ವಾಹನ ಚಾಲಕರ ಮುಷ್ಕರ ಅಂತ್ಯ
ಕ.ಪ್ರ. ವಾರ್ತೆ, ಮೈಸೂರು, ಜು.14
ಖಾಸಗಿ ಶಾಲಾ ವಾಹನ ಮತ್ತು ಆಟೋ ಮಾಲೀಕರು ಹಾಗೂ ಚಾಲಕರ ಸಮಿತಿಯವರು ಕಳೆದ ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಮುಷ್ಕರ ಸೋಮವಾರ ಅಂತ್ಯಗೊಂಡಿದ್ದು, ಮಂಗಳವಾರದಿಂದ ಎಂದಿನಂತೆ ಶಾಲಾ ವಾಹನ ಮತ್ತು ಆಟೋಗಳು ಸಂಚಾರ ಆರಂಭಿಸಲಿವೆ.
ಆಟೋದಲ್ಲಿ 8 ಹಾಗೂ ವ್ಯಾನ್‌ಗಳಲ್ಲಿ 12 ಮಕ್ಕಳಿಗೆ ಸೇವೆ ಒದಗಿಸಲು ಮಾರ್ಗಸೂಚಿಯನ್ನು ಸಡಿಲಿಸಲು ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು. ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಕೈಗೊಳ್ಳಲಾಯಿತು.
ಪ್ರಭಾರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಮಾತನಾಡಿ, ಆಟೋಗಳಲ್ಲಿ 6ರ ಬದಲು 8, ವ್ಯಾನ್‌ಗಳಲ್ಲಿ 10ರ ಬದಲು 12 ಮಕ್ಕಳನ್ನು ಸಾಗಿಸಲು ಮಾರ್ಗಸೂಚಿ ಸಡಿಲಗೊಳಿಸಲಾಗಿದ್ದು, ನಾಳೆಯಿಂದಲೇ ಇದು ಜಾರಿಗೆ ಬರಲಿದೆ. ಹೆಚ್ಚುವರಿ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು 1 ತಿಂಗಳು ಕಾಲಾವಕಾಶ ನೀಡಲಾಗುವುದು. ಆಗಸ್ಟ್‌ನಿಂದ ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ರಾಜ್ಯ ಸರ್ಕಾರ ಹೊರಡಿಸಿರುವ ಎಲ್ಲ 18 ಮಾರ್ಗಸೂಚಿಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲಾಗುವುದು ಎಂದರು. ಇದಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಶಾಲಾ ವಾಹನ ಮತ್ತು ಆಟೋ ಮಾಲೀಕರು ಮತ್ತು ಚಾಲಕರು ಸಹಮತ ವ್ಯಕ್ತಪಡಿಸಿದರು.
ಜೀವನ ನಿರ್ವಹಣೆ ಕಷ್ಟ: ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ಮಾತನಾಡಿ, ಇಂಧನ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ಮಕ್ಕಳ ಪೋಷಕರಿಂದ ಇಡೀ ವರ್ಷ ಒಂದೇ ರೀತಿಯ ಶುಲ್ಕ ಪಡೆಯುತ್ತೇವೆ. ಇದರಿಂದ ಸರ್ಕಾರಿ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟವಾಗುತ್ತದೆ. ಮಾರುತಿ ವ್ಯಾನ್‌ಗಳಲ್ಲಿ 15 ಮಕ್ಕಳನ್ನು ಸಾಗಿಸಲು ಅವಕಾಶ ನೀಡಬೇಕು ಎಂದು ಕೋರಿದರು.
