ದಸರಾ ಗಜಪಡೆ ಬಲ 14ಕ್ಕೆ ಏರಿಕೆ
ಕ.ಪ್ರ.ವಾರ್ತೆ ಮೈಸೂರು ಸೆ. 24
ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಒಟ್ಟು 14 ಆನೆಗಳು ಕಾಡಿನಿಂದ ನಾಡಿಗೆ ಬಂದಿದ್ದು, ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಟ್ಟಿವೆ.
ಎರಡನೇ ತಂಡದಲ್ಲಿ ಶ್ರೀರಾಮ, ವಿಜಯ, ವಿಕ್ರಮ, ಹರ್ಷ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ಗೋಪಿ ಮತ್ತು ಪ್ರಶಾಂತ ಆನೆಗಳು ಆಗಮಿಸಿವೆ. ಶಾಸಕ ಎಂ.ಕೆ. ಸೋಮಶೇಖರ್, ಡಿಸಿಎಫ್ ಎಸ್.ಎನ್. ದೇವರಾಜ್, ಆನೆ ವೈದ್ಯ ಡಾ.ನಾಗರಾಜ್, ಪ್ರಯಾಗ್, ಆನೆ ಪಾಲಕರಾದ ಅಕ್ರಂ, ರಂಗನಾಥ್ ಅವರು ಎರಡನೇ ತಂಡ ಆನೆಗಳಿಗೆ ಮಂಗಳವಾರ ಸಂಜೆ ಅರಮನೆ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸ್ವಾಗತ ಕೋರಿದರು.
ಅಂಬಾರಿ ಆನೆ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು, ವರಲಕ್ಷ್ಮಿ ಮತ್ತು ಸರಳ ಆನೆಗಳು ಮೊದಲ ತಂಡದಲ್ಲಿ ಆಗಮಿಸಿದವು. ಎರಡನೇ ತಂಡದಲ್ಲಿ ಬರಬೇಕಿದ್ದ ಶ್ರೀರಾಮ ಆನೆಯನ್ನು ಮಾಗಡಿಯಲ್ಲಿ ಕಾಡಾನೆ ಓಡಿಸಲು ಕುಮ್ಕಿ ಆನೆಯಾಗಿ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಮಾಗಡಿಗೆ ಬಂದಿದ್ದ ಆನೆಗಳು ಕಾಡಿಗೆ ಸೇರಿದ ಹಿನ್ನೆಲೆಯಲ್ಲಿ ಶ್ರೀರಾಮನನ್ನು ಮೈಸೂರಿಗೆ ಬಿಡಲಾಗಿತ್ತು. ತಿತಿಮತಿ ಆನೆ ಶಿಬಿರದಿಂದ ಗೋಪಾಲಸ್ವಾಮಿ ಮತ್ತು ದುರ್ಗಾಪರಮೇಶ್ವರಿ ಆನೆಗಳು ಸೋಮವಾರ ಮಧ್ಯಾಹ್ನ ತರಲಾಗಿತ್ತು. ಉಳಿದ ವಿಜಯ, ವಿಕ್ರಮ, ಹರ್ಷ, ಗೋಪಿ ಮತ್ತು ಪ್ರಶಾಂತ ಆನೆಗಳನ್ನು ದುಬಾರೆ ಆನೆ ಶಿಬಿರದಿಂದ ಮಂಗಳವಾರ ಅರಮನೆಗೆ ಬಂದವು. ಹೀಗಾಗಿ ಎರಡನೇ ತಂಡದಲ್ಲಿ ಆಗಮಿಸಿದ ಎಲ್ಲ 8 ಆನೆಗಳಿಗೂ ಒಟ್ಟಿಗೆ ಸ್ವಾಗತ ಕೋರಲಾಯಿತು.
ಬಲರಾಮ ತಾಲೀಮು: ಮಂಗಳವಾರ ನಡೆದ ತಾಲೀಮಿನಲ್ಲಿ ಬಲರಾಮ ಆನೆಗೆ 500 ಕೆ.ಜಿ. ಭಾರ ಹೊರಿಸಿ ತಾಲೀಮು ನಡೆಸಲಾಯಿತು. ಅರಮನೆಯಿಂದ ಆರಂಭವಾದ ಗಜ ನಡಿಗೆಯು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಹೈವೆ ವೃತ್ತಕ್ಕೆ ತಲುಪಿದವು. ಮತ್ತೆ ಅದೇ ಮಾರ್ಗವಾಗಿ ವಾಪಸ್ ಅರಮನೆಗೆ ಬಂದವು. ಸಂಜೆ ಸಹ ಆಯುರ್ವೇದ ವೃತ್ತದವರೆಗೆ ಆನೆಗಳು ವಾಕಿಂಗ್ ಹೋಗಿದ್ದವು. ಬುಧವಾರದಿಂದ ಗಜಪಡೆಯ ಎಲ್ಲ 14 ಆನೆಗಳೂ ಸಹ ತಾಲೀಮಿನಲ್ಲಿ ಭಾಗವಹಿಸಲಿವೆ.
2ನೇ ತಂಡ ಆನೆಗಳ ಪರಿಚಯ
ಶ್ರೀರಾಮ: ಈ ಆನೆಯ ವಯಸ್ಸು 55, ಎತ್ತರ 2.69 ಮೀಟರ್, ಉದ್ದ 3.46 ಮೀಟರ್, ತೂಕ 4450 ಕೆ.ಜಿ. 1969ರಲ್ಲಿ ಕೊಡಗು ಜಿಲ್ಲೆಯ ತಿತಿಮತಿ ಅರಣ್ಯ ಪ್ರದೇಶದಲ್ಲಿ ಈ ಆನೆ ಸೆರೆಹಿಡಿಯಲಾಗಿದೆ. ತುಂಬಾ ಬಲಶಾಲಿಯಾದ ಈ ಆನೆ 16 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸಿದೆ. ಶ್ರೀರಾಮನನ್ನು ಅರಮನೆಯಲ್ಲಿನ ಪೂಜಾ ವಿಧಿವಿಧಾನಗಳಲ್ಲಿ ಬಳಸಿಕೊಳ್ಳಲಾಗುತ್ತದೆ.
