ಕೋಲಾರ

ಜನೋಪಯೋಗಿ ಯೋಜನೆ ಜಾರಿಗೆ ಬದ್ಧ

Published On :

ಕೋಲಾರ: ಕೇವಲ ಹೊಸ ರೇಲ್ವೆ ಮಾರ್ಗಗಳ ಘೋಷಣೆಯಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಜನತೆಯ ಆಶಯಗಳಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.
ನಗರದ ಗೋಕುಲ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಶಿವಯೋಗಿಸ್ವಾವು ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ತಾವು ಮಂಡಿಸಲಿರುವ ಹೊಸ ರೇಲ್ವೆ ಬಜೆಟ್‌ನ ಪರವಾಗಿರಬೇಕೆಂಬ ಸದಾಶಯವಿಟ್ಟುಕೊಂಡಿದ್ದು ಜನರಿಗೆ ಬೇಕಾಗುವ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ನುಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೇಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ, ಸುಧಾರಣೆ ತರಲು ಬಯಸಿ ನನಗೆ ಜವಾಬ್ದಾರಿ ನೀಡಿದ್ದಾರೆ, ತನಗೆ ವಹಿಸಿರುವ ಕರ್ತವ್ಯದಿಂದ ವಿಮುಕ್ತನಾಗದೆ ರಾಷ್ಟ್ರಕ್ಕೆ ಒಳಿತು ಆಗುವ ಹಾಗೂ ಮೋದಿಯವರಿಗೆ ಒಳ್ಳೆ ಹೆಸರು ಬರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆಂದರು.
ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಜಾರಿಗೆ ತಂದಿರುವ ಸ್ವೀಡ್ ಟ್ರೈನ್, ಬುಲೆಟ್ ಟ್ರೈನ್‌ಗಳ ಮಾದರಿಯಲ್ಲಿ ಭಾರತದಲ್ಲೂ ಹೊಸ ಅವಿಷ್ಕಾರಗಳು ಆಗಬೇಕಾಗಿದೆ ಎಂದರು. ಕರ್ನಾಟಕಕ್ಕೆ ಈ ಹಿಂದಿನ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲಾಗುತ್ತದೆ. ಯಾವ ಯೋಜನೆಯಿಂದ ಜನರಿಗೆ ಹೆಚ್ಚಿನ ಉಪಯೋಗವಾಗುತ್ತದೆ ಎಂಬುದನ್ನು ಅಧ್ಯಯನ ಮಾಡಿ ಜನರೊಟ್ಟಿಗೆ ಚರ್ಚಿಸಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆಂದು ಕೋಲಾರಕ್ಕೆ ಮಂಜೂರು ಆಗಿರುವ ರೇಲ್ವೆ ಕೋಚ್ ಇನ್ನಿತರ ಯೋಜನೆಗಳಿಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರ ಪ್ರಸ್ತಾವನೆಗಳಿಗೆ ಉತ್ತರ ನೀಡಿದರು.
ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ವೀರಯ್ಯ, ವೈ.ಎ. ನಾರಾಯಣಸ್ವಾಮಿ, ಶಾಸಕಿ ವೈ. ರಾಮಕ್ಕ, ಮಾಜಿ ಶಾಸಕರಾದ ವೈ. ಸಂಪಂಗಿ, ಎಂ. ನಾರಾಯಣಸ್ವಾಮಿ, ಬಿ.ಪಿ. ವೆಂಕಟಮುನಿಯಪ್ಪ ಅವರು ಕೋಲಾರ ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸಿಕೊಡುವುದಕ್ಕೆ ಮನವಿ ಮಾಡಿದರು. ಶ್ರೀನಿವಾಸಪುರಕ್ಕೆ ಮಂಜೂರು ಮಾಡಿರುವ ರೀತಿಯಲ್ಲಿ ಕೆಜಿಎಫ್‌ಗೆ ಪ್ರತ್ಯೇಕವಾಗಿ ರೇಲ್ವೆ ಕೋಚ್ ಘಟಕ ಮಂಜೂರು ಮಾಡಬೇಕು, ಕೇಂದ್ರ ಸರ್ಕಾರಕ್ಕೆ ಸೇರಿದ ನೂರಾರು ಎಕರೆ ಭೂಮಿ ಇರುವುದರಿಂದ ಘಟಕ ಸ್ಥಾಪನೆಗೆ ಯಾವುದೇ ಸಮಸ್ಯೆ ಇಲ್ಲವೆಂದು ಮಾಜಿ ಶಾಸಕ ವೈ. ಸಂಪಂಗಿ ತಿಳಿಸಿದರು. ಬಿಜೆಪಿಯ ಜಿಲ್ಲಾ ಘಟಕ, ತಾಲೂಕು ಘಟಕ ಹಾಗೂ ವಿವಿಧ ಸಂಸ್ಥೆಗಳಿಂದ ಸದಾನಂದಗೌಡರನ್ನು ಸನ್ಮಾನಿಸಲಾಯಿತು. ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಎ.ಹೆಚ್. ಶಿವಯೋಗಿಸ್ವಾವು, ಮುಖಂಡರಾದ ಎಂ.ಎಸ್. ನಾಗೇಂದ್ರ, ಸುರೇಂದ್ರಗೌಡ,ರಾಮೇಗೌಡ, ಜಿ.ಪಂ ಸದಸ್ಯರಾದ ಮುಂಜುಳ, ಎಂ.ಎಸ್. ಆನಂದ್ ಇದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಕೃಷ್ಣಾರೆಡ್ಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ ನಿರೂಪಿಸಿದರು.

