ಬೀದಿನಾಯಿಗಳ ದಾಳಿ: ಬಾಲಕ ಗಂಭೀರ
ಶಿಡ್ಲಘಟ್ಟ: ಬೀದಿನಾಯಿಗಳು ಮೂರು ವರ್ಷದ ಬಾಲಕನ ಮೇಲೆ ದಾಳಿ ಮಾಡಿದ ಪರಿಣಾಮ ಬಾಲಕ ಗಂಭಿರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪಟ್ಟಣದ ದಿಬ್ಬೂರಹಳ್ಳಿ ರಸ್ತೆಯ ಸಂತೋಷನಗರದ ಚರ್ಚ್ ಹಿಂಭಾಗದ ನ್ಯೂ ಇಂಡಿಯನ್ ಪಬ್ಲಿಕ್ ಶಾಲೆಯ ಬಳಿ ಆಟವಾಡಿಕೊಂಡಿದ್ದ ಬಾಲಕನ ಮೇಲೆ ಸುಮಾರು 15 ಬೀದಿ ನಾಯಿಗಳ ಗುಂಪು ಎರಗಿ ಕಚ್ಚಿವೆ. ಬಾಲಕನ ಚೀರಾಟ ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ ಬಾಲಕನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಯಿಗಳ ದಾಳಿಗೆ ತುತ್ತಾಗಿರುವ ಬಾಲಕ ಗಂಭೀರ ಗಾಯಗೊಂಡಿದ್ದಾನೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಲೆಎತ್ತಿರುವ ಮಾಂಸದ ಅಂಗಡಿಗಳಿಗೆ ಕಡಿವಾಣ ಹಾಕಿ ಬೀದಿನಾಯಿಗಳ ಹಾವಳಿ ತಪ್ಪಿಸುವಂತೆ ಪುರಸಭಾ ಅಧಿಕಾರಿಗಳಿಗೆ ಬಹಳಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ. ಬೀದಿನಾಯಿಗಳ ಹಾವಳಿ ತಡೆಯಲು ಕ್ರಮ ಜರುಗಿಸದೆ ಹೋದರೆ ಪುರಸಭಾ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಿನ್ನದ ಸರ ಎಗರಿಸಿ ಪರಾರಿ
ಕೆಜಿಎಫ್: ಭಿಕ್ಷೆ ಬೇಡುವ ನೆಪದಲ್ಲಿ ಬಂದ ದುಷ್ಕರ್ಮಿ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಳೇ ಸ್ವರ್ಣನಗರದ ನಿವಾಸಿ ರಾಮಕೃಷ್ಣ ಎಂಬುವರ ಪತ್ನಿ ಮುರಳಿಕುಮಾರಿ ಅವರು ಸರ ಕಳೆದುಕೊಂಡವರು. ಈ ಸರ ಸುಮಾರು 50 ಸಾವಿರ ಮೌಲ್ಯದ್ದಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಗುಲದ ಹುಂಡಿಯಲ್ಲಿ ಹಣ ಕಳವು
ಕೋಲಾರ: ತಾಲೂಕಿನ ಮಡೇರಹಳ್ಳಿಯಲ್ಲಿನ ಆಂಜನೇಯಸ್ವಾಮಿ ದೇವಾಲಯದ ಹುಂಡಿ ಹುಂಡಿ ಒಡೆದು ಕಳ್ಳರು ಹಣ ದೋಚಿದ್ದಾರೆ.
