ಮೈಸೂರು

ರಾಜ್ಯಕ್ಕೆ 2,180 ಕೋಟಿ ನೆರವು

Published On :

ನಂಜನಗೂಡು: ಕೇಂದ್ರ ಕಾರ್ಮಿಕ ವಿಮಾ ನಿಗಮ ರಾಜ್ಯಕ್ಕೆ 2,180 ಕೋಟಿ ನೀಡಿದೆ ಎಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವ ಕೋಡಿಕುನ್ನಿಲ್ ಸುರೇಶ ಹೇಳಿದರು.
ಪಟ್ಟಣದ ಇಎಸ್‌ಐ ಅಸ್ಪತ್ರೆಯ ಆವರಣದಲ್ಲಿ 10 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಾಣಗೊಳ್ಳಲಿರುವ ಅತ್ಯಾಧುನಿಕ ಕಾರ್ಮಿಕ ಆಸ್ಪತ್ರೆ ಹಾಗೂ ಡಯಗ್ನೋಸ್ಟಿಕ್ ಸೆಂಟರ್‌ಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಕಾರ್ಮಿಕ ಖಾತೆಯಿಂದ ಇಷ್ಟು ಬೃಹತ್ ಪ್ರಮಾಣದ ಹಣ ಹರಿದು ಬರಲು ಆ ಖಾತೆಯ ಅಂದಿನ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರೆ ಕಾರಣ ಎಂದ ಅವರು, ಬೀದರ್, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಉಳಿದ ಎಲ್ಲ ಪ್ರದೇಶಗಳ ಕಾರ್ಮಿಕರು ವಿಮಾ ವ್ಯಾಪ್ತಿಗೆ ಒಳಪಡುತ್ತಾರೆ. ಆ ಜಿಲ್ಲೆಗಳನ್ನೂ ಸಹ ಸದ್ಯದಲ್ಲೆ ವಿಮಾ ಸುಪರ್ದಿಗೆ ಸೇರಿಸಲಾಗುವುದು ಎಂದು ತಿಳಿಸಿದರು. ಮಂಗಳೂರಿನಲ್ಲಿ ಉಪಕಾರ್ಯಾಲಯ: ಇಎಸ್‌ಐ ಪ್ರಾದೇಶಿಕ ಕಾರ್ಯಾಲಯ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೈಸೂರು ಹಾಗೂ ಗುಲ್ಬರ್ಗಗಳಲ್ಲಿ ಉಪಕಾರ್ಯಾಲಯಗಳನ್ನು ಸಹ ಪ್ರಾರಂಭಿಸಲಾಗಿದೆ. ರಾಜ್ಯದ ಇನ್ನೊಂದು ಉಪಕಾರ್ಯಾಲಯವನ್ನು ನಾಳೆ ಮಂಗಳೂರಿನಲ್ಲಿ ತಾವೆ ಲೋಕಾರ್ಪಣೆ ಮಾಡುವುದಾಗಿ ಅವರು ಹೇಳಿದರು. ವಿಮಾ ಸೌಲಭ್ಯ ಪಡೆಯಲು ಹಾಲಿ ಇದ್ದ 15 ಸಾವಿರ ಮಾಸಿಕ ವೇತನದ ಮಿತಿಯನ್ನು 25 ಸಾವಿರಕ್ಕೆ ಏರಿಸಲಾಗಿದೆ ಎಂದು ಹೇಳಿದ್ದಕ್ಕೆ ಜಾರಿ ಯಾವಾಗ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಇದರೊಂದಿಗೆ ಪಿಎಫ್ 6,800 ರಿಂದ 15 ಸಾವಿರ ಏರಿಕೆಗೂ ಕೇಂದ್ರ ಕಾರ್ಮಿಕ ವಿಮಾ ನಿಗಮ ಈಗಾಗಲೆ ಅನುಮೋದನೆ ನೀಡಿದ್ದು, ಗೆಜೆಟ್ ನೋಟಿಫಿಕೇಶನ್ ಮಾತ್ರ ಆಗಬೇಕಾಗಿದೆ. ಅದು ಪ್ರಕಟಗೊಂಡ ತಕ್ಷಣ ಜಾರಿಗೆ ಬರಲಿದೆ ಎಂದು ತಿಳಿಸಿದರು. ಗುಲ್ಬರ್ಗದಲ್ಲಿ ಈಗಾಗಲೆ ನಿರ್ಮಾಣಗೊಂಡ ವಿಮಾ ನಿಗಮದ ವ್ಯಾಪ್ತಿಯ ವೈದ್ಯಕೀಯ ಕಾಲೇಜು, ದಂತ ಕಾಲೇಜು ಹಾಗೂ ನರ್ಸಿಂಗ್ ಕಾಲೇಜು ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ನ.19 ಅಥವಾ 20 ರಂದು ದೇಶದ ಪ್ರಧಾನಿ ಮನಮೋಹನ್ ಸಿಂಗ್ ಅವರೆ ಉದ್ಘಾಟಿಸುವರು ಎಂದು ಸಚಿವರು ಹೇಳಿದರು. ನಂಜನಗೂಡಿನಿಂದ ಕೇರಳದ ಸುಲ್ತಾನ್ ಭತೇರಿ ಮಾರ್ಗವಾಗಿ ಕೇರಳದ ನೇಲಂಬೂರಿಗೆ ರೇಲ್ವೆ ಸಂಪರ್ಕಕ್ಕಾಗಿ ನಾನು ಹಾಗೂ ಸಂಸದ ಆರ್. ಧ್ರುವನಾರಾಯಣ್ ಅವಿರತವಾಗಿ ಶ್ರಮಿಸುತ್ತಿದ್ದು, ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸದ್ಯದಲ್ಲೆ ಒಪ್ಪಿಗೆ ನೀಡಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು. ಸಂಸದ ಆರ್.ಧ್ರುವನಾರಾಯಣ, ಶಾಸಕ ಆರ್. ಧರ್ಮಸೇನ, ಜಿಪಂ ಅಧ್ಯಕ್ಷ ಎಂ. ಮಹದೇವು, ಸದಸ್ಯ ಕೆ. ಮಾರುತಿ ಇದ್ದರು.

