ಮೈಸೂರು

ಹುಣಸೂರು ತಾ.ನಲ್ಲಿ ಭಾರಿ ಮಳೆ

Published On :

ಕ.ಪ್ರ.ವಾರ್ತೆ ಹುಣಸೂರು ಏ. 12
ತಾಲೂಕಿನ ಹನಗೋಡು ಮತ್ತು ಕಾಡಂಚಿನ ಪ್ರದೇಶದ ಸುತ್ತಮುತ್ತಲ ಗ್ರಾಮಗಳಲ್ಲಿ ಶುಕ್ರವಾರ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆಗೆ ಬಾಳೆ, ತೆಂಗು, ಅಡಕೆ ಮರಗಳು, ಮನೆಗಳು ಧರೆಗೆ ಉರುಳಿದರೆ, ಶನಿವಾರ ಬೆಳಗಿನವರೆಗೆ ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಬಿರುಗಾಳಿ ಮಳೆಯಿಂದಾಗಿ ನೂರಾರು ಎಕರೆ ಬಾಳೆ ಗಿಡಗಳು ಧರೆಗೆ ಉರುಳಿದರೆ, ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಗಿಡ- ಮರಗಳು ನೆಲಕ್ಕುರುಳಿವೆ, ಆಟೋ ಹಾಗೂ ತಳ್ಳುಗಾಡಿಯ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದು ಜಖಂಗೊಂಡಿದೆ. 200ಕ್ಕೂ ಹೆಚ್ಚಿನ ಮನೆಯ ಕಲ್ನಾರ್ ಶೀಟ್‌ನ ಮಾಳಿಗೆ ಹೊತ್ತೊಯ್ದಿದೆ. ಮನೆಯಲ್ಲಿದ್ದ ದಿನಸಿ ಪದಾರ್ಥಗಳು ಹಾನಿಯಾಗಿದೆ. ಇಟ್ಟಿಗೆ ಫ್ಯಾಕ್ಟರಿಯ ಛಾವಣಿ ಹಾರಿಹೋಗಿದೆ. ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಫಲಕ್ಕೆ ಬಂದಿದ್ದ ಬಾಳೆ ಗಿಡಗಳು ನಾಶವಾಗಿವೆ.
ತೆಂಗು, ಅಡಕೆ ಮರಗಳು ಬಿದ್ದು ಹೋಗಿದ್ದು, ಹಲವಾರು ಮನೆಗಳಿಗೆ ಸಿಡಿಲು ಬಡಿದು ಗೋಡೆಗಳು ಬಿರುಕು ಬಿಟ್ಟಿವೆ. ಮರಗಳು ನೆಲಕ್ಕುರುಳಿದ್ದರಿಂದ ಹಲವೆಡೆ ರಸ್ತೆ ಸಂಚಾರ ಬಂದ್ ಆಗಿತ್ತು. ರಾತ್ರಿ ಇಡೀ ವಿದ್ಯುತ್ ಸಂಪರ್ಕ ಕಡಿದು ಹೋಗಿತ್ತು. ಇಷ್ಟೆಲ್ಲ ಅನಾಹುತವಾಗಿದ್ದರೂ, ಯಾವುದೇ ಪ್ರಾಣ ಹಾನಿಯಾಗಿಲ್ಲಾವಾದರೂ, ಕೋಟ್ಯಂತರ ರು. ನಷ್ಟ ಸಂಭವಿಸಿದೆ. ಹನಗೋಡು ಗ್ರಾಮದ ಬಸ್ ನಿಲ್ದಾಣದ ವೃತ್ತದಲ್ಲಿ ಬಿರುಗಾಳಿಗೆ ಸಿಲುಕಿದ ಆಸ್ಪತ್ರೆ ಆವರಣದಲ್ಲಿದ್ದ ಮರವೊಂದು ಮುರಿದು ವಿದ್ಯುತ್ ಕಂಬ ಮುರಿದು ಆಟೋ ಹಾಗೂ ತಳ್ಳುಗಾಡಿಯ ಮೇಲೆ ಬಿದ್ದು, ಸಂಪೂರ್ಣ ಜಖಂಗೊಂಡಿದೆ. ಆಟೋದಲ್ಲಿ ಯಾರೂ ಇಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ. ಅಲ್ಲದೆ ಅಬ್ಬೂರು, ಹಿಂಡಗುಡ್ಲು, ದಾಸನಪುರ, ಕಡೇಮನುಗನಹಳ್ಳಿ. ಉಡುವೆಪುರ, ಮುತ್ತುರಾಯನಹೊಸಳ್ಳಿ, ಬಿ.ಆರ್. ಕಾವಲ್ ಮತ್ತಿತರೆಡೆ ನೂರಕ್ಕೂ ಹೆಚ್ಚು ಕಂಬ ಮುರಿದು ಬಿದ್ದ ಪರಿಣಾಮ ರಾತ್ರಿಯಿಂದ ಈ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ.
ನೆಲಕಚ್ಚಿದ ಬಾಳೆ: ಫಲಕ್ಕೆ ಬಂದಿದ್ದ ಹನಗೋಡಿನ ಚಿಕ್ಕಮಾದಶೆಟ್ಟಿ, ನಾಡ ಕಚೇರಿ ಮಹದೇವ್, ವೆಂಕಟಪ್ಪ, ಸರೋಜಮ್ಮ, ದಿಲ್‌ಣಷಾ, ಉಡುವೆಪುರದ ಮಹೇಂದ್ರ, ಅಮರ್, ರಾಜಶೇಖರ್, ಪ್ರಸನ್ನ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಸಿಡಿಲಿಗೆ 35 ಕುರಿ, 4 ಮೇಕೆ ಬಲಿ
ಪಿರಿಯಾಪಟ್ಟಣ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಬಿದ್ದ ಬಾರಿ ಗುಡುಗು, ಸಿಡಿಲು, ಗಾಳಿಸಹಿತ ಮಳೆಗೆ 35 ಕುರಿಗಳು, 4 ಮೇಕೆಗಳು ಮೃತಪಟ್ಟಿದ್ದು, ಕೆಲವೆಡೆ ಮನೆಗಳ ಹೆಂಚುಗಳು ಹಾರಿಹೋಗಿರುವ ಘಟನೆ ಜರುಗಿದೆ. ತಾಲೂಕಿನ ಹಲಗನಹಳ್ಳಿ ಗ್ರಾಮದಲ್ಲಿ ಕುರಿ ಮಂದೆ ಹಾಕಿಕೊಂಡಿದ್ದ ತುಮಕೂರು ಜಿಲ್ಲೆ ಎಳೆಗೂಲ್ಲರಹಟ್ಟಿ ಗ್ರಾಮದ ರಾಮಪ್ಪ ಎಂಬುವರಿಗೆ ಸೇರಿದ 35 ಕುರಿಗಳು ಮೃತಪಟ್ಟಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.