ಕೋಲಾರ

ಕಳಪೆ ಕಾಮಗಾರಿ ಸರಿಪಡಿಸಿ

Published On :

ಕೋಲಾರ: ನಗರದ ಗಾಂಧಿನಗರ 2ನೇ ವಾರ್ಡ್‌ನ 4ನೇ ಮುಖ್ಯರಸ್ತೆಯಲ್ಲಿ ಕೆಎಂಆರ್‌ಪಿ ಯೋಜನೆಯಡಿ ನಡೆಯುತ್ತಿರುವ ಚರಂಡಿ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರಸಭೆಯ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದರು.  ಚರಂಡಿ ಕಾಮಗಾರಿಗೆ ಬಳಸಿರುವ ಮರಳು ಮಣ್ಣಿನಿಂದ ಪಿಲ್ಟರ್ ಮಾಡಿದ್ದಾಗಿದೆ. ಚರಂಡಿಯ ಕೊನೆಯ ಭಾಗದಲ್ಲಿ ಹಳೆಯ ಕಬ್ಬಿಣವನ್ನು ಬಳಸಲಾಗದೆ. ಚರಂಡಿಯಲ್ಲಿ ನೀರು ಪ್ರಾರಂಭದಿಂದ ಕೊನೆಯ ತನಕ ಸಾರಾಗವಾಗಿ ಹರಿಯಲು ಸಾಧ್ಯವಾಗದೇ ಚಿಕ್ಕ ಚಿಕ್ಕ ಹಳ್ಳಗಳಿಂದ ಕೂಡಿರುವುದು, ಸಿಮೆಂಟ್ ಕಡಿಮೆ ಪ್ರಮಾಣದಲ್ಲಿ ಬಳಸಿರುವುದು, ಕ್ಯೂರಿಂಗ್ ಮಾಡದಿರುವುದು ಇತ್ಯಾದಿ ಕಳಪೆ ಕಾಮಗಾರಿ ಕುರಿತು ನಗರಸಭೆ ಅಧ್ಯಕ್ಷರಾದ ಬಿ.ಎಂ.ಮುಬಾರಕ್ ಅವರಿಗೆ ದೂರು ನೀಡಲಾಗಿತ್ತು.  ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅಧ್ಯಕ್ಷರು ಆಗಿರುವ ಲೋಪವನ್ನು ಸರಿಪಡಿಸಬೇಕು ಮತ್ತು ಗುಣಮಟ್ಟದ ಕಾಮಗಾರಿಗಳನ್ನು ಮಾಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.  ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗಾಂಧಿನಗರ ನಾರಾಯಣಸ್ವಾಮಿ, ಮುಖಂಡರಾದ ಪಿ.ವಿ.ರಮಣ್, ಎಂ.ವಿಜಯ ಕೃಷ್ಣ, ಕೆ.ವಿ.ಮಂಜುನಾಥ್, ಸುಧಾಕರ್ ಇದ್ದರು.

ವೇಶ್ಯಾವಾಟಿಕೆ: ನಾಲ್ವರ ಬಂಧನ
ಚಿಂತಾಮಣಿ: ಖಾಸಗಿ ಮನೆಯೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿರುವ ಘಟನೆ ನಗರದ ಪರಮೇಶ್ವರ ಕಲ್ಯಾಣ ಮಂಟಪ ಬಳಿ ಬುಧವಾರ ನಡೆದಿದೆ. ನಗರದ ಚೇಳೂರು ರಸ್ತೆ ಹತ್ತಿರವಿರುವ ಪರಮೇಶ್ವರ ಕಲ್ಯಾಣ ಮಂಟಪದ ಬಳಿ ಮನೆಯೊಂದರಲ್ಲಿ ವೇಶ್ಯಾವಾಟಿಕೆನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರಠಾಣೆ ವೃತ್ತ ನಿರೀಕ್ಷಕ ನಂಜಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮಂಜುಳ ಕೋಂ ಮುನಿರಾಜು, ಶಿವ ಬಿನ್ ಮುನಿಯಪ್ಪ ಕದಿರೇನಹಳ್ಳಿ, ರಾಧ ಬಿನ್. ನರಸಿಂಹಮೂರ್ತಿ ವಾಲ್ಮೀಕಿನಗರ ಬಾಗೇಪಲ್ಲಿ, ನಾರಾಯಣಪ್ಪ ಗೊಲ್ಲಪಲ್ಲಿಗಡ್ಡ ಎಂಬ 4 ಜನರನ್ನು ಪೋಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಚಿಂತಾಮಣಿಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರನ್ನು ಬಂಧಿಸಿದ್ದಾರೆ.

