ಮತ ಯಂತ್ರ: ಎಲ್ಲರಿಗೂ ಸಮ್ಮತ!
-ಆನಂದ ಅಂಗಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 27
ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಜನರಲ್ಲಿ ಕುತೂಹಲ ಸಹಜ.
ಒಂದು ವಿದ್ಯುನ್ಮಾನ ಮತಯಂತ್ರಕ್ಕೆ 3,840 ಮತಗಳನ್ನು ದಾಖಲಿಸುವ ಸಾಮರ್ಥ್ಯವಿದೆ. ಸಾಮಾನ್ಯವಾಗಿ ಒಂದು ಮತಗಟ್ಟೆಯಲ್ಲಿ 1500 ಮತಗಳಿರುತ್ತವೆ.
1989-90ರ ಮಧ್ಯಪ್ರದೇಶ, ರಾಜಸ್ಥಾನ ಹಾಗೂ 1998ರ ದೆಹಲಿ ವಿಧಾನಸಭೆ ಚುನಾವಣೆಯ 16 ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ವಿದ್ಯುತ್ ಸೌಕರ್ಯ ಇಲ್ಲದ ಪ್ರದೇಶದಲ್ಲಿಯೂ ಇವುಗಳನ್ನು ಬಳಸಬಹುದಾಗಿದೆ. ಬೆಂಗಳೂರಿನ ಭಾರತ ಎಲೆಕ್ಟ್ರಾನಿಕ್ಸ್ ಮತ್ತು ಹೈದರಾಬಾದಿನ ಎಲೆಕ್ಟ್ರಾನಿಕ್ ಕಾರ್ಪೋರೇಶನ್ ಆಫ್ ಇಂಡಿಯಾ ಜಂಟಿಯಾಗಿ ತಯಾರಿಸಿರುವ 6 ವೋಲ್ಟ್ನ ಅಲ್ಕಾಲೈನ್ ಬ್ಯಾಟರಿ ಮೂಲಕ ಮತಯಂತ್ರ ಕೆಲಸ ಮಾಡುತ್ತದೆ.
ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಗರಿಷ್ಠ 64 ಅಭ್ಯರ್ಥಿಗಳು ಸ್ಪರ್ಧಿಸಿದಾಗಲೂ ವಿದ್ಯುನ್ಮಾನ ಮತಯಂತ್ರ ಬಳಸಬಹುದು. ಒಂದು ಯಂತ್ರದ ಮತ ಚಲಾವಣೆ ಘಟಕದಲ್ಲಿ 16 ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಕ್ಕೆ ಮಾತ್ರ ಅವಕಾಶ ಇರುತ್ತದೆ. ಇಂಥ ಸಂದರ್ಭದಲ್ಲಿ ಇನ್ನೂ 5 ಮತ ಚಲಾವಣೆ ಘಟಕಗಳನ್ನು ಯಂತ್ರಕ್ಕೆ ಜೋಡಿಸಬಹುದು. ಆದರೆ ಒಂದು ಕ್ಷೇತ್ರದಲ್ಲಿ 64 ಅಭ್ಯರ್ಥಿಗಳು ಕಣದಲ್ಲಿದ್ದರೆ ಚುನಾವಣಾ ಆಯೋಗ ವಿದ್ಯುನ್ಮಾನ ಮತಯಂತ್ರಗಳ ಬದಲು ಮತಪೆಟ್ಟಿಗೆ ಹಾಗೂ ಮತಪತ್ರಗಳ ಸಾಂಪ್ರದಾಯಿಕ ವಿಧಾನವನ್ನು ಬಳಸುತ್ತದೆ.
ವಿದ್ಯುನ್ಮಾನ ಮತ ಯಂತ್ರ ಕೆಟ್ಟರೆ ಅವುಗಳನ್ನು ತಕ್ಷಣ ಬದಲಾಯಿಸಬಹುದು. ಯಂತ್ರ ಕೆಟ್ಟರೂ ಅದುವರೆಗೆ ಚಲಾವಣೆಯಾದ ಮತಗಳಿಗೆ ಯಾವುದೇ ಧಕ್ಕೆಯಾಗದು. ಒಂದು ಕಂಟ್ರೋಲ್ ಘಟಕ, ಒಂದು ಮತ ದಾಖಲಿಸುವ ಘಟಕ ಹಾಗೂ ಒಂದು ಬ್ಯಾಟರಿ ಇರುವ ವಿದ್ಯುನ್ಮಾನ ಯಂತ್ರವನ್ನು 1989-90ರಲ್ಲಿ ರು. 5,500 ನೀಡಿ, ಖರೀದಿಸಲಾಗಿತ್ತು. ಮತಪತ್ರಗಳ ಮುದ್ರಣ, ಸಾಗಾಟ, ಸಂಗ್ರಹಗಳಿಗೆ ತಗುಲುವ ವೆಚ್ಚಕ್ಕಿಂತ ವಿದ್ಯುನ್ಮಾನ ಮತಯಂತ್ರ ಖರೀದಿಸಲು ಬೇಕಾಗುವ ಹಣ ಅತಿ ಕಡಿಮೆ.
