ಹುಣಸೂರು: ರೈತರಿಗೆ ತರಬೇತಿ
ಹುಣಸೂರು: ತಾಲೂಕು ಕೃಷಿ ಇಲಾಖೆಯಿಂದ 'ಆತ್ಮ' ಯೋಜನೆಯಡಿ 2013- 14ನೇ ಸಾಲಿನ ತಾಲೂಕು ಮಟ್ಟದ ರೈತರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ. ರಾಜಣ್ಣ ಮಾತನಾಡಿ, ಯಾವುದೇ ಬೆಳೆಗಳಲ್ಲಿ ಇಳುವರಿ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಸಂಬಂಧಿತ ಕೃಷಿ ಮಣ್ಣಿನಲ್ಲಿರುವ ಪೋಷಕಾಂಶ ಅವಲಂಬಿಸಿರುತ್ತದೆ. ಕೃಷಿ ಮಣ್ಣಿನಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಕಂಡುಕೊಂಡು ಅದಕ್ಕೆ ಸೂಕ್ತ ಪೋಷಕಾಂಶಯುಕ್ತ ಗೊಬ್ಬರ ನೀಡುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ. ಆದ್ದರಿಂದ ರೈತರು ಯಾವುದೇ ಬೆಳೆ ಕೈಗೊಳ್ಳುವ ಮೊದಲು ಮಣ್ಣಿನ ಪರೀಕ್ಷೆ ಮಾಡಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಕೆ. ಕೆಂಚೇಗೌಡ ಮಾತನಾಡಿ, ಒಂದೇ ಕೃಷಿ ಭೂಮಿಯಲ್ಲಿ ವರ್ಷವಿಡೀ ಒಂದೇ ಬೆಳೆ ಬೆಳೆಯುವ ಬದಲು ಏಕದಳ ಧಾನ್ಯದ ನಂತರ ದ್ವಿದಳ ಧಾನ್ಯ ಅಥವಾ ದ್ವಿದಳ ಧಾನ್ಯದ ನಂತರ ಏಕದಳ ಧಾನ್ಯಗಳನ್ನು ಬೆಳೆಯುವುದರಿಂದ ಅಧಿಕ ಇಳುವರಿಯ ಜತೆಗೆ ಕೃಷಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು. ಆದ್ದರಿಂದ ರೈತರು ಮಣ್ಣಿನ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದರು.
'ಆತ್ಮ' ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಡಾ.ಎಂ.ವಿ. ಗೋವಿಂದರಾಜು ಮಾತನಾಡಿ, ಕಡಿಮೆ ಕೃಷಿ ಭೂಮಿಯಿರುವ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಇಳುವರಿ ಮತ್ತು ಅಧಿಕ ಆದಾಯ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ರೈತರು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗಬಹುದು ಎಂದರು.
ಕೃಷಿ ತಜ್ಞ ಎಂ.ಎಚ್. ಹೊಂಬಯ್ಯ ಮಾತನಾಡಿದರು. 'ಆತ್ಮ' ಯೋಜನೆಯ ಉಪ ಯೋಜನಾ ನಿರ್ದೇಶಕ ಬಿ.ಎಸ್. ಅಂದಾನಿಗೌಡ, ರೈತ ಅನುವುಗಾರರಾದ ಸುದರ್ಶನ ರಾವ್ ಶಿಂಧೆ, ಮುಳ್ಳೂರು ನಟರಾಜು, ಪ್ರಕಾಶ, ಕಣಗಾಲು ಕೆ.ಪಿ. ರಾಘವೇಂದ್ರ, ಮೈದನಹಳ್ಳಿ ಸಿದ್ದೇಗೌಡ, ಉದ್ದೂರಿನ ವೆಂಕಟೇಶಗೌಡ, ಶಿವರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

