ಅಪರಿಚಿತ ಮೃತದೇಹ ಪತ್ತೆ
ಕ.ಪ್ರ.ವಾರ್ತೆ ಮೈಸೂರು ಆ. 31
ಕೊಳೆತ ಸ್ಥಿತಿಯಲ್ಲಿರುವ ಅಪರಿಚಿತ ವ್ಯಕ್ತಿಯ ಮೃತದೇಹವು ಕೆಆರ್ಎಸ್ ಹಿನ್ನೀರಿನಲ್ಲಿ ದೊರೆತಿದೆ. ತಾಲೂಕಿನ ಯಾತೆಗೌಡನಹಳ್ಳಿಯ ಸಮೀಪ ಸುಮಾರು 30 ರಿಂದ 35 ವರ್ಷ ವಯಸ್ಸಿನ ಈ ಅಪರಿಚಿತ ವ್ಯಕ್ತಿಯ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದು, ನೀರಿನಲ್ಲಿ ತೇಲಿ ಬಂದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಸಿಮೆಂಟ್ ಬಣ್ಣದ ಪ್ಯಾಂಟು, ನೀಲಿ ಬಣ್ಣದ ಶರ್ಟ್, ಕೆಂಪು ಬಣ್ಣದ ನಿಕ್ಕರ್, ಉಡದಾರ ಧರಿಸಿದ್ದಾರೆ. ಈ ಸಂಬಂಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಮೈಸೂರು: ನಿವೇಶನ ಮಾರಾಟ ವ್ಯವಹಾರಕ್ಕೆ ಸಂಬಂಧಿಸಿದಂತೆ ಊರಿಗೆ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಕೆ.ಬಿ. ಗಣೇಶ್ (34) ನಾಪತ್ತೆಯಾದ ವ್ಯಕ್ತಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಗಣೇಶ್ ಆ.15ರಂದು ನಿವೇಶನ ಮಾರಾಟಕ್ಕೆ ಸಂಬಂಧಿಸಿದಂತೆ ಊರಿಗೆ ಹೋಗುವುದಾಗಿ ಹೇಳಿ ಮನೆಯ ಖರ್ಚಿಗೆ 5 ಸಾವಿರ ಮತ್ತು ಆತನ ಅಕ್ಕನ ಮನೆಗೆ ತೆರಳಿ 3 ಸಾವಿರ ರು. ನೀಡಿ ಹೋದವರು ಇದುವರೆಗೂ ಪತ್ತೆಯಾಗಿಲ್ಲ ಎಂದು ಅವರ ತಾಯಿ ಸಾಕಮ್ಮ ಕೆ.ಆರ್. ಠಾಣೆಗೆ ದೂರು ನೀಡಿದ್ದಾರೆ. 5.8 ಅಡಿ ಎತ್ತರ, ಎಣ್ಣೆಗೆಂಪುಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿರುವ ಇವರು ಕನ್ನಡ, ಹಿಂದಿ, ತಮಿಳು ಮಾತನಾಡುತ್ತಾರೆ. ಇವರ ಪತ್ತೆಯಾದಲ್ಲಿ ಕೆ.ಆರ್. ಠಾಣೆ ದೂ. 2418319, 2418519 ಸಂಪರ್ಕಿಸಬಹುದು.
ಇಂದು ನೀರು ಪೂರೈಕೆ ವ್ಯತ್ಯಯ
ಮೈಸೂರು: ನಗರಕ್ಕೆ ನೀರು ಸರಬರಾಜು ಮಾಡುವ ಮೂಲಸ್ಥಾವರಗಳಾದ ಹೊಂಗಳ್ಳಿ ಪಂಪ್ಹೌಸ್ ಮತ್ತು ಬಿಪಿಎಸ್ ಪಂಪ್ಹೌಸ್ಗಳಿಗೆ ವಿದ್ಯುತ್ ಅಡಚಣೆ ಉಂಟಾಗಿರುವುದರಿಂದ, ಸಿಎಸ್ಆರ್ ಟ್ಯಾಂಕ್ನಲ್ಲಿ ಸಮರ್ಪಕವಾಗಿ ನೀರು ಶೇಖರಣೆಯಾಗದೆ ಇರುವ ಕಾರಣ, ನಗರದ ವಾರ್ಡ್ ನಂ.19 ರಿಂದ 43ರ ಪ್ರದೇಶಗಳಲ್ಲಿ ಸೆ. 1 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಹೇಳಿದ್ದಾರೆ. ಸಾರ್ವಜನಿಕರು ನೀರು ಬಂದ ವೇಳೆ ನೀರನ್ನು ಸಂಗ್ರಹ ಮಾಡಿಕೊಂಡು ನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.
ದ್ವಿಚಕ್ರ ವಾಹನ ದುರಸ್ತಿ ತರಬೇತಿ
ಮೈಸೂರು: ಚಾಮರಾಜನಗರ ತಾಲೂಕಿನ ಮರಿಯಾಲಯದಲ್ಲಿರುವ ಜೆಎಸ್ಎಸ್ ರುಡ್ಸೆಟ್ ಸಂಸ್ಥೆಯು ಹೈದ್ರಾಬಾದ್ನ ಎನ್ಐಎಂಎಸ್ಎಂಇ ಹಾಗೂ ಹೀರೋ ಮೋಟೋ ಕಾರ್ಪ್ ಸಹಯೋಗದೊಂದಿಗೆ 35 ದಿನಗಳ ದ್ವಿಚಕ್ರ ವಾಹನ ದುರಸ್ತಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ 8ರಿಂದ ಪಿಯುಸಿ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಜೆಎಸ್ಎಸ್ ರುಡ್ಸೆಟ್ ಸಂಸ್ಥೆಯಲ್ಲಿ ಅರ್ಜಿ ಪಡೆದು 3 ಭಾವಚಿತ್ರ, ಅಂಕಪಟ್ಟಿ ಜೆರಾಕ್ಸ್ನೊಂದಿಗೆ ಸೆ.11ರೊಳಗೆ ಸಲ್ಲಿಸುವಂತೆ ಕೋರಲಾಗಿದೆ. ದೂ. 08226- 230140 ಸಂಪರ್ಕಿಸಬಹುದು.
ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನ
ಮೈಸೂರು ಜಿಲ್ಲಾ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ರಾಷ್ಟ್ರ ಮಟ್ಟದ ಛಾಯಾಮಿಲನ ಮೂರು ದಿನಗಳ ವಸ್ತು ಪ್ರದರ್ಶನವನ್ನು ಸೆ. 20ರಿಂದ ಏರ್ಪಡಿಸಲಾಗಿದೆ. ತಾಲೂಕು ಹಾಗೂ ಗ್ರಾಮೀಣ ಭಾಗದ ಛಾಯಾಗ್ರಾಹಕರು ದೂರದ ರಾಜ್ಯದಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸ್ಥಳೀಯ ಛಾಯಾಗ್ರಾಹಕರ ಅನುಕೂಲಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಟಿ. ರಮೇಶ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ
ಟಿ. ನರಸೀಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತುಂಬಲ ಗ್ರಾಮದ ನವಚೇತನ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಹೆಳವರಹುಂಡಿಯಲ್ಲಿ ಸೆ.6 ರಿಂದ 8ರವರೆಗೆ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ 20 ಸಾವಿರ, ನಗದು ಹಾಗೂ ದ್ವಿತೀಯ ಬಹುಮಾನ, 10 ನಗದುಗಳೊಂದಿಗೆ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 9481170287 ಸಂಪರ್ಕಿಸಬಹುದು.
ಜವರಾಯಿ ವಿದ್ಯಾರ್ಥಿ ನಿಲಯದ ಅಧ್ಯಕ್ಷ
ನಂಜನಗೂಡು: ಪಟ್ಟಣದ ಪ್ರತಿಷ್ಠಿತ ವಿದ್ಯಾರ್ಥಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕನಕದಾಸ ವಿದ್ಯಾರ್ಥಿ ನಿಲಯದ ನೂತನ ಅಧ್ಯಕ್ಷರಾಗಿ ಎಪಿಎಂಸಿ ಸದಸ್ಯ ಕೆಂಪಿಸಿದ್ದನಹುಂಡಿ ಗ್ರಾಮದ ಎಂ. ಜವರಾಯಿ ಅವರು ಆಯ್ಕೆಯಾಗಿದ್ದಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಎಪಿಎಂಸಿ ಅಭಿವೃದ್ಧಿಗೆ 1.75 ಕೋಟಿ ವೆಚ್ಚ
ನಂಜನಗೂಡು: ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರಿಗೆ ಮೂಲಭೂತ ಸೌಲಭ್ಯ ಒದಗಿಸಲು 1.75 ಕೋಟಿ ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಎ.ಎಂ. ಗುರುಸ್ವಾಮಿ ಹೇಳಿದರು. ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸರ್ಕಾರದ ಆದೇಶದಂತೆ ಅಳವಡಿಸಿರುವ ರೈತ ಗೀತೆ ಹಾಗೂ ನಾಡಗೀತೆಯ ಶಿಲಾಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು. ಎಪಿಎಂಸಿ ಮುಖ್ಯ ದ್ವಾರದಲ್ಲಿ ಕಮಾನು ನಿರ್ಮಾಣ, ವಾಣಿಜ್ಯ ಮಳಿಗೆಗಳು ಮತ್ತು ಉಪ ಮಾರುಕಟ್ಟೆ ಅಭಿವೃದ್ಧಿಗೆ ಕೃಷಿ ಮಾರುಕಟ್ಟೆ ನಿಧಿಯಿಂದ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಶೀಘ್ರದಲ್ಲೆ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರದ ರೈತ ಕೃಷಿ ವಿಕಾಸ್ ಯೋಜನೆಯ 25 ಲಕ್ಷ ವೆಚ್ಚದಲ್ಲಿ ಪ್ರಾಂಗಣದಲ್ಲಿ 400 ಮೆಟ್ರಿಕ್ ಟನ್ ಆಹಾರ ಪದಾರ್ಥ ಶೇಖರಿಸುವ ಸುಸಜ್ಜಿತ ಗೋದಾಮು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಸಂಸ್ಥೆ ಉಪಾಧ್ಯಕ್ಷ ಎ.ಎಂ. ಚಂದ್ರಪ್ಪ, ಸದಸ್ಯರಾದ ಎಂ.ಮಂಜುನಾಥ್, ದೊರೆಸ್ವಾಮಿ ನಾಯಕ, ಎಂ. ಜವರಾಯಿ, ಚಂದ್ರಪ್ಪ, ಎಚ್.ಪಿ ಅನಿತಾ, ಕೆ.ಎಂ ಮಾದಪ್ಪ, ಎನ್. ಕೆಂಡಗಣ್ಣಪ್ಪ, ಎಂ. ರಾಜಶೇಖರ್, ಜಿಪಂ ಸದಸ್ಯ ಎಸ್. ಕೆಂಪಣ್ಣ, ಜೆ. ಬೋರಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

