ಧಾರವಾಡ

ವಾಕರಸಾ ಚಾಲಕರೇ ಹುಷಾರ್...

Published On :

-ಬಿ.ಕೆ. ಮಹೇಂದ್ರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 25
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನ ಚಾಲಕರೆ ಹುಷಾರ್...!
ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಉಪಯೋಗಿಸಿದರೆ ಅಥವಾ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದು ಕಂಡು ಬಂದಲ್ಲಿ ತಲೆದಂಡ ಕಟ್ಟಿಟ್ಟಬುತ್ತಿ!
ಪ್ರಯಾಣಿಕರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ ಒದಗಿಸಿಕೊಡುವ ನಿಟ್ಟಿನಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದ್ದರೆ ಚಾಲಕರಲ್ಲಿ ನಡುಕು ಹುಟ್ಟಿಸಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು 26 ಫೆಬ್ರುವರಿ 2014ರಂದು ಸುತ್ತೋಲೆ ಹೊರಡಿಸಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರ ಮೊಬೈಲ್ ದೂರವಾಣಿ ಇಟ್ಟುಕೊಳ್ಳುವುದನ್ನು ನಿಷೇಧಿಸಿದ್ದಾರೆ. ಇದೇ ರೀತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಆದೇಶಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.
ಚಾಲನಾ ಸಿಬ್ಬಂದಿ ತೀರಾ ಅವಶ್ಯಕತೆ ಇದ್ದಾಗ ಮಾತ್ರ ಮೊಬೈಲ್ ದೂರವಾಣಿ ಬಳಸಬಹುದು. ಆದರೆ, ವಾಹನ ಚಾಲನೆ ಮಾಡುವಾಗ ಯಾವುದೇ ಕಾರಣಕ್ಕೂ ಮೊಬೈಲ್ ಬಳಸದಂತೆ ವ್ಯವಸ್ಥಾಪಕ ನಿರ್ದೇಶಕರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಅಲ್ಲದೆ, ಚಾಲನಾ ಸಿಬ್ಬಂದಿ ಮೊಬೈಲ್ ಉಪಯೋಗಿಸುವಾಗ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕಟ್ಟೆಚ್ಚರವಹಿಸಬೇಕು. ಇದಕ್ಕೂ ಮಿಗಿಲಾಗಿ ಯಾವೊಬ್ಬ ಚಾಲಕ, ಪ್ರಯಾಣದ ಸಂದರ್ಭದಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡು ಬಂದಲ್ಲಿ ಅಥವಾ ಪ್ರಯಾಣಿಕರು ದೂರು ನೀಡಿದ್ದಲ್ಲಿ ಇಂತಹ ಪ್ರಕರಣಗಳನ್ನು ತೀವ್ರ ಸ್ವರೂಪದ (ಓಆರ್‌ಎಂಸಿ) ಎಂದು ಪರಿಗಣಿಸಿ ಶಿಸ್ತು ಕ್ರಮಕೈಗೊಳ್ಳಲು ನಿರ್ದೇಶಿಸಲಾಗಿದೆ.
ಜೀವ ಹಾನಿ: ವಾಹನ ಚಾಲನಾ ಸಂದರ್ಭದಲ್ಲಿ ಚಾಲಕರು ಅತಿ ಹೆಚ್ಚು ಮೊಬೈಲ್ ಬಳಸುತ್ತಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಮೊಬೈಲ್ ಬಳಕೆಯಿಂದ ಚಾಲನಾ ಸಂದರ್ಭದಲ್ಲಿ ಏಕಾಗ್ರತೆ ಕೊರತೆಯೂ ಉಂಟಾಗುತ್ತದೆ ಎಂದೂ ವ್ಯವಸ್ಥಾಪಕ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೀವ ಹಾನಿ ಮಾತ್ರವಲ್ಲದೆ, ವಾಹನ ಅಪಘಾತಕ್ಕೀಡಾಗಿ ಸಂಸ್ಥೆಗೂ ಸಾಕಷ್ಟು ಹಾನಿಯಾಗುತ್ತದೆ. ಇದನ್ನು ತಪ್ಪಿಸುವ ಮೂಲಕ ಶ್ರೀಸಾಮಾನ್ಯರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ವಾಹನ ಪ್ರಯಾಣ ವ್ಯವಸ್ಥೆ ಕಲ್ಪಿಸಿಕೊಡಲು ಸಂಸ್ಥೆ ಮುಂದಾಗಿದ್ದು ಸ್ವಾಗತಾರ್ಹ.
