ಮೈಸೂರು

ಬಂಡೀಪುರದಲ್ಲಿ ಲಂಟಾನ ಹಾವಳಿ

Published On :

ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಆ. 4
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ ಲಂಟಾನ ಹಾವಳಿ ಹದ್ದು ಮೀರಿದೆ. ಪಾರ್ಥೇನಿಯಂಗಿಂತ ಅತೀ ವೇಗವಾಗಿ ಬಂಡೀಪುರ ಅಭಯಾರಣ್ಯವನ್ನೆ ವ್ಯಾಪಿಸುತ್ತಿರುವ ಲಂಟಾನ ಈಗ ಅಲ್ಲಿನ ಸಸ್ಯಹಾರಿ ಪ್ರಾಣಿಗಳ ಆಹಾರಕ್ಕೆ ನಿಧಾನವಾಗಿ ಪೆಟ್ಟು ನೀಡುತ್ತಿದೆ. ಜಿಂಕೆ, ಕಡವೆ, ಮೊಲ ಮುಂತಾದ ಸಸ್ಯಹಾರಿ ಪ್ರಾಣಿಗಳಿಗೆ ಮುಂದೊಂದು ದಿನ ಆಹಾರ ಕೊರತೆ ಉಂಟಾದರೂ ಆಶ್ಚರ್ಯ ಪಡುವಂತಿಲ್ಲ.
ಕಾರಣ ಇಷ್ಟೆ, ಲಂಟಾನ ಬೆಳೆದ ಕಡೆಯಲೆಲ್ಲಾ ಇತರ ಸಸ್ಯಗಳಾದ ಗರಿಕೆ ಜಾತಿಯ ಸಸ್ಯಗಳು ಬೆಳೆಯಲಾರವು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪಾರ್ಥೇನಿಯಂ ಗಿಡ ಬೆಳೆದಂತೆಯೆ ಲಂಟಾನ ಈ ಅಭಯಾರಣ್ಯದಲ್ಲಿ ಬೆಳೆಯುತ್ತಿದೆ. ಇದರಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ಸುಮಾರು 12 ಸಾವಿರಕ್ಕೂ ಹೆಚ್ಚು ಜಿಂಕೆಗಳು ಮತ್ತು ಕಡವೆಗೆ ತೊಂದರೆಯಾಗುತ್ತಿದೆ.
ಲಂಟಾನ ಇತಿಹಾಸ: ಟಿಪ್ಪು ಸುಲ್ತಾನನ ಕಾಲದಲ್ಲಿ ಈ ಲಂಟಾನ ಗಿಡವನ್ನು ಅಲಂಕಾರಕ್ಕಾಗಿ ಬ್ರೆಜಿಲ್‌ನಿಂದ ತರಿಸಲಾಯಿತು. ಆದರೆ, ಈಗ ಆ ಗಿಡವನ್ನು ನಿಯಂತ್ರಿಸಲು ಸಾಧ್ಯವಾಗದಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ರಕ್ತ ಬೀಜಾಸುರನ ಕತೆಯಂತೆ ಈ ಗಿಡ ಬೆಳೆದ ಸುತ್ತಲಿನ ಪ್ರದೇಶದಲ್ಲಿ ಗರಿಕೆ ಬೆಳೆಯುವುದೆ ಅಸಾಧ್ಯವಾಗಿದೆ. ಈ ಗಿಡದ ಬೀಜ ಉದುರಿದ, ಗಾಳಿಗೆ ತೇಲಿ ಹೋದ ಕಡೆಯಲೆಲ್ಲಾ ಈ ಗಿಡ ಬೆಳೆಯುತ್ತಿದೆ.
