ಮೈಸೂರು

ಜಾತಿವಾದಿಗಳಿಗೆ ವಚನ ಓದಿಸಿ

Published On :

ಕ.ಪ್ರ.ವಾರ್ತೆ ಮೈಸೂರು ಆ. 4
ಜಾತೀಯತೆ ಮಾಡುವವರಿಗೆ ಬಸವಾದಿ ಶರಣರ ವಚನ ಓದಿಸಿದರೆ ಸಾಕು. ಅವರಿಗೆಲ್ಲ ಅವುಗಳೇ ಔಷಧ ಎಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷರಾದ ಮಾತೆ ಮಹಾದೇವಿ ಹೇಳಿದರು.
ರಾಷ್ಟ್ರೀಯ ಬಸವ ದಳ ಮೈಸೂರು ಘಟಕವು ಭಾನುವಾರ ನಗರದ ನಟರಾಜ ಸಭಾಭವನದಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣನವರ 818ನೇ ಲಿಂಗೈಕ್ಯ ಸಂಸ್ಮರಣೆ ಹಾಗೂ ಬಸವದಳದ 25ನೇ ವಾರ್ಷಿಕೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮೈಸೂರಿನಲ್ಲಿ ವೀರಶೈವರು ಹೆಚ್ಚಾಗಿ ಜಾತಿ ಮಾಡುತ್ತಾರೆ ಎಂಬ ಆರೋಪ ಇದೆ. ಇದಕ್ಕೆ ಇಲ್ಲಿನ ವೀರಶೈವರಿಗೆ ಔಷಧಿ ಸಿಕ್ಕಿಲ್ಲ. ಆ ಔಷಧಿ ಬಸವಾದಿ ಶರಣರ ವಚನಗಳು. ಇವುಗಳಲ್ಲಿ ಪ್ರತಿದಿನ ಕನಿಷ್ಠ ಐದನ್ನು ಓದಿಸಿದರೆ ಅಷ್ಟೇ ಸಾಕು, ಜಾತೀಯತೆ ತೊಡೆದು ಹಾಕಬಹುದು. ವಚನ ಸಾಹಿತ್ಯ ದಿವ್ಯ ಔಷಧವಾಗಿದ್ದು, ಇದನ್ನು ಕ್ರಮಬದ್ಧವಾಗಿ ತೆಗೆದುಕೊಂಡರೆ ವೈಚಾರಿಕತೆ ಬೆಳೆಯುತ್ತದೆ ಎಂದರು.
ಧರ್ಮ ಎಂಬುದು ಮನುಷ್ಯನ ಮೂಲಭೂತವಾದ ಅವಶ್ಯಕತೆಯಾಗಿದೆ. ಇದನ್ನರಿಯದ ಕೆಲವರು ಧರ್ಮವೇ ಬೇಡ ಎನ್ನುತ್ತಾರೆ. ಅನೇಕ ಸಂತರು, ಮಹಾತ್ಮರು ಧರ್ಮಕ್ಕೆ ಭದ್ರಬುನಾದಿ ಹಾಕಿ ಹೋಗಿದ್ದಾರೆ. ಕಾರ್ಲ್‌ಮಾರ್ಕ್ಸ್‌ನ ಭೌತಿಕವಾದ ಹಾಗೂ ದೇವರನ್ನು ಒಟ್ಟಾಗಿ ಕೂಡಿಸಿದರೆ ಬಸವವಾದ ಹುಟ್ಟು ಪಡೆಯುತ್ತದೆ. ಬಸವಣ್ಣನವರಲ್ಲಿ ಸಾಮ್ಯವಾದದ ಮಾನವೀಯ ಕಳಕಳಿ ಇತ್ತು. ದೇವರನ್ನು ನಂಬದ ಸಿದ್ಧಾಂತ ತಪ್ಪು. ಧರ್ಮ ನಿರಾಪೇಕ್ಷಿತವಾದವನ್ನು ಒಪ್ಪಬಾರದು ಎಂದು ಪ್ರತಿಪಾದಿಸಿದರು.
ಬಸವಣ್ಣ ನಂದಿ ಅಲ್ಲ: ಹಿಂದಿನ ಕವಿಗಳು ಬಸವಣ್ಣನವರನ್ನು ನಂದಿಯನ್ನಾಗಿ ಪುರಾಣಿಕರಿಸಿದರು. ಅಂತಹ ದಡ್ಡರು ಸೃಷ್ಟಿಸಿದ ಸಾಹಿತ್ಯದಿಂದ ಇಂದು ಬಸವಣ್ಣನವರ ಗುಡಿಗಳಲ್ಲಿ ನಂದಿಯನ್ನು ಪೂಜಿಸುವಂತಾಗಿದೆ. ಕ್ರಾಂತಿಕಾರಿ ವ್ಯಕ್ತಿಯನ್ನು ಈ ರೀತಿ ಪುರಾಣಿಕರಿಸಬಾರದಿತ್ತು. ಬಸವಣ್ಣನವರದು ಜಾತಿ, ವರ್ಣ, ವರ್ಗ ರಹಿತ ಹಾಗೂ ಧರ್ಮ ಸಹಿತವಾದ ಕನಸಾಗಿತ್ತು. ಜಾತಿ, ವರ್ಣ, ವರ್ಗಗಳು ಸಾಮಾಜಿಕ ಪಿಡುಗುಗಳಾಗಿವೆ. ದೇವರು ಇವನ್ನೆಲ್ಲ ಸೃಷ್ಟಿಸುವಾಗ ಸಮಾನತೆ ತತ್ವ ಅನುಸರಿಸಿದ್ದಾನೆ. ಆದರೆ, ಜನರು ಜಾತಿ ಎಂಬ ಕತ್ತಲೆ ಹುಟ್ಟುಹಾಕಿಕೊಂಡರು. ಅದನ್ನು ಧರ್ಮಕ್ಕೆ ಅಂಟಿಸಿದರು. ಇವುಗಳೆಲ್ಲವೂ ಧರ್ಮದಲ್ಲಿನ ಅಗಂತುಕವಾದ ವಸ್ತುಗಳಾಗಿವೆ ಎಂದು ದೂಷಿಸಿದರು.
ಉರಿಲಿಂಗಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಕೆ.ಎಂ. ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮಾತೆ ಮಹಾದೇವಿ ಅವರ ಶಿಷ್ಯೆ ಜ್ಞಾನೇಶ್ವರಿ, ಉರಗತಜ್ಞ ಹಾಗೂ ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.