ನರಸಿಂಹಸ್ವಾಮಿ ನೇಮಕ
ಮೈಸೂರು: ಜೆಡಿಎಸ್ ಮೈಸೂರು ಜಿಲ್ಲಾಧ್ಯಕ್ಷರಾಗಿ ಎನ್. ನರಸಿಂಹಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬೀರಿಹುಂಡಿ ಬಸವಣ್ಣ ನೇಮಕವಾಗಿದ್ದಾರೆ. ಈ ಇಬ್ಬರ ಆಯ್ಕೆಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಅವರು ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪ್ರಕಟಿಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನರಸಿಂಹಸ್ವಾಮಿ ಮತ್ತು ಬೀರಿಹುಂಡಿ ಬಸವಣ್ಣ ಅವರಿಗೆ ಪ್ರಮಾಣಪತ್ರ ವಿತರಿಸಿ ಶುಭ ಕೋರಿದರು.
ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ
ಮೈಸೂರು: ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಸಂಸ್ಥೆಯ 14ನೇ ವಾರ್ಷಿಕೋತ್ಸವವು ಫೆ. 16ರ ಸಂಜೆ 6.30ಕ್ಕೆ ಜೆಎಲ್ಬಿ ರಸ್ತೆಯಲ್ಲಿರುವ ವಾಸುದೇವಾಚಾರ್ಯ ಭವನದಲ್ಲಿ ಜರುಗಲಿದೆ. ನಜರ್ಬಾದ್ ಕೆನರಾಬ್ಯಾಂಕ್ ವೃತ್ತ ಕಚೇರಿ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರಿನ ಪ್ರೊ. ಎಚ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರಿಗೆ 2013ನೇ ಸಾಲಿನ ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಡಾ.ವಿ.ಎಸ್. ಸಂಪತ್ಕುಮಾರಾಚಾರ್ಯ (ಸಂಗೀತ ಶಾಸ್ತ್ರ), ಡಾ.ಜೆ.ಎಸ್. ಹೆಗ್ಡೆ (ವೈದ್ಯ ವಿಜ್ಞಾನ), ಪ್ರೊ.ಎಸ್. ಶಿವಾಜಿ ಜೋಯಿಸ್ (ಸಾಹಿತ್ಯ) ಮತ್ತು ಪ್ರೊ.ಬಿ.ಎನ್. ಮಂಜುನಾಥಯ್ಯ (ಶಿಕ್ಷಣಶಾಸ್ತ್ರ) ಅವರನ್ನು ಸನ್ಮಾನಿಸಲಾಗುವುದು. ಅಂದು ಸಂಜೆ 4.30ಕ್ಕೆ ವಿದುಷಿ ಧರಿತ್ರೀ ಆನಂದರಾವ್ ಮತ್ತು ವಿದ್ವಾನ್ ನಾರಾಯಣದೇಸಾಯಿ ಅವರ ತಂಡದಿಂದ ಡಿವಿಜಿ ಅವರ 'ಮಂಕುತಿಮ್ಮನ ಕಗ್ಗ' ಮತ್ತು ಕೆ.ಸಿ. ಶಿವಪ್ಪನವರು 'ಮುದ್ದುರಾಮನ ಮನಸು' ಕೃತಿಗಳಿಂದ ಆಯ್ದ ಮುಕ್ತಕಗಳ ಗೀತಾ ಕಥಾ ಸೌರಭ ಕಾರ್ಯಕ್ರಮ ಏರ್ಪಡಿಸಿದೆ. ವಿದುಷಿ ಮಮತಾ ರವೀಂದ್ರ ಮತ್ತು ವಿದುಷಿ ಎಚ್. ಭುವನೇಶ್ವರಿ ಕನ್ನಡ ಗೀತೆಗಳನ್ನು ಹಾಡುವರು.
ಸೂರ್ಯ ನಮಸ್ಕಾರ...
ಮೈಸೂರು: ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು. ಮೈಸೂರು ಯೋಗ ಅಸೋಸಿಯೇಷನ್ ಏರ್ಪಡಿಸಿದ್ದ 2ನೇ ವರ್ಷದ ಸೂರ್ಯಯಜ್ಞ ಹಾಗೂ 108 ಸೂರ್ಯ ನಮಸ್ಕಾರಗಳ ಈ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್.ಎ. ರಾಮದಾಸ್ ಉದ್ಘಾಟಿಸಿದರು.
ಯೋಗನರಸಿಂಹಸ್ವಾವು ದೇವಸ್ಥಾನದ ಸಂಸ್ಥಾಪಕ ಭಾಷ್ಯಂ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಿಎಸ್ಎಸ್ ಯೋಗ ಪರಿಷತ್ತಿನ ಹರಿ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಮಧೇನು ಅಷ್ಠಾಂಗ ಯೋಗಶಾಲೆಯ ವಿ. ಸೋಮಶೇಖರ್ ಅವರಿಗೆ ಯೋಗ ವಿಶಾರದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷ ಬಿ. ಧನ್ಯಕುಮಾರ್, ಉಪಾಧ್ಯಕ್ಷ ಡಾ. ಸಿ. ಶರತ್ಕುಮಾರ್ ಇದ್ದರು. ವಿದೇಶಿ ಪ್ರವಾಸಿಗರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ
ಪಿರಿಯಾಪಟ್ಟಣ: ಯುವಕರು ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಮಾಜಿ ಶಾಸಕ ಎಚ್.ಸಿ. ಬಸವರಾಜ್ ಹೇಳಿದರು.
