ಮೈಸೂರು

ಎಚ್ಡಿಕೆ ಹೇಳಿಕೆಗೆ ಖಂಡನೆ

Published On :

ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಂವಿಧಾನ ಬದ್ಧವಾಗಿ ಸ್ಥಾಪನೆಯಾಗಿರುವ ಸಿಐಡಿ ಅಧಿಕಾರಿಗಳ ವಿರುದ್ಧ ನೀಡಿರುವುದು ಹೇಳಿಕೆ ಸರಿಯಲ್ಲ ಎಂದು ವಿವಿಧ ಸಂಘಟನೆಗಳು ಖಂಡಿಸಿವೆ.
ಸಿಐಡಿ ಅಧಿಕಾರಿಗಳು ಸತ್ಯ ಹರಿಶ್ಚಂದ್ರರಲ್ಲ ಎನ್ನುವ ಮೂಲಕ ಕುಮಾರಸ್ವಾಮಿ ಅವರು ಕೆಪಿಎಸ್ಸಿ ಮೂಲಕ ಅಕ್ರಮವಾಗಿ ನೇಮಕವಾಗಿರುವ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಕರ್ನಾಟಕ ವಿಶ್ವಕರ್ಮ ಮಹಾಮಂಡಲ ಜಿಲ್ಲಾಧ್ಯಕ್ಷ ಸಿ.ಟಿ. ಆಚಾರ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಉಳ್ಳವರ ಪರ ವಕಾಲತ್ತು ಸಲ್ಲ: ಕುಮಾರಸ್ವಾಮಿ ಅವರು ಉಳ್ಳವರ ಪರವಾಗಿ ಮಾತನಾಡುವುದನ್ನು ಬಿಟ್ಟು ಅವಕಾಶ ವಂಚಿತ ಬಡವರ ಪರವಾಗಿ ನಿಲ್ಲಬೇಕು. ಆ ಮೂಲಕ ಅತಂತ್ರರ ಬದಕನ್ನು ಅರಳಿಸಬೇಕು. ಭ್ರಷ್ಟರ ರಕ್ಷಣೆಗಾಗಿ ಕಾನೂನು ಬಾಹಿರ ಹೇಳಿಕೆ ನೀಡಿದರೆ ಅವಕಾಶ ವಂಚಿತ ಸಮುದಾಯಗಳು ಕುಮಾರಸ್ವಾಮಿ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ಕಾರ್ಯದರ್ಶಿ ಎ.ಎಚ್. ಕೃಷ್ಣೇಗೌಡ, ಸಂಚಾಲಕ ಎಚ್.ಎಸ್. ಪ್ರಕಾಶ್, ಪದವೀಧರರ ವಿಚಾರ ವೇದಿಕೆ ಅಧ್ಯಕ್ಷ ಡಿ. ಈಶ್ವರ ಚಕ್ಕಡಿ, ದಲಿತ ಸಂಘಟನೆ ಒಕ್ಕೂಟದ ಸಂಚಾಲಕ ಪಿ. ರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯೇಕ ಪ್ರಕರಣ: ಇಬ್ಬರ ಸಾವು
ಮೈಸೂರು:ನಗರದ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ.ಬಿ.ಎನ್. ರಸ್ತೆ ಚಾಮುಂಡೇಶ್ವರಿ ಬಾರ್ ಮುಂಭಾಗದಲ್ಲಿ 58 ವರ್ಷದ ವ್ಯಕ್ತಿ ಮಂಗಳವಾರ ಮೃತಪಟ್ಟಿದ್ದಾರೆ. ಚಹರೆ- 5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕಂದು ಮಿಶ್ರಿತ ಕಪ್ಪು ಪ್ಯಾಂಟ್, ಕ್ರೀಮ್ ಬಣ್ಣದ ಶರ್ಟ್ ಧರಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕೆ.ಆರ್. ಆಸ್ಪತ್ರೆಯ ಮೂಳೆ ವಿಭಾಗದ ಒಡಿಪಿ ಬಳಿ 40 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಚಹರೆ- 5.6 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ,  ಮೈಕಟ್ಟು, ಕಪ್ಪು ಪ್ಯಾಂಟ್, ನೀಲಿ ಬನಿಯನ್ ಧರಿಸಿದ್ದಾರೆ.  ವಾರಸುದಾರರು ದೂ. 0821- 2418306 ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.

