ಮೈಸೂರು

ಅಕ್ಷರದ ಕಾಯಕ ಯೋಗಿ ಸಿಪಿಕೆ

Published On :
ಮೈಸೂರು: ಸಾಹಿತಿ ಡಾ.ಸಿಪಿಕೆ ಅವರು ಅಕ್ಷರದ ಕಾಯಕ ಯೋಗಿ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ಎನ್.ಎಸ್. ತಾರಾನಾಥ ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂವಹನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಅಗ್ರಹಾರದ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಡಾ.ಸಿಪಿಕೆ- 75 ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದಿಸಿ ಅವರು ಮಾತನಾಡಿದರು.
1960ನೇ ಇಸವಿಯಲ್ಲಿ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸುಮಾರು 54 ವರ್ಷಗಳ ಕಾಲ ನಿರಂತರವಾಗಿ ಬರವಣಿಗೆಯಲ್ಲಿ ತೊಡಗಿದವರು. ಅವರ ಬರವಣಿಗೆ ಕೇವಲ ಯಾವುದೇ ಒಂದು ವಿಷಯಕ್ಕೆ ಮಾತ್ರ ಸಿಮೀತವಲ್ಲ. ವೈವಿಧ್ಯ, ವಿಶಿಷ್ಟ, ಪ್ರಯೋಗಶೀಲ ಹಾಗೂ ಸಮೃದ್ಧಿಯನ್ನು ಒಳಗೊಂಡಿದೆ. ಅವರೊಬ್ಬ ಅಕ್ಷರದ ಕಾಯಕ ಯೋಗಿ ಎಂದರು.
ಕಾವ್ಯ, ಚಿಂತನೆ, ಸಂಶೋಧನೆ, ಜಾನಪದ, ಶಾಸ್ತ್ರೀಯ, ಚುಟುಕು ಹೀಗೆ ಅನೇಕ ಪ್ರಕಾರಗಳಲ್ಲಿ 300 ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿರುವ ಸಿಪಿಕೆಯಂಥ ಸಾಹಿತಿ ಜಗತ್ತಿನ ಯಾವುದೇ ಭಾಷೆಯಲ್ಲಿ ಸಿಗಲಾರರು. ಯಾವುದೇ ವಿವಿಯಲ್ಲಿ ಇಂಥ ಅಧ್ಯಾಪಕ ವೃತ್ತಿ ನಡೆಸಿದವರನ್ನು ಕಾಣಲು ಸಾಧ್ಯವಿಲ್ಲ ಎಂದು ಪ್ರೊ.ದೇಜಗೌ ಅವರ ಮಾತು ಇಲ್ಲಿ ಸ್ಮರಿಸಬಹುದು ಎಂದು ತಿಳಿಸಿದರು.
ಅನರ್ಘ್ಯ ರತ್ನ: ಡಾ.ಸಿಪಿಕೆ ಹಾಗೂ ಶಾರದಾ ಕೃಷ್ಣಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ ಡಾ. ಸಿಪಿಕೆ ಅವರು, ಶ್ರೇಷ್ಠ ವಿದ್ವಾಂಸ, ವಿನಯಶೀಲ ಹಾಗೂ ಮಹಾಜ್ಞಾನಿ. ಅವರನ್ನು ಕುರಿತು ಅಕಾಡೆಮಿ ವಿಚಾರ ಸಂಕಿರಣ ಏರ್ಪಡಿಸಲಿದೆ ಎಂದರು.
ಹುಟ್ಟುಹಬ್ಬದ ಅಮೃತ ಮಹೋತ್ಸವದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಸಿಪಿಕೆ, ಇಷ್ಟೊಂದು ಸಾಹಿತ್ಯ ಕೃತಿಗಳನ್ನು ಹೇಗೆ ಬರದೆ ಎನ್ನುವ ಸಂಶಯ ನನ್ನನ್ನು ಕಾಡುತ್ತಿದೆ. ಕುವೆಂಪು ಹಾಗೂ ದೇಜಗೌ ಅವರು ಇಲ್ಲದಿದ್ದರೆ ನನ್ನ ಈ ಬೆಳವಣಿಗೆ ಸಾಧ್ಯ ಇರುತ್ತಿರಲಿಲ್ಲ ಎಂದ ಅವರು, ಸಾಹಿತ್ಯಕ್ಕೆ ಸ್ಫೂರ್ತಿಯಾದ ಡಾ.ಜಿ.ಎಸ್. ಶಿವರುದ್ರಪ್ಪ ಹಾಗೂ ಮೈಸೂರು ವಿವಿಯ ಕುಲಪತಿಯಾಗಿದ್ದ ಡಾ.ಶ್ರೀಮಾಲಿ ಅವರನ್ನು ಸ್ಮರಿಸಿದರು.
ಸಿಪಿಕೆ-75 ಅಭಿನಂದನಾ ಗ್ರಂಥವನ್ನು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಲೋಕಾರ್ಪಣೆಗೊಳಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಪ್ರೊ.ದೇಜಗೌ ಅಧ್ಯಕ್ಷತೆ ವಹಿಸಿದ್ದರು. 
ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್. ಲೋಕಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್ 
ಇದ್ದರು. ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಡಾ. ಸಿಪಿಕೆ ಶಿಷ್ಯರು, ಅಭಿಮಾನಿಗಳು ಹಾಗೂ ಸಂಘಸಂಸ್ಥೆಯವರು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.