ಮೈಸೂರು

ಅಕ್ಕಿ ಗಿರಣಿಯ ಮೇಲೆ 'ಶಿಖಾ'ರಿ

Published On :

ಕ.ಪ್ರ.ವಾರ್ತೆ ಟಿ.ನರಸೀಪುರ ಜು. 22
ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳಿಗೆ ಕಳಪೆ ಗುಣಮಟ್ಟದ ಅಕ್ಕಿ ಪೂರೈಕೆ ಮಾಡಿ, ಸರ್ಕಾರಕ್ಕೆ ಲಕ್ಷಾಂತರ ರು. ಗಳನ್ನು ವಂಚಿಸಿದ ಪ್ರಕರಣದ ಹಿನ್ನೆಲೆ ಜಿಲ್ಲಾಧಿಕಾರಿ ಸಿ.ಶಿಖಾ ಹಾಗೂ ಲೋಕಾಯುಕ್ತ ಎಸ್ಪಿ ಎಸ್.ಎಂ. ಜಗದೀಶಪ್ರಸಾದ್ ಪಟ್ಟಣದ ವಿವಿಧೆಡೆ ದಾಳಿ ಮಾಡಿ, ತನಿಖೆ ನಡೆಸಿದರು.
ಇಲ್ಲಿನ ಆಹಾರ ಮತ್ತು ಸರಬರಾಜು ಇಲಾಖೆಯ ಉಗ್ರಾಣದ ಮೇಲೆ ಸೋಮವಾರ ಬೆಳಗ್ಗೆ ದಿಢೀರ್ ದಾಳಿ ಮಾಡಿದ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡುವ ಪಡಿತರ ಅಕ್ಕಿಯನ್ನು ಪರಿಶೀಲಿಸಿ, ತನಿಖೆ ಆರಂಭಿಸಿದರು. ಆರಂಭದಲ್ಲೇ 50 ಕಿಲೋ ತೂಕದ 1,291 ಚೀಲದಲ್ಲಿ ಕಳಪೆ ಅಕ್ಕಿ ಪತ್ತೆಯಾಯಿತು. ಅದಿಷ್ಟು ಮುಗ್ಗಲಾಗಿದ್ದ ಹುಳು ಮಿಶ್ರಿತ ಅಕ್ಕಿ ಎಸ್.ಎಂ.ಆರ್ ಅಕ್ಕಿ ಗಿರಣಿಯಿಂದ ಸರ್ಕಾರಕ್ಕೆ ನೀಡುವ ಲೆವಿ ಅಕ್ಕಿಯಾಗಿ ಸರಬರಾಜು ಮಾಡಲಾಗಿತ್ತು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪ್ರಮಾಣೀಕರಿಸಿ ಲೆವಿ ಅಕ್ಕಿಯನ್ನು ಪಡೆಯಬೇಕೆಂಬ ನಿಯಮವಿದ್ದರೂ, ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಕಳಪೆ ಅಕ್ಕಿಯನ್ನು ಉಗ್ರಾಣಕ್ಕೆ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಯಿತು. ಇದಕ್ಕೆ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತ ಎಸ್ಪಿ ಆಹಾರ ಇಲಾಖೆಯ ಶಿರಸ್ತೇದಾರ್ ಚಿತ್ರಾ, ನಿರೀಕ್ಷಕ ಕೆಂಚೇಗೌಡ ಹಾಗೂ ವ್ಯವಸ್ಥಾಪಕ ಶಿವರಾಮೇಗೌಡ ಅವರನ್ನು ಸ್ಥಳದಲ್ಲಿಯೇ ತೀವ್ರವಾಗಿ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡರು.