ಸಂಗೀತೋತ್ಸವ ಇಂದಿನಿಂದ
ಚಿಂತಾಮಣಿ: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಕೈವಾರದ ಯೋಗಿನಾರೇಯಣ ಮಠದಲ್ಲಿ ಗುರುವಾರದಿಂದ ಗುರುಪೂಜಾ ಮಹೋತ್ಸವ ಮತ್ತು ರಾಷ್ಟ್ರೀಯ ಮಟ್ಟದ ಸಂಗೀತೋತ್ಸವ ಕಾರ್ಯಕ್ರಮಗಳು ಆರಂಭವಾಗುತ್ತದೆ. ಗುರುಪೂಜಾ ಸಂಗೀತೋತ್ಸವದ ಅಂಗವಾಗಿ ನಿರಂತರವಾಗಿ 72 ಗಂಟೆಗಳ ಕಾಲ ದೇಶದ ಹಲವಾರು ವಿದ್ವಾಂಸರುಗಳಿಂದ ಸಂಗೀತ ಸೇವೆ ಸಮರ್ಪಣೆಯಾಗುತ್ತದೆ. ಈ ಸಂಗೀತ ಉತ್ಸವದಲ್ಲಿ ವಿದ್ವಾಂಸರುಗಳಿಂದ ಸಂಗೀತ ಸೇವೆ ಸಮರ್ಪಣೆಯಾಗುತ್ತದೆ. ಸಂಗೀತ ಸಮಾರಂಭ ನಡೆಯುವ ಶ್ರೀ ಯೋಗಿನಾರೇಯಣ ಸಭಾಂಗಣವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗಿದೆ ಎಂದು ಗುರುಪೂಜಾ ಸಂಗೀತೋತ್ಸವದ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಬಳಸಲು ಅನುಮತಿಗೆ ಆಗ್ರಹ
ಕೋಲಾರ: ನಲವತ್ತು ಮೈಕ್ರಾನ್ ಪ್ಲಾಸ್ಟಿಕ್ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಬುಧವಾರ ಪ್ಲಾಸ್ಟಿಕ್ ವ್ಯಾಪಾರಿಗಳು ನಗರಸಭೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
 ನಾಲ್ಕು ದಿನಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ 40 ಮೈಕ್ರಾನ್ ಪ್ಲ್ಲಾಸ್ಟಿಕ್ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದ್ದ ವರ್ತಕರು ಇಂದು ನಗರಸಭೆಗೆ ಮುತ್ತಿಗೆ ಹಾಕಿ 40 ಮೈಕ್ರಾನ್ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ತೊಂದರೆ ಆಗುವುದಿಲ್ಲ. ಗ್ರಾಹಕರು 5ರಿಂದ 10 ಕೆಜಿ ತೂಕದ ಪದಾರ್ಥಗಳನ್ನು ಕೊಂಡೊಯ್ಯಲು ನಮ್ಮಿಂದಲೇ ಚೀಲಗಳನ್ನು ಕೇಳುತ್ತಾರೆ.  ಪ್ಲಾಸ್ಟಿಕ್ ಬಳಸುವಂತಿಲ್ಲವೆಂದಾಗ ಖರೀದಿಸಿದ ಸರಕನ್ನು ಬಿಟ್ಟು ವಾಪಸ್ ಹೋಗುತ್ತಿರುವುದರಿಂದ ವ್ಯಾಪಾರ ಇಲ್ಲದೆ ಸಮಸ್ಯೆ ಆಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಕಳಪೆ ಮಟ್ಟದ ಹಾಗೂ ಕಸ ವಿಲೇವಾರಿಗೆ ಅಡ್ಡಿಯಾಗುತ್ತಿರುವ ಪ್ಲಾಸ್ಟಿಕ್  ನಿಷೇಧಿಸಲು ಸಹಕರಿಸುತ್ತೇವೆ, ಆದರೆ, 40 ಮೈಕ್ರಾನ್ ಮಾರಾಟಕ್ಕೆ ಹಾಗೂ ಬಳಕೆಗೆ ಅವಕಾಶ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.  ಮನವಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷ ಮುಬಾರಕ್, ಪ್ಲಾಸ್ಟಿಕ್ ಹಾವಳಿಯಿಂದ ಕಸ ವಿಲೇವಾರಿ ಕಷ್ಟವಾಗುತ್ತಿದೆ. ವ್ಯಾಪಾರಿಗಳು ಸಹಕಾರ ನೀಡದಿದ್ದರೆ ಕೋಲಾರವನ್ನು ಕಸ ಮುಕ್ತ ನಗರವನ್ನಾಗಿ ಮಾಡಲು ಕಷ್ಟವಾಗುತ್ತದೆ ಎಂದರು.  ಇದಕ್ಕೆ ಒಪ್ಪದ ವ್ಯಾಪಾರಿಗಳು 40 ಮೈಕ್ರಾನ್ ಪ್ಲಾಸ್ಟಿಕ್ ಬಳಕೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು.  ಒಂದು ವಾರದ ಮಟ್ಟಿಗೆ 40 ಮೈಕ್ರಾನ್ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ಕ್ರಮವನ್ನು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಪ್ರಕಟಿಸುತ್ತೇನೆ. ಕಳಪೆ ಮಟ್ಟದ ಪ್ಲಾಸ್ಟಿಕ್ ಮಾರಾಟ ಮಾಡಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕಾರ್ಮಿಕರ ಜಾಥಾ
ಗುಡಿಬಂಡೆ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಕಾರ್ಮಿಕ ಸಂಘಟನೆ ಹಾಗೂ ಕಾರ್ಮಿಕರ ಹಕ್ಕುಗಳ ಜಾಗೃತಿಗಾಗಿ ಪಟ್ಟಣದಲ್ಲಿ ಸಿಐಟಿಯು ಕಾರ್ಯಕರ್ತರು ಜಾಥಾ ನಡೆಸಿದರು. ಈ ವೇಳೆ ಮಾತನಾಡಿದ ಸಿಐಟಿಯುನ ಜಿಲ್ಲಾಧ್ಯಕ್ಷ ಸಿದ್ಧಗಂಗಪ್ಪ, “ÁÛÎÛoñ¥ÚÀM}Ú ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ 10 ಅಂಶಗಳ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೆ ಇಲ್ಲಿಯವರೆಗೂ ಬೇಡಿಕೆಗಳನ್ನು ಈಡೆರಿಸಲು ಯಾವುದೇ ಸರ್ಕಾರ ಮುಂದಾಗಿಲ್ಲ. ದೇಶದಲ್ಲಿ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಸಹ ಕಾರ್ಮಿಕರ ವೇತನ ಮಾತ್ರ ಹೆಚ್ಚಳವಾಗುತ್ತಿಲ್ಲ. ಆದ್ದರಿಂದ ಕಾರ್ಮಿಕರು ತಮ್ಮ ಜೀವನ ನಡೆಸುವುದು ತುಂಬಾ ಕಷ್ಟವಾಗಿ ಪರಿಣಮಿಸಿದೆ. ಎಲ್ಲಾ ಉದ್ಯಮ ಮತ್ತು ರಂಗಗಳಲ್ಲಿ ಕಾಯಂ ನೌಕರರ ಸ್ಥಾನದಲ್ಲಿ ಗುತ್ತಿಗೆ, ಹೊರಗುತ್ತಿಗೆ ಎಂಬ ಹೆಸರಿನಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರಿಗೆ ದ್ರೋಹವೆಸಗುತ್ತಿದ್ದಾರೆ ಎಂದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶೀ ಲಕ್ಷ್ಮೀದೇವಮ್ಮ ಮಾತನಾಡಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಈ ವೇಳೆ ಅಂಗನವಾಡಿ ನೌಕರರ ಸಂಘದ ವೆಂಕಟಲಕ್ಷಮ್ಮ, ಭಾಗ್ಯಮ್ಮ, ನಾಗಮಣಿ, ಗ್ರಾ.ಪಂ. ನೌಕರರ ಸಂಘದ ಗೋವಿಂದರೆಡ್ಡಿ, ಅಶೋಕ, ನಾರಾಯಣಸ್ವಾಮಿ, ಬಿಸಿಯೂಟ ನೌಕರರ ಸಂಘದ ರುಕ್ಮಣಿ, ಗಂಗರತ್ನಮ್ಮ, ನಾಗಮಣಿ ಸೇರಿದಂತೆ ಹಲವರು ಇದ್ದರು.

ಬಾಲಕಿ ಮೇಲೆ ಅತ್ಯಾಚಾರ
ಕೋಲಾರ: ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಹೋಬಳಿಯ ಎಸ್. ಗೊಲ್ಲಪಲ್ಲಿ ಗ್ರಾಮದ ಪಿ. ಜೀಡಿಮಾಕಲಹಳ್ಳಿ ಮುನಿವೆಂಕಟಶೆಟ್ಟಿರವರ ಮಾವಿನ ತೋಪಿನಲ್ಲಿ ಬಾಲಕಿಯನ್ನು ಅಪಹರಿಸಿ ತಂದು ಅತ್ಯಾಚಾರವೆಸಗಿರುವ ಘಟನೆ ನಡೆಸಿದೆ. ಎಸ್.ಗೊಲ್ಲಪಲ್ಲಿ ಗ್ರಾಮದ 4 ವರ್ಷದ ಹೆಣ್ಣು ಮಗುವು ತಾಯಿಯೊಂದಿಗೆ ಜು.6ರಂದು ಪಿ.ಜೀಡಿಮಾಕಲಹಳ್ಳಿ ಮುನಿವೆಂಕಟಶೆಟ್ಟಿರವರ ಮಾವಿನ ತೋಪಿನಲ್ಲಿ ಮಾವಿನ ಕಾಯಿಗಳನ್ನು ತೆಗೆದುಕೊಂಡು ಬರಲು ಹೋಗಿದ್ದಾಗ ಅದೇ ಗ್ರಾಮದ ವಾಸಿಯಾದ ಸುಧಾಕರ ಎಂಬುವ ಅಪ್ರಾಪ್ತ ಹೆಣ್ಣು ಮಗುವನ್ನು ಮಾವಿನಕಾಯಿಗಳನ್ನು ಕೊಡುವುದಾಗಿ ಆಸೆ ತೋರಿಸಿ  ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿರುತ್ತಾನೆಂದು ದೂರಲಾಗಿದೆ.ಶ್ರೀನಿವಾಸಪುರ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಮೂವರ ಮೇಲೆ ಹಲ್ಲೆ
ಕೋಲಾರ: ತಾಲೂಕಿನ ಬೆಳಗಾನಹಳ್ಳಿಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ವೆಂಕಟರೆಡ್ಡಿ, ಪತ್ನಿ ಸವಿತ, ತಾಯಿ ಸಣ್ಣಮ್ಮ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮಾಂತರ ಪೊಲೀಸರು ಮುನೇಗೌಡ ಇನ್ನಿತರರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ರಿಫಿಲ್ಲಿಂಗ್ ದಂಧೆ-ಒಬ್ಬನ ಬಂಧನ