ಮೋದಿ ಬೆಂಬಲಿಸಲು  ಸ್ವಾಮಿ ಗೆಲ್ಲಿಸಿ
ಕೋಲಾರ: ವಿಧಾನ ಪರಿಷತ್ತಿಗೆ ಜೂ.20ರಂದು ನಡೆಯಲಿರುವ ಚುನಾವಣೆಗೆ ಆಗ್ನೇಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಎ.ಹೆಚ್. ಶಿವಯೋಗಿಸ್ವಾವು ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ವಿಚಾರಧಾರೆಗಳು ವಿಧಾನ ಪರಿಷತ್ತಿನಲ್ಲಿ ಪ್ರಜ್ವಲಿಸಲು ಹಾಗೂ ಪ್ರತಿದಾದಿಸಲು ಅವಕಾಶ ನೀಡಬೇಕೆಂದು ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರು ಮತದಾರರಿಗೆ ಕರೆ ನೀಡಿದರು.
ನಗರದ ಗೋಕುಲ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎರಡು ಬಾರಿ ವಿಧಾನ ಪರಿಷತ್ತಿಗೆ ಆಗ್ನೇಯ ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯ ಸಕೇತಕರಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿರುವ ಶಿವಯೋಗಿಸ್ವಾವುಯವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಪರಿಷತ್ತಿನ ಘನತೆ-ಗೌರವ ಕಾಪಾಡಬೇಕೆಂದು ತಿಳಿಸಿದರು.

ರಾಜ್ಯದ ಹಿತ ಕಾಯಲು ಕೇಂದ್ರ ಬದ್ಧ
ಕೋಲಾರ: ಒಕ್ಕೂಟ ವ್ಯವಸ್ಥೆಯಡಿ ರಾಜ ನೀತಿಯನ್ನು ಬಲಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ತಮ್ಮ ಬದ್ಧತೆಯನ್ನು ಸಾರಿದ್ದಾರೆ. ಕರ್ನಾಟಕದ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಅದೇ ರೀತಿ ಕೇಂದ್ರ ಸರ್ಕಾರದ ಜನಪರವಾದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಹಕಾರ ಅಗತ್ಯ ಎಂದು ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಪ್ರತಿಪಾದಿಸಿದರು.
ಸಿದ್ದರಾಮಯ್ಯ ಅವರು ಮೋದಿ ಅವರನ್ನು ಅಭಿನಂದಿಸಲು ಹಾಗೂ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನಿಯೋಗದೊಂದಿಗೆ ಚರ್ಚಿಸಲು ಬಂದಾಗ ಮೋದಿಯವರು ಯಾವುದೇ ಕಾರಣಕ್ಕೂ ಕರ್ನಾಟಕದ ಹಿತಕ್ಕೆ ಧಕ್ಕೆ ತರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ರಾಜ್ಯದ ಬೆಂಬಲ ಕೋರಿದ್ದಾರೆ,. ಕಾವೇರಿ ವಿಚಾರದಲ್ಲಿ ಅನಗತ್ಯ ರಾಜಕಾರಣ ಬೇಡವೆಂದು ಕಿವಿಮಾತು ಹೇಳಿದ್ದಾರೆಂದು ನೆನಪು ಮಾಡಿಕೊಂಡರು. ತನ್ನ ಮೇಲೆ ಭರವಸೆ ಇಟ್ಟು ನೀಡಿರುವ ರೇಲ್ವೆ ಸಚಿವ ಸ್ಥಾನವನ್ನು ಆತ್ಮಸ್ಥೈರ್ಯದಿಂದ ನಿಭಾಯಿಸುತ್ತೇನೆ, ಜನತೆಯ ವಿಶ್ವಾಸ,ಪ್ರೀತಿಗೆ ಧಕ್ಕೆ ಬರದಂತೆ ಎಚ್ಚರವಹಿಸಿ ಕೆಲಸ ಮಾಡುವೆ, ಅದೇ ರೀತಿಯಲ್ಲಿ ಕರ್ನಾಟಕ ಅಭಿವೃದ್ಧಿಗೆ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು ಒಗ್ಗಟಾಗಿ ಕೆಲಸ ಮಾಡಬೇಕಾಗಿದೆ. ಬಿಜೆಪಿಯಿಂದ ಆಯ್ಕೆಯಾಗಿರುವ ಸಂಸದರು ಹೆಚ್ಚಿನ ಜವಾಬ್ದಾರಿಯಿಂದ ಜನ ಸೇವಕರಾಗಿ ಕಾರ್ಯ ನಿರ್ವಹಿಸುವುದು ಸ್ಪಷ್ಟವೆಂದು ನುಡಿದರು.