ತಕ್ಷಣ ಅಮಾನತು: ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದು ಖಚಿತಪಟ್ಟ ಕ್ಷಣಕ್ಕೆ ಅಂತಹ ಚಾಲಕನನ್ನು ಅಮಾನತ್ತಿನಲ್ಲಿಡಲು ಸಂಸ್ಥೆ ಮುಂದಾಗಿದೆ. ಚಾಲಕರು ಘಟಕದಿಂದ ವಾಹನಗಳನ್ನು ಮಾರ್ಗದ ಮೇಲೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮತ್ತು ಮಾರ್ಗ ಮಧ್ಯದಲ್ಲಿ ಮದ್ಯಪಾನ ಸೇವಿಸಿರುವ ಬಗ್ಗೆ ಆಗಾಗ ಬ್ರೆತ್ ಅನಲೈಸರ್‌ಗಳ ಸಹಾಯದಿಂದ ತಪಾಸಣೆ ನಡೆಸಲಾಗುತ್ತದೆ.
ಈ ರೀತಿಯ ತಪಾಸಣೆಯಿಂದ ಚಾಲಕರು ಮದ್ಯ ಸೇವಿಸಿರುವುದು ಖಾತ್ರಿಯಾದಲ್ಲಿ ಅಥವಾ ಚಾಲಕರನ್ನು ಪ್ರಯಾಣಿಕರ ದೂರುಗಳ ಆಧಾರದ ಮೇಲೆ ತಪಾಸಣೆಗೆ ಒಳಪಡಿಸಿ ಅದು ಧೃಡಪಟ್ಟಾಗ ಅಂತಹ ಚಾಲಕರನ್ನು ಕೂಡಲೇ ಕೆಲಸದಿಂದ ಅಮಾನತ್ತಿನಲ್ಲಿಡಬೇಕು ಮತ್ತು ವಿಳಂಬ ಮಾಡದೆ ನೌಕರರ ಶಿಸ್ತು ಮತ್ತು ನಡತೆ ನಿಯಮಾಳಿಗಳು 1971ರ ನಿಯಮಾವಳಿ 23ರ ಪ್ರಕಾರ ಕ್ರಮ ಜರುಗಿಸುವಂತೆಯೂ ಆದೇಶಿಸಲಾಗಿದೆ.
ಅಲ್ಲದೆ, ಮದ್ಯಪಾನ ಸೇವಿಸಿ ವಾಹನ ಚಲಾಯಿಸುವ ಚಾಲಕರಿಗೆ ಸೇವೆಯಿಂದ ವಜಾ ಮಾಡುವುದು ಸೇರಿದಂತೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ಕ್ರಮ ಜರುಗಿಸುವಂತೆಯೂ ಸುತ್ತೋಲೆ ಮೂಲಕ ವ್ಯವಸ್ಥಾಪಕ ನಿರ್ದೇಶಕರು ಸಂಸ್ಥೆಯ ಆಯಾ ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
ತಪಾಸಣೆ ಆರಂಭ: ಸುತ್ತೋಲೆ ಹೊರಡಿಸಿದ ದಿನದಿಂದಲೇ ಸಂಸ್ಥೆಯ ಆಯಾ ಘಟಕಗಳ ಉಸ್ತುವಾರಿವಹಿಸಿಕೊಂಡಿರುವ ಅಧಿಕಾರಿಗಳು, ಚಾಲಕರು ವಾಹನ ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಸುತ್ತಿದ್ದಾರೆಯೇ ಅಥವಾ ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ.

ಸುರಕ್ಷಿತ, ಸುಗಮ ಪ್ರಯಾಣ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಬಸ್ ಚಾಲಕರು ಯಾವುದೇ ಕಾರಣಕ್ಕೂ ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಸುವಂತಿಲ್ಲ. ಮಾತ್ರವಲ್ಲದೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು ಖಾತ್ರಿಪಟ್ಟಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಉಪಯೋಗಿಸಿದ ಎರಡ್ಮೂರು ಪ್ರಕರಣಗಳು ಪತ್ತೆಯಾಗಿದ್ದು ಅಂಥ ಚಾಲಕರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.
- ಎಸ್.ವಿ. ಹುಳ್ಯಾಳಕರ
ಮುಖ್ಯಸಂಚಾರ ವ್ಯವಸ್ಥಾಪಕರು, ವಾಕರಸಾ ಸಂಸ್ಥೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.