ಮೈಸೂರು

ಎಸ್‌ಡಿಎಂಸಿಗೆ ಆಯ್ಕೆ

Published On :

ಹುಣಸೂರು: ತಾಲೂಕಿನ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕಚುವಿನಹಳ್ಳಿ ಗ್ರಾಪಂ ಸದಸ್ಯ ಕೆ.ಎಸ್. ಆನಂದ್ ಅವಿರೋಧವಾಗಿ ಆಯ್ಕೆಯಾದರು. ತಾಲೂಕಿನ ನೇರಳಕುಪ್ಪೆ ಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ ನೇರಳಕುಪ್ಪೆ ಗ್ರಾಮದ ಕೆ.ಟಿ. ಮಾದೇಗೌಡ, ಸಣ್ಣಮ್ಮ, ರುಕ್ಮಿಣಿ, ಬಿಲ್ಲೇನಹೊಸಹಳ್ಳಿ ಕಾವೇರಪ್ಪ, ಶಾರದಮ್ಮ, ಚಂದನಗಿರಿ ರಾಜೇಂದ್ರಬಾಯಿ, ಕಾಳಬೂಚನಹಳ್ಳಿ ಮಾದೇಗೌಡ, ರಾಮಯ್ಯ, ಚಂದ್ರಶೇಖರ್, ಉಡುವೆಪುರ ಗ್ರಾಪಂ ಸದಸ್ಯ ಮಾದೇಗೌಡ, ಸಿಂಡೇನಹಳ್ಳಿ ರೇವಣ್ಣ, ರಾಜಣ್ಣ ಆಯ್ಕೆಯಾದರು.

ಇಂದು ಹುಣಸೂರು ತಾ. ರೈತ ಸಮ್ಮೇಳನ
ಹುಣಸೂರು: 
ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಜು. 1 ರಂದು ಮುನೇಶ್ವರ ಕಾವಲ್ ಸಮುದಾಯ ಭವನದಲ್ಲಿ ಪ್ರಥಮ ತಾಲೂಕು ಸಮ್ಮೇಳನ ಆಯೋಜಿಸಿದೆ. ಸಮ್ಮೇಳನದಲ್ಲಿ ರೈತರಿಗೆ ಲಾಭದಾಯಕ ಬೆಲೆ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ವಿರುದ್ಧ ಹೋರಾಡಲು ರೂಪುರೇಷೆ ರೂಪಿಸಲಿದೆ. ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟಚಲಯ್ಯ ಉದ್ಘಾಟಿಸುವರು. ತಾಲೂಕು ಸಂಚಾಲಕ ವಿ. ಬಸವರಾಜು ಕಲ್ಕುಣಿಕೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಚಾಲಕ ಕೆ. ಬಸವರಾಜು ಭಾಗವಹಿಸುವರು.

ಬಸವರಾಜುಗೆ ಸ್ಥಾನ ನೀಡಲು ಮನವಿ
ಸುತ್ತೂರು:
ನಾಯಕ ಸಮಾಜದ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವಂತೆ ಅಖಿಲ ಕರ್ನಾಟಕ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಚ್.ಆರ್. ಪ್ರಕಾಶ್ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಈಗಿನ ಕಾಂಗ್ರೆಸ್ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ಬಲ ಹೆಚ್ಚಿಸಿಕೊಳ್ಳಲು ನಾಯಕ ಜನಾಂಗಕ್ಕೆ ಸೂಕ್ತ ಸ್ಥಾನಮಾನ ನೀಡಬೇಕಿದೆ ಎಂದರು. ಪದಾಧಿಕಾರಿಗಳಾದ ಮಹೇಶ್, ಆರ್. ರಮೇಶ್, ಸಿದ್ದರಾಜು, ಪುಟ್ಟು ಇದ್ದರು.

