ಪಪಂ ತ್ಯಾಜ್ಯ ನೀರು ಕಪಿಲಾ ನದಿಗೆ
ಕ.ಪ್ರ.ವಾರ್ತೆ ಟಿ. ನರಸೀಪುರ ಆ. 24
ಇಲ್ಲಿನ ತ್ಯಾಜ್ಯ ನೀರು ಪೂರ್ಣ ಪ್ರಮಾಣದಲ್ಲಿ ಹರಿದು ಕಪಿಲಾ ನದಿಗೆ ಸರಾಗವಾಗಿ ಸೇರುತ್ತಿದೆ.
ತ್ಯಾಜ್ಯ ನೀರಿನ ವಿಲೇವಾರಿಗೆ ಇದುವರೆಗೂ ಯಾವುದೆ ವ್ಯವಸ್ಥೆಯನ್ನು ಇಲ್ಲಿಯ ಸ್ಥಳೀಯ ಸಂಸ್ಥೆಗಳ ಆಡಳಿತ ಮಾಡಿಕೊಂಡಿಲ್ಲ. ತ್ಯಾಜ್ಯದ ವಿಲೇವಾರಿಗೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೆ ಯೋಜನೆ ರೂಪಿಸದ್ದರಿಂದ ಘನ ತ್ಯಾಜ್ಯವು ನೀರಿನೊಂದಿಗೆ ಬೆರೆತು ನದಿ ಪಾಲಾಗುತ್ತಿದೆ.
ನರಸೀಪುರ ತ್ರಿವೇಣಿ ಸಂಗಮದಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ದಕ್ಷಿಣ ಭಾರತದ ಕುಂಭಮೇಳದಲ್ಲಿ ಸಾವಿರಾರು ಮಂದಿ ಪುಣ್ಯಸ್ನಾನಕ್ಕೆಂದು ನದಿಗಿಳಿಯುತ್ತಾರೆ. ಪುರಾತನ ಪ್ರಸಿದ್ಧ ಶ್ರೀ ಗುಂಜಾ ನರಸಿಂಹ ಸ್ವಾಮಿಯ ಮಜ್ಜನಕ್ಕೂ ಸಂಗಮದ ನೀರನ್ನೆ ಬಳಸಲಾಗುತ್ತದೆ. ಇಂತಹ ಪವಿತ್ರ ಕಾರ್ಯಕ್ಕೆ ಬಳಕೆಯಾಗುವ ನದಿಗೆ ಜಿಡ್ಡುಗಟ್ಟಿದ ಕಲುಷಿತ ನೀರು ಮಿಶ್ರಣಗೊಳ್ಳುತ್ತಿದೆ.
ಕಲುಷಿತ ನೀರು ನದಿಯನ್ನು ಸೇರುವ ಸ್ಥಳದಲ್ಲಿ ತ್ಯಾಜ್ಯ ನೀರು ನೊರೆಯುಕ್ತವಾಗಿರುತ್ತದೆ. ಅಲ್ಲದೆ ಕೊಳೆತ ಚಪ್ಪಲಿ, ಬಳಸಿ ಬೀಸಾಡಿದ ಔಷಧದ ಡಬ್ಬಗಳು ಇನ್ನಿತರ ತರಾವರಿ ಕೊಳೆತ ವಸ್ತುಗಳು ಇಂದಿಗೂ ಕಾಣಸಿಗುತ್ತವೆ. ಇದರಿಂದಾಗಿ ಜಲಚರ ಪ್ರಾಣಿಗಳ ಪ್ರಾಣಕ್ಕೂ ಕುತ್ತು ಬಂದೊದಗಿದೆ. ಪಕ್ಕದಲ್ಲಿಯೇ ಚಾಮರಾಜನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪಂಪ್ಹೌಸ್ ಕೂಡ ಇದೆ. ನದಿಗೆ ಇಷ್ಟೊಂದು ಪ್ರಮಾಣದ ಕೊಳಚೆ ನೀರು ಸೇರುತ್ತಿದ್ದರೂ ಸಂಬಂಧಿಸಿದವರು ಕಂಡು ಕಾಣದವರಂತೆ ಇರುವುದು ವಿಪರ್ಯಾಸವಾಗಿದೆ.
'ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ'
ಕ.ಪ್ರ.ವಾರ್ತೆ ಟಿ. ನರಸೀಪುರ ಆ. 24
ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಕೂಡ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದ ಆರ್ಥಿಕ ಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕೆಂದು ಕಿರಗಸೂರು ಗ್ರಾಪಂ ಅಧ್ಯಕ್ಷ ಪ್ರಕಾಶ್ ಹೇಳಿದರು.
ತಾಲೂಕಿನ ಕಿರಗಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸೌಲಭ್ಯಗಳ ಅರಿವು ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.
ಅಂಗವಿಕಲರು, ಹಿರಿಯ ನಾಗರಿಕರಿಗೆ ಸಂವಹನ ಮತ್ತು ಮಾಹಿತಿ ಕೊರತೆಯಿಂದ ಯಾವೊಂದು ಸರ್ಕಾರಿ ಸೌಲಭ್ಯ ಸಮರ್ಪಕವಾಗಿ ತಲುಪುತ್ತಿಲ್ಲ. ಸರ್ಕಾರ ಅಂಗವಿಕಲರಿಗೆ ಶೇ.3ರ ಮೀಸಲಾತಿ ಸೇರಿದಂತೆ ಔದ್ಯೋಗಿಕವಾಗಿ ಮುಂದೆ ಬರಲು ಹಣಕಾಸಿನ ನೆರವು ನೀಡಲು ಸಹಾಯ ಧನದೊಂದಿಗೆ ಸಾಲ ಸೌಲಭ್ಯ ನೀಡುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಪುನರ್ವಸತಿ ಕೇಂದ್ರವನ್ನು ತೆರೆದಿದೆ. ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಭಾರತೀಯ ರೆಡ್ಕ್ರಾಸ್ ಸಂಸ್ಥೆಯೂ ಅವಿರತವಾಗಿ ದುಡಿಯುತ್ತಿದೆ. ಆದ್ದರಿಂದ ಅಂಗವಿಕಲರು ಮೂಲೆಯಲ್ಲಿ ಕೂರುವ ಬದಲು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು. ಇಲಾಖೆಯ ಪಿ ಅಂಡ್ ಒ ಎಂಜಿನಿಯರ್ ಜಿ. ಮಾರಿಯಪ್ಪನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಪಂ ಮಾಜಿ ಅಧ್ಯಕ್ಷೆ ಸುಂದ್ರಮ್ಮ, ಮಾಜಿ ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಮಹದೇವಪ್ಪ, ಬಿಳಿಗೆರೆಹುಂಡಿ ಬಸವರಾಜು, ಮಾದಮ್ಮ, ಚಿನ್ನಬುದ್ಧಿ, ಯಶೋಧ, ಮೀನಾಕ್ಷಿ ಶಿವಣ್ಣ, ನೋಡೆಲ್ ಅಧಿಕಾರಿ ಎಂ. ಮುರಳೀಧರ, ಎಂಜಿನಿಯರ್ ಈ. ರವಿಶಂಕರ್, ಶಿಕ್ಷಕ ಟಿ.ಪಿ. ಲೋಕೇಶ್, ರೆಡ್ಕ್ರಾಸ್ ಸಂಸ್ಥೆಯ ವನಜಾ, ಯೋಗೀಶ್, ಕಾರ್ಯಕರ್ತರಾದ ವೈ.ಎಂ. ದಿನೇಶ್, ಮಲ್ಲಪ್ಪ, ಫೋಟೋ ಮಹೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

