ಓಂ ಸಾಯಿ ಶ್ರೀ ಸಾಯಿ ಜೈ ಜೈ ಸಾಯಿ
ಕ.ಪ್ರ.ವಾರ್ತೆ ಕೋಲಾರ ಜು. 22
ಪ್ರತಿ ವರ್ಷದಂತೆ ಈ ಬಾರಿ ನಗರದ ಶ್ರೀಶಿರಡಿ ಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಅತ್ಯಂತ ವೈಭವದಿಂದ ಜರುಗಿತು. ಶ್ರೀಶಿರಡಿ ಬಾಬಾ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು, ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಬಾಬಾ ದರ್ಶನ ಪಡೆದರು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ್, ಬಿಜೆಪಿಯ ಮುಖಂಡ ನರಸಿಂಹರಾಜು ಸೇರಿದಂತೆ ಅನೇಕ ಮುಖಂಡರು ಶಿರಡಿ ಸಾಯಿಗೆ ಪೂಜೆ ಸಲ್ಲಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮತ್ತು ಸ್ನೇಹಿತರು ಈ ಬಾರಿಯೂ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಸಾಯಿ ಮಂದಿರ ಬಳಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯಗಳಲ್ಲಿ ವಿಶೇಷ ಪೂಜೆ
ಚಿಕ್ಕಬಳ್ಳಾಪುರ: ಗುರು ಪೌರ್ಣಮಿ ಪ್ರಯುಕ್ತ ವಿವಿಧೆಡೆ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಒಂದೆಡೆ ವಿದ್ಯುದೀಪಾಲಂಕಾರಗಳಿಂದ ಆಲಯಗಳು ಕಂಗೊಳಿಸಿದರೆ, ಮತ್ತೊಂದೆಡೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಲಯಗಳಿಗೆ ಆಗಮಿಸಿ ದೇವರ ವಿಶೇಷ ದರ್ಶನ ಪಡೆದರು. ನಗರದ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ, ಶ್ರೀ ಶನೈಶ್ವರಸ್ವಾಮಿ, ಶ್ರೀ ಶಿರಡಿ ಸಾಯಿ ಬಾಬಾ ದೇವಾಲಯದಲ್ಲಿ ಗುರು ಪೌರ್ಣಮಿ ವಿಶೇಷ ದಿನದ ಪ್ರಯುಕ್ತ ಸಾಯಿಬಾಬಾ, ಶ್ರೀ ಶನೈಶ್ವರ ಸ್ವಾಮಿ, ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿಗೆ ಮಾಡಿದ್ದ ವಿಶೇಷ ಹೂವಿನ ಅಲಂಕಾರ ಎಲ್ಲರ ಗಮನ ಸೆಳೆಯಿತು. ಇನ್ನೂ ಆಲಯದಲ್ಲಿ ನಡೆದ ದತ್ತಾತ್ರೇಯ ಹೋಮ ಸೇರಿದಂತೆ ವಿವಿಧ ಹೋಮಗಳು, ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ನಗರದ ಸರ್ ಎಂ.ವಿ. ವೃತ್ತ, ಬಜಾರ್ ರಸ್ತೆ, ಕಂದವಾರ, ಹಳೆ ಬಸ್‌ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಶ್ರೀಬಾಬಾರವರ ಹೂವಿನ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ಪಲ್ಲಕ್ಕಿಯಲ್ಲಿ ಬಂದ ಬಾಬಾ ಮೂರ್ತಿಗೆ ಭಕ್ತಾದಿಗಳು ಪೂಜೆ ಸಲ್ಲಿಸಿದರು. ಹಾಗೆಯೇ ನಗರದಲ್ಲಿರುವ ಶ್ರೀ ಯೋಗಿನಾರೇಯಣ ಯತೀಂದ್ರರ ದೇವಾಲಯದಲ್ಲಿ ಗುರುಪೂಜೆ ಕಾರ್ಯಕ್ರಮ ನಡೆಯಿತು. ಇನ್ನೂ ನಗರದ ಹೊರ ವಲಯದಲ್ಲಿರುವ (ಆವತಿ ಬಳಿ) ಶ್ರೀ ಸಾಯಿಬಾಬಾ ದೇವಾಲಯ ಸೇರಿದಂತೆ ವಿವಿಧೆಡೆ ಇರುವ ಆಲಯಗಳಲ್ಲಿ ಗುರು ಪೌರ್ಣಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಮಾಲೂರನಲ್ಲೂ ಗುರುಪೂರ್ಣಿಮಾ
ಮಾಲೂರು: ಪಟ್ಟಣದ ಅರಳೇರಿ ರಸ್ತೆಯ ಶ್ರೀಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಸೋಮವಾರ ಗುರುಪೂರ್ಣಿಮಾ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಯಿತು. 4ನೇ ವರ್ಷದ ಅದ್ಧೂರಿ ಮಹೋತ್ಸವದಲ್ಲಿ ಬೆಳಿಗ್ಗೆ 5 ಗಂಟೆಗೆ ದೇವಾಲಯ ಸಮಿತಿ ಅವರಿಂದ ಮೂಲ ದೇವರಿಗೆ ಸಾಮೂಹಿಕ ಕ್ಷೀರಾಭಿಷೇಕ, ಕಾಕಡಾರತಿ, ಸುಪ್ರಭಾತ ಸೇವೆ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಬಾಬಾ ಅವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗಿನಿಂದಲ್ಲೇ ಭಕ್ತರು ಸರತಿಯಲ್ಲಿ ನಿಂತು ಬಾಬಾ ದರ್ಶನ ಪಡೆದರು. ಸಂಜೆ 5 ಗಂಟೆಗೆ ಶ್ರೀಶಿರಡಿ ಸಾಯಿ ಸೇವಕರ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಬಾ ಅವರ ಪುಪ್ಬ ಪಲ್ಲಕ್ಕಿ ಉತ್ಸವ ನಡೆಯಿತು. ಮೈಸೂರು ನಗಾರಿ, ತುಮಕೂರು ಚಿಟ್ಟಿಮೇಳ
ದೊಂದಿಗೆ ವೀರಗಾಸೆ ಕುಣಿತ, ಮಂಗಳ ವಾದ್ಯಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸಾಮೂಹಿಕ ಭಜನೆ ನಡೆಯಿತು. ದೇವಾಲಯ ಸಮಿತಿಯ ಆರ್.ಸಿ. ಅಪ್ಪಾಜಿಗೌಡ, ಎಂ.ಉದಯಕುಮಾರ್, ಮಾ.ಭಾ. ಅಮರ್ ಸಿಂಗ್, ಇ.ಕೆ. ಸೋಮಶೇಖರ್, ಸುಬ್ರಮಣ್ಯ ರೆಡ್ಡಿ, ಬಾಬುರೆಡ್ಡಿ, ಬಾಬಾ ಸೇವಕರಾದ ಸಫಾರಿ ಕೃಷ್ಣಪ್ಪ, ರಾಮಣ್ಣ, ಶ್ರೀನಿವಾಸ್ ರೆಡ್ಡಿ, ರಾಜಣ್ಣ, ಪ್ರಭಾಕರ್ ರೆಡ್ಡಿ, ಶ್ರೀನಿವಾಸ್, ರಾಜು, ಮಹೇಶ್, ರಮೇಶ್, ಪಾಪಯ್ಯ, ಈರಪ್ಪ, ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

