ಕೋಲಾರ

ನಂ.1 ಆಸ್ಪತ್ರೆ ಇಂದು ಭೂತ ಬಂಗಲೆ!

Published On :

-ಆರ್. ರಜನೀಕಾಂತ್
ಕೆಜಿಎಫ್: ಅಂದು ದೇಶದ ಸುಪ್ರಸಿದ್ದ ನಂ1 ಆಸ್ಪತ್ರೆ. ಇಂದು ದೆವ್ವಗಳ ಭೂತ ಬಂಗಲೆ...!
ಹೌದು.. ಚಿನ್ನದ ನಾಡು ಎಂದೇ ಖ್ಯಾತಿ ಪಡೆದ ಕೆಜಿಎಫ್‌ನಲ್ಲಿ 1850ರ ದಶಕದಲ್ಲಿ ಬ್ರಿಟಿಷರ ಜಾನ್ ಟೇಯಲರ್ ಅಂಡ್ ಕಂಪನಿ ಬಿಜಿಎಂಎಲ್ ಚಿನ್ನದ ಗಣಿಯನ್ನು ಪ್ರಾರಂಭಿಸಿದ ಕಾಲದಲ್ಲಿ ಚಿನ್ನದ ಗಣಿಯೊಳಗೆ ನೂರಾರು ಅಡಿಗಳ ಆಳದಲ್ಲಿ ಇಳಿದು ಕೆಲಸ ಮಾಡಲು ಕಾರ್ಮಿಕರು ಬಹಳ ಕಷ್ಟಪಡುತ್ತಿದ್ದರು.
ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ಪೆಟ್ಟುಗಳು ಬಿದ್ದರೆ ಮತ್ತು ಸಿಲಿಕಾಸಿಸ್ ಸೇರಿದಂತೆ ಇತರೆ ಕಾಯಿಲೆಗಳಿಗೆ ಸೂಕ್ತವಾದ ಚಿಕಿತ್ಸೆ ಒದಗಿಸಲು ಬ್ರಿಟಿಷರು ಕಾರ್ಮಿಕರಿಗಾಗಿ ಬಿಜಿಎಂಎಲ್ ಆಸ್ಪತ್ರೆಯನ್ನು ಪ್ರಾರಂಭಿಸಿದರು.
ಈ ಆಸ್ಪತ್ರೆಯಲ್ಲಿ ಹೃದಯ, ಕೀಲು, ಕಣ್ಣು, ತಲೆ, ಚರ್ಮ, ಕಿಡ್ನಿ, ಸೇರಿದಂತೆ ಮನುಷ್ಯನಿಗೆ ಬರುವ ಎಲ್ಲಾ ರೀತಿಯ ಕಾಯಿಲೆಗೂ ಬಿಜಿಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿತ್ತು.
ಚಿಕಿತ್ಸೆಗೆ ಪ್ರಸಿದ್ದ ವೈದ್ಯರು, ಹೊರ ದೇಶದ ಕೋಟ್ಯಂತರ ಬೆಲೆಬಾಳುವ ಉಪಕರಣಗಳು, ಔಷಧಿಗಳು, ಸಲಕರಣಗಳು ಮುಂತಾದ ಪೂರ್ಣ ಪ್ರಮಾಣದ ಎಲ್ಲ ವ್ಯವಸ್ಥೆಗಳನ್ನು ಈ ಆಸ್ಪತ್ರೆಯಲ್ಲಿ ಕಲ್ಪಿಸಲಾಗುತ್ತಿತ್ತು.
ಅಲ್ಲದೆ, ಬಿಜಿಎಂಎಲ್ ಚಿನ್ನದ ಗಣಿ ಕಾರ್ಮಿಕರಿಗೆ ಆಸ್ಪತ್ರೆಯಿಂದ ಹೆಲ್ತ್ ಕಾರ್ಡ್‌ಗಳನ್ನು ನೀಡಲಾಗಿದ್ದು, ಇದರಲ್ಲಿ ಕುಟುಂಬಸ್ಥರು ಮತ್ತು ಕಾರ್ಮಿಕರ ಪರಿಚಯಸ್ಥರು ಆಸ್ಪತ್ರೆಯ ಸೇವೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿತ್ತು. ಕಾರ್ಮಿಕರಿಗೆ ಮತ್ತು ಕುಟುಂಬಸ್ಥರಿಗೆ ವಾರಕ್ಕೊಮ್ಮೆ ಆರೋಗ್ಯದ ತಪಾಸಣೆಗಾಗಿ ಕರೆತರಲು ಮತ್ತು ಬಿಡಲು ಬಸ್ ಸೇವೆಗಳನ್ನು ಒದಗಿಸಲಾಗುತ್ತಿತ್ತು. ಸಿಲಿಕಾಸಿಸ್ ಕಾಯಿಲೆಗೆ ಕಾರ್ಮಿಕರಿಗೆ ಪ್ರತ್ಯೇಕ ಕೊಠಡಿ ಮತ್ತು ವೈದ್ಯರ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಈ ಆಸ್ಪತ್ರೆಯಲ್ಲಿ ವೈದ್ಯರು ರಾತ್ರಿ ಹಗಲು ಎನ್ನದೆ ಕಾರ್ಮಿಕರಿಗಾಗಿ ಸೇವೆ ಸಲ್ಲಿಸುತ್ತಿದ್ದರು.
2001ರಲ್ಲಿ ಮುಚ್ಚಲ್ಪಟ್ಟಿತ್ತು: ಇಂತಹ ನಿರಂತರ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದ ಬಿಜಿಎಂಎಲ್ ಆಸ್ಪತ್ರೆಯನ್ನು ಅಂದಿನ ಎನ್‌ಡಿಎ ಸರ್ಕಾರ ನೆಪವೊಡ್ಡಿ ಬಿಜಿಎಂಎಲ್ ಚಿನ್ನದ ಗಣಿಯನ್ನು 2001ರಲ್ಲಿ ಮುಚ್ಚಿದ ನಂತರ ಕಾರ್ಮಿಕರಿಗೆ ಚಿಕಿತ್ಸೆ ಸೌಲಭ್ಯ ಸ್ಥಗಿತಗೊಂಡಿತು, ವೈದ್ಯರನ್ನು ಕೆಲಸದಿಂದ ತೆಗೆಯಲಾಗಿತ್ತು, ಕೋಟ್ಯಂತರ ಬೆಲೆಬಾಳುವ ಉಪಕರಣಗಳು ತುಕ್ಕು ಹಿಡಿಯಲು ಪ್ರಾರಂಭವಾಯಿತು.