ಕೋಲಾರ: ನಗರದ ಕೀಲುಕೋಟೆ ಮತ್ತು ಶಾರದಾ ಚಿತ್ರ ಮಂದಿರದ ಬಳಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡಿ ಆಟೋ ಚಾಲಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ವರ್ತಮಾನ ಆಧರಿಸಿ ಪೊಲೀಸರು ಎರಡು ಕಡೆ ದಾಳಿ ಮಾಡಿ ಗ್ಯಾಸ್ ಸಿಲಿಂಡರ್‌ಗಳು, ತೂಕದ ಯಂತ್ರ ಹಾಗೂ ರೆಗ್ಯೂಲೇಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕೀಲುಕೋಟೆಯ ಗಂಗಮ್ಮ ದೇವಸ್ಥಾನದ ಬಳಿಯ ಅಂಗಡಿಯ ಮಾಲೀಕ ಕುಮಾರ್ ಬಂಧಿತ ಆರೋಪಿಯಾಗಿದ್ದಾರೆ. ಶಾರದಾ ಚಿತ್ರ ಮಂದಿರದ ಅಂಗಡಿಯ ಮಾಲೀಕ ಪೈರೋಜ್ ತಪ್ಪಿಸಿಕೊಂಡಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ದಾಳಿ ಡಿವೈಎಸ್ಪಿ ಅಶೋಕ್‌ಕುಮಾರ್, ಪಿಎಸ್‌ಐ ಸುಧಾಕರ್ ನೇತೃತ್ವದಲ್ಲಿ ನಡೆದಿದೆ.

ಚಿರತೆ ದಾಳಿಗೆ ಎರಡು ಮೇಕೆ ಬಲಿ
ಕೋಲಾರ: ತಾಲೂಕಿನ ಚಿಕ್ಕಅಯ್ಯೂರ್ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಮೇಕೆಗಳು ಸತ್ತಿವೆ. ಗ್ರಾಮದ ಶಿವರುದ್ರಪ್ಪ ಎಂಬುವರಿಗೆ ಸೇರಿದ ಮೇಕೆಗಳನ್ನು ಧನದಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದಾಗ ಚಿರತೆ ದಾಳಿ ಮಾಡಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮನೆ ನಿರ್ಮಾಣಕ್ಕೆ ಆದ್ಯತೆ ನೀಡಿ
ಶಿಡ್ಲಘಟ್ಟ: ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಗ್ರಾಪಂಗಳಲ್ಲಿ ಪ್ರಥಮ ಪ್ರಾಶಸ್ತ್ಯ ನೀಡುವಂತೆ ತಾಪಂ ಅಧ್ಯಕ್ಷ ಗಂಜಿಗುಂಟೆ ನರಸಿಂಹಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು. ಎಸ್.ದೇವಗಾನಹಳ್ಳಿ ಗ್ರಾಪಂ ಎರನಾಗೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಕಸ್ಮಿಕ ಬೆಂಕಿಗಾಹುತಿಗೆ ಕುರಿಗಳು ಮೃತಪಟ್ಟಿದ್ದವು. ಪಟ್ಟಣದ ತಾಪಂ ಕಚೇರಿಯಲ್ಲಿ ಸಂತ್ರಸ್ತರಿಗೆ ಪರಿಹಾರದ ಚೆಕ್‌ಗಳನ್ನು ವಿತರಣೆ ಮಾಡಿ ಮಾತನಾಡಿ, ಸರ್ಕಾರದಿಂದ ಕೊಡುವ ಸಹಾಯಧನ ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಿದರು. ಸದಸ್ಯರಾದ ರಾಜಣ್ಣ, ವೇಣುಗೋಪಾಲ್, ನಾರಾಯಣಸ್ವಾಮಿ, ವೆಂಕಟೇಶ್, ಮುಖಂಡರಾದ ತಮ್ಮಣ್ಣ, ಮುನಿರೆಡ್ಡಿ, ಬಶೆಟ್ಟಿಹಳ್ಳಿ ದ್ಯಾವಪ್ಪ, ಪ್ರಸಾದ್ ಹಾಜರಿದ್ದರು.

