ಮುಂದೆ ಭದ್ರತೆ, ಹಿಂದೆ ಅಭದ್ರತೆ...
ಮಾ. ವೆಂಕಟೇಶ್
ಕ.ಪ್ರ.ವಾರ್ತೆ ಮೈಸೂರು ಅ. 21
ಜಿಲ್ಲಾ ನ್ಯಾಯಾಲಯದ ಒಂದು ಪಾರ್ಶ್ವದಲ್ಲಿರುವ ತಡೆಗೋಡೆ ಕುಸಿದು ಕೆಲವು ತಿಂಗಳುಗಳಾಗಿದ್ದರೂ, ಅದನ್ನು ಇನ್ನೂ ದುರಸ್ತಿ ಮಾಡದೇ ಹಾಗೇ ಬಿಟ್ಟಿರುವುದು ಅಭದ್ರತೆಗೆ ಕಾರಣವಾಗಿದೆ. ನ್ಯಾಯಾಲಯದ ಮುಖ್ಯ ದ್ವಾರದ ಬಳಿ ಪೊಲೀಸ್ ಚೌಕಿಯಿದ್ದು, ಪೊಲೀಸರು ದಿನದ 24 ಗಂಟೆಯೂ ಕಾವಲು ಕಾಯುತ್ತಿರುತ್ತಾರೆ. ಆದರೆ ಇದೇ ನ್ಯಾಯಾಲಯದ ಹಿಂಭಾಗಕ್ಕೆ ಬಂದರೇ ಅಲ್ಲಿ ಯಾವುದೇ ಭದ್ರತೆ ಇಲ್ಲ. ಕನ್ನೆಗೌಡನಕೊಪ್ಪಲಿನ ರೇಲ್ವೆ ಹಳಿಯ ಸಮೀಪ ಇರುವ ನ್ಯಾಯಾಲಯದ ಕಾಂಪೌಂಡ್ ಕುಸಿದು ಬಿದ್ದು ಮೂರು ತಿಂಗಳಾಗಿದ್ದರೂ ಅದರ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಸುರಕ್ಷತೆಗೆ ಕೊರತೆಯುಂಟಾಗಿ ಯಾರು ಬೇಕಾದರೂ ನುಸುಳಬಹುದು ಹಾಗೂ ಕಳ್ಳತನ ಕೃತ್ಯಗಳನ್ನು ನಡೆಸಲು ಆಸ್ಪದವಾಗಿದೆ.
ನ್ಯಾಯಾಲಯದಲ್ಲಿ ಕಳ್ಳತನವೇ?: ನ್ಯಾಯಾಲಯಕ್ಕೆ ನುಗ್ಗಿ ಕಳ್ಳತನ ಮಾಡುವ ಭೂಪರಿದ್ದಾರೆಯೇ ಎಂಬುವ ಪ್ರಶ್ನೆ ಕಾಡಬಹುದು. ಹೌದು, ಇಲ್ಲಿ ಕಳ್ಳತನವೂ ನಡೆದಿದೆ. ದರೋಡೆ ಪ್ರಯತ್ನವೂ ನಡೆದಿದೆ ಎಂದರೆ ಆಶ್ಚರ್ಯವಾಗಬಹುದು. ನ್ಯಾಯಾಲಯದ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರ ಕಡಿಯಲು ಕಳ್ಳರು ಪ್ರಯತ್ನಿಸಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಆ ಮರವನ್ನು ತಾವೇ ಕತ್ತರಿಸಿಟ್ಟರು. ಇಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಗಾಜು ಒಡೆದು ದರೋಡೆಗೆ ಪ್ರಯತ್ನಿಸಿದ್ದು ಉಂಟು. ಅಲ್ಲದೆ ವಕೀಲರ ಸಂಘದ ನೂತನ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಾವಿರಾರು ರು. ಬೆಲೆ ಬಾಳುವ ನಲ್ಲಿಗಳನ್ನು ಕಳ್ಳತನ ಮಾಡಿರುವ ಪ್ರಕರಣ ನಡೆದಿವೆ.
