ಓಕೇ, ಸ್ಮೈಲ್ ಪ್ಲೀಸ್, ಕ್ಲಿಕ್...
-ಮಾ. ವೆಂಕಟೇಶ್
ಮೈಸೂರು: ಫೋಟೋ ತೆಗೆಸಿಕೊಳ್ಳೊದು ಅಂದರೆ ಬಹುತೇಕರಿಗೆ ತುಂಬ ಇಷ್ಟಾನೇ. ಅದರಲ್ಲೂ ಪ್ರಚಾರೊದ ಫೋಟೋಗಳಿಗೆ ನಾ ಮುಂದು ತಾ ಮುಂದು ಎನ್ನುತ್ತಾ ಫೋಸು ಕೊಡವವರಿಗೇನೂ ಕೊರತೆಯಿಲ್ಲ. ಸಭೆ, ಸಮಾರಂಭ, ಮದುವೆ, ಮುಂಜಿ ಹೀಗೆ ಎಲ್ಲಾ ಶುಭ ಕಾರ್ಯಕ್ಕೂ ಛಾಯಾಗ್ರಾಹಕರನ್ನು ಕರೆಸುವುದು ಪ್ರತೀತಿ.
ಇಂದು ಛಾಯಾಗ್ರಹಣ ಕ್ಷೇತ್ರ ತುಂಬಾ ವಿಶಾಲವಾಗಿ ಬೆಳೆದಿದೆ. ಆ ಕಾಲದಲ್ಲಿ ಒಂದು ಫೋಟೋ ತೆಗೆಸಿದರೆ ಅದನ್ನು ಕತ್ತಲೆ ಕೋಣೆಯಲ್ಲಿ ತೊಳೆದು ಫೋಟೋ ಸಿದ್ಧಪಡಿಸಿ ಕತ್ತರಿಸಿ ಕೊಡಬೇಕಾದರೆ ಸಾಕಷ್ಟು ಸಮಯ ಬೇಕಾಗುತ್ತಿತ್ತು. ಆದರೆ ಇವತ್ತು ಅಂತಹ ಸನ್ನಿವೇಶವಿಲ್ಲ. ಭಾವಚಿತ್ರ ತೆಗೆಸಿದ ಐದತ್ತು ನಿಮಿಷದಲ್ಲಿ ಅದು ಗ್ರಾಹಕರ ಕೈ ಸೇರಲಿದೆ.
ಆಧುನಿಕ ಕ್ಯಾಮೆರಾ ಹಾಗೂ ಛಾಯಾಗ್ರಹಣ ಕ್ಷೇತ್ರಕ್ಕೆ ಅಗತ್ಯವಾದ ವೈವಿಧ್ಯಮಯ ಉಪಕರಣಗಳನ್ನು ನಂಜರಾಜ ಬಹದ್ದೂರ್ ಛತ್ರದಲ್ಲಿ ಮೈಸೂರು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘವು ಆಯೋಜಿಸಿರುವ ಛಾಯಾ ಮಿಲನ ರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಅನಾವರಣಗೊಂಡಿವೆ.
ಕಾಲದ ಗರ್ಭದಲ್ಲಿ...: ಇದರಲ್ಲಿ ಬಹುಮುಖ್ಯವಾಗಿ ಗಮನ ಸೆಳೆಯುವ ಒಂದು ಮಳಿಗೆ ಎಂದರೇ, ಮೈಸೂರಿನ ಕೆ.ಯು. ವರ್ಗೀಸ್ ಅವರು ಸಂಗ್ರಹಿಸಿಟ್ಟಿರುವ ಜಮಾನ ಕಾಲದ ಕ್ಯಾಮೆರಾಗಳು. 1935ರ ಕೊಡಕ್‌ಬಾಸ್, 1940ರ ಆಕ್ಫಾ, 1945ರ ಆರ್ಗಾಸ್, 1950ರ ಫೀಲ್ಡ್ ಕ್ಯಾಮೆರಾ, 1970ರ ಆರ್‌ಬಿ 67 ಹಾಗೂ ಎಲೆಕ್ಟೋ-35, 1980ರ ಟಿಎಲ್‌ಆರ್, 1990ರ ನಿಕಾನ್ ಎಫ್‌ಎಂ ಮತ್ತಿತರ ಹಳೇ ಕ್ಯಾಮೆರಾಗಳನ್ನು ಕಾಣಬಹುದು.
