ನಾಳೆ ವಿದ್ಯುತ್ ನಿಲುಗಡೆ
ನಂಜನಗೂಡು: ಟಿ.ನರಸೀಪುರ ವಿದ್ಯುತ್ ವಿತರಣಾ ಕೇಂದ್ರ ಟೌನ್- 2 ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಫೆ.17 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ತ್ರಿವೇಣಿನಗರ, ಪಟ್ಟಣದ ಕುಡಿಯುವ ನೀರಿನ ಸ್ಥಾವರ, ವಿವೇಕಾನಂದ ನಗರ, ಬೈರಾಪುರ, ಕಿರಗಸೂರು, ಗರ್ಗೇಶ್ವರಿ, ಎಳವರಹುಂಡಿ, ಕುರಿಸಿದ್ದನಹುಂಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಸಹಕಾರ ಸಂಘಕ್ಕೆ ಆಯ್ಕೆ
ಹುಣಸೂರು: ತಾಲೂಕಿನ ರಾಮೇನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜ್, ಉಪಾಧ್ಯಕ್ಷರಾಗಿ ಕೆ.ತಿಮ್ಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಗೋವಿಂದೇಗೌಡ, ಸುಜೇಂದ್ರ, ವೆಂಕಟೇಶ್, ಎಚ್.ಎ. ರಾಮೇಗೌಡ, ಚಿಕ್ಕರಾಮೇಗೌಡ, ಸವಿತಾ, ಕೆ.ಸಾವಿತ್ರಮ್ಮ, ಚಂದ್ರು, ಚಂದ್ರಾಚಾರಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಂ. ನಾಗರಾಜು ತಿಳಿಸಿದ್ದಾರೆ.
ಮಠಾಧ್ಯಕ್ಷರಾಗಿ ದರ್ಶನ್ ಆಯ್ಕೆ
ಎಚ್.ಡಿ. ಕೋಟೆ: ತಾಲೂಕಿನ ಮಾದಾಪುರದ ಶ್ರೀ ಚಂದ್ರಮೌಳೇಶ್ವರ ಮಠಕ್ಕೆ ಉತ್ತರಾಧಿಕಾರಿಯಾಗಿ ಚಿ. ದರ್ಶನ್ ಎಂ.ಕುಮಾರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶ್ರೀ ಚಂದ್ರಮೌಳೇಶ್ವರ ಮಠ ಮತ್ತು ಸುತ್ತೂರು ಮಠದಲ್ಲಿ ನಡೆದ ಸಭೆಗಳಲ್ಲಿ ಸರ್ವಸಮ್ಮತಿಯಿಂದ ಆಯ್ಕೆ ಮಾಡಲಾಗಿದೆ. ಲಿಂಗೈಕ್ಯರಾದ ಶ್ರೀ ಚಂದ್ರಮೌಳೇಶ್ವರ ಸ್ವಾಮಿಗಳವರ ಸ್ಥಾನಕ್ಕೆ ಇವರ ಆಯ್ಕೆಯಾಗಿದೆ. ಪಟ್ಟಾಧಿಕಾರ ಮಹೋತ್ಸವವು ಫೆ.24 ರಂದು ನಡೆಯಲಿದೆ.