ಅನಕ್ಷರಸ್ಥರೂ ಯಾವುದೇ ತೊಂದರೆ ಇಲ್ಲದೆ ವಿದ್ಯುನ್ಮಾನ ಮತಯಂತ್ರ ಬಳಸಬಹುದು. ಮತದಾರ ತನ್ನ ಆಯ್ಕೆಯ ಅಭ್ಯರ್ಥಿ ಎದುರಿನ ನೀಲಿ ಬಟನ್ ಒತ್ತಿದರೆ ಸಾಕು, ಮತದಾನ ಮಾಡಿದಂತೆ. ಪ್ರತಿ ನಿಮಿಷಕ್ಕೆ 5 ಮತಗಳು ಈ ಯಂತ್ರದಲ್ಲಿ ದಾಖಲಾಗಬಲ್ಲವು. ಒಂದು ಬಾರಿ ಮತ ಒತ್ತಿದ ಮೇಲೆ ಬಟನ್ ಲಾಕ್ ಆಗುತ್ತದೆ. ನಕಲಿ ಮತದಾನ ತಡೆಗೂ ಇದು ಮದ್ದು.
ವಿದ್ಯುನ್ಮಾನ ಮತಯಂತ್ರಗಳ ಬಳಕೆಯಿಂದ ಮತಪೆಟ್ಟಿಗೆ ಹಾಗೂ ಮತಪತ್ರಗಳಿಗೆ ಬಳಸುವ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಫಲಿತಾಂಶವೂ 2-3 ತಾಸುಗಳಲ್ಲೇ ಪ್ರಕಟವಾಗುತ್ತದೆ. ಮತಪತ್ರಗಳ ಮೂಲಕ ನಡೆಯುವ ಚುನಾವಣೆಯಲ್ಲಿ ಫಲಿತಾಂಶಕ್ಕೆ 30-40 ತಾಸು ಎಣಿಕೆ ಮಾಡಿದ ಉದಾಹರಣೆಗಳೂ ಇವೆ. ಮತಗಳು ಕುಲಗೆಡುವುದಕ್ಕೂ ಯಂತ್ರಗಳು ಪರಿಹಾರ. ಹೀಗಾಗಿ, ಫಲಿತಾಂಶವನ್ನು ನಿಖರವಾಗಿ ನಿರ್ಧರಿಸಬಹುದು.
ಸಾಂಪ್ರದಾಯಿಕ ವಿಧಾನದಲ್ಲಿ ಮತಪತ್ರ ಪಡೆದು, ತನ್ನ ಆಯ್ಕೆಯ ಅಭ್ಯರ್ಥಿ ಎದುರು ಗುರುತು ಹಾಕಿ, ಮತಪತ್ರ ಮಡಚಿ, ಮತ ಪೆಟ್ಟಿಗೆಗೆ ಹಾಕುವುದು ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಒಂದು ಬಟನ್ ಒತ್ತಿದರೆ ಸಾಕು, ಮತದಾನ ಕಾರ್ಯ ಪೂರ್ಣಗೊಂಡಂತೆಯೇ.
ಚುನಾವಣೆ ಫಲಿತಾಂಶದ ಬಳಿಕ 10 ವರ್ಷಗಳಿಗೂ ಹೆಚ್ಚು ಕಾಲ ಮತಗಳ ದಾಖಲೆಯನ್ನು ಕಾಯ್ದಿಡಬಹುದು. ಕೆಲ ಬಾರಿ ನ್ಯಾಯಾಲಯಗಳು ಮತಗಳ ಮರು ಎಣಿಕೆಗೆ ಆದೇಶಿಸಿದರೆ ಈ ಪ್ರಕ್ರಿಯೆ ಸುಲಭವಾಗುತ್ತದೆ. ಮತಯಂತ್ರಗಳ ಬ್ಯಾಟರಿ ಸೋರುವ ಅಥವಾ ಕೆಡುವ ಪ್ರಶ್ನೆಯೂ ಇಲ್ಲ. ಮತದಾನದ ನಂತರ ಯಂತ್ರಗಳಿಂದ ಬ್ಯಾಟರಿ ತೆಗೆದಿಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

