ಅಂತಾರಾಜ್ಯ ವಧು- ವರಾನ್ವೇಷಣೆ
ಮೈಸೂರು: ಸರಳ ಮದುವೆಯಿಂದ ಉತ್ತಮ ಸಂಸಾರ ಎಂಬ ಧ್ಯೇಯದೊಂದಿಗೆ ಆರಂಭವಾಗಿರುವ ಸಪ್ತಪದಿ ವಿವಾಹ ವೇದಿಕೆಯು ಇದೇ ಪ್ರಥಮ ಬಾರಿಗೆ ಮೈಸೂರಿನಲ್ಲಿ ಅಂತಾರಾಜ್ಯ ವಧು- ವರಾನ್ವೇಷಣೆ ಉಚಿತ ಸಮಾವೇಶ ಆಯೋಜಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದೆ.
ಮುಂದಿನ ತಿಂಗಳಿಂದ ಆಯಾ ಜಾತಿಗೆ ಸೇರಿದ ವಧು- ವರರ ಸರಳ ವಿವಾಹ ಮಹೋತ್ಸವ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ವಧು-ವರರ ಬಗೆಗಿನ ಮಾಹಿತಿ ಕಲೆ ಹಾಕಲು ಮತ್ತು ಹೆಸರು ನೋಂದಾಯಿಸಿಕೊಳ್ಳಲು ಭಾನುವಾರ ನಗರದ ಜಗನ್ಮೋಹನ ಅರಮನೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಹೊರ ರಾಜ್ಯಗಳಾದ ತಮಿಳುನಾಡು, ಸೀಮಾಂಧ್ರ, ತೆಲಂಗಾಣದಿಂದಲೂ ಸುಮಾರು 500ಕ್ಕೂ ಹೆಚ್ಚು ವಧು- ವರರು ಆಗಮಿಸಿದ್ದು ವಿಶೇಷವಾಗಿತ್ತು. ಹಿಂದೂ ಸಮಾಜದ ಸಮಸ್ತ ಬಾಂಧವರ ವಿವಾಹ ಕೈಂಕರ್ಯ ದೃಷ್ಟಿಯನ್ನಿಟ್ಟುಕೊಂಡು ಆರಂಭಿಸಿದ ಸಮಾವೇಶಕ್ಕೆ ಎಲ್ಲಾ ಸಮುದಾಯದ ವಧು- ವರರು, ವಿಧವಾ ವಿಚ್ಚೇದಿತರು ಸಮಾವೇಶದಲ್ಲಿ ಪಾಲ್ಗೊಂಡು ನೋಂದಣಿ ಮಾಡಿಸಿಕೊಂಡರು. ಸಪ್ತಪದಿ ವಿವಾಹ ವೇದಿಕೆಯಿಂದ ಸ್ವಾಸ್ಥ್ಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಸುಖಿ ಕುಟುಂಬದ ಆಶಯದಲ್ಲಿ ಇಂತಹ ಸಮಾವೇಶಗಳನ್ನು ಮುಂದೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಡೆಸಲು ಇದೇ ವೇಳೆ ಪ್ರಕಟಿಸಲಾಯಿತು.
ಸಮಾವೇಶದಿಂದ ಪ್ರಯೋಜನ: ಸಮಾವೇಶ ಉದ್ಘಾಟಿಸಿದ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ, ಪ್ರತಿಯೊಂದು ಕುಟುಂಬದವರು ವಧು- ವರರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಲು ಇಂತಹ ಸಮಾವೇಶ ಪ್ರಯೋಜನಕಾರಿಯಾಗಿದೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸಂಸಾರಕ್ಕೆ ಪ್ರವೇಶಿಸಲು ಪ್ರತಿಯೊಬ್ಬರು ಮಾಹಿತಿ ಪಡೆದುಕೊಳ್ಳಬಹುದು ಎಂದರು. ಕೇಂದ್ರ ಸಹಕಾರ ಯೂನಿಯನ್ ರಾಜ್ಯ ಉಪಾಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸಪ್ತ ಸಮಸ್ಯೆಗಳನ್ನು ಸಪ್ತಪದಿ ವಿವಾಹ ವೇದಿಕೆಯು ಬಗೆಹರಿಸಲಿದೆ. ಹೊಂದಾಣಿಕೆ ಮನೋಭಾವದಿಂದ ಪೋಷಕರು ತಮ್ಮ ಮಕ್ಕಳ ಜೀವನ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡು ಸುಖೀ ಜೀವನ ನಡೆಸುವಂತೆ ಸಲಹೆ ನೀಡಿದರು. ವಂಗೀಪುರಂ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ರಾಜ್ಯ ಮುಕ್ತ ವಿವಿ ಪ್ರಾಧ್ಯಾಪಕ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್, ಸಮಾಜ ಸೇವಕ ಕೆ.ರಘುರಾಂ, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಮೈಸೂರು ಮಹಿಳಾ ವೇದಿಕೆ ಅಧ್ಯಕ್ಷ ಸುಮನ ರಘುನಂದನ್, ಪ್ರತಿಭಾ ಗುರುರಾಜ್, ಎಸ್. ಗಿರಿಜಾ ಶಾಂತರಾಜು, ಎನ್. ಕೃಷ್ಣ, ಮಂಜುನಾಥ್, ಡಾ.ವಸಂತಕುಮಾರ್, ಪೂರಿಗಾಲಿ ಮರಡೇಶಮೂರ್ತಿ, ಶಿವಪ್ರಸಾದ್, ಪ್ರಶಾಂತ್ ತಾತಾಚಾರ್, ಎಸ್. ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