ದಿನೇ ದಿನೇ ಆಸ್ಪತ್ರೆಯಲ್ಲಿದ್ದ ವಸ್ತುಗಳು ಕಳ್ಳಕಾಕರ ಪಾಲಾಗುತ್ತಿತ್ತು. ಹಲವಾರು ಖಾಸಗಿ ಸಂಸ್ಥೆಗಳು ಬಿಜಿಎಂಎಲ್ ಆಸ್ಪತ್ರೆಯನ್ನು ಮುನ್ನಡೆಸಲು ಬಂದಿದ್ದರು. ಆದರೆ ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಆಸ್ಪತ್ರೆಯನ್ನು ಯಾರಿಗೂ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಬಿಜಿಎಂಎಲ್ ಆಡಳಿತ ಮಂಡಳಿ ಅಧಿಕಾರಿಗಳು ನಿರಾಕರಿಸಿದ್ದರು. ಆಸ್ಪತ್ರೆಯಲ್ಲಿ ಎಲ್ಲಿ ನೋಡಿದರೂ ಶುದ್ದತೆಯಿಂದ ಮತ್ತು ಸ್ವಚ್ಚತೆಯಿಂದ ಕಂಗೊಳಿಸುತ್ತಿದ್ದ ಆಸ್ಪತ್ರೆ ಈಗ ಕಣ್ಣಿಗೂ ಕಾಣದಂತೆ ಮರ ಗಿಡಗಳು ಬೆಳೆದು ಪೊದೆಯಂತಾಗಿದ್ದು ನೂರಾರು ಹಾವುಗಳು  ಕಾಡು ಪ್ರಾಣಿಗಳು ಸೇರಿಕೊಂಡು ಭಯಂಕರ ದೆವ್ವಗಳ ಭೂತ ಬಂಗಲೆಯಾಗಿ ಪರಿವರ್ತನೆಗೊಂಡಿರುವುದನ್ನು ನೋಡಿ ಕಾರ್ಮಿಕರ ಕಣ್ಣಲ್ಲಿ ನೀರು ಬರುವಂತಾಗಿದೆ.
ಅನುದಾನ ಬಿಡುಗಡೆ, ವಾಪಸ್: ಬಿ.ಎಸ್.ಯಡಿಯೂರಪ್ಪ ಕಾಲದಲ್ಲಿ ಬಿಜಿಎಂಎಲ್ ಚಿನ್ನದ ಗಣಿಯನ್ನು ರಾಜ್ಯ ಸರ್ಕಾರ ನಡೆಸುವುದಾಗಿ ಪ್ರಸ್ತಾಪಿಸಿದ್ದು ಇದಕ್ಕೆ ರಾಜ್ಯ ಸರ್ಕಾರ ರು. 1 ಕೋಟಿ ಅನುದಾನವನ್ನೂ  ಬಿಡುಗಡೆ ಮಾಡಲಾಗಿತ್ತು. ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್ ನೀಡಲು ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದರಿಂದ ಈ ಆಸ್ಪತ್ರೆಯನ್ನು ರಾಜ್ಯ ಸರ್ಕಾರಕ್ಕೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಗಣಿ ಸಚಿವರು ತಿಳಿಸಿದ್ದರಿಂದ ಅನುದಾನ ಸರ್ಕಾರಕ್ಕೆ ವಾಪಸ್ಸಾಗಿತ್ತು.
3500 ಕಾರ್ಮಿಕರಿಗೆ ನಿರಾಸೆ: ಇದೇ ತಿಂಗಳು 5ರಂದು ಸುಪ್ರೀಂ ಕೋರ್ಟ್‌ನಲ್ಲಿ ಬಿಜಿಎಂಎಲ್ ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್‌ಗೆ ನೀಡುವ ಬಗ್ಗೆ ಮಹತ್ವದ ತೀರ್ಪನ್ನು ಕಾಯ್ದಿರಿಸಿದ್ದು ತೀರ್ಪಿನ ನಂತರ ಬಿಜಿಎಂಎಲ್ ಆಸ್ಪತ್ರೆಯನ್ನು ಕೇಂದ್ರ ಸರ್ಕಾರವಾಗಲಿ ಅಥವಾ ಗ್ಲೋಬಲ್ ಟೆಂಡರ್  ಆಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಯಾವ ರೀತಿ ಅಭಿವೃದ್ಧಿ ಪಡಿಸುತ್ತಾರೆ ಎಂಬುದು 3500 ಕಾರ್ಮಿಕರು ಮತ್ತು ಕೆಜಿಎಫ್ ಕ್ಷೇತ್ರದ ಲಕ್ಷಾಂತರ ಜನತೆಯ ನಿರೀಕ್ಷೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.