18 ರಂದು ಆದಿಶ್ರೀ ಪುರಪ್ರವೇಶ
ಎಚ್.ಡಿ. ಕೋಟೆ: ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಫೆ.18 ರಂದು ಪುರಪ್ರವೇಶಿಸಲಿದ್ದು, ಹುಣಸೂರು- ಬೇಗೂರು ರಸ್ತೆಯಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನಕ್ಕೆ ಕಲಾ ತಂಡಗಳೊಂದಿಗೆ ಮೆರವಣಿಗೆ ಮುಖಾಂತರ ಆಗಮಿಸುವರು. ನಂತರ ಕಾಲೇಜು ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪುರಪ್ರವೇಶ ಆಚರಣಾ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಟ್ರಸ್ಟ್ ಹೆಸರಿನಲ್ಲಿ ವಂಚನೆ: ಆರೋಪ
ನಂಜನಗೂಡು: ತಾಲೂಕಿನ ಚಿಕ್ಕಯ್ಯನ ಛತ್ರ ಹೋಬಳಿಯ ಬಿದರಗೂಡು ಗ್ರಾಮದಲ್ಲಿರುವ ಕೋಟಿಗೊಬ್ಬ ಶರಣ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ಹೆಸರಿನಲ್ಲಿ ಕೆಲವರು ವಂಚಿಸುತ್ತಿದ್ದು, ಮಾನ್ಯತೆ ಪಡೆಯದೆ ಇರುವ ಬೋರ್ಡುಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ಟ್ರಸ್ಟಿನ ಅಧ್ಯಕ್ಷರು ಆರೋಪಿಸಿದ್ದಾರೆ. ಕೆಲವು ಅಪರಿಚಿತರು ಮಾನ್ಯತೆ ಪಡೆಯದ ಬೋರ್ಡ್ ಉಪಯೋಗಿಸಿ ಭಕ್ತರಿಂದ ಹಣ ಲಪಟಾಯಿಸುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಹೀಗಾಗಿ ಪ್ರಕರಣ ಇತ್ಯರ್ಥವಾಗುವವರೆಗೆ ದೇವಸ್ಥಾನದ ಟ್ರಸ್ಟಿಗಳನ್ನು ಬಿಟ್ಟು ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ಅವರು ಕೋರಿದ್ದಾರೆ.
ಬಸವ ಭವನದ ಭೂಮಿಪೂಜೆ ನಾಳೆ
ಕೆ.ಆರ್. ನಗರ: ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ನಿರ್ಮಾಣ ಮಾಡುತ್ತಿರುವ ಬಸವ ಭವನದ ಭೂಮಿ ಪೂಜಾ ಕಾರ್ಯಕ್ರಮ ಫೆ.17 ರಂದು ನಡೆಯಲಿದೆ ಎಂದು ಮಹಾಸಭಾದ ಅಧ್ಯಕ್ಷ ಚಂದ್ರಶೇಖರ್ ಹೇಳಿದರು. ಅಂದು ಬೆಳಗ್ಗೆ 11.30ಕ್ಕೆ ಪಟ್ಟಣದ ಮೈಸೂರು- ಹಾಸನ ರಸ್ತೆಯಲ್ಲಿರುವ ತೋಪನಮ್ಮನ ದೇವಸ್ಥಾನದ ಸಮೀಪದ ಬಸವ ಭವನದ ನಿವೇಶನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸುವರು. ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಸಾನಿಧ್ಯ ವಹಿಸುವರು.
ಹುಣಸೂರು ಕಸಾಪ ಅಧ್ಯಕ್ಷರಿಂದ ಅಧಿಕಾರ ಸ್ವೀಕಾರ
ಹುಣಸೂರು: ಹುಣಸೂರು ತಾಲೂಕು ಕಸಾಪ ಅಧ್ಯಕ್ಷರಾಗಿ ನಿವೃತ್ತ ಉಪನ್ಯಾಸಕ ಎಂ.ಎಸ್. ಉಮಾಪತಿ ಶನಿವಾರ ಅಧಿಕಾರ ಸ್ವೀಕರಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ನೂತನ ಅಧ್ಯಕ್ಷರಿಗೆ ಕನ್ನಡ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ನಂತರ ಮಾತನಾಡಿ, ಕನ್ನಡ ನಾಡುನುಡಿ ಸಂಸ್ಕೃತಿ ಪ್ರತಿಬಿಂಬಿಸುವ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜಿಲ್ಲಾ ಕಸಾಪ ವತಿಯಿಂದ ನಾಡುನುಡಿಗೆ ಸಂಬಂಧಿಸಿದ 300 ಮಕ್ಕಳ ನಾಟಕವನ್ನು ಜಿಲ್ಲಾದ್ಯಂತ ಮಕ್ಕಳ ಮೂಲಕ ನಾಟಕ ಪ್ರದರ್ಶಿಸಲಾಗುವುದು ಎಂದರು.