ಅದಾಲತ್‌ಗೆ ಹಣ ಬಳಸಿಲ್ಲ: ಆರೋಪ
ಮೂಗೂರು:
ಮೂಗೂರಿನಲ್ಲಿ ನಡೆದ ಪಿಂಚಿಣಿ ಅದಾಲತ್ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ಆಗಲಿ ಅಥವಾ ಇಲಾಖೆಯಿಂದ ಆಗಲಿ ಯಾವುದೇ ಹಣವನ್ನು ಪಡೆದು ಬಳಕೆ ಮಾಡಿಲ್ಲ ಎಂದು ಗ್ರಾಮದ ಮುಖಂಡ ಎಂ.ಡಿ. ಬಸವರಾಜು ಸ್ಪಷ್ಟಪಡಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದ ನಿರ್ಮಾಣದ ಸ್ಥಳವಕಾಶಕ್ಕೆ ನಿವೇಶನದಾರರಿಗೆ ಸರ್ಕಾರದಿಂದ ಯಾವುದೇ ಪರಿಹಾರ ನೀಡಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೂಗೂರು ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಸುಂದರ್, ಎಂ.ಪಿ. ನಿಂಗಪ್ಪ, ರಾಜಣ್ಣ, ಎಂ.ಪಿ. ಮರಿಸ್ವಾಮಿ, ಗ್ರಾಪಂ ಸದಸ್ಯ ಎಂ. ರಾಜು, ಜಯಶಂಕರ್ ಮೂರ್ತಿ, ಗ್ರಾಪಂ ಮಾಜಿ ಉಪಾದ್ಯಕ್ಷ ಕೃಷ್ಣಸ್ವಾಮಿ, ನಿಜಗುಣ ಇದ್ದರು.

ಪ್ರದರ್ಶನ
ಮೈಸೂರು:
ಸ್ವಾನುಭವ ಬೆಂಗಳೂರು ಸಂಸ್ಥೆಯು ಜು. 19 ಮತ್ತು 20 ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಪ್ರದರ್ಶಕ ಕಲೆಗಳ ಪ್ರದರ್ಶನ ಏರ್ಪಡಿಸಿದೆ. ವೀರಗಾಸೆ, ಕಲರಿಪಯಟ್ಟು, ಬೊಂಬೆಯಾಟ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ ಹೀಗೆ ವಿವಿಧ ಭಾರತೀಯ ಜನಪದ, ಶಾಸ್ತ್ರೀಯ ಕಲಾ ಪ್ರಕಾರ ಪ್ರಸ್ತುತಪಡಿಸಲಾಗುತ್ತದೆ.

ಸಚಿವರಿಗೆ ಅದ್ಧೂರಿ ಸ್ವಾಗತ
ಮೈಸೂರು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಎಚ್.ಕೆ. ಪಾಟೀಲ್ ಅವರಿಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾನುವಾರ ಅದ್ಧೂರಿ ಸ್ವಾಗತ ನೀಡಿದರು.
ಮೈಸೂರು- ಬೆಂಗಳೂರು ರಸ್ತೆಯ ಟೋಲ್‌ಗೇಟ್ ಬಳಿ ಪಾಟೀಲ್ ಅವರನ್ನು ಸ್ವಾಗತಿಸಲಾಯಿತು. ನಂತರ ಕಾರ್ಯಕರ್ತರು ಬೈಕ್ ರ್ಯಾಲಿ ದಂಡು ಮಾರಮ್ಮ ದೇವಸ್ಥಾನ, ಫೌಂಟನ್ ವೃತ್ತ, ಎಫ್‌ಟಿಎಸ್ ವೃತ್ತ ಮೂಲಕ ಸರ್ಕಾರಿ ಅತಿಥಿಗೃಹಕ್ಕೆ ತಲುಪಿದರು. ಶಾಸಕ ವಾಸು, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಅಹಮದ್‌ಸ ಕೆಇಏ ಮಾಜಿ ಅಧ್ಯಕ್ಷ ಆರ್. ರಘು ಮೊದಲಾದವರು ಇದ್ದರು.

