ಗಜಪಯಣ ಚಾಲನೆ ಆರಂಭದಲ್ಲಿ ಗೊಂದಲ
ಕ.ಪ್ರ.ವಾರ್ತೆ ಹುಣಸೂರು ಆ. 28
ದಸರಾ ಗಜಪಯಣ ಚಾಲನಾ ಸಮಾರಂಭದಲ್ಲಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ತಮ್ಮ ಭಾಷಣ ಮುಗಿಸುತ್ತಿದ್ದಂತೆಯೇ ದಸಂಸ ಮತ್ತು ರೈತ ಸಂಘದ ಮುಖಂಡರು ಮಧ್ಯ ಪ್ರವೇಶಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ದಸಂಸ ಮುಖಂಡ ನಿಂಗರಾಜ ಮಲ್ಲಾಡಿ, ಕುಮಾರ್, ಮಹದೇವು, ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊಸೂರು ಕುಮಾರ್ ಅವರು ಸಭೆ ಮಧ್ಯದಲ್ಲಿಯೇ ನಿಂತಿದ್ದರಿಂದ ಕೆಲಕಾಲ ವೇದಿಕೆ ಮುಂದೆ ಕುಳಿತಿದ್ದವರ ಆಕ್ರೋಶಕ್ಕೆ ಗುರಿಯಾದರು. ಶಾಶ್ವತವಾಗಿ ಆನೆ ತಡೆಗೋಡೆಗೆ ಮನವಿ ಸಲ್ಲಿಸಲು ಬಂದಿದ್ದ ತಾಲೂಕು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೊಡ್ಡಹನುಮೇಗೌಡ ಅವರನ್ನು ಪೊಲೀಸರು ಹೊರಗಟ್ಟಿದರು.
ಹನಗೋಡು ಕಾಲೇಜಿನ ಅವ್ಯವಸ್ಥೆ ಬಗ್ಗೆ ಮನವಿ ಸಲ್ಲಿಸಲು ಬಂದಿದ್ದ ವಿದ್ಯಾರ್ಥಿ ಅಭಿಷೇಕ್ (ಪ್ರದೀಪ), ಮೋಹನ್, ಚಂದ್ರಶೇಖರ್ಗೆ ಸಭಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಧರ್ಮದೇಟು ನೀಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಶ್ರೀನಿವಾಸ್ ಅವರಿಗೆ ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಆದರೆ ಈ ಬಗ್ಗೆ ಯವುದೆ ಪ್ರಕರಣ ದಾಖಲಾಗಿಲ್ಲ.
ಶೀಘ್ರ ಹಕ್ಕುಪತ್ರ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಮನುಷ್ಯನ ಮಾತನ್ನು ಆನೆಯಂತಹ ಪ್ರಾಣಿ ಕೇಳುತ್ತದೆ. ಆದರೆ ಇಂದು ಮನುಷ್ಯರ ಮಾತನ್ನು ಮನುಷ್ಯರೆ ಕೇಳದಾಗಿದ್ದಾರೆ. ಗಿರಿಜನರ ಮಕ್ಕಳು ಇಂದು ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿ ಕೊಡುತ್ತಿರುವುದು ಇತರರನ್ನು ನಾಚಿಸುವಂತಿದೆ. ಗಿರಿಜನರ ಭೂ ಒಡೆತನದ ಹಕ್ಕುಪತ್ರ ಶೀಘ್ರದಲ್ಲೆ ದೊರೆಯಲಿದೆ. ತಾಲೂಕಿನಲ್ಲಿ ಆನೆ ಹಾವಳಿ ಕಡಿಮೆಯಾಗಿದ್ದರೂ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಮರಳು ಸಮಸ್ಯೆ ಬಗ್ಗೆ ಈಗಾಗಲೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದು ಇನ್ನು 15 ದಿನದಲ್ಲಿ ಬಗೆಹರಿಸುವೆ ಮತ್ತು ಹಕ್ಕುಪತ್ರ ಸಹ ನೀಡುವುದಾಗಿ ಭರವಸೆ ನೀಡಿದರು.
ವೀರಾಂಜನೇಯಸ್ವಾಮಿಗೆ ಪೂಜೆ ಇಲ್ಲದೆ ಗಜಪಯಣ
-ಧರ್ಮಾಪುರ ನಾರಾಯಣ್
ಕ.ಪ್ರ.ವಾರ್ತೆ ಹುಣಸೂರು ಆ. 28
ಪುರಾತನ ಕಾಲದಿಂದ ಪೂಜಿಸಿಕೊಂಡು ಬರುತ್ತಿದ್ದ ರಾಜಮನೆತನದ ಮನೆದೇವರು ಶ್ರೀ ವೀರಾಂಜನೆಯ ಸ್ವಾಮಿಯನ್ನೇ ಕಳೆದೆರಡು ವರ್ಷಗಳಿಂದ ಮರೆತ ಜಿಲ್ಲಾಡಳಿತ ಗಜಪಯಣಕ್ಕೆ ಚಾಲನೆ ನೀಡುತ್ತಿದೆ.
ಹುಣಸೂರು ತಾಲೂಕಿನ ವೀರನಹೊಸಳ್ಳಿಯ ಮುಖ್ಯದ್ವಾರದಿಂದ ಗಜಪಡೆಗಳಿಗೆ ರಾಜಮನೆತನ ನಂತರ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸ್ವಾಗತಿಸುವ ಮುನ್ನ, ವೀರನಹೊಸಳ್ಳಿ ಗೇಟ್ನಲ್ಲಿರುವ ಮೈಸೂರು ರಾಜಮನೆತನದ ಮನೆದೇವರು ಶ್ರೀ ವೀರಾಂಜನೇಯಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ನಂತರ ಗಜಪಯಣಕ್ಕೆ ಚಾಲನೆ ನೀಡುವುದು ಸಂಪ್ರದಾಯ.
