ಕೋಲಾರ

'ಯಶಸ್ವಿನಿ ಯೋಜನೆ ಯಶಸ್ವಿಯಾಗಲಿ'

Published On :

ಕ.ಪ್ರ.ವಾರ್ತೆ ಶಿಡ್ಲಘಟ್ಟ ಜು.22
ರೈತರ ಪಾಲಿಗೆ ಸಂಜೀವಿನಿಯಾಗಿರುವ ಯಶಸ್ವಿನಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಪಾತ್ರ ಮಹತ್ವವಾದದ್ದು ಎಂದು ಉಪನಿಬಂಧಕ ಶಿವಣ್ಣ ಹೇಳಿದರು. ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಿಂದ ಏರ್ಪಡಿಸಲಾಗಿದ್ದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳೂ ಸೇರಿದಂತೆ ರೈತಾಪಿ ವರ್ಗದ ಜನತೆ ಅನುಭವಿಸುತ್ತಿರುವ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ದುರ್ಬಲರಾಗಿರುವ ಕಾರಣದಿಂದಾಗಿ ಪ್ರಾಣಾಪಾಯಕ್ಕೆ ಗುರಿ ಆಗುವುದನ್ನು ತಪ್ಪಿಸಲು ಜಾರಿಗೆ ತಂದಿರುವ ಯಶಸ್ವಿನಿ ಯೋಜನೆ ಮುಂದುವರಿಸಿಕೊಂಡು ಹೋಗಲು ಎಲ್ಲಾ ಸಹಕಾರ ಸಂಘಗಳ ಕಾರ್ಯದರ್ಶಿಗಳು ಸಹಕಾರ ನೀಡಬೇಕೆಂದರು.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಕುಟುಂಬದ ವರ್ಗದವರೆಲ್ಲರಿಗೂ ಈ ಯೋಜನೆ ಉಪಯೋಗವಾಗಲಿದೆ. ಇದುವರೆಗೂ ಕನಿಷ್ಠ 6 ತಿಂಗಳ ಹಿಂದೆ ಸಂಘದಲ್ಲಿ ಸದಸ್ಯರಾಗಿದ್ದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿತ್ತು. ಈಗ 3 ತಿಂಗಳಿಗೆ ಕಾಲಮಿತಿ ನಿಗದಿಪಡಿಸಲಾಗಿದೆ. ಒಟ್ಟು 50 ಲಕ್ಷ ಜನರನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳುವ ಗುರಿಯಿದೆ.  ಜಿಲ್ಲೆಯಿಂದ 1.25 ಲಕ್ಷ ಮಂದಿಗೆ ಸದಸ್ಯತ್ವ ನೀಡಲು ಸಹಕಾರಿಗಳಾಗಬೇಕು. ಸಂಘಗಳ ಸದಸ್ಯರು ಮಾತ್ರವಲ್ಲದೆ, ಪತ್ರಕರ್ತರು, ಮಹಿಳಾ ಸ್ತ್ರೀಶಕ್ತಿ ಸಂಘಗಳ ಪಧಾಧಿಕಾರಿಗಳನ್ನೂ ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗುವುದು. ತಾಯಿಯು ಈ ಯೋಜನೆಯಲ್ಲಿದ್ದರೆ, ನವಜಾತ ಶಿಶುಗಳಿಗೂ 30 ದಿನಗಳಲ್ಲಿ ಚಿಕಿತ್ಸೆಯನ್ನು ನೀಡುವ ಸೌಲಭ್ಯ ಕಲ್ಪಿಸಲಾಗಿದೆ. ಯಶಸ್ವಿನಿ ಯೋಜನೆಯಲ್ಲಿ ಒಂದೇ ಕುಟುಂಬದ 5 ಮಂದಿಗಿಂತ ಹೆಚ್ಚಿನ ಸದಸ್ಯರು ನೊಂದಾವಣೆ ಮಾಡಿಸಿಕೊಂಡಲ್ಲಿ ಶೇ .15 ರಷ್ಟು ರಿಯಾಯಿತಿ ದೊರೆಯಲಿದೆ ಎಂದರು.
ಕಳೆದ ವರ್ಷದಲ್ಲಿ ಜಿಲ್ಲೆಯಲ್ಲಿ 1113 ಮಂದಿ ಸದಸ್ಯರಾಗಿದ್ದು, 1.32 ಕೋಟಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಸೆ.25 ರೊಳಗೆ ಎಲ್ಲಾ ಸಹಕಾರ ಸಂಘಗಳ ಕಾರ್ಯದರ್ಶಿಗಳು ಸಾಮಾನ್ಯ ಸಭೆಗಳನ್ನು ಮಾಡಬೇಕು. ಕಡ್ಡಾಯವಾಗಿ ಲೆಕ್ಕಗಳನ್ನು ಪರಿಶೋಧನೆ ಮಾಡಿಸಬೇಕು. ತಪ್ಪಿದರೆ ಸಜೆಯ ಜೊತೆಗೆ ದಂಡವನ್ನೂ ಕಾರ್ಯದರ್ಶಿಗಳು ತೆರಬೇಕಾಗಿರುತ್ತದೆ. ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡುವಂತಹ ಜವಾಬ್ದಾರಿ ಕಾರ್ಯಕಾರಿ ಸಮಿತಿಗೆ ಒಪ್ಪಿಸುವುದು, 09 ಜನರಿಂದ ಕಾರ್ಯಕಾರಿ ಮಂಡಳಿಯನ್ನು 11 ಮಂದಿಗೆ ಏರಿಕೆ ಮಾಡಲಾಗಿದ್ದು, ಒಂದು ಪರಿಶಿಷ್ಟ ಜಾತಿ ಪಂಗಡ, ಇಬ್ಬರು ಮಹಿಳೆಯರು, ಒಂದು ಹಿಂದುಳಿದ ವರ್ಗದವರಿಗೆ ಮೀಸಲಾಗಿರಬೇಕು. ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಸದಸ್ಯರು ಕನಿಷ್ಠ 3 ವರ್ಷಗಳಲ್ಲಿ 500 ಲೀಟರ್ ಹಾಲನ್ನು ಪೂರೈಕೆ ಮಾಡಿರಬೇಕು. ಇಲ್ಲದಿದ್ದಲ್ಲಿ, ಸ್ಪರ್ಧೆ ನಡೆಸಲು, ಮತ ಚಲಾಯಿಸಲು ಅನರ್ಹರು. ಕಳೆದ ಸಮಿತಿಯಲ್ಲಿ ಸದಸ್ಯರಾಗಿರುವವರು ಕಡ್ಡಾಯವಾಗಿ 3 ಸಾಮಾನ್ಯ ಸಭೆಗೆ ಹಾಜರಾಗಿರಬೇಕು. ವಿದ್ಯಾರ್ಹತೆ ಕಡ್ಡಾಯ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಗುಡಿಯಪ್ಪ, ಸಹಾಯಕ ನಿಬಂಧಕ ಕೃಷ್ಣಮೂರ್ತಿ, ವ್ಯವಸ್ಥಾಪಕ ಕೆ.ವಿ. ನಾರಾಯಣಸ್ವಾಮಿ, ಕೋಚಿಮುಲ್ ಉಪ ವ್ಯವಸ್ಥಾಪಕ ಈಶ್ವರಯ್ಯ, ಜಿಲ್ಲಾ ಪರಿಷತ್ತಿನ ಮಾಜಿ ಸದಸ್ಯ ಕೆ.ವಿ. ಶ್ರೀನಿವಾಸಾಚಾರ್ ಮತ್ತಿತರರು ಹಾಜರಿದ್ದರು.

