ಕೋಲಾರ

ಮತಬೇಟೆ ಚುರುಕು

Published On :

ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ
-ಪಾ.ಶ್ರೀ.ಅನಂತರಾಮ್
ಕೋಲಾರ: ಜೂನ್ 20ರಂದು ಶುಕ್ರವಾರ ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ ಬೇಟೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ 31ತಾಲೂಕಿನ 95 ಸಾವಿರ ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಆಗ್ನೇಯ ಪದವೀಧರರ ಕ್ಷೇತ್ರದ ಹಾಲಿ ವಿಧಾನ ಪರಿಷತ್ ಸದಸ್ಯ ಡಾ. ಶಿವಯೋಗಿಸ್ವಾವು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಮುಖಂಡರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಎರಡನೇ ಬಾರಿ ಆಯ್ಕೆಯಾಗಿರುವ ಕೋಲಾರ ಜಿಲ್ಲೆಯವರೇ ಆದ ವೈ.ಎ.ನಾರಾಯಣಸ್ವಾಮಿ, ಮತ್ತೊಬ್ಬ ಎಂಎಲ್ಸಿ ಡಿ.ಎಸ್.ವೀರಯ್ಯ ಅವರು ಶಿವಯೋಗಿಸ್ವಾವು ಪರವಾಗಿ ಪ್ರಚಾರ ನಡೆಸುತ್ತಿದ್ದರೆ, ಮಾಜಿ ಶಿಕ್ಷಣ ಸಚಿವ, ಹಾಲಿ ಶಾಸಕರಾದ ಕಾಗೇರಿ ಸಹ ಪ್ರವಾಸ ಶಿವಯೋಗಿಸ್ವಾವು ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.
ಚೌಡರೆಡ್ಡಿ ಮರಳಿ ಯತ್ನ: 2008ರಲ್ಲಿ ನಡೆದ ಆಗ್ನೇಯ ಪದವೀಧರರ ಕ್ಷೇತ್ರ ಮತ್ತು 2012ರಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಜೆಡಿಎಸ್‌ನ ಆರ್.ಚೌಡರೆಡ್ಡಿ  ಮತ್ತೊಮ್ಮೆ ಅದೃಷ್‌ಠ ಪರೀಕ್ಷೆಗಾಗಿ ಕಣಕ್ಕೆ ಇಳಿದಿದ್ದಾರೆ. ಚೌಡರೆಡ್ಡಿ ಪರವಾಗಿ ಅಣ್ಣ ಜಿಪಂ ಮಾಜಿ ಅಧ್ಯಕ್ಷರಾದ ತೂಪಲ್ಲಿ ನಾರಾಯಣಸ್ವಾಮಿ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ನಗರಸಭೆ ಅಧ್ಯಕ್ಷ ಮುಬಾಕರ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಇನ್ನಿತರರು ಪ್ರಚಾರ ನಡೆಸುತ್ತಿದ್ದಾರೆ.
ಕೇಂದ್ರ ರೇಲ್ವೆ ಸಚಿವ ಸದಾನಂದಗೌಡರು ಜೂ.15ರಂದು ಕೋಲಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಶಿವಯೋಗಿಸ್ವಾವು ಪರವಾಗಿ ಮತಯಾಚನೆ ಮಾಡಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರದಿಂದ ದಾವಣಗೆರೆ ಮುಂತಾದ ಕಡೆ ಮತ ಬೇಟೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಕಾಂಗ್ರೆಸ್ ಆಖಾಡಕ್ಕೆ: ದಾವಣಗೆರೆ ಜಿಲ್ಲೆಯವರೇ ಆದ ಪ್ರೊ. ಸಿ. ಎಚ್. ಮುರಿಗೇಂದ್ರಪ್ಪ ಕಾಂಗ್ರೆಸ್ ಅಭ್ಯರ್ಥಿ. ಕೊಂಚ ಮಟ್ಟಿಗೆ ಬಿಜೆಪಿಯ ಶಿವಯೋಗಿಸ್ವಾವು ಅವರನ್ನೇ ಹೋಲುವ ರೀತಿಯಲ್ಲಿ ಕಾಣುವ ಕಾಂಗ್ರೆಸ್ ಹುರಿಯಾಳು ಯಾರಿಗೆ ಕಂಟಕರಾಗುತ್ತಾರೋ ಕಾದು ನೋಡಬೇಕಾಗಿದೆ.
ಒಟ್ಟು 97805 ಮತದಾರರಿರುವ ಕ್ಷೇತ್ರದಲ್ಲಿ 16ರಿಂದ 17 ಸಾವಿರ ಮತದಾರರನ್ನು ತಾವು ನೋಂದಾಯಿಸಿರುವುದಾಗಿ ಹೇಳಿಕೊಂಡಿರುವ ಮುರಿಗೇಂದ್ರಪ್ಪ, ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಪಕ್ಷದ ನಾಯಕರ ಬೆಂಬಲದಿಂದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ತಿಳಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಇವರ ಪರವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಮಾಜಿ ಸಚಿವ ನಜೀರ್ ಅಹಮ್ಮದ್, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಸದಸ್ಯ ಬಾಲಾಜಿ ಚನ್ನಯ್ಯ, ಕೋಲಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಸಾದ್ ಬಾಬು ಬೆಂಬಲಕ್ಕೆ ನಿಂತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.