ಕಾಂಪೌಂಡ್ ತೆರೆದಿರುವ ಭಾಗದಲ್ಲಿ ಕೌಟುಂಬಿಕ ನ್ಯಾಯಾಲಯ ಹಾಗೂ ಸಿವಿಲ್ ನ್ಯಾಯಾಲಯ ಸಹ ಹತ್ತಿರದಲ್ಲಿಯೇ ಇದೆ. ಅಲ್ಲದೆ ಇದಕ್ಕೆ ಹೊಂದಿಕೊಂಡಂತೆ ಉಪಾಹಾರ ಮಂದಿರ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇರುವುದನ್ನು ಕಾಣಬಹುದು. ವಿವಿಧ ನ್ಯಾಯಾಲಯಗಳಲ್ಲಿ ಸ್ಥಳದ ಅಭಾವ ಇರುವ ಕಾರಣ ಕಾರಿಡಾರ್ನಲ್ಲಿಯೇ ನ್ಯಾಯಾಲಯದ ದಾಖಲೆಗಳನ್ನು ಸಂಗ್ರಹಿಸಿರುವ ಕಪಾಟುಗಳಿವೆ. ವಿವಿಧ ಪ್ರಕರಣಗಳು ಹಾಗೂ ಅಪಘಾತಗಳ ಕಾರಣವಾಗಿ ವಶಪಡಿಸಿಕೊಂಡಿರುವ ವಾಹನಗಳು ಹಾಗೂ ಮುಟ್ಟುಗೋಲು ಹಾಕಿಕೊಂಡಿರುವ ಪೀಠೋಪಕರಣಗಳು ಮತ್ತಿತರ ಬೆಲೆ ಬಾಳುವ ವಸ್ತುಗಳು ಹೊರಭಾಗದಲ್ಲಿಯೇ ಇರಿಸಲಾಗಿದೆ.
ಬಹುಮುಖ್ಯವಾಗಿ ಅಪರಾಧ ಮತ್ತಿತರ ಕೃತ್ಯಗಳನ್ನು ಮಾಡಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತರಲಾಗುವುದು. ಅವರು ತಪ್ಪಿಸಿಕೊಂಡು ಪರಾರಿಯಾಗದಂತೆ ಭದ್ರತೆ ಒದಗಿಸಲು ನ್ಯಾಯಾಲಯದ ಆವರಣದ ಸುತ್ತ ಸಮರ್ಪಕ ತಡೆಗೋಡೆಯೂ ಅವಶ್ಯಕ ಎಂಬುವುದನ್ನು ಮರೆಯುವಂತಿಲ್ಲ.
ನ್ಯಾಯಾಲಯ ಈ ಕಾಂಪೌಂಡ್ ಹಳೆಯದಾಗಿದ್ದು, ಸ್ವಲ್ಪ ಭಾಗ ಮಾತ್ರ ಬಿದ್ದು ಹೋಗಿತ್ತು. ಇದನ್ನು ದುರಸ್ತಿ ಮಾಡುವ ಸಲುವಾಗಿ ಮತ್ತಷ್ಟು ಭಾಗವನ್ನು ಒಡೆದು ಹಾಕಲಾಗಿದ್ದು, ಸುಮಾರು 60 ಅಡಿಗಳಷ್ಟು ಗೋಡೆ ಇಲ್ಲವಾಗಿದೆ. ಯಾರು ಬೇಕಾದರೂ ಅಕ್ರಮವಾಗಿ ಪ್ರವೇಶಿಸಬಹುದು. ಅಲ್ಲದೆ ಯಾವುದೇ ವಾಹನವನ್ನೂ ಒಳಗೆ ತರಬಹುದಾಗಿದೆ. ಆದ್ದರಿಂದ ಕೂಡಲೇ ಇದನ್ನು ದುರಸ್ತಿ ಮಾಡಿ ಸುರಕ್ಷತೆಗೆ ಮುಂದಾಗಬೇಕು.
ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ ಹಾಗೂ ಜಿಲ್ಲಾ ಪಂಚಾಯತ್ ಬಳಿ ನ್ಯಾಯಾಲಯಕ್ಕೆ ಪ್ರವೇಶಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಣ್ಣ ಗೇಟುಗಳನ್ನು ತೆರೆಯಲಾಗಿತ್ತು. ಆದರೆ ಭದ್ರತೆಯ ಸಲುವಾಗಿ ಅದನ್ನು ಮುಚ್ಚಲಾಯಿತು. ಸುಮಾರು 50 ಅಡಿ ಉದ್ದದ ಕಾಂಪೌಂಡ್ ಇಲ್ಲವಾಗಿದ್ದರೂ ಅದರ ಬಗ್ಗೆ ಗಮನ ಹರಿಸದಿರುವುದು ಆತಂಕದ ಸಂಗತಿ. ಹೊಸ ಕಾರ್ಯ ಯೋಜನೆಗಳನ್ನು ಮಾಡುವಾಗ ಅಧಿಕಾರಿಗಳು ಹಿರಿಯ ವಕೀಲರ ಸಲಹೆ ಪಡೆಯುವುದು ಉತ್ತಮ. ಏಕೆಂದರೆ ಹೊಸದಾಗಿ ಬರುವ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆ ತಿಳಿದಿರುವುದಿಲ್ಲ.
-ಪಿ.ಜೆ. ರಾಘವೇಂದ್ರ, ನ್ಯಾಯವಾದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