ದೂರು ನೀಡಿದ್ದರು: ಕಳೆದ 2012ರ ಮೇ 3ರಂದು ಕಳಪೆ ಗುಣಮಟ್ಟದ ಅಕ್ಕಿಯನ್ನು ಪೂರೈಕೆ ಮಾಡಿದ್ದ ಬಗ್ಗೆ ನ್ಯಾಯ ಬೆಲೆ ಅಂಗಡಿ ಮಾಲೀಕ ಎಂ.ಶಿವಪ್ರಸಾದ್ ಅವರು, ತಹಸೀಲ್ದಾರರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದ್ದಕ್ಕೆ ಶಿವಪ್ರಸಾದ್ ರಾಜ್ಯದ ಮುಖ್ಯ ಲೋಕಾಯುಕ್ತರಿಗೆ ದೂರು ನೀಡಿದ್ದರು. ತನಿಖೆ ನಡೆಸಲು ಲೋಕಾಯುಕ್ತರು ಆದೇಶಿಸಿದ್ದರಿಂದ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತ ಎಸ್ಪಿ ಜಂಟಿ ಕಾರ್ಯಾಚರಣೆಗಿಳಿದಿದ್ದರು. ನಂತರ ಲಿಂಕ್ ರಸ್ತೆಯಲಿರುವ ಉಗ್ರಾಣ ನಿಗಮದ ಉಗ್ರಾಣದ ಮೇಲೆ ಕಾರ್ಯಾಚರಣೆ ಮುಂದುವರಿಸಿದ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದ ಬತ್ತದ ದಾಸ್ತಾನಿನ ವ್ಯವಸ್ಥಾಪಕ ಪ್ರಭು ಅವರಿಂದ ಮಾಹಿತಿ ಪಡೆದರು. 14 ಸಾವಿರ ಕ್ವಿಂಟಾಲ್ ಬತ್ತ ದಾಸ್ತಾನನ್ನು ಕಂಡ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಇಷ್ಟೊಂದು ಬತ್ತದ ದಾಸ್ತಾನಿದ್ದರೂ ಸರ್ಕಾರಕ್ಕೆ ಕೊಡಬೇಕಾದ ಲೆವಿಯನ್ನು ಸರಿಯಾಗಿ ಕೊಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಸ್ಪಷ್ಟ ಮಾಹಿತಿ ನೀಡದಿದ್ದರೆ ದಾಸ್ತಾನನ್ನು ವಶಪಡಿಸಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು. ಅಲ್ಲದೆ ಜಿಲ್ಲೆಯಲ್ಲಿರುವ ಉಗ್ರಾಣಗಳು ಹಾಗೂ ದಾಸ್ತಾನಿನ ಮಾಹಿತಿಯನ್ನು ಸಂಗ್ರಹಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕಿ ಕುಮುದಾ ಅವರಿಗೆ ತಾಕೀತು ಮಾಡಿದರು.
ಕಳಪೆ ಪತ್ತೆಯಾಗಲಿಲ್ಲ: ಕಳಪೆ ಲೆವಿ ಅಕ್ಕಿಯನ್ನು ಸರಬರಾಜು ಮಾಡಿದ್ದ ಎಸ್.ಎಂ.ಆರ್. ಅಕ್ಕಿ ಗಿರಣಿ ಮೇಲೂ ದಾಳಿ ಮಾಡಿದ ಅಧಿಕಾರಿಗಳಿಗೆ ಅಕ್ಕಿ ಗಿರಣಿ ತನ್ನ ಕಾರ್ಯಚಟುವಟಿಕೆಯನ್ನು ಬಂದ್ ಮಾಡಿಕೊಂಡು ಸ್ಥಗಿತವಾಗಿತ್ತು. ಗಿರಣಿಯಲ್ಲಿದ್ದ ಬತ್ತದ ದಾಸ್ತಾನು, ತಮಿಳುನಾಡಿನ ಲೇಬಲ್ ಇದ್ದ ಖಾಲಿ ಚೀಲಗಳನ್ನು ಪರಿಶೀಲಿಸಿದರಾದರೂ ಆಹಾರ ಇಲಾಖೆಯ ಉಗ್ರಾಣದಲ್ಲಿ ಪತ್ತೆಯಾಗಿದ್ದ ಕಳಪೆ ಅಕ್ಕಿ ಎಲ್ಲಿಯೂ ಪತ್ತೆಯಾಗಲಿಲ್ಲ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಬ್ ಇನ್‌ಸ್ಪೆಕ್ಟರ್ ಧರ್ಮೇಂದ್ರ, ಆಹಾರ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಎಂ.ಎಲ್. ಪಂಚೇಗೌಡ, ಅಧಿಕಾರಿಗಳಾದ ಮಹೇಶ್, ರಘುನಾಥಚಾರ್, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಸ್. ಸುಂದರರಾಜ್ ಇದ್ದರು.