ಮೊಬೈಲ್ ವ್ಯಾಮೋಹದಿಂದ ದೂರವಿರಿ: ಮಕ್ಕಳಿಗೆ ಸಲಹೆ
ಚಿಂತಾಮಣಿ: ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹದಿಂದ ದೂರ ಸರಿದು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಪ್ರಾಂಶುಪಾಲ ಬಿ. ಜಯತೀರ್ಥ ಕರೆ ನೀಡಿದರು. ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ 2014-15 ನೇ ಸಾಲಿನ ವರ್ಷದ ಡಿಪ್ಲೊಮೊ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತರಗತಿಗಳಿಗೆ ಬರುವಾಗ ಕಡ್ಡಾಯವಾಗಿ ಸಮವಸ್ತ್ರ ಹಾಗೂ ಕ್ರಮ ಶಿಕ್ಷಣದಿಂದ ವರ್ತಿಸಲು ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಪಾಲನೆ ಮಾಡಲು ಸಭೆಯಲ್ಲಿ ವಿವರಿಸಿದರು. ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗದೆ ವಿದ್ಯಾರ್ತಿಗಳು ಪಠ್ಯ ಪುಸ್ತಕಗಳ ಬಗ್ಗೆ ಹೆಚ್ಚಿನ ಆಸಕ್ತ ತೋರಬೇಕೆಂದು ಹಾಗೂ ಉಪನ್ಯಾಸಕರ ಜೊತೆ ಗೌರವದಿಂದ ವರ್ತಿಸಬೇಕೆಂದು ಪ್ರಾಂಶುಪಾಲ ಬಿ. ಜಯತೀರ್ಥ ಹೇಳಿದರು. ಮುಖ್ಯ ಅತಿಥಿಯಾಗಿದ್ದ ಬಂಡಪಲ್ಲಿ ಬಿ.ಕೆ. ರಘು ಮಾತನಾಡಿ ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹದಿಂದ ಫ್ಯಾಶನ್ ಯುಗಕ್ಕೆ ಮಾರುಹೋಗದಂತೆ ಸಮವಸ್ತ್ರದಲ್ಲಿ ಜೀನ್ಸ್ ಪ್ಯಾಂಟ್ ಧರಿಸದಂತೆ ಬಡವ ಶ್ರೀಮಂತ ಎನ್ನದೆ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಕಾಲೇಜಿಗೆ ಬರಲು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಎಸ್. ಮುರಳಿ ಸಭೆಯಲ್ಲಿ ಭಾಗವಹಿಸಿದ ಪೋಷಕರಿಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ದೊರೆಯುವ ಉಪಯೋಗಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭಗಳಲ್ಲಿ ಉಪನ್ಯಾಸಕರಾದ ವೈ.ಎಸ್. ರಾಜೇಂದ್ರ, ಜಗದೀಶ್ ಆರ್. ಬಗಲಿ, ಕೆ.ವಿ. ವೆಂಕಟರೆಡ್ಡಿ, ಬಿ. ಕವಿತ, ಆರ್. ಶಾಂತಮ್ಮ, ಜಿ.ಎಸ್. ಅಮರನಾಥಗುಪ್ತ, ಅಮರನಾಥ್ ಸೇರಿದಂತೆ ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.