ಗಾವಡಗೆರೆಯಲ್ಲಿ ಸಮ್ಮೇಳನ: ಬರುವ ಮಾರ್ಚ್ನಲ್ಲಿ ತಾಲೂಕಿನ ಗಾವಡಗೆರೆ ಗುರುಲಿಂಗ ಜಂಗಮ ಮಠದಲ್ಲಿ ತಾಲೂಕು ಮಟ್ಟದ ಸಮ್ಮೇಳನ ನಡೆಯಲಿದ್ದು, ಎಲ್ಲರ ಸಹಕಾರ ಪಡೆದು ಅದ್ಧೂರಿಯಾಗಿ ಆಚರಿಸಬೇಕು. ಜಿಲ್ಲಾ ಘಟಕದಿಂದ ಎಲ್ಲ ಸಹಕಾರ ನೀಡುವುದಾಗಿ ಪ್ರಕಟಿಸಿದರು. ನೂತನ ಅಧ್ಯಕ್ಷ ಎಂ.ಎಸ್. ಉಮಾಪತಿ, ತಮ್ಮ ಅವಧಿಯಲ್ಲಿ ಹಲವಾರು ಯೋಜನೆ ರೂಪಿಸಿಕೊಂಡಿದ್ದು, ಎಲ್ಲರ ಸಹಕಾರದೊಂದಿಗೆ ಮುಂದೆ ಗಾವಡಗೆರೆಯಲ್ಲಿ ನಡೆಯುವ ತಾಲೂಕು ಸಮ್ಮೇಳನಕ್ಕೆ ಗಾವಡಗೆರೆ ನಟರಾಜ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.ನಿಕಟ ಪೂರ್ವ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕಾರ್ಯದರ್ಶಿ ಡಾ.ವೈ.ಡಿ. ರಾಜಣ್ಣ, ಕಾರ್ಯದಶಿ ಕೆ.ಎಸ್. ಶಿವರಾಂ, ಕೋಶಾಧ್ಯಕ್ಷ ರಾಜಶೇಖರ ಕದಂಬ, ಮಂಜುನಾಥ್ ಇದ್ದರು.
ಠಾಣೆಗಳಲ್ಲಿ ಸಾರ್ವಜನಿಕರ ಸಭೆ
ಮೈಸೂರು: ಮೈಸೂರು ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಫೆ.16ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಯಲಿದೆ. ಇನ್ಸ್ಪೆಕ್ಟರ್, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಭೆಯಲ್ಲಿ ಹಾಜರಿದ್ದು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಪಂದಿಸಿ ಪರಿಹಾರ ನೀಡಲಿದ್ದಾರೆ. ಸಾರ್ವಜನಿಕರಿಗೆ ಪೊಲೀಸರ ಸಹಾಯ, ನೆರವು ಬೇಕಾಗಿದ್ದಲ್ಲಿ ತಮ್ಮ ವಾಸ ವಿಳಾಸದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗಳಲ್ಲಿ ಅಹವಾಲುಗಳನ್ನು ನೀಡಿ, ಅಭಿಪ್ರಾಯ ಮಾಹಿತಿಗಳನ್ನು ಕಾನೂನಿನ ಅಡಿಯಲ್ಲಿ ಸಹಕಾರಿಯಾಗುವಂತೆ ವಿಷಯಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳಬಹುದು. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ನಾಳೆ ಕೃತಿಗಳ ಬಿಡುಗಡೆ
ಕದಂಬ ರಂಗ ವೇದಿಕೆಯಿಂದ ಫೆ.17ರ ಸಂಜೆ 5.30ಕ್ಕೆ ರಂಗಾಯಣದ ಶ್ರೀರಂಗದಲ್ಲಿ ಬಿ.ಎಸ್. ಕೇಶವರಾವ್ ರಚಿಸಿರುವ ರಾಯರ ರಾಯಶ್ರೀ ಕೃಷ್ಣದೇವರಾಯ (ನಾಟಕ) ಹಾಗೂ ಸೂತ್ರಧಾರ ಬಿ.ವಿ. ಕಾರಂತ (ಜೀವನಗಾಥಾ) ಕೃತಿಗಳನ್ನು ಕಲಾವಿದೆ ರಾಮೇಶ್ವರಿ ವರ್ಮ ಬಿಡುಗಡೆಗೊಳಿಸುವರು. ಪ್ರೊ.ಎಚ್.ಎಸ್. ಉಮೇಶ್, ರಾಜಶೇಖರ ಕದಂಬ, ಡಾ.ಎಚ್.ಕೆ. ರಾಮನಾಥ್ ಭಾಗವಹಿಸುವರು.
