ವಿವಿಧೆಡೆ ಆಯುಧ ಪೂಜೆ ಆಚರಣೆ
ಕ.ಪ್ರ.ವಾರ್ತೆ ಮೈಸೂರು ಅ. 14
ಮೈಸೂರಿನ ವಿವಿಧೆಡೆ ಭಾನುವಾರ ಆಯುಧ ಪೂಜೆಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಇರ್ವಿನ್ ರಸ್ತೆ, ಶೇಷಾದ್ರಿ ಅಯ್ಯರ್ ರಸ್ತೆ, ಮೈಸೂರು ವೈದ್ಯಕೀಯ ಕಾಲೇಜು ಅಮೃತ ಮಹೋತ್ಸವ ಕಟ್ಟಡದ ಮುಂಭಾಗ, ಹಳೆ ಆರ್ಎಂಸಿ ರಸ್ತೆ, ಧನ್ವಂತರಿ ರಸ್ತೆ, ನಂಜು ಮಳಿಗೆ ವೃತ್ತ, ರಾಮಕೃಷ್ಣ ನಗರ ವೃತ್ತ, ಕುವೆಂಪು ನಗರ ಶಾಂತಿ ಸಾಗರ ವೃತ್ತ, ನ್ಯಾಯಾಲಯ ಬಳಿ ಸೇರಿದಂತೆ ನಗರದ ವಿವಿಧೆಡೆ ಮಿನಿ ಮಾರುಕಟ್ಟೆಗಳು ಸೃಷ್ಟಿಯಾಗಿದ್ದವು.
ಎಲ್ಲಿ ನೋಡಿದರೂ ಮಾವು, ಬಾಳೆ ಕಂದು, ಮಲ್ಲಿಗೆ, ಸೇವಂತಿಗೆ, ಚೆಂಡು ಮಲ್ಲಿಗೆಯನ್ನು ರಾಶಿ ರಾಶಿ ಸುರಿದುಕೊಂಡು ಮಾರಾಟ ಮಾಡುತ್ತಿದ್ದರು. ಅದರಲ್ಲೂ ಬೂದುಗುಂಬಳ, ನಿಂಬೆ ಹಣ್ಣಿನ ವ್ಯಾಪಾರ ಬಲು ಜೋರಾಗಿತ್ತು. ಬೆಲೆ ಏರಿಕೆ ಬಿಸಿಯ ನಡುವೆಯೂ ಗ್ರಾಹಕರು ಅಗತ್ಯ ಸಾಮಗ್ರಿಗಳನ್ನು ಖರೀಸಿದರು.
ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆಯಲ್ಲಿ ಜನವೋ ಜನ. ತರಕಾರಿಯಿಂದ ಹಿಡಿದು ಹಣ್ಣು ಹಂಪಲು, ಸಿಹಿ ತಿಂಡಿಗಳು, ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿತ್ತು.
ವಾಹನಗಳಿಗೆ ಪೂಜೆ, ಸಿಹಿ ವಿತರಣೆ: ಆಯುಧ ಪೂಜೆ ಅಂಗವಾಗಿ ಬೆಳಗ್ಗೆಯಿಂದಲೇ ವಾಹನಗಳು, ತಮ್ಮ ಅಂಗಡಿಗಳು, ಕಚೇರಿಗಳು ಮೊದಲಾದವುಗಳಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುಟಾಣಿ ಸೈಕಲ್ನಿಂದ ಹಿಡಿದು ದ್ವಿ ಚಕ್ರ, ತ್ರಿ ಚಕ್ರ, ನಾಲ್ಕು ಚಕ್ರದ ವಾಹನಗಳನ್ನು ತೊಳೆದು ಹೂವು, ಬಾಳೆ ಕಂದು, ಮಾವಿನ ಸೊಪ್ಪು ಮೊದಲಾದವುಗಳಿಂದ ಸಿಂಗರಿಸಿ ದೇವಸ್ಥಾನ ಅಥವಾ ಮನೆಗಳ ಎದುರು ಪೂಜೆ ಸಲ್ಲಿಸುತ್ತಿದ್ದುದು ಕಂಡು ಬಂದಿತು. ನಂತರ ವಾಹನಗಳ ಮಾಲೀಕರು, ನೆರೆದಿದ್ದವರಿಗೆ ಹಾಗೂ ನೆರೆ ಹೊರೆಯವರಿಗೆ ಸಿಹಿ, ಖಾರ-ಪುರಿ ಮತ್ತಿತರ ತಿನಸುಗಳನ್ನು ಹಂಚಿ ಸಂಭ್ರಮಿಸಿದರು.
ಕೆಲವು ಕಾರ್ಖಾನೆ, ಅಂಗಡಿ, ಆಟೋಮೊಬೈಲ್ ಮೊದಲಾದ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಸಿಹಿ ವಿತರಿಸಿ ಬೋನಸ್ ಅಥವಾ ಇತರೆ ಕೊಡುಗೆಗಳನ್ನು ಸಹ ನೀಡಲಾಯಿತು. ಕೆಲವೆಡೆ, ಸಿಹಿ ಊಟ ಹಾಕಿ ವಸ್ತ್ರದಾನವನ್ನೂ ಮಾಡಲಾಯಿತು.
ಆಯುಧ ಪೂಜೆ ಅಂಗವಾಗಿ ವಾಹನಗಳು, ಅಂಗಡಿಗಳು ಅಥವಾ ಕೆಲಸದ ಸ್ಥಳಗಳಲ್ಲಿ ಪೂಜೆ ಸಲ್ಲಿಸಿದ ನಂತರ ಸಿಹಿ ವಿತರಿಸುವುದು ವಾಡಿಕೆ. ಇದರಿಂದಾಗಿ ನಗರದ ಸಿಹಿ ತಿನಿಸುಗಳ ಅಂಗಡಿಗಳು ತುಂಬಿ ಹೋಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