ಬ್ಯಾಟರಾಯನಸ್ವಾಮಿ ದೇವಾಲಯದ ವಾರ್ಷಿಕೋತ್ಸವ: ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕ.ಪ್ರ.ವಾರ್ತೆ ಶಿಡ್ಲಘಟ್ಟ ಜು.22

ಇಲ್ಲಿನ ಬ್ಯಾಟರಾಯನಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಂದಿ ಪ್ರತಿಷ್ಠಾನ ಹಾಗೂ ಶ್ರೀಬ್ಯಾಟರಾಯನಸ್ವಾಮಿ ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಾಳೆಹೊನ್ನೂರು ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮಿಜಿಗಳು 901ನೇ ವರ್ಷದ ಬ್ಯಾಟರಾಯನ ಸ್ವಾಮಿ ಕುಂಭಾಭಿಷೇಕ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಉತ್ಸವದ ಕೊನೆಯ ದಿನವಾದ ಭಾನುವಾರ ಕಲಶಾರಾಧನೆ, ವೇದಪಾರಾಯನ, ನವಚಂಡಿಕಾ ಹೋಮ, ಕುಂಭಾಭಿಷೇಕ, ಮಹಾಭಿಷೇಕ, ಮಹಾಮಂಗಳಾರತಿ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ 11ನೇ ವರ್ಷದ ಪ್ರತಿಭಾ ಪುರಸ್ಕಾರ ಮಹೋತ್ಸವ ಹಮ್ಮಿಕೊಂ್ಙದ್ದು, ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀಅಮರನಾಥ ಸ್ವಾಮೀಜಿ, ಶ್ರೀನಾಗರಾಜ ಸ್ವಾಮೀಜಿ ಹಾಗೂ ದೇವಾಲಯದ ಆಡಳಿತ ಮಂಡಲಿಯಿಂದ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಜಿ.ಬ್ಯಾಟರಾಯಪ್ಪ, ಸೇವಾ ಸಮಿತಿಯ ಅಧ್ಯಕ್ಷ ಡಿ.ಎಂ. ಮುನಿಯಪ್ಪ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಶ್ರೀನಿವಾಸ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.