ಮೈಸೂರು

ಹಿಂದೂ ಧರ್ಮದಲ್ಲಿ ಅಸಮಾನತೆ

Published On :

ಮೈಸೂರು: ಹಿಂದೂ ಧರ್ಮ ಅಸಮಾನತೆಯಿಂದ ಕೂಡಿದೆ. ಇದನ್ನು ನಾವು ಒಪ್ಪಿಕೊಂಡರೆ ಅಸಮಾನತೆಯನ್ನು ಒಪ್ಪಿಕೊಂಡಂತಾಗುತ್ತದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗವು ಭಾನುವಾರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಮರ್ಯಾದೆಗೇಡಿ ಹತ್ಯೆ ಹಿನ್ನೆಲೆ- ಪರಿಣಾಮ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಶ್ರೇಣಿಕೃತ ಸಮಾಜದ ಪದ್ಧತಿ ಅಡಗಿದೆ. ಕಸುಬನ್ನು ಆಧರಿಸಿದ ಬದುಕನ್ನು ಜಾತಿಯನ್ನಾಗಿ ಮಾಡಿ ಮನುಷ್ಯ ಮನುಷ್ಯರ ನಡುವೆ ಕಂದಕ ಉಂಟು ಮಾಡಿದೆ. ಗರ್ಭದಿಂದ ಹೊರಬಂದ ಮಗುವಿಗೆ ಜಾತಿ ಕಳಂಕ ಅಂಟಿಸಿ ಕೀಳಾಗಿ ಅಥವಾ ಮೇಲಾಗಿ ಕಾಣುವ ಅನಿಷ್ಠ ಪದ್ಧತಿ ಸಮಾಜದಲ್ಲಿದೆ ಎಂದರು.
ಕೆಳಜಾತಿಯಲ್ಲಿ ಹುಟ್ಟಿದವರಿಗೆ ಪ್ರತಿನಿತ್ಯ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ದಲಿತರು ಎಂಬ ಕಾರಣಕ್ಕೆ ಸವರ್ಣೀಯರು ಕಾಡು ಪ್ರಾಣಿಗಳಂತೆ ವರ್ತಿಸುವುದು ದುಷ್ಟತನದಿಂದ ಕೂಡಿದೆ. ದಲಿತರ ಮೇಲೆ ಹಲ್ಲೆಯಾದಾಗಲೆಲ್ಲ ಜಾತಿಯ ಪ್ರಶ್ನೆ ಉದ್ಭವಿಸುತ್ತದೆ. ದಲಿತರ ನೋವು ಎಷ್ಟು ಎಂಬುದು ಅನುಭವಿಸಿದವರಿಗೆ ಗೊತ್ತಿದೆ. ಇಂತಹ ಸಮಾಜದಲ್ಲಿ ಹುಟ್ಟಿದ ಅಂಬೇಡ್ಕರರು ಧ್ವನಿ ಇಲ್ಲದವರಿಗೆ ಧ್ವನಿಯಾದರು. ಅಸಮಾನತೆಯಿಂದ ಕೂಡಿದ ಹಿಂದೂ ಧರ್ಮ ಬಿಟ್ಟು ಸಮಾನತೆ ಪ್ರತಿಪಾದಿಸುವ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ಸ್ಮರಿಸಿದರು.
ಮರ್ಯಾದೆ ಹತ್ಯೆ ನಿಲ್ಲಲಿ: ದಲಿತರು ಕೂಡ ಜಾತೀಯತೆಗೆ ಕಟ್ಟು ಬೀಳುತ್ತಿದ್ದಾರೆ. ತಮ್ಮ ಜಾತಿಯ ಹುಡುಗಿ ಹಿಂದುಳಿದ ವರ್ಗದ ಹುಡುಗನನ್ನು ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ಮರ್ಯಾದೆಗೇಡಿ ಹತ್ಯೆ ಮಾಡುತ್ತಾರೆ. ಇದು ನಿಲ್ಲಬೇಕು. ಜಾತಿ ಪ್ರಜ್ಞೆಯಿಂದ ಹೊರಬಂದು ಎಲ್ಲರೂ ಮನುಷ್ಯರೆ ಎಂಬ ಭಾವನೆಯಿಂದ ನೋಡಬೇಕು ಎಂದರು.
ರಾಜ್ಯ ದಸಂಸ ಸಂಚಾಲಕ ಡಾ.ಡಿ.ಜಿ. ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಹರಿಹರ ಆನಂದಸ್ವಾಮಿ, ಸಂಚಾಲಕರಾದ ಎಂ.ಬಿ.ಶ್ರೀನಿವಾಸ್, ಮಲ್ಲೇಶ್ ಚುಂಚನಹಳ್ಳಿ, ಎ.ಮಾನಯ್ಯ, ಮಾರುತಿ ಬೌದ್ದೆ ಇದ್ದರು. ಪರಿವರ್ತನ ತಂಡದವರು ಹೋರಾಟದ ಗೀತೆಗಳನ್ನು ಹಾಡಿದರು.

