ಶಾಸಕ ನಾರಾಯಣಸ್ವಾಮಿ ಜನಸ್ಪಂದನ
ಬಂಗಾರಪೇಟೆ: ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆಂಧ್ರ ಮತ್ತು ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವ ಕಾಮಸಮುದ್ರ ಹೋಬಳಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಆಲಿಸಿದರು.ಮೊದಲು ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಸಮಸ್ಯೆಗಳನ್ನು ಉಪನ್ಯಾಸಕರಿಂದ ಪಡೆದರು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಕೊರತೆ ಇದ್ದು ಪಾಠ ಪ್ರವಚನಗಳಿಗೆ ಅಡ್ಡಿಯಾಗಿದೆ. ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಸಮಸ್ಯೆಗಳನ್ನು ಆಲಿಸಿದ ಬಳಿಕ ಶಾಸಕ ನಾರಾಯಣಸ್ವಾಮಿ, ರಾಜ್ಯ ಸರ್ಕಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ವಿಶೇಷ ಒತ್ತು ಕೊಡುತ್ತಿದೆ. ಶಿಕ್ಷಣದಿಂದಲೇ ದೇಶ ಸರ್ವತೋಮುಖ ಪ್ರಗತಿಗೆ ಸಾಧ್ಯವಾಗಿದ್ದು ಬಜೆಟ್ ನಂತರ ಸದರಿ ಕಾಲೇಜಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ತಕ್ಷಣ ಎರಡು ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡುವಂತೆ ಕಾಲೇಜು ಆಡಳಿತ ಮಂಡಳಿಗೆ ಸೂಚಿಸಿದರು.ಇದೇ ವೇಳೆ ಕಾಲೇಜಿನ ನೂತನ ಅಭಿವೃದ್ಧಿ ಸಮಿತಿಯನ್ನು ಶಾಸಕರು ಪುನರಚಿಸಿದರು. ಅಧ್ಯಕ್ಷರಾಗಿ ಶಾಸಕರು, ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ ಮತ್ತು ಸದಸ್ಯರಾಗಿ ಗೌರಮ್ಮ, ಪಿಚ್ಚಹಳ್ಳಿ ಗೋವಿಂದರಾಜು, ಸದಾನಂದ,ನಾರಾಯಣಪ್ಪ ಮತ್ತು ಶ್ರೀನಿವಾಸಗೌಡರನ್ನು ನೇಮಕ ಮಾಡಲಾಯಿತು.ನಂತರ ಶಾಸಕರು ಕಾಲೇಜಿನಿಂದ ಹೊರ ಬರುತ್ತಿದ್ದಂತೆ ನೂರಾರು ಗ್ರಾಮಸ್ಥರು ರೇಷನ್ ಕಾರ್ಡ್ ಮತ್ತು ಆಶ್ರಯ ಮನೆಗಳು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಬಿಪಿಎಲ್ ಕಾರ್ಡ್ ಇದ್ದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ಕಾರಣ ಕೇಳಿದರೆ ನಿಮ್ಮ ಕಾರ್ಡ್ನ್ನು ರದ್ದುಪಡಿಸಲಾಗಿದೆ ಎಂದು ಹೇಳುತ್ತಾರೆ. ಆಹಾರ ನಿರೀಕ್ಷಕರನ್ನು ವಿಚಾರಿಸಿದರೆ ಅಲ್ಲಿಯೂ ಅದೇ ಉತ್ತರ ದೊರೆಯುತ್ತಿದೆ. ನಾವು ಬಡವರು ಸ್ವಾಮಿ ಇದೇ ನಮ್ಮ ಜೀನವಕ್ಕೆ ದಾರಿ. ಇದೂ ಇಲ್ಲದಿದ್ದರೆ ನಾವು ಏನನ್ನು ತಿನ್ನಬೇಕು ಎಂದು ಗೋಗರೆದರು. ಕಾರ್ಡ್ ರದ್ದಾದರೇನಂತೆ ಹೊಸ ಕಾರ್ಡ್ ಪಡೆಯಲು ಅವಕಾಶವಿದೆ. ಕೂಡಲೆ ಅರ್ಜಿ ಸಲ್ಲಿಸಿ ಎಂದು ಶಾಸಕರು ಸಲಹೆ ನೀಡಿದರು. ಮಾಜಿ ತಾಪಂ ಸದಸ್ಯ ಪಿಚ್ಚಹಳ್ಳಿ ಗೋವಿಂದರಾಜು, ವರದರಾಜು, ತೊಪ್ಪನಹಳ್ಳಿ ಶ್ರೀನಿವಾಸಗೌಡ, ಲಕ್ಷ್ಮೀನಾರಾಯಣ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೈರೇಗೌಡ, ಉಪನ್ಯಾಸಕ ಶಫಿ ಅಹ್ಮದ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