ವಿಕ್ರಮ: ಈ ಆನೆಯ ವಯಸ್ಸು 40, ಎತ್ತರ 2.60 ಮೀಟರ್, ಉದ್ದ 3.43 ಮೀಟರ್. ತೂಕ- 3820 ಕೆ.ಜಿ. ಈ ಆನೆಯನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, 9 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸಿದೆ. ಮಾವುತ- ರಾಜುಮಣಿ, ಕಾವಾಡಿ- ಲಿಂಗ.
ವಿಜಯ: ಈ ಆನೆಯ ವಯಸ್ಸು 56, ಎತ್ತರ 2.29 ಮೀಟರ್, ಉದ್ದ- 3 ಮೀಟರ್, ತೂಕ- 3250 ಕೆ.ಜಿ. ಇದನ್ನು 1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ. ಈ ಆನೆಯು 9 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸಿದೆ. ಮಾವುತ- ಬೋಜಪ್ಪ, ಕಾವಾಡಿ- ದೊರೆಯಪ್ಪ.
ಹರ್ಷ: ಈ ಆನೆಯ ವಯಸ್ಸು 46, ಎತ್ತರ 2.55 ಮೀಟರ್, ಉದ್ದ 3.40 ಮೀಟರ್, ತೂಕ- 3290 ಕೆ.ಜಿ. ಈ ಆನೆಯನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಈ ಆನೆಯು 11ನೇ ಬಾರಿ ದಸರೆಯಲ್ಲಿ ಭಾಗವಹಿಸಿದೆ. ಮಾವುತ- ಚಿಕ್ಕ, ಕಾವಾಡಿ- ಚಿಣ್ಣಪ್ಪ.
ಗೋಪಿ: 31 ವರ್ಷದ ಈ ಆನೆಯು 2.92 ಮೀಟರ್ ಎತ್ತರ, 3.42 ಮೀಟರ್ ಉದ್ದ, 3710 ಕೆ.ಜಿ. ತೂಕ ಹೊಂದಿದೆ. 1993ರಲ್ಲಿ ಕಾರೇಕೊಪ್ಪ ಅರಣ್ಯದಲ್ಲಿ ಈ ಆನೆ ಸೆರೆಹಿಡಿಯಲಾಗಿದೆ. ಈ ಆನೆಯು ದುಬಾರೆ ಆನೆ ಶಿಬಿರದಲ್ಲಿ ಸಫಾರಿ ಕೆಲಸ ನಿರ್ವಹಿಸುತ್ತಿದೆ. 3ನೇ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ.
ಪ್ರಶಾಂತ: 57 ವರ್ಷದ ಈ ಆನೆಯು 2.61 ಮೀಟರ್ ಎತ್ತರ, 3.46 ಮೀಟರ್ ಉದ್ದ, 4329 ಕೆ.ಜಿ. ತೂಕ ಹೊಂದಿದೆ. 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಈ ಆನೆ ಸೆರೆಹಿಡಿಯಲಾಗಿದೆ. ಇದು ಸಾಧು ಸ್ವಾಭಾವವುಳ್ಳ ಬಲಿಷ್ಟ ಆನೆ. ಸಮಾರಂಭಗಳ ಮೆರವಣಿಗೆಯಲ್ಲಿ ಭಾಗವಹಿಸಿದ ಅನುಭವ ಹೊಂದಿದೆ. 7ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
ಗೋಪಾಲಸ್ವಾಮಿ: ಈ ಆನೆಗೆ 31 ವರ್ಷ, 2.62 ಮೀಟರ್ ಶರೀರದ ಎತ್ತರ, 3.42 ಮೀಟರ್ ಶರೀರದ ಉದ್ದ, 3242 ಕೆ.ಜಿ. ತೂಕ ಇದೆ. ಈ ಆನೆಯನ್ನು 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆ ಹಿಡಿಯಲಾಗಿದೆ. ಇದು ಶಾಂತ ಸ್ವಭಾವ, ಬಲಶಾಲಿಯಾದ ಆನೆ. ದಸರೆಯಲ್ಲಿ 2ನೇ ಬಾರಿಗೆ ಭಾಗವಹಿಸುತ್ತಿದೆ. ಮಾವುತ- ದಾಸ, ಕಾವಾಡಿ- ಗೋಪಾಲ.
ದುರ್ಗಾಪರಮೇಶ್ವರಿ: ಈ ಆನೆಗೆ 46 ವರ್ಷ, 2.40 ಮೀಟರ್ ಶರೀರದ ಎತ್ತರ, 3.20 ಮೀಟರ್ ಶರೀರದ ಉದ್ದ, 3500 ಕೆ.ಜಿ. ತೂಕ ಇದೆ. ಈ ಆನೆಯನ್ನು 1972ರಲ್ಲಿ ಮಡಿಕೇರಿ ವಿಭಾಗದ ದುಬಾರೆ ಅರಣ್ಯ ಪ್ರದೇಶದಲ್ಲಿ ಫಿಟ್ (ಗುಂಡಿಗೆ ಬೀಳಿಸುವ) ವಿಧಾನದಲ್ಲಿ ಸೆರೆ ಹಿಡಿಯಲಾಗಿದೆ. ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ. ಮಾವುತ- ಪ್ರವೀಣ, ಕಾವಾಡಿ- ಚಿನ್ನಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