ಸಿಡಿಲುಗಿರಿ ಪಂಜಿನ ವೈಭವ ಚಿತ್ರೀಕರಣಕ್ಕೆ ಚಾಲನೆ
ಪಿರಿಯಾಪಟ್ಟಣ:
ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಮಹಿಮೆ ದೇಶಾದ್ಯಂತ ಪ್ರಸಿದ್ಧಿ ಹೊಂದಲಿ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಸಿಡಿಲುಗಿರಿ ದೀಪಾವಳಿಯ ಪಂಜಿನ ವೈಭವ ಭಾಗ- 2 ಎಂಬ ಆಡಿಯೋ ವಿಡಿಯೋ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಐತಿಹಾಸಿಕ ಹಿನ್ನೆಲೆಯುಳ್ಳ ಮಲ್ಲಿಕಾರ್ಜುನ ಸ್ವಾಮಿ ಕುರಿತ ಸಿಡಿ ಬಿಡುಗಡೆ ಮಾಡಿದ್ದು ಯಶಸ್ಸಿನ ಹಿಂದೆಯೆ ಮತ್ತೊಂದು ಸಾಹಸಕ್ಕೆ ಕೈಹಾಕುತ್ತಿರುವುದು ಸಂತೋಷದ ಸಂಗತಿ ಎಂದರು. ಜಿಪಂ ಸದಸ್ಯೆ ಡಿ.ಕೆ. ಮಂಜುಳಾರಾಜ್, ತಾಪಂ ಸದಸ್ಯೆ ಬಿ.ವಿ. ಅನಿತಾ, ಗ್ರಾಪಂ ಅಧ್ಯಕ್ಷೆ ಸರೋಜಮ್ಮ, ಎಪಿಎಂಸಿ ಅಧ್ಯಕ್ಷ ಕೆ. ಹೊಲದಪ್ಪ, ಉಪಾದ್ಯಕ್ಷ ನಿಂಗರಾಜು, ಇ.ಒ. ಮಹದೇವಸ್ವಾಮಿ, ಎಪಿಎಂಸಿ ಸದಸ್ಯರಾದ ಸುರೇಶ್, ಸ್ವಾಮಿಗೌಡ, ನಾಗರಾಜು, ಗೀತ ರಚನಾಕಾರರಾದ ಡಾ. ನಫೀಜ್‌ಉಲ್ಲಾ, ಎ.ಸಿ. ಪ್ರಸನ್ನ, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಂಜಣ್ಣ ಕಾರ್ನಾಡ್, ಮುಖಂಡರಾದ ಹೊನ್ನೇಗೌಡರು, ಕುಮಾರ್, ನೀಲೇಗೌಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.