗಿ ಕೆಲವರ ಕೈ ಸೇರಿದ್ದು ಆಗಲೇ ರಟ್ಟಾಗಿದೆ.
ಹತ್ತಾರು ಪ್ರಯತ್ನ: ಚುನಾವಣಾ ಕಣದಲ್ಲಿದ್ದವರು ನಡೆಸಿದ್ದ ಗೆಲ್ಲಲೇಬೇಕೆಂಬ ಪ್ರಯತ್ನಗಳ ಫಲಾಫಲಗಳು ಗುರುವಾರ ನಡೆದ ಚುನಾವಣೆಯಲ್ಲಿ ನಿರ್ಧಾರಗೊಂಡಿವೆ. ಮಾ. 11ರಂದು ಬೆಳಗ್ಗೆ 8ರಿಂದ ಹುಬ್ಬಳ್ಳಿಯ ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಮಹಾನಗರ ಪಾಲಿಕೆಯ, ಧಾರವಾಡದಲ್ಲಿ ಅಳ್ನಾವರ ಪಪಂ ಹಾಗೂ ಅಣ್ಣಿಗೇರಿ, ಕಲಘಟಗಿ, ನವಲಗುಂದ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಸಂದರ್ಭ ಈ ನಿರ್ಧಾರ ಬಹಿರಂಗಗೊಳ್ಳಲಿವೆ.
ಅಂದು ಕೇವಲ 67 ಜನರ ಪ್ರಯತ್ನಗಳು ಮಾತ್ರ ಸಫಲಗೊಳ್ಳಲಿದ್ದು, ಇನ್ನುಳಿದವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.  ಇದೇ ಕಾರಣಕ್ಕಾಗಿ ಚುನಾವಣಾ ಕಣದಲ್ಲಿದ್ದ ಅನೇಕರು ಇದೀಗ ಸುಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಮತ ಎಣಿಕೆಗೆ ಇನ್ನೂ ಎರಡು ದಿನ ಬಾಕಿ ಇರುವುದರಿಂದ ಕುಟುಂಬ ಹಾಗೂ ಸ್ನೇಹಿತರೊಂದಿಗೆ ತಮಗಿಷ್ಟವಾದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ತಿರುಪತಿ, ಧರ್ಮಸ್ಥಳ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತೆರಳಿರುವ ಅಭ್ಯರ್ಥಿಗಳು ಗೆಲುವು ತಮ್ಮದೇ ಆಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೆಲವರು ಚುನಾವಣೆಯಲ್ಲಿ ಗೆಲುವಾದಲ್ಲಿ ದೇವಸ್ಥಾನಗಳಿಗೆ ಕಿರೀಟ, ಹಣ ನೀಡುವ, ಉರುಳು ಸೇವೆ ಮಾಡುವ ಬಗ್ಗೆ ದೇವರಲ್ಲಿ ಹರಕೆಯನ್ನೂ ಹೊತ್ತಿದ್ದಾರೆ.  ಈ ಎಲ್ಲ ಹರಕೆ, ಪ್ರಯತ್ನಗಳಿಗೆ ಬರುವ ಸೋಮವಾರ ಉತ್ತರ ದೊರೆಯುವ ಮೂಲಕ ಮುಂದಿನ ಐದು ವರ್ಷಗಳ ಅವಧಿಗೆ ಪುರಪಿತೃರಾಗುವವರು ಯಾರೆಂಬ ಮತದಾರನ ಆದೇಶ ಬಹಿರಂಗಗೊಳ್ಳಲಿದೆ.  ಈ ಮಧ್ಯೆ ಗುರುವಾರ ಆಯಾ ವಾರ್ಡ್‌ನಲ್ಲಿ ನಡೆದಿರುವ ಮತದಾನದ ಶೇಕಡಾ ವಾರು ಅಂಕಿ-ಅಂಶಗಳ ಮೇಲೆಯೂ ಚುನಾವಣೆ ಫಲಿತಾಂಶದ ಲೆಕ್ಕಾಚಾರ ಪ್ರಾರಂಭಗೊಂಡಿವೆ.  ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಬರಬಹುದು, ಯಾವ ಪಕ್ಷ ಆಡಳಿತಕ್ಕೆ ಬರಬಹುದು ಎಂಬುದು ಸೇರಿದಂತೆ ಹತ್ತಾರು ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಭಾನುವಾರ ರಾತ್ರಿಯವರೆಗೂ ಈ ಲೆಕ್ಕಾಚಾರ ಇನ್ನೂ ತುರುಸುಗೊಳ್ಳಲಿವೆ.

ಮೊಬೈಲ್ ನಾಟ್ ರೀಚೇಬಲ್
ಚುನಾವಣಾಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಷ್ಟೇ ಅಲ್ಲ ನಾನಾ ಪಕ್ಷದ ಮುಖಂಡರೂ ಚುನಾವಣೆ ಮುಗಿದಿದ್ದರಿಂದ ನಿರಾಳರಾಗಿದ್ದಾರೆ. ಹಗಲು-ರಾತ್ರಿ ಎನ್ನದೇ ಮೊಬೈಲ್‌ನಲ್ಲಿ ಮಾತನಾಡುತ್ತಾ, ವಾರ್ಡ್‌ಗಳಲ್ಲಿ ಸಂಚರಿಸುತ್ತಾ ಬಿಡುವಿಲ್ಲದ ಚಟುವಟಿಕೆಯಲ್ಲಿದ್ದರು. ಚುನಾವಣೆ ಮುಗಿದ್ದಿದ್ದೇ ಬಹುತೇಕರು ಮೊಬೈಲ್ ನಾಟ್ ರೀಚೇಬಲ್ ಮಾಡಿಕೊಂಡಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.