ದೇವಾಯದ ಅರ್ಚಕರು ಎಂದಿನಂತೆ ಪೂಜೆ ಮುಗಿಸಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದರು. ರಾತ್ರಿ ವೇಳೆ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಹುಂಡಿ ಒಡೆದು ಅದರಲ್ಲಿದ್ದ ಹಣ ದೋಚಿದ್ದಾರೆ. ದೇವಾಲಯದ ಬಾಗಿಲು ಒಡೆದಿದ್ದುದನ್ನು ದೇವಾಲಯದ ಪಕ್ಕದಲ್ಲೇ ಇರುವ ಹೋಟೆಲ್ ಮಾಲೀಕರು ಗಮನಿಸಿ ಗ್ರಾಮದ ಮುಖ್ಯಸ್ಥರಿಗೆ ತಿಳಿಸಲಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಮಹಿಳೆ ಕತ್ತಿನಲ್ಲಿದ್ದ ಸರ ಅಪಹರಣ
ಕೋಲಾರ: ನಗರದ ಚಿನ್ಮಯ ಶಾಲೆಯ ಬಳಿ ಮಹಿಳೆಯ ಕತ್ತಿನಿಂದ ಸುಮಾರು 40 ಗ್ರಾಂ. ಚಿನ್ನದ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬೆಂಗಳೂರಿನ ರಾಜಗೋಪಾಲ ನಗರದ ನಿವಾಸಿ ಶಾರದಮ್ಮ ಅವರು ಕೋಲಾರದ ಚಿನ್ಮಯ ಶಾಲೆಯ ಬಳಿ ವಾಸವಿರುವ ಅಳಿಯನ ಮನೆಗೆ ಬಂದಿದ್ದರು. ಭಾನುವಾರ ಮುಳಬಾಗಲಿನ ಆವಣಿಗೆ ಹೋಗಲೆಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರು ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಶಾರದಮ್ಮ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕುಟುಂಬ ಕಲಹ: ಮಹಿಳೆ ಆತ್ಮಹತ್ಯೆ
ಚಿಂತಾಮಣಿ: ಕುಟುಂಬ ಕಲಹದಿಂದ ಬೇಸತ್ತು ಗೃಹಿಣಿಯೊಬ್ಬಳು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್. ರಾಗುಟ್ಟಹಳ್ಳಿಯಲ್ಲಿ ಸಂಭವಿಸಿದೆ. ತಾಲೂಕಿನ ಬಟ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್. ರಾಗುಟ್ಟಹಳ್ಳಿ ಗ್ರಾಮದ ಗಂಗರತ್ನಮ್ಮ( 25) ಎಂಬ ಮೃತಪಟ್ಟ ದುರ್ದೈವಿ.
ದ್ವಿಚಕ್ರ ವಾಹನ ಡಿಕ್ಕಿ-ಯುವಕ ಸಾವು
ಕೋಲಾರ/ಶ್ರೀನಿವಾಸಪುರ: ದ್ವಿಚಕ್ರ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಓಡಿಸುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟು ಇನ್ನೊಬ್ಬ ಗಾಯಗೊಂಡಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಲಕ್ಷ್ಮೀಪುರದಲ್ಲಿ ನಡೆದಿದೆ, ಮೃತ ಯುವಕನನ್ನು ಶಿವ (30)ಹಾಗೂ ಗಾಯಾಳು ಶ್ರೀನಿವಾಸ್ (35) ಎಂದು ಗುರುತಿಸಲಾಗಿದೆ. ಲಕ್ಷ್ಮೀಪುರ ಕ್ರಾಸ್ನಿಂದ ಲಕ್ಷ್ಮೀಪುರಕ್ಕೆ ಭಾನುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಾಯಲ್ಪಾಡ್ ಠಾಣೆಯ ಪಿ.ಎಸ್.ಐ ಮಾರ್ಕೊಂಡಯ್ಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗಾಯಗೊಂಡ ಶ್ರೀನಿವಾಸ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಬೈಕ್ ಕಳ್ಳರ ಬಂಧನ
ಗೌರಿಬಿದನೂರು: ಕಳವು ವಾಹನ ಬಳಸುತ್ತಿದ್ದಾನೆಂಬ ಅನುಮಾನದ ಮೇಲೆ ವಿರುಪಸಂದ್ರದ ಗಂಗರಾಜು ಮತ್ತು ಅವನ ತಂಡದ ಮೂರುಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಅವರಿಂದ ಸುಮಾರು 4.75 ಮೌಲ್ಯದ ಸುಮಾರು 16 ಬೈಕ್ಗಳನ್ನು ವಶಪಡಿಸಿಕೊಂಡು ಅವರನ್ನು ವಿಚಾರಣೆ ನಡೆಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಮುಖ ಆರೋಪಿ ವಿರುಪಸಂದ್ರ ಗಂಗರಾಜು ನೀಡಿದ ಸುಳಿವಿನ ಮೇರೆಗೆ ವಿದುರಾಶ್ವತ್ಥ, ಸುರೇಶ್ ಆಂಧ್ರದ ಪೈಡಟಿ ವೆಂಕಟೇಶ್, ಶಿಡ್ಲಘಟ್ಟ ಸಿಬ್ಗತ್ರನ್ನು ಬಂಧಿಸಿ ವಿಚಾರಣೆ ನಡೆಸಿ ಅವರು ನೀಡಿದ ಮಾಹಿತಿ ಮೇರೆಗೆ ವಾಹನಗಳನ್ನು ಪತ್ತೆಹಚ್ಚಲಾಗಿದೆ. ನಕಲಿ ಕೀಗಳಿಂದ ವಾಹನದ ಬೀಗ ತೆಗೆದು ವಾಹನಗಳ ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದರು ಎಂದು ಪಿಎಸ್ಐ ಬೈರ ತಿಳಿಸಿದ್ದಾರೆ. ಇತ್ತೀಚೆಗೆ ಬೈಕ್ಗಳ ಕಳ್ಳತನ ಹೆಚ್ಚಾಗಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪೀನಾಥನ್ ಅವರ ಸೂಚನೆಯ ಮೇರೆಗೆ ಸಿಪಿಐ ನಾಗರಾಜ್ ಮಾರ್ಗದರ್ಶನದಲ್ಲಿ ರಚಿಸಿದ ತಂಡದ ಮುಖ್ಯಪೇದೆ ಖಲೀಲ್, ಪೇದೆಗಳಾದ ಚಿಕ್ಕಣ್ಣ, ಮಂಜು, ಮಹೇಶ್, ನಾಗೇಶ್, ಮಂಜನಾಥ್ ತಂಡ ಈ ಕಾರ್ಯಾಚರಣೆ ನಡೆಸಿದೆ.