ಪಟ್ಟಣದ ವಿದ್ಯಾವಿಕಾಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಮೈಸೂರಿನ ಯೂತ್ ಫಾರ್ ಆಲ್ ಸಂಸ್ಥೆ ವತಿಯಿಂದ ವಿದ್ಯಾವಿಕಾಸ ಕಾಲೇಜು ಆವರಣದಲ್ಲಿ ನಡೆದ ಹದಿಹರೆಯದವರಿಗೆ ಆರೋಗ್ಯ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯರು ಸುಸಂಸ್ಕೃತರು, ಹಿಂದೆ ಜನರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವನ್ನು ಕಾಪಾಡಿಕೊಂಡಿದ್ದರಿಂದ ಹೆಚ್ಚು ವರ್ಷಗಳ ಕಾಲ ಬದುಕಲು ಸಾಧ್ಯವಾಯಿತು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ.ಎಚ್.ಆರ್. ಮಣಿಕರ್ಣಿಕ, ಡಾ. ಶೈಲಜಾ, ಮಹೇಶ್ ಮಾತನಾಡಿದರು. ಬಸವ ನಿಕೇತನ ಎಜುಕೇಶನ್ ಟ್ರಸ್ಟ್ ಕಾರ್ಯಾಧ್ಯಕ್ಷ ಸದಾಶಿವಪ್ಪ, ಕಾರ್ಯದರ್ಶಿ ಚಂದ್ರಶೇಖರಯ್ಯ, ಪ್ರಾಂಶುಪಾಲ ಜಗದೀಶ್, ಜಿಪಂ ಸಂಪನ್ಮೂಲ ವ್ಯಕ್ತಿ ಮಹೇಂದ್ರ, ಯೂತ್ ಫಾರ್ ಆಲ್ ಹರೀಶ್ ಇದ್ದರು.
ಮಾಧ್ಯಮ ಪ್ರಶಸ್ತಿ ಅಭಿನಂದನೆ
ಮೈಸೂರು: ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ಕೆ. ಶಿವಕುಮಾರ್, ಎಂ.ಎಸ್. ರಾಜೇಂದ್ರಕುಮಾರ್, ಪ್ರಗತಿ ಗೋಪಾಲಕೃಷ್ಣ, ವಿ. ಮಹೇಶ್ಕುಮಾರ್ ಹಾಗೂ ಕೂಡ್ಲಿ ಗುರುರಾಜ ಅವರನ್ನು ಜಿಲ್ಲಾ ಪತ್ರಕರ್ತರ ಸಂಘದ ಪರವಾಗಿ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ಹಾಗೂ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎ. ವೆಂಕಟೇಶ್ ಅಭಿನಂದಿಸಿದ್ದಾರೆ.
ನಾಳೆ ತಾಪಂ ಉಪಾಧ್ಯಕ್ಷರ ಆಯ್ಕೆ
ಕೆ.ಆರ್. ನಗರ: ತಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಫೆ. 11 ರಂದು ಚುನಾವಣೆಯಲ್ಲಿ ನಡೆಯಲಿದ್ದು, ಈವರೆಗೆ ಉಪಾಧ್ಯಕ್ಷೆಯಾಗಿದ್ದ ಶಕುಂತಲಾ ರಮೇಶ್ ರಾಜಿನಾಮೆಯಿಂದ ಸ್ಥಾನ ತೆರವಾಗಿದೆ. ಅಂದು ಮಧ್ಯಾಹ್ನ ಒಂದು ಗಂಟೆಗೆ ಚುನಾವಣೆ ನಡೆಯಲಿದ್ದು, ಉಪ-ವಿಭಾಗಾಧಿಕಾರಿ ಬಸವರಾಜು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುವರು. 21 ಸದಸ್ಯ ಬಲದ ತಾಪಂನಲ್ಲಿ 14 ಮಂದಿ ಜೆಡಿಎಸ್ ಸದಸ್ಯರಿದ್ದು, 7 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ.
ನಾಳೆ ವೃತ್ತಿ ಸಮ್ಮೇಳನ
ಕೆ.ಆರ್. ನಗರ: ಮೈಸೂರು ವಿವಿ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಹಾಗೂ ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಫೆ. 11ರ ಬೆಳಗ್ಗೆ 10.30ಕ್ಕೆ ಕಾಲೇಜಿನ ಆವರಣದಲ್ಲಿ ವೃತ್ತಿ ಸಮ್ಮೇಳನ ಮತ್ತು ವೃತ್ತಿ ಸಾಹಿತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಸರ್ಕಲ್ ಇನ್ಸ್ಪೆಕ್ಟರ್ ಎಚ್.ಎನ್. ಸಿದ್ದಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಪ್ರಾಂಶುಪಾಲ ಕೆ.ಆರ್. ದೀಕ್ಷಿತ್ ಅಧ್ಯಕ್ಷತೆ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