ನೆಟ್ ಪರೀಕ್ಷೆಗೆ ಸಾವಿರಾರು ಮಂದಿ
ಮೈಸೂರು:
ಯುಜಿಸಿ- ನೆಟ್ ಉಪನ್ಯಾಸಕರ ಮತ್ತು ಕಿರಿಯ ಸಂಶೋಧನ ಶಿಷ್ಯವೇತನ ವಿವಿಧ ವಿಷಯಗಳ ಅರ್ಹತಾ ಪರೀಕ್ಷೆಯು ನಗರದಲ್ಲಿ ಭಾನುವಾರ ನಡೆಯಿತುಯ ಮೈಸೂರು ವಿವಿ ಆಯೋಜಿಸಿದ್ದ ನೆಟ್ ಪರೀಕ್ಷೆಯನ್ನು 9 ಸಾವಿರ ಅಭ್ಯರ್ಥಿಗಳು ತೆಗೆದುಕೊಂಡಿದ್ದು, 7500ಕ್ಕೂ ಹೆಚ್ಚಿನ ಮಂದಿ ಹಾಜರಾಗಿದ್ದರು. ಮಹಾರಾಜ, ಯುವರಾಜ, ಮಹಾರಾಣಿ, ಡಿ. ಬನುಮಯ್ಯ, ಜೆಎಸ್‌ಎಸ್ (ನಂಜನಗೂಡು ರಸ್ತೆ), ಟೆರಿಷಿಯನ್, ಜಿಎಸ್‌ಎಸ್‌ಎಸ್, ಸಂತ ಫಿಲೋಮಿನಾ, ಮಹಾರಾಣಿ ಪಿಯು, ಮಹಾರಾಜ ಪಿಯು ಕಾಲೇಜು ಸೇರಿದಂತೆ ನಗರದ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಪತ್ರಿಕೆ 1 ಮತ್ತು 2ನೇ ಪರೀಕ್ಷೆಯು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಪತ್ರಿಕೆ- 3 ಪರೀಕ್ಷೆಯು ಮಧ್ಯಾಹ್ನ 1.30 ರಿಂದ ಸಂಜೆ 4 ರವರೆಗೆ ನಡೆಯಿತು. ವಾಣಿಜ್ಯ, ನಿರ್ವಹಣಾ ವಿಷಯಗಳ ಪರೀಕ್ಷೆಗೆ ಹೆಚ್ಚಿನ ಅಭ್ಯರ್ಥಿಗಳು ಹಾಜರಾಗಿದ್ದರು. ಕನ್ನಡ, ಇತಿಹಾಸ ಇನ್ನಿತರ ವಿಷಯಗಳ ಪರೀಕ್ಷೆಗೆ ಹಾಜರಾತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು ಎಂದು ಮೈಸೂರು ವಿವಿ ಯುಜಿಸಿ- ನೆಟ್ ಕೇಂದ್ರದ ಸಂಯೋಜಕ ಪ್ರೊ. ಸಿ. ಶ್ರೀಕಂಠಪ್ಪ ತಿಳಿಸಿದ್ದಾರೆ.
ಡಿಪ್ಲೊಮಾ ಸಿಇಟಿ: ನಗರದ 8 ಪರೀಕ್ಷಾ ಕೇಂದ್ರಗಳಲ್ಲಿ ಡಿಪ್ಲೊಮಾ ಸಿಇಟಿ ಭಾನುವಾರ ನಡೆಯಿತು.

ಪೊಲೀಸರಿಂದ 22 ಜಾನುವಾರು ವಶ
ಮೈಸೂರು:
ಹಾಸನದ ಚನ್ನರಾಯಪಟ್ಟಣದಿಂದ ಕೇರಳದ ಕಸಾಯಿಖಾನೆಗೆ ಕಂಟೈನರ್‌ನಲ್ಲಿ ಸಾಗಿಸಲಾಗುತ್ತಿದ್ದ 22 ಜಾನುವಾರುಗಳನ್ನು ಇಲವಾಲ ಠಾಣೆ ಪೊಲೀಸರು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಸನ ಮೂಲದ ಶಂಕರ್ ಮತ್ತು ಚಾಲಕ ಬಸೀರ್ ಬಂಧಿತ ಆರೋಪಿಗಳು. ಈ ಇಬ್ಬರು ಕಂಟೈನರ್ ವಾಹನದಲ್ಲಿ 18 ಎಮ್ಮೆ, 4 ಹಸುಗಳು ಸೇರಿ 22 ಜಾನುವಾರುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದರು. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳವಾದ ಜೀಪ್ ಪತ್ತೆ
ಮೈಸೂರು:
ಲಾಡ್ಜ್ ಮುಂದೆ ನಿಲ್ಲಿಸಿದ್ದ ಜೀಪ್ ಕಳವಾದ ಕೆಲವೆ ಗಂಟೆಗಳಲ್ಲಿ ಪತ್ತೆಯಾಗಿರುವ ಘಟನೆ ಇಲವಾಲ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಮಂಗಳೂರು ಮೂಲದ ಗಣೇಶ್ ಮತ್ತು ಸ್ನೇಹಿತರು ಮೈಸೂರಿಗೆ ಜೀಪಿನಲ್ಲಿ ಆಗಮಿಸಿದ್ದರು. ಇಲವಾಲದ ಲಾಡ್ಜ್‌ವೊಂದರಲ್ಲಿ ಶನಿವಾರ ರಾತ್ರಿ ಉಳಿದುಕೊಂಡಿದ್ದು, ಲಾಡ್ಜ್ ಎದುರು ಜೀಪ್ ನಿಲ್ಲಿಸಿದ್ದಾಗ ಕಳವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇಲವಾಲ ಠಾಣೆ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ಜೀಪ್ ಪತ್ತೆಗೆ ಮುಂದಾದರು. ಪೊಲೀಸರ ಓಡಾಟ ಹೆಚ್ಚಾಗಿರುವುದನ್ನು ಗಮನಸಿದ ಜೀಪ್ ಕಳ್ಳನು, ಬೆಳವಾಡಿ ಬಳಿ ರಸ್ತೆ ಬದಿಯಲ್ಲಿ ಜೀಪ್ ನಿಲ್ಲಿಸಿ ಪರಾರಿಯಾಗಿದ್ದಾನೆ.

