ಮೈಸೂರು

ಸ್ನೇಹಿತನ ಕೊಲೆ; ಇಬ್ಬರ ಬಂಧನ

Published On :

ಮೈಸೂರು: ಬೈಕ್ ಮಾರಾಟ ವಿಚಾರದಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಜೆ.ಪಿ.ನಗರ ಬಳಿಯ ಮಹದೇವಪುರ ನಿವಾಸಿಗಳಾದ ರಮೇಶ್ ಅ. ನರಸಿಂಹ(25) ಮತ್ತು ತೇಜು (24) ಬಂಧಿತರು. ಇವರನ್ನು ಮಹದೇವಪುರದ ಸತೀಶ್ ಎಂಬವರ ಪುತ್ರ ವಿನೋದ್ಕುಮಾರ್ (25) ಎಂಬಾತನನ್ನು ಕೊಲೆ ಮಾಡಿರುವ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಜ.23ರಂದು ಜೆಪಿ ನಗರ ಡಿ ಬ್ಲಾಕ್ನ ನಿರ್ಮಾಣ ಹಂತದಲ್ಲಿರುವ ಕಟ್ಟಡ ತಾರಸಿ ಮೇಲೆ ವಿನೋದ್ಕುಮಾರ್ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಂತರ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ವಿನೋದ್ಕುಮಾರ್ ಗುರುತು ಪತ್ತೆಯಾದ ಮೇಲೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಬೈಕ್ ಮಾರಾಟ ವಿಚಾರದಲ್ಲಿ ರಮೇಶ್, ತೇಜು, ವಿನೋದ್ ನಡುವೆ ಗಲಾಟೆ ಆಗಿದೆ. ಕುಡಿದ ಮತ್ತಿನಲ್ಲಿದ್ದ ರಮೇಶ್ ಮತ್ತು ತೇಜು ಸ್ನೇಹಿತ ವಿನೋಧನನ್ನು ಡ್ರಾಗರ್ನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರಣ್ಯಪುರಂ ಠಾಣೆ ಇನ್ಸ್ಪೆಕ್ಟರ್ ಕೆ.ಸಿ. ಪ್ರಕಾಶ್, ಎಸ್ಐ ಎಲ್.ಶ್ರೀನಿವಾಸ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.

ವೇಶ್ಯಾವಾಟಿಕೆ; ಮೂವರ ಬಂಧನ
ಮೈಸೂರು: ಕಾರಿನಲ್ಲಿ ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ತೊಡಗಿದ್ದ ಯುವತಿ ಸೇರಿದಂತೆ ಮೂವರನ್ನು ಡಿಸಿಐಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೋಲ್ಕತ್ತಾ ಮೂಲದ ಮಾಲತಿ ಚಂದ್ರಕಾಂತ್ ಸಾಹು(27), ಪಾಂಡವಪುರ ತಾಲೂಕು ಚಿಕ್ಕಾಡೆ ಗ್ರಾಮದ ಸಿದ್ದುಗೌಡ (32) ಮತ್ತು ಪುಟ್ಟ ಸೋಮನಹಳ್ಳಿಯ ಶಿವರಾಜ್ (40) ಬಂಧಿತರು. ಇವರು ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಚಿತ್ರವನ ರೆಸಾರ್ಟ್ ಬಳಿ ಕಾರಿನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿಐಬಿ ಇನ್ಸ್ಪೆಕ್ಟರ್ ಗೋಪಾಲಕೃಷ್ಣ, ಎಸ್ಐ ರವಿಕುಮಾರ್ ಮತ್ತು ಸಿಬ್ಬಂದಿ ಪಾಂಡುರಂಗ, ಗೌರಿಶಂಕರ್, ಮಂಜುನಾಥ್, ವೆಂಕಟೇಶ್, ಕುಮುದಾ ದಾಳಿ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು
ಮೈಸೂರು: ಅಸ್ವಸ್ಥಗೊಂಡು ಕೆ.ಆರ್.ಆಸ್ಪತ್ರೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಮರಿಸ್ವಾಮಿ (75) ಮೃತಪಟ್ಟವರು. ಇವರ ವಿಳಾಸ ತಿಳಿದು ಬಂದಿಲ್ಲ.ಚಹರೆ- 5.5 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಎಡಗೈಯಲ್ಲಿ ಇಂದ್ರಾಣಿ ಎಂಬ ಹಚ್ಚೆ ಗುರುತಿದೆ. ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.

15ರಂದು ಶಿಕ್ಷಕರಿಗೆ ಶೈಕ್ಷಣಿಕ ಸಮ್ಮೇಳನ
ಮೈಸೂರು: ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಫೆ.15ರಂದು ಏರ್ಪಡಿಸಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಎಲ್ಲ ಶಿಕ್ಷಕರು ಭಾಗವಹಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಇತರ ಸಚಿವರು ಆಗಮಿಸುವರು. ಭಾಗವಹಿಸುವ ಶಿಕ್ಷಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ ಶಿಕ್ಷಣ ವಿಭಾಗದ ನಿರ್ದೇಶಕರು ಫೆ. 14ರಿಂದ 16ರವರೆಗೆ ಅನ್ಯಕಾರ್ಯ ನಿಮಿತ್ತ ರಜೆ ಮಂಜೂರು ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9945623596.

ಭೀಮನಕೊಲ್ಲಿಯಲ್ಲಿ ವೈವಭದ ರಥೋತ್ಸವ
ಸರಗೂರು: ಎಚ್.ಡಿ. ಕೋಟೆ ತಾಲೂಕಿನ ಪ್ರಸಿದ್ಧ ಭೀಮನಕೊಲ್ಲಿ ಮಹದೇಶ್ವರಸ್ವಾಮಿ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.  ದೇವಸ್ಥಾನದ ಸುತ್ತ ಭಕ್ತರು ಭಕ್ತಿಭಾವದಿಂದ ರಥ ಎಳೆದು ಪುನೀತರಾದರು. ಮಹಿಳೆಯರು ಉರುಳು ಸೇವೆ ಮಾಡಿ ಹರಕೆ ತೀರಿಸಿದರು. ರಥೋತ್ಸವದಲ್ಲಿ ವೀರಗಾಸೆ ಕುಣಿತ, ಮಂಗಳವಾದ್ಯ, ಜಾನಪದ ಕಲಾ ತಂಡಗಳ ಗಮನ ಸೆಳೆದವು. ಇದಕ್ಕೂ ಮುನ್ನ ಬೆಳಗ್ಗೆ ದೇವಸ್ಥಾನದಲ್ಲಿ ಮುಂಜಾನೆ ಬಿಲ್ವಾರ್ಚನೆ, ಪ್ರಸಾದ ವಿನಿಯೋಗ, ದೇವಸ್ಥಾನದ ಮುಂದೆ ಕೊಂಡೋತ್ಸವ, ಮಹದೇಶ್ವರ ಸ್ವಾಮಿ ರಥೋತ್ಸವ ಮತ್ತು ಆನೆ ವಾಹನೋತ್ಸವ ನಡೆಯಿತು. ಎಚ್.ಡಿ. ಕೋಟೆ ಸುಧ ಅವರಿಂದ ಭರತನಾಟ್ಯ, ಇನಗನಿ ಮಣ್ಣಮಕ್ಕಳ ಒನ್ನ ಪದಗಳ ಬಳಗ ಡಾ.ಕೆ. ರಾಮೇಶ್ವರಪ್ಪ ಅವರಿಂದ ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮ ನಾಗರಾಜು ವೃಂದದಿಂದ ಶಿವಕಥೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.