ಮಕ್ಕಳ ಹಕ್ಕುಗಳನ್ನು ಕಾಪಾಡಿ: ಉಮಾಶ್ರೀ
ಅಂತರ್ಜಾತಿ ವಿವಾಹವಾದ ಮಕ್ಕಳನ್ನು ಮರ್ಯಾದೆ ಎಂಬ ಪ್ರತಿಷ್ಠೆಗಾಗಿ ಹತ್ಯೆ ಮಾಡದೆ ಅವರ ಬದುಕುವ ಹಕ್ಕುಗಳನ್ನು ಕಾಪಾಡುವಂತೆ ಮಹಿಳಾ ಮತ್ತು ಮಕ್ಕಳ ಸಚಿವೆ ಉಮಾಶ್ರೀ ಮನವಿ ಮಾಡಿದರು. ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ತಾರುಣ್ಯಾವಸ್ಥೆಗೆ ಬಂದಾಗ ಅವರಲ್ಲಿ ಕುತೂಹಲವಿರುತ್ತದೆ. ಈ ಕೂತುಹಲದ ನಶೆಗೆ ಬಿದ್ದಾಗ ಪ್ರೇಮ ವಿವಾಹಗಳು, ಅಂತರ್ಜಾತಿ ವಿವಾಹಗಳು ಆಗುವುದು ಸಹಜ. ಈ ಪ್ರಕ್ರಿಯೆಯನ್ನು ಪ್ರತಿಷ್ಠೆಗೆ ಒಡ್ಡಿ ಮಗಳು ಅಥವಾ ಮಗನ ಜೀವ ತೆಗೆಯುವಂತೆ ದುಷ್ಕೃತ್ಯಕ್ಕೆ ಪೋಷಕರು ಮುಂದಾಗಬಾರದು. ಅವರ ಮನಸ್ಸಿನ ಆಸೆ, ಭಾವನೆಗಳನ್ನು ಗೌರವಿಸುವುದನ್ನು ನಾವು ಕಲಿತುಕೊಳ್ಳಬೇಕು ಎಂದರು. ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಹಾಗೂ ಪ್ರಗತಿಪರ ಚಿಂತಕ ಪ್ರೊ.ಎಚ್.ಎಲ್. ಕೇಶವಮೂರ್ತಿ ಅವರು ಮರ್ಯಾದೆಗೇಡಿ ಹತ್ಯೆಯ ಹಿನ್ನೆಲೆ ಮತ್ತು ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು. ಕವಿ ಡಾ.ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಎಲ್ಲ ಬಡವರಿಗೆ ಮೀಸಲಾತಿ: ಆಂಜನೇಯ
ಸಮಾಜದಲ್ಲಿರುವ ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ನೀಡಲು ನಮ್ಮ ಸರ್ಕಾರ ನಿರ್ಧರಿದ್ದು, ಸದ್ಯದಲ್ಲಿಯೇ ಕಾಯಿದೆ ರೂಪದಲ್ಲಿ ಜಾರಿಗೆ ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗವು ಭಾನುವಾರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ಮರ್ಯಾದೆಗೇಡಿ ಹತ್ಯೆ ಹಿನ್ನೆಲೆ- ಪರಿಣಾಮ ಎಂಬ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೀಸಲಾತಿಯಡಿ ಬ್ರಾಹ್ಮಣರು, ವೈಶ್ಯರನ್ನು ಹೊರತುಪಡಿಸಿ ಬಹುತೇಕ ಎಲ್ಲ ಜಾತಿಗಳು ಅನುಕೂಲ ಪಡೆಯುತ್ತಿವೆ. ಅದೇ ರೀತಿ ಬ್ರಾಹ್ಮಣ, ವೈಶ್ಯರಲ್ಲೂ ಬಡವರಿದ್ದಾರೆ. ಅಂತವರನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ನೀಡುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.