ಖಾಸಗಿ ಶಾಲಾ ವಾಹನ ಮತ್ತು ಆಟೋ ಮಾಲೀಕರ ಮತ್ತು ಚಾಲಕರು ಸಮಿತಿ ಸಂಚಾಲಕ ಕೆ.ಎಚ್. ಅನಂತಕುಮಾರ್ ಮಾತನಾಡಿ, ನೂರಾರು ಕುಟುಂಬಗಳು ಶಾಲಾ ವಾಹನ ನಂಬಿ ಜೀವನ ನಡೆಸುತ್ತಿವೆ. ಇಂತಹ ನಿಯಮಗಳಿಂದ ಕುಟುಂಬ ನಿರ್ವಹಣೆ ಕಷ್ಟವಾಗಲಿದೆ. ಆಟೋ ಸೇವೆಗೆ ಮಾಸಿಕ 300- 400 ಶುಲ್ಕ ಪಡೆಯುತ್ತೇವೆ. 6 ಮಕ್ಕಳಿಗೆ ಮಿತಿ ಹೇರಿದರೆ 2,400 ಮಾತ್ರ ಸಿಗುತ್ತದೆ. ಮಾರುತಿ ವ್ಯಾನ್‌ಗೆ 10 ಮಕ್ಕಳಿಗೆ ಗರಿಷ್ಠ 5,000 ಆದಾಯ ಬರುತ್ತದೆ. ಡೀಸೆಲ್, ಪೆಟ್ರೋಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ನಡುವೆ ಈ ಆದಾಯದಲ್ಲಿ ಜೀವನ ನಿರ್ವಹಿಸುವುದು ಕಷ್ಟ ಎಂದು ಹೇಳಿದರು.
ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಮಾತನಾಡಿ, ಶಾಲಾ ಮಕ್ಕಳ ಸುರಕ್ಷತೆ ಕುರಿತು ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಟಿಸಿದೆ. ಇದಕ್ಕೆ ಇನ್ನೂ 4 ಷರತ್ತು ಸೇರಿ ರಾಜ್ಯ ಸರ್ಕಾರವು 18 ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದು ಬೆಂಗಳೂರಿನಲ್ಲಿ ಜಾರಿಯಾಗಿದೆ. ಮೈಸೂರಿನಲ್ಲಿ ಇದನ್ನು ಎಲ್ಲ ಶಾಲೆಗಳು ಒಪ್ಪಿ, ನಿಯಮಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಖಾಸಗಿ ವಾಹನ ಮತ್ತು ಆಟೋ ಚಾಲಕರು ನಿಯಮ ಪಾಲಿಸುತ್ತಿಲ್ಲ ಎಂದರು.
ಶೇ.50 ತೆರಿಗೆ ವಿನಾಯಿತಿ: ಪಶ್ಚಿಮ ವಲಯ ಆರ್‌ಟಿಒ ಮಂಚಯ್ಯ ಮಾತನಾಡಿ, ಶಾಲಾ ಮಕ್ಕಳಿಗೆ ಸೇವೆ ಒದಗಿಸುವ ವಾಹನಗಳ ಆರ್ಥಿಕ ಹೊರೆ ತಗ್ಗಿಸುವ ಸಲುವಾಗಿ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಶಾಲಾ ಉದ್ದೇಶಕ್ಕೆ ಎಂದು ನೋಂದಣಿ ಮಾಡಿಸಿದ ವಾಹನಕ್ಕೆ ಶೇ.50 ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಶಾಲಾ ಮಕ್ಕಳಿಗೆ ಸೇವೆ ಒದಗಿಸುವ ಎಲ್ಲ ಖಾಸಗಿ ವಾಹನಗಳಿಗೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶವಿದೆ. ಆದರೆ, ವಾಹನವನ್ನು ಶಾಲಾ ಮಕ್ಕಳ ಸಂಚಾರಕ್ಕೆ ಮಾತ್ರ ಬಳಸಬೇಕಾಗುತ್ತದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಆರ್‌ಟಿಒಗಳಾದ ಆರ್.ಸೋಮಲತಾ, ಮಂಚಯ್ಯ, ನಗರ ಸಂಚಾರ ಉಪ ವಿಭಾಗದ ಎಸಿಪಿ ಪ್ರಭಾಕರ ಬಿ. ಬಾರ್ಕಿ, ಶಾಲಾ ವಾಹನ ಮುಖಂಡರಾದ ಕೆ.ಎಸ್. ಸುರೇಶ್, ಬೋಗಾದಿ ಸ್ವಾಮಿ, ನಾಗರಾಜ್, ರವಿಶಂಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