ವಿದೇಶಿ ವಿದ್ಯಾರ್ಥಿಗಳಿಗೆ ತರಬೇತಿ
ಮೈಸೂರು: ವಿವಿಧ ಪ್ರವಾಸಿ ಸ್ಥಳಗಳ ಪ್ರವಾಸಿ ಮಾಹಿತಿ ಕೇಂದ್ರಗಳಲ್ಲಿನ ಕೌನ್ಸಿಲರ್ಗಳು ಮತ್ತು ವಿದೇಶಿ ವಿದ್ಯಾರ್ಥಿಗಳಿಗಾಗಿ ಕೆಆರ್ಎಸ್ ರಸ್ತೆಯ ಮಹಾಜನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  ವಿವಿಧ ಕಾಲೇಜು ವಿದ್ಯಾರ್ಥಿಗಳು, ಚೀನಾ, ನೇಪಾಳ, ಕೊರಿಯಾ, ಥೈಲ್ಯಾಂಡ್, ಮಾರಿಷಸ್, ಫಿಜಿ, ಕೀನ್ಯಾ, ನೈಜೀರಿಯಾ, ಕೆಮರೊನ್ ದೇಶಗಳ ವಿದ್ಯಾರ್ಥಿಗಳು ಹಾಗೂ  ನಂಜನಗೂಡು, ಶ್ರೀರಂಗಪಟ್ಟಣ ಕಾಲೇಜುಗಳ 40 ಮಂದಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ನಂಜನಗೂಡು, ಶ್ರೀರಂಗಪಟ್ಟಣ ಕಾಲೇಜುಗಳ 40 ಮಂದಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಉಪ ಸಮಿತಿ ಅಧ್ಯಕ್ಷ ವೈ.ಎನ್. ಶಂಕರೇಗೌಡ ಉದ್ಘಾಟಿಸಿ ಮಾತನಾಡಿ, ಉಪ ಸಮಿತಿ ಸದಸ್ಯರೊಂದಿಗೆ ಸೇರಿ ವಿದ್ಯಾರ್ಥಿಗಳು ಮತ್ತು ಪ್ರವಾಸಿ ಕೌನ್ಸಿಲರ್ಗಳು ನಿರ್ವಹಿಸಬೇಕಾದ ಪಾತ್ರದ ಕುರಿತು ಕಿವಿಮಾತು ಹೇಳಿದರು. ಉಪ ಸಮಿತಿಯ ಉಪಾಧ್ಯಕ್ಷ ಪ್ರೊ.ಕೆ.ಸಿ. ಶಿವಕುಮಾರ್, ಸದಸ್ಯ ಮಧುಕರ್ ಅಪ್ಪಾಜಿ ಮಾತನಾಡಿದರು. ಮೈಸೂರು ವಿವಿ ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಆರ್. ಇಂದಿರಾ, ಎನ್. ರೂಪೇಶ್ಕುಮಾರ್, ಉಪ ವಿಶೇಷಾಧಿಕಾರಿ ಎಚ್.ಎಂ. ರಮೇಶ್, ಸದಸ್ಯರಾದ ಬಾಲಕೃಷ್ಣ, ನಟೇಶ್, ಸಿ.ಜಿ. ಶಿವಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

