ಸರ್ಕಾರಿ ಭೂಮಿ ಒತ್ತುವರಿ: ಆರೋಪ
ಕೆ.ಆರ್. ನಗರ: ದೊಡ್ಡೇಕೊಪ್ಪಲು ಗ್ರಾಪಂ ಸದಸ್ಯ, ತಾಲೂಕಿನ ಚೌಕಹಳ್ಳಿ ಗ್ರಾಮದ ಸಿ.ಎ.ರಾಜು ಕೃಷಿ ಜಮೀನನ್ನು ಅಕ್ರಮವಾಗಿ ನಿವೇಶನಗಳಾಗಿ ಪರಿವರ್ತಿಸಿ, ಮಾರಾಟ ಮಾಡಿರುವುದರ ಜತೆಗೆ ಹಾರಂಗಿ ನಾಲೆಯನ್ನು ಮುಚ್ಚಿ ಭೂ ಒತ್ತುವರಿ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ದೊಡ್ಡೇಕೊಪ್ಪಲು ಗ್ರಾಪಂ ಅಧ್ಯಕ್ಷ ಬಿ.ಎಂ. ಗಿರೀಶ್ ಆರೋಪಿಸಿದರು.
ಪಟ್ಟಣಕ್ಕೆ ಸಮೀಪದ ಕಾಳೇನಹಳ್ಳಿ ಗ್ರಾಮದ ಸರ್ವೆ ನಂ. 138/2, 134/1, 136/1 ಮತ್ತು ಅರಕೆರೆ ಗ್ರಾಮದ ಸರ್ವೆ ನಂ. 265ರ ಜಮೀನುಗಳು ಸೇರಿದಂತೆ ನಗರದ ಸುತ್ತಮುತ್ತ ದಾಖಲೆಗಳು ಸರಿ ಇಲ್ಲದ ಮತ್ತು ನಾಲೆ ಹಾದು ಹೋಗಿರುವ ಸುಮಾರು ಐದು ಎಕರೆಯಷ್ಟು ಜಮೀನನ್ನು ಖರೀದಿಸಿದ್ದಾರೆ. ಅಲ್ಲದೆ ನಗರ ಯೋಜನಾ ಪ್ರಾಧಿಕಾರದ ನಿಯಮದಂತೆ ಬಡಾವಣೆ ನಿರ್ಮಿಸದೆ ನಿವೇಶನಗಳನ್ನಾಗಿ ಪರಿವರ್ತಿಸಿ ಸಿಎ ನಿವೇಶನ ಮತ್ತು ಪಾರ್ಕ್ಗೆ ಜಾಗ ಬಿಡದೆ ಕೇವಲ 25 ಅಡಿ ರಸ್ತೆ ಬಿಟ್ಟು ನಿವೇಶನಗಳನ್ನು ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಕ್ರಮ ಚಟುವಟಿಕೆಗಳನ್ನು ದೊಡ್ಡೇಕೊಪ್ಪಲು ಗ್ರಾಪಂ ವ್ಯಾಪ್ತಿಯಲ್ಲಿ ಮಾಡುತ್ತಿರುವ ಕಾರಣ ಪಂಚಾಯಿತಿ ಅಧ್ಯಕ್ಷನಾಗಿ ದಾಖಲೆ ಸಹಿತ ಜಿಲ್ಲಾಧಿಕಾರಿಗಳು, ತಾಪಂ ಇಒ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿ ನಿವೇಶನಗಳನ್ನು ಖಾತೆ ಮಾಡದಂತೆ ತಡೆ ಹಿಡಿಯಲಾಗಿತ್ತು ಎಂದರು.
ನಂತರ ಸಿ.ಎ.ರಾಜು ಪಂಚಾಯಿತಿ ಸದಸ್ಯರಾಗಿರುವುದರಿಂದ ಶಾಸಕರಿಂದ ಪಿಡಿಒ ಮೇಲೆ ಒತ್ತಡ ಹೇರಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ನಾಲೆ ಹೋಗಿರುವ ನಿವೇಶನಗಳನ್ನು ಖಾತೆ ಮಾಡಿಸಿ ಮಾರಾಟ ಮಾಡಿದ್ದಾರೆ. ಇದರಿಂದ ನಿವೇಶನಗಳನ್ನು ಖರೀದಿಸಿದ ಸುಮಾರು 20 ಜನರಿಗೆ ವಂಚನೆಯಾಗಿದೆ. ಇಷ್ಟೆಲ್ಲ ಆದರೂ ರಾಜು ಅವರು ತನ್ನ ದಬ್ಬಾಳಿಕೆ ಮುಂದುವರಿಸಿ, ಉಳಿದ ನಿವೇಶನಗಳನ್ನು ಮಾರಾಟ ಮಾಡಲು ಖಾತೆ ಮಾಡಿಕೊಡುವಂತೆ ಪಿಡಿಒ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದರು.
ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಪಂಚಾಯಿತಿ ಆಡಳಿತದ ವತಿಯಿಂದ ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ ಇವರ ಸದಸ್ಯತ್ವ ರದ್ದು ಗೊಳಿಸುವಂತೆ ಪಂಚಾಯತ್ ರಾಜ್ ಇಲಾಖೆಗೂ ದಾಖಲೆ ಸಹಿತ ದೂರು ನೀಡಲಾಗಿದೆ ಎಂದು ತಿಳಿಸಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಡಳಿತ ಮಂಡಳಿ ಸದಸ್ಯರು ಮತ್ತು ಸಾರ್ವಜನಿಕರೊಂದಿಗೆ ಪ್ರತಿಭಟನೆ ಮಾಡುವುದಾಗಿ ಬಿ.ಎಂ.ಗಿರೀಶ್ ಎಚ್ಚರಿಕೆ ನೀಡಿದರು.
ಸದಸ್ಯರಾದ ನೇತ್ರಾವತಿ ಮಹದೇವ್, ಸಣ್ಣಮಾಲೇಗೌಡ, ರಾಘವೇಂದ್ರ, ಹೇಮಲತಾ, ಸಿದ್ದಯ್ಯ, ಗಣೇಶ್, ಗೌರಮ್ಮ ಚನ್ನಶೆಟ್ಟಿ ಮಹದೇವನಾಯಕ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