ಅನುಕಂಪದ ಅಲೆಯಲ್ಲ, ಬದಲಾವಣೆ ಅಲೆ
ಚಿಕ್ಕಬಳ್ಳಾಪುರ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ಅನುಕಂಪದ ಅಲೆಯಲ್ಲಿ ಆಡಳಿತಕ್ಕೆ ಬಂದದ್ದಲ್ಲ. ದೇಶದ ಜನರು ಅಭಿವೃದ್ಧಿಯ ಹೊಸ ಬದಲಾವಣೆ ಬಯಸಿ ಅಧಿಕಾರಕ್ಕೆ ತಂದಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಸದಾನಂದಗೌಡ ತಿಳಿಸಿದರು.
ನಗರದ ನ್ಯೂ ಹೊರೈಜನ್  ಶಾಲೆಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಆಗ್ನೇಯ ಕ್ಷೇತ್ರದ ಪದವೀಧರರ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಹಿಂದೆ 1984 ರಲ್ಲಿ ಇಂದಿರಾಗಾಂಧಿಯವರ ಹತ್ಯೆಯಾದಾಗ ಅನುಕಂಪದ ಅಲೆಯಲ್ಲಿ ರಾಜೀವ್ ಗಾಂಧೀಯವರು ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದರು. ನಂತರ ಸ್ಪಷ್ಟ ಬಹುಮತ ಯಾರಿಗೂ ಸಿಗಲಿಲ್ಲ. ಆದರೆ, ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡು ರಾಷ್ಟ್ರ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಈ ಬಾರಿ ಜನ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದರು. 272 ಬಿ ಪ್ಲಾನ್‌ಗಿಂತ ಬಿಜೆಪಿ ಹೆಚ್ಚು ಸ್ಥಾನ ಪಡೆಯಿತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆಗ್ನೇಯ ಕ್ಷೇತ್ರದ ಪದವೀಧರ ಬಿಜೆಪಿ ಅಭ್ಯರ್ಥಿ ಶಿವಯೋಗಿಸ್ವಾವು, ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ವೀರಯ್ಯ, ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ಜ್ಯೋತಿರೆಡ್ಡಿ, ನಾಗೇಂದ್ರ ಇದ್ದರು.
ಮತದಾರರಿಗೆ ಮತ ಪಾಠ: ಪದವಿ ಶಿಕ್ಷಣವನ್ನು ಪಡೆದಿದ್ದರೂ ಮತ ತಿರಸ್ಕೃತಗೊಳ್ಳಲು ಕಾರಣವಾಗುವ ರೀತಿಯಲ್ಲಿ ಮತದಾನ ಮಾಡುವುದು ಅರಿತ ಕೇಂದ್ರ ಸಚಿವರು, ಶಾಸಕರು ಮತದಾರರಿಗೆ ಮತ ಚಲಾವಣೆಯ ಪಾಠ ಹೇಳಿಕೊಟ್ಟರು. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ, ಅಭ್ಯರ್ಥಿ ಶಿವಯೋಗಿಸ್ವಾವು ತಮ್ಮ ಭಾಷಣಗಳಲ್ಲಿ, ಸೂಕ್ತ ಜಾಗದಲ್ಲಿ ಸೂಕ್ತ ರೀತಿಯಲ್ಲಿ ಒಂದು ಗೆರೆ ಎಳೆಯುವ ಮೂಲಕ ಮತ ಚಲಾಯಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.