2011ನೇ ಸಾಲಿನಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸುತ್ತ 5 ಕಿಮೀ ದೂರ ಅತಿ ಸೂಕ್ಷ್ಮ ವಲಯವೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದರಿಂದ ಕಳೆದ ವರ್ಷದಿಂದ ನಾಡ ದಸರಾದ ಗಜಪಯಣ ಸಮಾರಂಭವನ್ನು ಮೊದಲನೇ ಬ್ಲಾಕ್ ನಾಗಪುರದ ಆಶ್ರಮ ಶಾಲೆಯ ಮುಂಭಾಗದಲ್ಲಿ ನಡೆಸಲು ಪ್ರಾರಂಭವಾಯಿತು. ಹಿಂದಿನ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ದೇವರಿಗೆ ಪೂಜೆ ಸಲ್ಲಿಸಿ ನಂತರ ಬಂದು ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಈ ಬಾರಿಯ ಜಿಲ್ಲಾಡಳಿತ ರಾಜಮನೆತನದ ದೇವರನ್ನೆ ಮರೆತು ಗಜಪಯಣಕ್ಕೆ ಚಾಲನೆ ನೀಡಿರುವ ಬಗ್ಗೆ ಸಾರ್ವಜನಿಕರಲ್ಲಿ ಗುಸು ಗುಸು ಚರ್ಚೆಯಾಗುತ್ತಿತ್ತು.
ವೀರನಹೊಸಳ್ಳಿಯ ಗೇಟ್ನಲ್ಲಿರುವ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದ ಅರ್ಚಕರು ಸಹ ಹಲವಾರು ತಿಂಗಳಿನಿಂದ ಇಲ್ಲದೇ ಗುಡಿ ಅನಾಥವಾಗಿದೆ ಎನ್ನುತ್ತಾರೆ ಸ್ಥಳೀಯರು. ಪ್ರತಿ ವರ್ಷಕ್ಕೊಮ್ಮೆ ಮೈಸೂರಿನ ಅರಮನೆಯ ಕೋಟೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಅರ್ಚಕರು ಪೂಜೆ ಸಲ್ಲಿಸಿ ಗಜಪಡೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ವರ್ಷವು ಸಹ ಮಾಮೂಲಿಯಂತೆ ಮೈಸೂರಿನ ಆರ್ಚಕರು ಪೂಜೆ ಸಲ್ಲಿಸಿದ್ದಾರೆ. ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.
ಕಾಡಾನೆ ಹಾವಳಿ ನಿಯಂತ್ರಿಸಲು ಸಚಿವರಿಗೆ ಮನವಿ
ಕ.ಪ್ರ.ವಾರ್ತೆ ಹುಣಸೂರು ಆ. 28
ಕಳೆದ 30 ವರ್ಷಗಳಿಂದ ಕಾಡಂಚಿನಲ್ಲಿ ವಾಸಿಸುತ್ತಿರುವ ರೈತರು ಕಾಡಾನೆ ಹಾವಳಿಂದ ಬೆಳೆ ನಷ್ಟ ಅನುಭವಿಸುವಂತಾಗಿದ್ದು ಈಗಲಾದರೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಮನವಿ ಸಲ್ಲಿಸಿದೆ. ಬುಧವಾರ ತಾಲೂಕಿನ ನಾಗಪುರ ಹಾಡಿಯಲ್ಲಿ ನಡೆದ ಗಜಪಯಣ ಉದ್ಘಾಟನಾ ಸಮಾರಂಭದಲ್ಲಿ ರೈತ ಸಂಘದ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಈ ಹಿಂದಿನ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿ, ಚುನಾಯಿತರಾದ ಮೇಲೆ ರೈತರ ಸಮಸ್ಯೆಯನ್ನೇ ಮರೆತಿದ್ದಾರೆ. ಇದರಿಂದ ನಿರಂತರ ಬೆಳೆ ನಷ್ಟ ಅನುಭವಿಸುವಂತಾಗಿದೆ. ಇದರಿಂದ ಸಾಲಗಾರರಾಗಿ ಊರು ಬಿಟ್ಟು ಹೋಗುವಂತ ಪರಿಸ್ಥಿತಿ ನೆಲೆಸಿದೆ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ತಾವಾದರೂ ಕ್ರಮ ಕೈಗೊಂಡು ರೈತರ ನೆರವಿಗೆ ಧಾವಿಸಬೇಕಾಗಿದೆ. ಜತೆಗೆ ಅರಣ್ಯಕ್ಕೆ ತಡೆಗೋಡೆ ಹಾಕುವ ಮೂಲಕ ಅರಣ್ಯ ಸಂಪತ್ತನ್ನು ಉಳಿಸಬೇಕಿದೆ. ವೈಜ್ಞಾನಿಕ ಸೋಲಾರ್ ತಡೆಗೋಡೆ ಇದನ್ನು ನಿರ್ವಹಿಸಲು ಅರಣ್ಯ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವಂತೆ ಅಧ್ಯಕ್ಷ ಹೊಸೂರು ಕುಮಾರ್ ಕೋರಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ಸಂತತಿ ಹೆಚ್ಚುತ್ತಿದ್ದು, ಕಾಡಂಚಿನ ಗ್ರಾಮದಲ್ಲಿ ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಇದನ್ನು ತಪ್ಪಿಸಲು ತಡೆಗೋಡೆ ನಿರ್ಮಿಸುವಂತೆ ಹುಣಸೂರು ತಾಲೂಕು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೊಡ್ಡ ಹನುಮೇಗೌಡ, ದಸಂಸದ ಕೆಂಪಣ್ಣ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