ಭಾರತದಲ್ಲಿ ಉಪಯೋಗಿಸುವ ಎಲ್ಲಾ ಕ್ಯಾಮೆರಾಗಳು ವಿದೇಶಿ ಉತ್ಪನ್ನ. 5 ಸಾವಿರದಿಂದ 10 ಲಕ್ಷ ರು. ವರೆಗಿನ ಕ್ಯಾಮೆರಾಗಳಿವೆ. ದುಬಾರಿಯೆಂದರೆ ಜರ್ಮನಿಯ ಲೈಕಾ ಕ್ಯಾಮೆರಾಗೆ 10 ಲಕ್ಷ ಈ ಹಿಂದೆ ಜರ್ಮನಿಯ ಆಕ್ಫಾ ಹಾಗೂ ಜಪಾನಿನ ಫೋಟೋಪೋಸ್ ಎಂಬ ಕ್ಯಾಮೆರಾಗಳನ್ನು ಭಾರತದಲ್ಲಿ ಅಸೆಂಬ್ಲಿ ಮಾಡಲಾಗುತ್ತಿತ್ತು. ಇದನ್ನು ಹೊರತು ಪಡಿಸಿದರೆ ಭಾರತದ ಯಾವ ಕಂಪನಿಯೂ ಈವರೆಗೆ ತನ್ನದೇ ಆದ ಕ್ಯಾಮೆರಾವನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿಲ್ಲ ಎನ್ನುತ್ತಾರೆ ವರ್ಗೀಸ್.
ಕ್ಯಾಮೆರಾ ಮೆಕ್ಯಾನಿಕ್: ಮೊದಲು ಕ್ಯಾಮೆರಾಮನ್ ಆಗಿ ವೃತ್ತಿ ಆರಂಭಿಸಿದ ವರ್ಗೀಸ್ ಬೃಂದಾವನ ಬಡಾವಣೆಯಲ್ಲಿ ಸನ್ನಿ ಸ್ಟುಡಿಯೋ ಆರಂಭಿಸಿದರು. ತಮ್ಮ ಕ್ಯಾಮೆರಾ ಕೆಟ್ಟ ಕಾರಣ ಅದನ್ನು ತಾವೇ ದುರಸ್ತಿ ಮಾಡಿದರು. ಅದನ್ನು ಮೆಚ್ಚಿ ವೃತ್ತಿಪರ ಸ್ನೇಹಿತರು ಬೆನ್ನುತಟ್ಟಿ ಪ್ರೋತ್ಸಾಹಿಸಿದ ಕಾರಣ ವರ್ಗೀಸ್ ಕ್ಯಾಮೆರಾ ಮೆಕ್ಯಾನಿಕ್ ಆದರು. ಕಳೆದ 18 ವರ್ಷಗಳಿಂದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಕ್ಯಾಮೆರಾ ದುರಸ್ತಿ ಅಂಗಡಿ ತೆರೆದು ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಂದು ಮುಕ್ತಾಯ: ಛಾಯಾಮಿಲನ ವಸ್ತು ಪ್ರದರ್ಶನದಲ್ಲಿ ಫೋಟೋ ಕ್ಯಾಮೆರಾ, ವಿಡಿಯೋ ಕ್ಯಾಮೆರಾ, ವಿವಿಧ ಪ್ರಿಂಟ್ ಮಿಷನ್, ಫೋಟೋ ಪ್ರೇಮ್, ಫೋಟೋ ವುಡ್, ಎಲ್‌ಇಡಿ ಪೋಟೋ, ಎಂಡಿಎಫ್ ಶೀಟ್, ಲ್ಯಾಮಿನೇಷನ್ ಸ್ಟಿಕ್ಕರ್ ಹಾಗೂ ಆಕರ್ಷಕ ಆಲ್ಬಂಗಳನ್ನು ಪ್ರದರ್ಶಿಸಲಾಗಿದ್ದು, ಸೆ.22 ಮುಕ್ತಾಯಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