ಪ್ರಾಮಾಣಿಕತೆ ಮೆರೆದ ಚಿಕ್ಕಬಳ್ಳಾಪುರ ಆಟೋ ಚಾಲಕ
ಚಿಕ್ಕಬಳ್ಳಾಪುರ: ಚಿನ್ನಾಭರಣ ಹೊಂದಿದ್ದ ಬ್ಯಾಗು ತನಗೆ ದಾರಿಯಲ್ಲಿ ಸಿಕ್ಕಿದ್ದನ್ನು ಮತ್ತೆ ಸುರಕ್ಷಿತವಾಗಿ ಅದರ ಮಾಲೀಕರಿಗೆ ತಲುಪಿಸುವ ಮೂಲಕ ಆಟೋ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ನಗರದ ಅಂಬೇಡ್ಕರ್ ಆಟೋ ನಿಲ್ದಾಣದಿಂದ ಗಾಂಧಿ ಕೊಳಾಯಿ ರಸ್ತೆಯಲ್ಲಿ ಆಟೋ ಚಾಲಕ ಜಿ.ವಿ. ಶಿವಕುಮಾರ್ ಸೋಮವಾರ ಮಧ್ಯಾಹ್ನ 3 ಗಂಟೆಗೆ ಬಾಡಿಗೆಗೆ ಹೋಗುತ್ತಿದ್ದಾಗ ಬ್ಯಾಗೊಂದು ಪತ್ತೆಯಾಗಿತ್ತು. ಅದನ್ನು ಪರಿಶೀಲಿಸಿದಾಗ ಹಳೆಯ ಬಟ್ಟೆಗಳು ಮತ್ತು ಸುಮಾರು 7.50 ಲಕ್ಷ ರು. ಮೌಲ್ಯದ 250 ಗ್ರಾಂ ಚಿನ್ನಾಭರಣಗಳಿದ್ದವು. ತಕ್ಷಣ ಅವರು ತಮ್ಮ ಸ್ನೇಹಿತರಾದ ತಿರುಮಲಪ್ಪ, ಪಟಾಲಪ್ಪರವರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಬಂದು ಆ ಬ್ಯಾಗನ್ನು ಒಪ್ಪಿಸಿದ್ದಾರೆ. ಇದರಿಂದ ಪೊಲೀಸರು ತನಿಖೆ ನಡೆಸಿದಾಗ ತಾಲೂಕಿನ ಗಂಡ್ರಹಳ್ಳಿ ವಾಸಿ ಸಂತೋಷ್ ಎಂಬುವವರು ದ್ವಿಚಕ್ರ ವಾಹನದಲ್ಲಿ ಹೋಗುವಾಗ ತಮ್ಮ ಬ್ಯಾಗನ್ನು ಕಳೆದುಕೊಂಡಿರುವುದು ತಿಳಿದು ಬಂದಿದೆ. ಅವರನ್ನು ಕರೆಸಿ ಬ್ಯಾಗ್ಅನ್ನು ವಾಪಸ್ ಕೊಡಲಾಯಿತು. ತಮಗೆ ಸಿಕ್ಕಿದ ಚಿನ್ನಾಭರಣಗಳನ್ನು ಹೊಂದಿರುವ ಬ್ಯಾಗನ್ನು ಆಟೋ ಚಾಲಕ ಶಿವಕುಮಾರ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದು ನೀಡಿರುವುದು ಶ್ಲಾಘನೀಯ. ಇವರ ಆದರ್ಶವನ್ನು ಎಲ್ಲರೂ ಮಾದರಿಯಾಗಿ ತೆಗೆದುಕೊಳ್ಳಬೇಕೆಂದು ಪ್ರಶಂಸಿಸಿದ ಜಿಲ್ಲಾ ರಕ್ಷಣಾಧಿಕಾರಿ 5 ಸಾವಿರ ಗಳೊಂದಿಗೆ ಅಭಿನಂದನಾ ಪತ್ರವನ್ನು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

