ಅನೈರ್ಮಲ್ಯ, ಯೋಜನಾಧಿಕಾರಿ ತರಾಟೆ
ಚಿಕ್ಕಬಳ್ಳಾಪುರ: ನಗರದ ವಿವಿಧೆಡೆ ಸಂಚರಿಸಿದ ನಗರ ಯೋಜನಾಧಿಕಾರಿಗೆ ಅಸಮರ್ಪಕ ಕಸ ವಿಲೇವಾರಿ, ಕಸಕಡ್ಡಿಯಿಂದ ತುಂಬಿ ತುಳುಕಾಡುತ್ತಿದ್ದ ಚರಂಡಿಗಳು, ಅನೈರ್ಮಲ್ಯ ದರ್ಶನವಾಯಿತು. ಶುಕ್ರವಾರ ನಗರ ಯೋಜನಾಧಿಕಾರಿ ನಾಗರಾಜ ಶೆಟ್ಟಿ ನಗರದ ಗಂಗಮ್ಮನಗುಡಿ ರಸ್ತೆ, ಹೊಸ ಬಸ್ ನಿಲ್ದಾಣ ರಸ್ತೆ, ವೇಣುಗೋಪಾಲ್ ಸ್ವಾಮಿ ದೇವಾಲಯದ ರಸ್ತೆ ಸೇರಿದಂತೆ ವಿವಿಧೆಡೆ ಸಂಚರಿಸಿ ಸ್ವಚ್ಛತೆ ಪರಿಶೀಲಿಸಿದರು. ರಸ್ತೆಗಳಲ್ಲದೇ ಎಲ್ಲೆಡೆ ವಿಲೇವಾರಿಯಾಗದೇ ತುಂಬಿ ತುಳುಕಾಡುತ್ತಿದ್ದ ತ್ಯಾಜ್ಯವನ್ನು ಖುದ್ದು ನೋಡಿ ಅಸಮಾಧಾನ ವ್ಯಕ್ತಪಡಿಸಿದರು.ನಗರಸಭೆಯಲ್ಲಿ ಅಧಿಕಾರಿಗಳು ಏನ್ ಮಾಡುತ್ತಿದ್ದಾರೆ. ನಗರದಲ್ಲೆಡೆ ಪ್ರತಿದಿನ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿ ತುಳುಕಾಡುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಕೆಲಸವನ್ನು ಹೀಗೇನಾ ಮಾಡೋದು ಎಂದು ನಾಗರಾಜ್ ಶೆಟ್ಟಿ ನಗರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಗರದ ಸ್ವಚ್ಛತೆ ಕಾಪಾಡದೇ ನಿರ್ಲಕ್ಷ್ಯ ವಹಿಸಿದರೆ ಹೇಗೆ. ಸಾಂಕ್ರಾಮಿಕ ರೋಗಗಳು ಹರಡಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಈಗ ಎಲ್ಲೆಡೆ ಕಂಡು ಬರುತ್ತಿರುವ ನೈರ್ಮಲ್ಯ ಹದಗೆಟ್ಟಿರುವ ವಾತಾವರಣವನ್ನು ನೋಡಿದರೆ ಬೇಸರವಾಗುತ್ತದೆ. ಸರಿಯಾಗಿ ಕೆಲಸ ನಡೆಯುತ್ತಿಲ್ಲ ಎಂಬ ಭಾವನೆ ಮೂಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನರಿಂದ ಮಾಹಿತಿ: ಅಧಿಕಾರಿಗಳೊಂದಿಗೆ ಸಂಚರಿಸಿದ ನಾಗರಾಜ್ ಶೆಟ್ಟಿ ವಿವಿಧ ವಾರ್ಡುಗಳಲ್ಲಿ ಜನರಿಂದಲೂ ಮಾಹಿತಿಯನ್ನು ಪಡೆದುಕೊಂಡರು. ಪೌರ ಕಾರ್ಮಿಕರು ಕಾಲ ಕಾಲಕ್ಕೆ ಬಂದು ಕಸವನ್ನು ಸಂಗ್ರಹಿಸುತ್ತಿದ್ದಾರೆಯೇ, ಸ್ವಚ್ಛತೆ ಕಾಪಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಹಲವರು ನಗರಸಭೆ ಸಿಬ್ಬಂದಿ ವಿರುದ್ಧ ದೂರುಗಳನ್ನು ಹೇಳಿದರು.ಖಡಕ್ ಎಚ್ಚರಿಕೆ: ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್ ಸೆಟ್ಟಿ, ಚಿಕ್ಕಬಳ್ಳಾಪುರ ನಗರಸಭೆ ಕಾರ್ಯ ನಿರ್ವಹಣೆ ಸಮಾಧಾನಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಸ್ವಚ್ಛತೆ ಕಾಪಾಡಲು ಮುಂದಾಗಿ, ಎಲ್ಲೂ ದೂರುಗಳು ಬಾರದ ರೀತಿಯಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಪೌರಾಯುಕ್ತ ರುದ್ರಮುನಿ, ನಗರಸಭಾ ಸದಸ್ಯರಾದ ಪಿ.ಶ್ರೀನಿವಾಸ್, ಕಿಸಾನ್ ಕೃಷ್ಣಪ್ಪ, ಶ್ರೀನಿವಾಸ್ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