ಪರ್ಯಾಯ ಮಾರ್ಗ: ಈಗ ವಿಸ್ಮಯ ಕಾನನ ವೈಲ್ಡ್‌ಲೈಫ್ ಪ್ರಮೋಷನ್ ಗ್ರೂಪ್ ಮತ್ತು ಪರಿಸರ ಅಭಿವೃದ್ಧಿ ಸಮಿತಿ ಮತ್ತು ಇತರ ಕೆಲವು ಸಂಘ- ಸಂಸ್ಥೆಗಳ ಜೊತೆಗೂಡಿ ಲಂಟಾನ ಗಿಡದ ಕಡ್ಡಿಗಳಿಂದ ಗೃಹಲಂಕಾರಿಕ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಪೆನ್ನಿನ ಸ್ಟಾಂಡ್, ಟ್ರೇ ಮಾದರಿಯ ತಟ್ಟೆಗಳು, ಹಣ್ಣು ತುಂಬುವ ಸಣ್ಣ ಬುಟ್ಟಿ ಮುಂತಾದ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಈ ಕರಕುಶಲ ಕಲೆಯಿಂದಲೆ ಇಡೀ ಲಂಟಾನ ಗಿಡ ನಾಶವಾಗುತ್ತದೆ ಎಂಬುದು ಸುಳ್ಳು. ಆದರೆ, ಅಲ್ಲಿನ ಗಿರಿಜನರಿಗೆ ಲಂಟಾನದಿಂದ ವಿವಿಧ ವಸ್ತುಗಳನ್ನು ತಯಾರಿಸುವ ಕಲೆ ಹೇಳಿಕೊಡಲಾಗುತ್ತಿದೆ.
ಈಗ ಕೆಲವು ಮಂದಿಗಷ್ಟೆ ಈ ರೀತಿಯ ತರಬೇತಿ ನೀಡಲಾಗಿದೆ. ಇದು ಆರಂಭ ಅಷ್ಟೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಗುರಿ ಇದೆ. ಸ್ವಸಹಾಯ ಸಂಘಗಳಿಗೆ ಅರಣ್ಯ ಇಲಾಖೆಯಲ್ಲಿ ಮೀಸಲಿರಿಸಿರುವ ಅನುದಾನದಲ್ಲಿ ಸಹಾಯಧನ ನೀಡಿ ತರಬೇತಿ ನೀಡಲಾಗುತ್ತಿದೆ. ಆದರೆ, ಮಾರುಕಟ್ಟೆ ಅಭಿವೃದ್ಧಿ ಆಗಿಲ್ಲ. ಬಂಡೀಪುರ ಅರಣ್ಯದ ರೇಂಜರ್ ಮಹೇಶ್ ಮಾಲಗತ್ತಿ ಅವರ ಪತ್ನಿ ಡಾ. ವಿಸ್ಮಯ ನಾಯಕ್ ಅವರು ಈ ತರಬೇತಿಯ ನೇತೃತ್ವ ವಹಿಸಿದ್ದಾರೆ.
ಇದನ್ನು ಹೊರತುಪಡಿಸಿ ವಿವಿಧ ಯಂತ್ರಗಳ ಮೂಲಕ ಬೇರು ಸಮೇತ ತೆಗೆಯಬೇಕು. ತಪ್ಪಿದರೆ ಈ ಗಿಡಗಳ ನಿರ್ಮೂಲನೆ ಅಸಾಧ್ಯ. ಆದರೆ, ಅರಣ್ಯದೊಳಗೆ ಯಂತ್ರ ಬಳಕೆ ಮಾಡುವಂತಿಲ್ಲ. ಆ ಕಾರಣಕ್ಕೆ ಯಂತ್ರಗಳ ಬದಲು ಮಾನವ ಸಂಪನ್ಮೂಲ ಮಾತ್ರ ಬಳಸಬೇಕು. ಆದರೆ, ಅಷ್ಟೊಂದು ಬೃಹತ್ ಪ್ರಮಾಣದ ಅರಣ್ಯದಲ್ಲಿ ಮಾನವ ಸಂಪನ್ಮೂಲ ಬಳಸಿ ಲಂಟಾನ ನಾಶ ಮಾಡುವುದು ಸುಲಭದ ಮಾತಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳಿಗೂ ಗೊತ್ತು. ಆದ್ದರಿಂದ ಲಂಟಾನ ನಾಶಪಡಿಸಲು ವೈಜ್ಞಾನಿಕ ಮಾರ್ಗೋಪಾಯ ಕಂಡುಕೊಳ್ಳಬೇಕಾದ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.