ಸಂಸ್ಥೆಯ ಉದ್ಘಾಟನೆ
ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಸಂಸ್ಥೆಯ ಉದ್ಘಾಟನಾ ಸಮಾರಂಭವನ್ನು ಫೆ.17ರ ಬೆಳಗ್ಗೆ 11ಕ್ಕೆ ಚಿಕ್ಕಗಡಿಯಾರ ವೃತ್ತದಲ್ಲಿ ಏರ್ಪಡಿಸಿದ್ದು, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಉದ್ಘಾಟಿಸುವರು. ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಅಧ್ಯಕ್ಷತೆ ವಹಿಸುವರು.
ಜರ್ಮನ್ ಭಾಷೆ ತರಬೇತಿ
ಜೆಎಸ್ಎಸ್ ಶಿಕ್ಷಣ ಸಮುಚ್ಚಯದಲ್ಲಿರುವ ಎಸ್ಜೆಸಿಇ- ಸ್ಟೆಪ್ನಲ್ಲಿ ಜರ್ಮನ್ ಭಾಷಾ ಬಗ್ಗೆ ಫೆ.17 ರಿಂದ ತರಬೇತಿ ನೀಡಲಾಗುತ್ತದೆ. ಮೊ. 88611 02368 ಸಂಪರ್ಕಿಸಬಹುದು.
ಮುದ್ರಾಯೋಗ ಶಿಬಿರ
ಕುವೆಂಪುನಗರದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಟ್ರಸ್ಟ್ನಲ್ಲಿ ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಯೋಗಾಸನ, ಪ್ರಾಣಾಯಾಮ, ಮುದ್ರಾಯೋಗ ಶಿಬಿರ ನಡೆಸಲಿದ್ದು, ಮೊ. 94496 69699 ಸಂಪರ್ಕಿಸಬಹುದು.
ನೂತನ ಶಾಖೆ ಉದ್ಘಾಟನೆ
ಕೆನರಾ ಬ್ಯಾಂಕಿನ ನೂತನ ಶಾಖೆ ಉದ್ಘಾಟನಾ ಸಮಾರಂಭವನ್ನು ಫೆ.17ರ ಬೆಳಗ್ಗೆ 11.30ಕ್ಕೆ ಎನ್.ಆರ್. ಮೊಹಲ್ಲಾದಲ್ಲಿ ಏರ್ಪಡಿಸಿದ್ದು, ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ಕುಮಾರ್ ಗುಪ್ತಾ ಉದ್ಘಾಟಿಸುವರು. ಡಾ.ಎಸ್.ಟಿ. ರಾಮಚಂದ್ರ ಭಾಗವಹಿಸುವರು.
ಜಾಗೃತಿ ಶಿಬಿರ
ಗಣಿ ಮತ್ತು ಭೂವಿಜ್ಞಾನ ಇಲಾಖೆ, ಹಿರಿಯ ಭೂವಿಜ್ಞಾನಿಗಳ ಕಚೇರಿಯಿಂದ ಫೆ.17ರ ಬೆಳಗ್ಗೆ 10ಕ್ಕೆ ಜಿಪಂ ಸಭಾಂಗಣದಲ್ಲಿ ಅಂತರ್ಜಲ ಜನ ಜಾಗೃತಿ ಶಿಬಿರ ಏರ್ಪಡಿಸಿದ್ದು, ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು ಉದ್ಘಾಟಿಸುವರು. ಡಿಸಿ ಸಿ.ಶಿಖಾ ಅಧ್ಯಕ್ಷತೆ ವಹಿಸುವರು.
ಸಿಇಟಿ ತರಬೇತಿ
ಜಯಲಕ್ಷ್ಮೀಪುರಂನಲ್ಲಿರುವ ಮೈಸೂರ್ ಸ್ಕೂಲ್ ಆಫ್ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಎಸ್ಎಸ್ಸಿ, ಆರ್ಆರ್ಬಿ, ಐಬಿಪಿಎಸ್, ಬ್ಯಾಂಕ್ ಪಿಒ, ಕ್ಲರಿಕಲ್, ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ನೀಡಲಿದ್ದು, ಆಸಕ್ತರು ಫೆ.17 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ.81231 83649 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