ಮೈಸೂರಿನಲ್ಲಿ ಇಂಡಿಕ್ಯಾಶ್ ಎಟಿಎಂ ಕಾರ್ಯಾರಂಭ
ಮೈಸೂರು: ಟಾಟಾ ಕಮ್ಯುನಿಕೇಷನ್ಸ್ ಪೇಮೆಂಟ್ ಸಲ್ಯೂಷನ್ಸ್ ಲಿ. ವತಿಯಿಂದ ಮೈಸೂರಿನಲ್ಲಿ ಭಾರತದ ಮೊದಲ ವೈಟ್ ಲೇಬಲ್ ಎಟಿಎಂ ಆದ ಇಂಡಿಕ್ಯಾಶ್ ಆರಂಭಿಸುತ್ತಿದೆ.
 ಕಂಪೆನಿಯ ಕಾರ್ಯ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಭಾರತಾದ್ಯಂತ 15,000 ಇಂಡಿಕ್ಯಾಶ್ ಎಟಿಎಂಗಳನ್ನು ತೆರೆಯಲಾಗುವುದು. ಅದರ ಅಂಗವಾಗಿ ಮೈಸೂರು ನಗರದಲ್ಲಿ 6 ಹಾಗೂ ಗ್ರಾಮಾಂತರದಲ್ಲಿ 13 ಎಟಿಎಂ ಕೇಂದ್ರಗಳನ್ನು ತೆರೆಯಲಾಗುವುದು. ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಸ್ಥಾಪಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಟಾಟಾ ಸಂಸ್ಥೆಯ ಈ ಕಾರ್ಯಯೋಜನೆ ರೂಪಿಸಿ ಅನುಷ್ಠಾನಕ್ಕೆ ತರುತ್ತಿದೆ ಎಂದು ಟಿಸಿಪಿಎಸ್ಎಲ್ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಪಟೇಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇಂಡಿಕ್ಯಾಶ್ ಎಂಬ ಜಾಲವು ಕಳೆದ ತಿಂಗಳು ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡುವ ಮೂಲಕ ರಾಜ್ಯದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಿತು. ಇದೀಗ ಸೇವೆಯನ್ನು ಮೈಸೂರಿಗೆ ತರುತ್ತಿದೆ. ಈ ಇಂಡಿಕ್ಯಾಶ್ ಎಟಿಎಂ ಕಾರ್ಡ್ಗಳನ್ನು ನುಂಗಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಬಹು ಭಾಷೆಯಲ್ಲಿ ಸಂವಹನ ಹಾಗೂ ಸಂದೇಶಗಳನ್ನು ನೀಡುವ ಯಂತ್ರವು ಸರಳವಾಗಿದೆ ಎಂದು ತಿಳಿಸಿದರು.

ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ: ಎಸ್ಡಿಪಿಐ  ಕಳವಳ
ಮೈಸೂರು: ಬಂಡಿಪಾಳ್ಯದ ಎಪಿಎಂಸಿ ಅಂಗಡಿ ಮಳಿಗೆಯಲ್ಲಿ ಅಕ್ರಮವಾಗಿ ದಾಸ್ತಾನಾಗಿದ್ದ ಸರ್ಕಾರದ ಅನ್ನಭಾಗ್ಯ ಯೋಜನೆಯ 800 ಕ್ವಿಂಟಾಲ್ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಘಟನೆ ಬಗ್ಗೆ ಎಸ್ಡಿಪಿಐ ಕಳವಳ ವ್ಯಕ್ತಪಡಿಸಿದೆ. ರಾಜ್ಯದ ಮುಖ್ಯಮಂತ್ರಿ, ಕಂದಾಯ, ಲೋಕೋಪಯೋಗಿ, ಸಹಕಾರ ಸಚಿವ ಹೀಗೆ ಅರ್ಧ ಸರ್ಕಾರವೇ ಇರುವ ಮೈಸೂರಿನಲ್ಲಿ ಈ ಘಟನೆ ನಡೆದಿರುವುದು ಸರ್ಕಾರದ ನಿರ್ಲಕ್ಷ್ಯ ಅನಾವರಣಗೊಳ್ಳುತ್ತದೆ ಎಂದು ಎಸ್ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಟೀಕಿಸಿದ್ದಾರೆ.ಯೋಜನೆಗಳನ್ನು ಜಾರಿಗೆ ತರುವುದರ ಬದಲಾಗಿ ಆ ಯೋಜನೆಗಳು ಯಶಸ್ವಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸರ್ಕಾರ ಮಹತ್ವವಾದ ಹೊಣೆಗಾರಿಕೆ ನಿಭಾಯಿಸಬೇಕು. ಮುಖ್ಯಮಂತ್ರಿಗಳ ತವರೂರಿನಲ್ಲೆ ಈ ರೀತಿ ಅಕ್ರಮ ನಡೆದರೆ ಉಳಿದ ಜಿಲ್ಲೆಗಳ ಗತಿ ಏನು ಎಂದು ಅವರು ಪ್ರಶ್ನಿಸಿದ್ದಾರೆ. ಸರ್ಕಾರದ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಅವುಗಳಲ್ಲಿನ ಅಕ್ರಮ ತಡೆಗಟ್ಟಲು ಟಾಸ್ಕ್ಪೋರ್ಸ್ ಸಮಿತಿ ರಚಿಸುವಂತೆ  ಅವರು ಆಗ್ರಹಿಸಿದ್ದಾರೆ.