ಜಿಲ್ಲಾದ್ಯಂತ ಬಯೋವುಟ್ರಿಕ್ ತೂಕದ ಯಂತ್ರ ಬಳಕೆ: ಶಿಖಾ
ಟಿ.ನರಸೀಪುರ:
ಒಂದು ರುಪಾಯಿಗೆ 30 ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯಲ್ಲಿ ಅಕ್ರಮ ತಡೆಗಟ್ಟಲು ಬಯೋವುಟ್ರಿಕ್ ತೂಕದ ಯಂತ್ರವನ್ನು ಬಳಕೆ ಸದ್ಯದಲ್ಲೇ ಜಿಲ್ಲೆಯಾದ್ಯಂತ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದರು.
ನ್ಯಾಯ ಬೆಲೆ ಅಂಗಡಿಗೆ ಕಳಪೆ ಅಕ್ಕಿ ಸರಬರಾಜು ಮಾಡಿದ್ದ ಪ್ರಕರಣದ ಬಗ್ಗೆ ಸೋಮವಾರ ತನಿಖೆ ಮಾಡಿದ ನಂತರ ಅನ್ಯಭಾಗ್ಯ ಯೋಜನೆಯಲ್ಲಿ ನೀಡುವ ಪಡಿತರಕ್ಕೆ ಐವತ್ತು ಪೈಸೆ ಹೆಚ್ಚಿನ ಹಣವನ್ನು ಪಡೆಯುತ್ತಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚು ಹಣ ಪಡೆದ ಬಗ್ಗೆ ದೂರು ಬಂದರೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಮೈಸೂರು ನಗರದಲ್ಲಿ ಬಯೋವುಟ್ರಿಕ್ ಯಂತ್ರದ ಮೂಲಕ ಪಡಿತರ ಅಕ್ಕಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿಯೂ ಬಯೋವುಟ್ರಿಕ್ ಯಂತ್ರದ ಮೂಲಕ ಪಡಿತರ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಪಡಿತರ ಚೀಟಿದಾರರನ್ನು ಬಿಟ್ಟು ಮತ್ಯಾರೋ ಪಡಿತರ ಪಡೆಯಲು ಸಾಧ್ಯವಾಗುವುದಿಲ್ಲ. ಪಾವತಿಸುವ ಹಣಕ್ಕೂ ಎಲೆಕ್ಟ್ರಾನಿಕ್ಸ್ ಯಂತ್ರದಲ್ಲೆ ರಶೀದಿ ನೀಡುವುದರಿಂದ ಅಕ್ರಮಕ್ಕೆ ಕಡಿವಾಣ ಬೀಳಲಿದೆ. ಮುಖ್ಯ ಲೋಕಾಯುಕ್ತರ ಸೂಚನೆ ಹಿನ್ನೆಲೆ ತಾವು ಮತ್ತು ಲೋಕಾಯುಕ್ತ ಎಸ್ಪಿ ಜಂಟಿ ಕಾರ್ಯಾಚರಣೆ ನಡೆಸಿದ್ದೇವೆ ಎಂದು ತಿಳಿಸಿದರು.
ಪಪಂ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅವ್ಯವಹಾರವನ್ನು ಉಪವಿಭಾಗಾಧಿಕಾರಿಗಳಿಂದ ತನಿಖೆ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಳಿಗೆ ವಂಚಿತ ಪೆಟ್ಟಿಗೆ ಅಂಗಡಿ ಮಾಲೀಕರಿಗೆ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.