ಮೈಸೂರು

ಆಹುತಿ ಕಾದಂಬರಿ ಬಿಡುಗಡೆ

Published On :
ಮೈಸೂರು: ಹುಣಸೂರಿನ ಅನುಗ್ರಹ ಪ್ರಕಾಶನವು ಹೊರತಂದಿರುವ ಮೈಸೂರು ವಿವಿಯ ದ್ವಿತೀಯ ಎಂ.ಎಸ್ಸಿ ವಿದ್ಯಾರ್ಥಿ ಅನುಷ್ ಎ.ಶೆಟ್ಟಿ ರಚನೆಯ ಆಹುತಿ ಎಂಬ ಕಾದಂಬರಿಯನ್ನು ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್ ಬಿಡುಗಡೆಗೊಳಿಸಿದರು.
ಮಂಗಳವಾರ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾತನಾಡಿದ ಅವರು, ಯುವಜನತೆ ಇಂಟರ್ನೆಟ್, ವಾಟ್ಸ್‌ಆ್ಯಪ್ ಎಂದು ಕೂರುವ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಕಾದಂಬರಿ ರಚಿಸಿರುವುದು ಮೆಚ್ಚುವಂತದ್ದು. ಜೀವನದ ಪ್ರಮುಖ ಘಟ್ಟಗಳಲ್ಲಿ ಹೊಸ ತಿರುವುಗಳು ಆಗಾಗ ಪಡೆಯುತ್ತವೆ. ಇದೀಗ ಬರವಣಿಗೆ ಆರಂಭಿಸಿರುವ ಅನುಷ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಬರಹಗಾರನ ಬರವಣಿಗೆ ವಿಷಯವನ್ನು ಸ್ಪಷ್ಟವಾಗಿ ತಿಳಿಸುವಂತಿರಬೇಕು. ತನ್ನ ಶೈಲಿಯ ಮೂಲಕ ಪರಿಸರವನ್ನು ಕಟ್ಟಿಕೊಡುವಂತಿರಬೇಕು. ವಿಷಯವನ್ನು ಪರಿಣಾಮಕಾರಿಯಾಗಿ ಓದುಗನಿಗೆ ತಲುಪಿಸುವಂತಾದಾಗ ಬರೆದದ್ದಕ್ಕು ಸಾರ್ಥಕ್ಯ ಲಭಿಸುತ್ತದೆ. ಪರಿಸರ ಕವಿ ಎಂದೆ ಕರೆಯುವ ಕುವೆಂಪು ಅವರ ಪಕ್ಷಿಕಾಶಿಯಲ್ಲಿನ ಕವನವೊಂದರಲ್ಲಿ ಪೊಂಗಳಿ ಕೋಗಿಲೆ ಎಂಬ ಹೆಸರು ಬರುತ್ತದೆ. ಅದೇ ರೀತಿ ವೈಜ್ಞಾನಿಕವಾಗಿ ಪಕ್ಷಿಗಳ ಬಗ್ಗೆ ಸಂಶೋಧನೆ ನಡೆಸಿದ ಸಲೀಂ ಅಲಿ ಅವರ ಲೇಖನದಲ್ಲಿ ಪೊಂಗಳಿ ಕೋಗಿಲೆ ಬರುತ್ತದೆ. ಅಂದರೆ ಸತತ ಅಭ್ಯಾಸ, ಅವಲೋಕನೆಯಿಂದ ಸಾಹಿತಿ ಮತ್ತು ವಿಜ್ಞಾನಿ ಒಟ್ಟಿಗೆ ಬೆರೆಯುವುದನ್ನು ನಾವು ನೋಡಬಹುದು ಎಂದು ಉದಾಹರಿಸಿದರು. ಇಎಂಎಂಆರ್‌ಸಿ ನಿರ್ದೇಶಕ ಸುಚೇತನ ಸ್ವರೂಪ ಮಾತನಾಡಿ, ಒಂದು ಬಾರಿ ಪುಸ್ತಕ ಪ್ರಕಟಿಸಿದರೆ ಅದೇ ವೇದಾಂತ ಎಂಬ ಭಾವನೆಯಿಂದ ಲೇಖಕರು ಹೊರಬರಬೇಕು ಎಂದರು.ಅನುಷ್ ಎ. ಶೆಟ್ಟಿ ಇದ್ದರು.
ನಾಗರಿಕರನ್ನಾಗಿಸುವ ಶಿಕ್ಷಣ ಬೇಕು
ಮೈಸೂರು: ನಾಗರೀಕರು ಮತ್ತು ಸುಸಂಸ್ಕೃತರನ್ನಾಗಿಸುವ ಶಿಕ್ಷಣದ ಅಗತ್ಯವಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್. ಮಲ್ಲಣ್ಣ ಹೇಳಿದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜೀವನದಲ್ಲಿ ನಾಗರಿಕತೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ವಿದ್ಯಾವಂತರಾದಂತೆ ಜೀವನ ಮೌಲ್ಯ ಕುಸಿಯುತ್ತಿದೆ. ಜಾನಪದರು ಅವಿದ್ಯಾವಂತರಾದರೂ, ನಾಗರಿಕತೆ ಬೆಳೆಸಿಕೊಂಡಿದ್ದರು. ಇಂದು ಬಹಳ ಬೇಗ ಹಣ ಗಳಿಸುವುದು ದೊಡ್ಡ ಗುರಿಯಾಗಿದೆ. ಮಾನವ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು. ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮನ್ನು ನಾಗರಿಕರನ್ನಾಗಿಸುತ್ತದೆ. ಕ್ರೀಡೆ ನಮ್ಮ ವ್ಯಕ್ತಿತ್ವ ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಶಾಲಾ- ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕು ಎಂದು ಸಲಹೆ ಮಾಡಿದರು. ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಪ್ರೊ.ಲೋಕೇಶಮೂರ್ತಿ ಸ್ವಾಗತಿಸಿದರು. ಡೀನ್ ಡಾ.ಎಚ್.ಸಿ. ಹೊನ್ನಪ್ಪ, ಪರೀಕ್ಷಾ ವಿಭಾಗದ ನಿಯಂತ್ರಕ ಪ್ರೊ.ಶಿವಮೂರ್ತಿ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ ಪೂಜಾ, ಅಶ್ವಿನಿ, ರಂಜಿತಾ, ಹೊನ್ನಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.