ಅತ್ಯಾಚಾರಿಗೆ 10 ವರ್ಷ ಜೈಲು
ಕ.ಪ್ರ. ವಾರ್ತೆ ಮೈಸೂರು ಸೆ.25
ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ವ್ಯಕ್ತಿಗೆ ಮೈಸೂರಿನ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಹಾಗೂ ಇದಕ್ಕೆ ಸಹಕರಿಸಿದ ಮತ್ತೊಬ್ಬ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮೈಸೂರು ತಾಲೂಕು ರಮ್ಮನಹಳ್ಳಿ ನಿವಾಸಿ ಮಹದೇವ ಎಂಬವರ ಪುತ್ರ ಕಿಶೋರ (23) ಮತ್ತು ಹಂಚ್ಯಾ ಗ್ರಾಮದ ಹುಚ್ಚರಂಗಯ್ಯ ಎಂಬವರ ಪುತ್ರ ನಾಗ ಶಿಕ್ಷೆಗೆ ಗುರಿಯಾದವರು.
ಶ್ರೀರಂಗಪಟ್ಟಣದ ಚಿಕ್ಕಾಡೆ ಗ್ರಾಮದ ಮಹಿಳೆಯೊಬ್ಬರು ಪತಿ ಮೃತಪಟ್ಟ ಬಳಿಕ ತನ್ನ ತವರೂರು ಮೈಸೂರು ತಾಲೂಕಿನ ಹಂಚ್ಯಾ ಗ್ರಾಮಕ್ಕೆ ಬಂದು ನೆಲೆಸಿದ್ದರು. ಇವರೊಂದಿಗೆ 14 ವರ್ಷದ ಮಗಳು ಮತ್ತು 12 ವರ್ಷದ ಮಗ ಸಹ ಬಂದಿದ್ದರು. ಹಂಚ್ಯಾ ಗ್ರಾಮದಲ್ಲಿ ಬೀದಿ ಚರಂಡಿ ಕಾಮಗಾರಿ ಕೆಲಸಕ್ಕಾಗಿ ರಮ್ಮನಹಳ್ಳಿಯ ಕಿಶೋರ ಹೋಗಿದ್ದ. ನೀರು ಕೇಳುವ ನೆಪದಲ್ಲಿ ಆಗಾಗ ಮಹಿಳೆಯ ಮನೆಗೆ ಹೋಗುತ್ತಿದ್ದ. ಬಾಲಕಿಯನ್ನು ಪ್ರೀತಿಸುವುದಾಗಿ ಪುಸಲಾಯಿಸಿದ್ದ. 2010ರ ಫೆ.20 ರಂದು ಮಹಿಳೆಯು ಅನಾರೋಗ್ಯ ಪೀಡಿತ ಸೋದರಿಯನ್ನು ನೋಡಲು ಮೈಸೂರಿಗೆ ಬಂದಿದ್ದರು.
ಆ ದಿನ ರಾತ್ರಿ ನಾಗನನ್ನು ಕಿಶೋರ ಬಾಲಕಿ ಮನೆಗೆ ಕಳುಹಿಸಿದ್ದ. ಕಿಶೋರ ನಿನ್ನನ್ನು ಮದುವೆಯಾಗುತ್ತಾನೆ. ಆತನೊಂದಿಗೆ ಹೋಗುವಂತೆ ನಾಗ ಪುಸಲಾಯಿಸಿದ್ದ. ಕಿಶೋರ ಬಾಲಕಿಯನ್ನು ಬಲವಂತವಾಗಿ ಅಪಹರಿಸಿಕೊಂಡು ಬೆಂಗಳೂರು, ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರು ದಕ್ಷಿಣ ಠಾಣೆ ಪೊಲೀಸರು ಆರೋಪಿ ಕಿಶೋರ ಮತ್ತು ಬಾಲಕಿಯನ್ನು ಪತ್ತೆ ಹಚ್ಚಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಆಗಿನ ಮೈಸೂರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಎಂ. ಶ್ರೀದೇವಿ ಅವರು ಇಬ್ಬರು ಆರೋಪಿಗಳ ಮೇಲಿನ ಆಪಾದನೆ ಸಾಬೀತಾಗಿದೆ ಎಂದು ತೀರ್ಮಾನಿಸಿ, ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಕಿಶೋರನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರು. ದಂಡ ಹಾಗೂ ಇದಕ್ಕೆ ಸಹಕರಿಸಿದ ನಾಗನಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರ ಪರವಾಗಿ ಸರ್ಕಾರಿ ಅಭಿಯೋಜಕ ಎಚ್.ಇ. ಚಿನ್ನಪ್ಪ ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

