ಸಂಶೋಧಕರ ಬೇಡಿಕೆಗೆ ಬದ್ಧ
ಕ.ಪ್ರ.ವಾರ್ತೆ ಮೈಸೂರು ಅ. 25
ಮೈಸೂರು ವಿವಿಯು ಮಹಿಳೆಯರು, ಶೋಷಿತರು ಮತ್ತು ದಲಿತ ವಿದ್ಯಾರ್ಥಿಗಳನ್ನು ಕಡೆಗಣಿಸಿ ನಿಯಮ ರೂಪಿಸುತ್ತಿದೆ ಎಂದು ಆರೋಪಿಸಿ ಮೈಸೂರು ವಿವಿ ಸಂಶೋಧಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟಿಸಿದರು.
ಮನವಿ ಸ್ವೀಕರಿಸಿದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಕುಲಪತಿಗಳು ವಿದ್ಯಾರ್ಥಿಗಳಿಗೆ ಕನಿಷ್ಠ ಸೌಜನ್ಯ ತೋರಿಸುತ್ತಿಲ್ಲ.
ವಿದ್ಯಾರ್ಥಿಗಳ ಹಿತದೃಷ್ಟಿ ಕಡೆಗಣಿಸಿ ಹೊಸ ನೀತಿ ನಿಯಮ ಜಾರಿಗೆ ತಂದು ದಲಿತ ವಿದ್ಯಾರ್ಥಿಗಳ ಶೋಷಣೆ ಮಾಡುತ್ತಿದ್ದಾರೆ. 2013ರ ಪಿಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ದಲಿತ ವಿದ್ಯಾರ್ಥಿಗಳನ್ನು ಕಡೆಗಣಿಸಲಾಗಿದೆ. ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳು ಶೇ.50 ಅಂಕ ಪಡೆದರೆ ಮಾತ್ರ ಉತ್ತೀರ್ಣರಾಗುವಂತೆ ಮಾಡಿದ್ದಾರೆ. ಅಲ್ಲದೆ ಏಕಾಏಕಿ ಪಿಎಚ್.ಡಿ ಪ್ರವೇಶ ಶುಲ್ಕವನ್ನು 1 ಸಾವಿರ ನಿಗದಿಪಡಿಸಿದ್ದಾರೆ ಎಂದು ಆರೋಪಿಸಿದರು.
ದಲಿತ ವಿದ್ಯಾರ್ಥಿಗಳನ್ನು ಗುರಿ ಮಾಡಿಕೊಂಡು ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲು ಕುಲಪತಿಗಳು ಮುಂದಾಗಿದ್ದಾರೆ. ಪಿಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿ ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ ಶೇ.35 ಅಂಕಗಳನ್ನು ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಶೇ.40 ರಷ್ಟು ಅಂಕಗಳನ್ನು ಉತ್ತೀರ್ಣಕ್ಕೆ ನಿಗದಿಪಡಿಸಬೇಕು. ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ 500 ಇತರೆ ವಿದ್ಯಾರ್ಥಿಗಳಿಗೆ 1 ಸಾವಿರವನ್ನು ಪಿಎಚ್‌ಡಿ ಪ್ರವೇಶ ಶುಲ್ಕವಾಗಿ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಾವನ್ವಿತರಿಗೆ ಅವಮಾನ: ಕೇಂದ್ರ ಸರ್ಕಾರವು ಯುಜಿಸಿ ಮೂಲಕ ಸಂಶೋಧಿಸಿ ಪಿಎಚ್.ಡಿ ಪಡೆಯುವವರಿಗೆ ಹಲವು ರೀತಿಯ ರಾಷ್ಟ್ರೀಯ ಶಿಷ್ಯವೇತನ ನೀಡಲಾಗುತ್ತಿದೆ. ಸಂಶೋಧನೆ ಮಾಡಲು ಯುಜಿಸಿಯಿಂದ ಆಯ್ಕೆಯಾದ ವಿದ್ಯಾರ್ಥಿಗಳು ಕೂಡ ವಿವಿ ನೀಡುವ ಪ್ರವೇಶ ಪರೀಕ್ಷೆ ತೆಗೆದುಕೊಳ್ಳುವಂತೆ ಮಾಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಈ ಶಿಷ್ಯ ವೇತನವನ್ನು ಪ.ಜಾತಿ, ಪ.ಪಂಗಡ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳೆ ಪಡೆಯುತ್ತಿರುವುದರಿಂದ ಅವರನ್ನು ಗುರಿ ಮಾಡಿಕೊಂಡು ತಮ್ಮ ದುರುದ್ದೇಶ ಈಡೇರಿಸಿಕೊಳ್ಳುತ್ತಿದ್ದಾರೆ ಎಂದು ಒತ್ತಾಯಿಸಿದರು.
ಪ.ಜಾತಿ, ಪ.ಪಂಗಡ ವಿಶೇಷ ಘಟಕವು ಎರಡು ವರ್ಷಗಳಿಂದ ಪಿಎಚ್.ಡಿ ಪದವಿಗಾಗಿ ಸಂಶೋಧನೆ ನಡೆಸುವವರಿಗೆ ಸಂಶೋಧನಾ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಂದ ಇಬಿಎಲ್ ಕೊಟ್ಟಿಲ್ಲ. ಇಂತಹ ಹಲವು ಅವಕಾಶಗಳನ್ನು ವಿದ್ಯಾರ್ಥಿಗಳಿಂದ ಕಿತ್ತುಕೊಳ್ಳಲಾಗಿದೆ ಎಂದು ದೂರಿದರು.
ಈ ವೇಳೆ ಕುಲಪತಿಗಳನ್ನು ಭೇಟಿಯಾಗಿ ವಿದ್ಯಾರ್ಥಿ ಮುಖಂಡರು ಮನವಿ ಸಲ್ಲಿಸಿದರು. ತಮ್ಮ ಎಲ್ಲಾ ಬೇಡಿಕೆಗಳನ್ನು ಸಭೆಯಲ್ಲಿಟ್ಟು ಚರ್ಚಿಸಿ ಈಡೇರಿಸುವುದಾಗಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ರಾಘವೇಂದ್ರ, ಆರ್. ದೊಡ್ಡರಾಜು, ಕಾರ್ಯದರ್ಶಿ ಆರ್. ಅನಿಲ್‌ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