ನಾಳೆ ಆರೋಗ್ಯ ತಪಾಸಣೆ ಶಿಬಿರ
ಮೈಸೂರು:  ಭಗತ್ಸಿಂಗ್ ಯುವ ಸೇನಾ ಸಮಿತಿಯಿಂದ ಸೆ. 27ರ ಬೆಳಗ್ಗೆ 10ಕ್ಕೆ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಉದ್ಯಾನವನದಲ್ಲಿ ಕ್ರಾಂತಿವೀರ ಭಗತ್ಸಿಂಗ್ ಅವರ 106ನೇ ಜಯಂತಿ ಪ್ರಯುಕ್ತ ಕೆ.ಆರ್. ಉಪ ವಿಭಾಗದ ಪೊಲೀಸರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಆರೋಗ್ಯ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

ವಿನಾಯಕ ಮಹೋತ್ಸವ
ಸಮರ್ಪಣ ಯುವಕರ ಸಂಘದಿಂದ ಸೆ. 27 ರಿಂದ 29 ಮೇದರಕೇರಿಯಲ್ಲಿ 15ನೇ ವರ್ಷದ ವಿನಾಯಕ ಮಹೋತ್ಸವ ಏರ್ಪಡಿಸಿದ್ದು, ಸೆ. 27ರ ಸಂಜೆ 7ಕ್ಕೆ ಡಾ. ರಾಜ್ಕುಮಾರ್ ಫಿಲ್ಮ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಸಿಕೊಡುವರು. ಅತಿಥಿಗಳಾಗಿ ಮ.ವಿ. ರಾಮಪ್ರಸಾದ್, ಎಂ.ಕೆ. ಸೋಮಶೇಖರ್, ಎಂ.ಡಿ. ಪಾರ್ಥಸಾರಥಿ ಭಾಗವಹಿಸುವರು.

ಸುಗಮ ಸಂಗೀತ ಸ್ಪರ್ಧೆಗೆ ಆಹ್ವಾನ
ರೋಟರಿ ಕ್ಲಬ್ ಮೈಸೂರು ಉತ್ತರ, ಇನ್ನರ್ ವ್ಹೀಲ್ ಕ್ಲಬ್ ಮೈಸೂರು ಉತ್ತರ ಹಾಗೂ ರೋಟರ್ಯಾಕ್ಟ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಸೆ. 27ರ ಬೆಳಗ್ಗೆ 11ಕ್ಕೆ ರೋಟರಿ ಕೇಂದ್ರದಲ್ಲಿ ಗೊ.ರು.ಚ. ಅಂತರ ಕಾಲೇಜು ಸುಗಮ ಸಂಗೀತ ಸ್ಪರ್ಧೆ ಏರ್ಪಡಿಸಿದ್ದು, ಸಹಾಯಕ ಪ್ರಾಧ್ಯಾಪಕಿ ಎಸ್.ಪಿ. ಉಮಾದೇವಿ ಉದ್ಘಾಟಿಸುವರು. ಸಂಜೆ 6.30ಕ್ಕೆ ನಡೆಯುವ ಸಮಾರೋಪದಲ್ಲಿ ಪ್ರಾಧ್ಯಾಪಕ ಪ್ರೊ.ಎಂ. ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸುವರು.

