ಮೈಸೂರು

ಯುವಜನರಿಗೆ ಪರಂಪರೆಯ ಅರಿವಿಲ್ಲ

Published On :

ಮೈಸೂರು: ನಮ್ಮ ನಾಡಿಗೆ ವೀರ ವನಿತೆಯರ ಪರಂಪರೆ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ ಹೇಳಿದರು.
ವೆಂಕಟಗಿರಿ ಪ್ರಕಾಶನ ಹಾಗೂ ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ಅಗ್ರಹಾರ ಶ್ರೀಕೃಷ್ಣ ಲಲಿತ ಕಲಾಮಂದಿರ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ರಾಜ್ಯಕ್ಕೆ ವೀರ ವನಿತೆಯರ ಪರಂಪರೆ ಇದೆ. ಪುರುಷರಿಗೆ ಸರಿ ಸಮಾನವಾಗಿ ಮಹಿಳೆ ಯಶಸ್ಸು ಸಾಧಿಸುತ್ತಿರುವುದು ಸಂತೋಷದ ವಿಷಯ. ಯುವಜನರಿಗೆ ಪರಂಪರೆಯ ಅರಿವಿಲ್ಲ ಹಾಗೂ ಮಾರ್ಗದರ್ಶನವೂ ಇಲ್ಲ. ಅವರನ್ನು ಸರಿದಾರಿಗೆ ತರುವ ಕೆಲಸವಾಗಬೇಕಿದೆ ಎಂದರು.
ಕಲೆ, ಸಾಹಿತ್ಯ ಹಾಗೂ ಸಂಗೀತ ಕಣ್ಣಿಗೆ ಕಾಣದ ಅಗೋಚರ ಶಕ್ತಿಗಳು. ಸಾಹಿತ್ಯವನ್ನು ಓದಿದಾಗ, ಸಂಗೀತವನ್ನು ಕೇಳಿದಾಗ, ಕಲೆಯನ್ನು ಬಿಡಿಸಿದಾಗ ಮಾತ್ರ ನಮ್ಮ ಕಣ್ಣಿಗೆ ಗೋಚರವಾಗುತ್ತದೆ. ಅದಕ್ಕೆ ಮೂರ್ತ ಸ್ವರೂಪವನ್ನು ನೀಡುವವರು ಕಲಾವಿದರು. ಯಾವ ಕಲೆ ನಮಗೆ ಸಂತೋಷ ಉಂಟು ಮಾಡುವುದೋ ಅದೆಲ್ಲವೂ ಸಾಹಿತ್ಯವೇ. ಸಾಹಿತ್ಯ ಎಂದರೆ ಸ ಹಿತ. ನಮ್ಮ ಸಂತೋಷವಾಗಿದೆ. ಹೀಗಾಗಿ ಮನಕ್ಕೆ ಒಪ್ಪುವ ಕಲೆ ಸಾಹಿತ್ಯ ಎಂದರು.
ದೊಡ್ಡ ಪರಂಪರೆ ಇದೆ: ಕಲೆಗಳ ತವರು ಮೈಸೂರಿಗೆ ದೊಡ್ಡ ಪರಂಪರೆಯೇ ಇದೆ. ಅರಮನೆ, ಗುರುಮನೆ, ರೇಷ್ಮೆ, ಶ್ರೀಗಂಧ ಹೀಗೆ ಎಲ್ಲಕ್ಕೂ ಮೈಸೂರು ಹೆಸರು ವಾಸಿ. ಅಂತಹ ನಾಡಿನಲ್ಲಿ ಹೊಸ ಪ್ರತಿಭೆಗಳು ಮೊಳಕೆಯೊಡೆಯುತ್ತಿವೆ. ಅವರಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶ್ಯಾಮಲಾ ಮೂರ್ತಿ, ಮಾತನಾಡುವ ಗೊಂಬೆ ಕಲಾವಿದೆ ಸುಮಾ ರಾಜ್‌ಕುಮಾರ್ ಹಾಗೂ ಮಹಿಳಾ ಅಭಿವೃದ್ಧಿ ಪರ ಕಾರ್ಯಕರ್ತೆ ವಿ. ಭುವನೇಶ್ವರಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶ್ರೀಕೃಷ್ಣ ಲಲಿತಕಲಾಮಂದಿರ ಪ್ರೌಢಶಾಲೆ ಪಲ್ಲವಿ, ಅಕ್ಕನ ಬಳಗ ಪ್ರೌಢಶಾಲೆಯ ನಿಮಿತಾ ಹಾಗೂ ವಿದ್ಯಾದಾಯಿನಿ ಪ್ರೌಢಶಾಲೆಯ ಪೂಜಾಕೃಷ್ಣ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಂಟೇಸ್ವಾಮಿ ಪ್ರತಿಷ್ಠಾನದ ಆಡಳಿತಾಧಿಕಾರಿ ಪ್ರಭುದೇವರಾಜೇ ಅರಸ್ ಅಧ್ಯಕ್ಷತೆ ವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಸಂಸ್ಥಾಪಕ ಎ.ಸಂಗಪ್ಪ, ಪತ್ರಕರ್ತ ಹೊಮ್ಮ ಮಂಜುನಾಥ್, ಸಂಚಾಲಕರಾದ ಪ.ನಾ. ಲಕ್ಷ್ಮಣ, ಹ.ರಾ. ಭದ್ರೇಶ್‌ಕುಮಾರ್, ಎಚ್.ವಿ. ಮುರಳೀಧರ, ಬಿ.ವಿ. ವಿಜಯ್‌ಕುಮಾರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.