ಮದುವೆ ಹಿಂದಿನ ದಿನ ವರ ನಾಪತ್ತೆ
ಹುಣಸೂರು:
ಮದುವೆ ಮಂಟಪದಲ್ಲಿ ತಾಳಿ ಕಟ್ಟಬೇಕಿದ್ದ ಮದುಮಗ ಮದುವೆ ಹಿಂದಿನ ದಿನವೇ ಮನೆಯಿಂದ ನಾಪತ್ತೆಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.  ಪಟ್ಟಣದ ಮಂಜುನಾಥ ಬಡಾವಣೆಯ ನಿವಾಸಿ ಹಸನ್ಮುಖಿ ರಾಮಯ್ಯರ ಪುತ್ರ ಎಚ್.ಎಚ್. ಪ್ರದೀಪ್ (ಚಿನ್ನು) ನಾಪತ್ತೆಯಾದ ವರ. ಪ್ರದೀಪನ ಮದುವೆಯು ಹೊಳೆನರಸೀಪುರ ಪಟ್ಟಣದ ವಧುವಿನೊಂದಿಗೆ ಜು.1 ರಂದು ನಡೆಯಬೇಕಿತ್ತು. ಇವರು ಮದುವೆ ಮನೆಯಲ್ಲಿ ಹೊಳೆನರಸೀಪುರಕ್ಕೆ ಹೊರಡಲು ಸಿದ್ಧತೆ ನಡೆಸುತ್ತಿದ್ದ ವೇಳೆ ಜೂ. 30 ರಂದು ತನ್ನ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಹೋಗುತ್ತೇನೆಂದು ಹೇಳಿ ಹೋದವರು ಸಂಜೆಯಾದರೂ ಬರಲಿಲ್ಲ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಭಾನುವಾರ ಮಧ್ಯಾಹ್ನ ಹೊಳೆನರಸೀಪುರಕ್ಕೆ ಹೊರಡಲು ಅನುವಾಗಿದ್ದ ವರನ ಕಡೆಯವರು ಪ್ರದೀಪ್ ಬಾರದಿದ್ದುದನ್ನು ಕಂಡು ಗಾಬರಿಗೊಂಡು ಎಲ್ಲೆಡೆ ಹುಡುಕಾಡಿ ಸಂಜೆ ಪಟ್ಟಣ ಪೊಲೀಸ್ ಠಾಣೆಗೆ ವರನ ಸಹೋದರ ಎಚ್.ಎಚ್. ದೀಪಕ್ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ನಾಳೆ ಸಂರಕ್ಷಣಾ ನುಡಿ ಕಾರ್ಯಕ್ರಮ
ಮೈಸೂರು:
ಚಾಮರಾಜ ಮೃಗಾಲಯದಲ್ಲಿ ಜು. 2ರ ಸಂಜೆ 4.15ಕ್ಕೆ ಜಲ ಅರಣ್ಯದ ಒಂದು ಉತ್ಪನ್ನ ವಿಷಯ ಕುರಿತ ಸಂರಕ್ಷಣಾ ನುಡಿ ಕಾರ್ಯಕ್ರಮದಲ್ಲಿ ಎ.ಎನ್. ಎಲ್ಲಪ್ಪ ರೆಡ್ಡಿ ಮಾತನಾಡುವರು.

ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ 16 ವರ್ಷದೊಳಗಿನವರ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದು, ಆಸಕ್ತರು ಜು. 3 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ದೂ. 0821- 2519900 ಸಂಪರ್ಕಿಸಹುದು.

ಪ್ರದರ್ಶಕ ಕಲೆಗಳ ಪ್ರದರ್ಶನ
ಮೈಸೂರು:
ಸ್ವಾನುಭವ ಬೆಂಗಳೂರು ಸಂಸ್ಥೆಯು ಜು. 19 ಮತ್ತು 20 ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಪ್ರದರ್ಶಕ ಕಲೆಗಳ ಪ್ರದರ್ಶನ ಏರ್ಪಡಿಸಿದೆ. ವೀರಗಾಸೆ, ಕಲರಿಪಯಟ್ಟು, ಬೊಂಬೆಯಾಟ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ ಹೀಗೆ ವಿವಿಧ ಭಾರತೀಯ ಜನಪದ, ಶಾಸ್ತ್ರೀಯ ಕಲಾ ಪ್ರಕಾರ ಪ್ರಸ್ತುತಪಡಿಸಲಾಗುತ್ತದೆ. ಆಸಕ್ತರು ಶುಲ್ಕರಹಿತವಾಗಿ ಭಾಗವಹಿಸಬಹುದಾಗಿದ್ದು, www.svanubhava.blogspot.in, svanubhava.banglore@gmail.comಸಂಪರ್ಕಿಸಬಹುದು. ಪ್ರದರ್ಶನ ಕಲೆಗಳ ವಿದ್ಯಾರ್ಥಿಗಳು ಸಂಗೀತ ಹಾಗೂ ನೃತ್ಯ ಪರಸ್ಪರ ಸಂಬಂಧ- ಸಂವಾದ ಕಾರ್ಯಕ್ರಮವನ್ನು ಡಾ.ಟಿ.ಎಸ್. ಸತ್ಯವತಿ, ವೈಜಯಂತಿ ಕಾಶಿ ಅವರೊಂದಿಗೆ ಹಾಗೂ ಬೆಳ್ಳಿ ಬೆಡಗು, ರಂಗ ಸೊಬಗು, ಪ್ರೇಕ್ಷಕರ ಎದುರು ಹಾಗೂ ಕ್ಯಾಮೆರಾ ಎದುರು ಅಭಿನಯ- ಸಂವಾದ ಕಾರ್ಯಕ್ರಮವನ್ನು ಬಿ. ಜಯಶ್ರೀ, ರಮೇಶ್ ಅರವಿಂದ್ ನಡೆಸಿಕೊಡಲಿದ್ದು, ಆಸಕ್ತರು ಇ- ಮೇಲ್‌ಗೆ ತಮ್ಮ ಪ್ರಶ್ನೆಗಳನ್ನು ಕಳುಹಿಸಬಹುದು.

ನೆನಪಿನ ಶಕ್ತಿ ವೃದ್ಧಿಗಾಗಿ ತರಬೇತಿ
ಮೈಸೂರು:
ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್, ಇಂಡಿಯನ್ ಮಾರ್ಷಲ್ ಆರ್ಟ್ಸ್ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಅಕಾಡೆಮಿಯಿಂದ ಜು. 7ರ ಬೆಳಗ್ಗೆ 9.30ಕ್ಕೆ ನೆನಪಿನ ಶಕ್ತಿ ವೃದ್ಧಿಗಾಗಿ ಮತ್ತು ನೆನಪಿನ ಶಕ್ತಿ ಪವಾಡ ಬಯಲಿಗೆ ಸಂಬಂಧಿಸಿದಂತೆ ಒಂದು ದಿನ ಕಾರ್ಯಾಗಾರ ಏರ್ಪಡಿಸಲಾಗಿದೆ.
ಆಸಕ್ತರು ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ, ಶೇಷಾದ್ರಿ ಅಯ್ಯರ್ ರಸ್ತೆ, ಹಳೆಯ ಎಂಆರ್‌ಸಿ ಹತ್ತಿರ, ಮೈಸೂರು. ಇಲ್ಲಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 8277620042.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.