ಅಥ್ಲೆಟಿಕ್ಸ್ ಕೂಟ
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದಿಂದ ಸೆ. 28ರ ಮಧ್ಯಾಹ್ನ 3.30ಕ್ಕೆ ಮೈವಿವಿ ಓವಲ್ ಮೈದಾನದಲ್ಲಿ 85ನೇ ವಾರ್ಷಿಕ ವಿವಿ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕೂಟ ಸಮಾರಂಭದಲ್ಲಿ ಕುಲಸಚಿವ ಜಯದೇವರಾಜ ಅರಸು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಬಹುಮಾನ ವಿತರಿಸುವರು.

ವಿಕಾಸ ನಾಯಕ್  ರಾಜ್ಯಮಟ್ಟಕ್ಕೆ
ಕೆ.ಆರ್. ನಗರ: ಪಟ್ಟಣದ ಬಳೆ ವಿದ್ಯಾಸಂಸ್ಥೆ 7ನೇ ತರಗತಿ ವಿದ್ಯಾರ್ಥಿ ವಿಕಾಸ್ನಾಯಕ್ ರಾಜ ್ಯಮಟ್ಟದ ಇನ್ಸೈರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ವಿಜ್ಞಾನ ಮಾದರಿಯಲ್ಲಿ ಈತ ತಯಾರಿಸಿದ ಭೂಕಂಪ ಸೂಚ್ಯಂಕ ಮಾದರಿಯು ಆಯ್ಕೆಯಾಗಿದ್ದು, ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಇನ್ಸೈರ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾನೆ.

ಜಾವೆಲಿನ್ ಎಸೆತದಲ್ಲಿ ಪ್ರಥಮ
ಕೆ.ಆರ್. ನಗರ: ಮೈಸೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ತಾಲೂಕಿನ ಹಂಪಾಪುರ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮಲ್ಲಿಕ್ ಭಾಗವಹಿಸಿ, ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಮಲ್ಲಿಕ್ನನ್ನು ಶಾಲಾ ಶಿಕ್ಷಕ ವೃಂದ ಮತ್ತು ಶಾಲಾಭಿವೃದ್ದಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

ಗವಾಯಿ ಪುಣ್ಯ ಸ್ಮರಣೆ
ಗಾನಯೋಗಿ ಪಂಚಾಕ್ಷರೇಶ್ವರ ಹಿಂದೂಸ್ತಾನಿ ಸಂಗೀತ ವಿದ್ಯಾಲಯದಿಂದ ಸೆ. 29ರ ಸಂಜೆ 4ಕ್ಕೆ ಕುವೆಂಪುನಗರದ ಗಾನಭಾರತೀಯಲ್ಲಿ ಪಂ. ಪುಟ್ಟರಾಜ ಗವಾಯಿಗಳ ತೃತೀಯ ಪುಣ್ಯ ಸ್ಮರಣೋತ್ಸವ ಏರ್ಪಡಿಸಿದ್ದು, ಕೊಳಲು ವಾದಕ ಕೆ.ಪಿ. ಉಪಾಧ್ಯಾಯ ಉದ್ಘಾಟಿಸುವರು. ಎಸ್.ಆರ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು.

ವಾರ್ಷಿಕ ಸಭೆ
ಪ್ರಜ್ಞಾವಂತ ನಾಗರಿಕರ ಹಿತರಕ್ಷಣಾ ಸಂಘದ ವಾರ್ಷಿಕ ಮಹಾಸಭೆಯು ಸೆ. 29ರ ಬೆಳಗ್ಗೆ 11ಕ್ಕೆ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

ರೇಖಿ ಸ್ವ ಸಂಮ್ಮೋಹಿನಿ
ಕುವೆಂಪುನಗರದ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರದಲ್ಲಿ ಸೆ. 29ರ ಬೆಳಗ್ಗೆ 9.30ಕ್ಕೆ ರೇಖಿ ಮತ್ತು ಸ್ವಸಂಹಮ್ಮೋಹಿನಿ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದು, ಮೊ. 94496 96998 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.