ಮಠ ಧರ್ಮ ಹುನ್ನಾರ ಅರಿಯಿರಿ
ಕ.ಪ್ರ. ವಾರ್ತೆ, ಮೈಸೂರು, ಜೂ.15
ಇಂದಿನ ಯುವ ಜನತೆ ಮಠಧರ್ಮ ಹಾಗೂ ತಂತ್ರಜ್ಞಾನದ ಹುನ್ನಾರ ಅರಿಯಬೇಕು ಎಂದು ಚಿಂತಕ ಪ್ರೊ.ಜಿ.ಕೆ ಗೋವಿಂದರಾವ್ ಹೇಳಿದರು.
ಸಾಮಾಜಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ಲಿಂಗದೇವರು ಹಳೆಮನೆ ಗೆಳೆಯರ ಬಳಗ ಸಂಯುಕ್ತಾಶ್ರಯದಲ್ಲಿ ರಂಗಾಯಣದ ಶ್ರೀರಂಗದಲ್ಲಿ ಭಾನುವಾರ ಏರ್ಪಡಿಸಿದ್ದ ಲಿಂಗದೇವರು ಹಳೆಮನೆ ಒಂದು ನೆನಪು- ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.
ಮಠಧರ್ಮ ವಿಧಾನಸೌಧದ ರಾಜಕೀಯದಲ್ಲಿ ಸೇರಿಕೊಂಡಿದೆ. ರಾಜ್ಯದ ಶೇ.95 ಮಠಗಳು ಇದೇ ದಾರಿಯಲ್ಲಿ ಸಾಗಿದ್ದು, ಸಿದ್ಧಗಂಗಾ ಮಠದಂಥ ಶೇ.5 ರಷ್ಟು ಒಳ್ಳೆಯ ಕೆಲಸ ಮಾಡುವ ಮಠಗಳಿವೆ. ಜಾತಕ, ಭವಿಷ್ಯ ಹಾಗೂ ವಾಸ್ತುಶಾಸ್ತ್ರ ಹೇಳುವವರು ಹೆಚ್ಚಾಗುತ್ತಿದ್ದಾರೆ. ಇವರು ಮನುವಿನ ಪ್ರತಿರೂಪ ಹಾಗೂ ಅಂಥವರು ಪ್ರಜಾಪ್ರಭುತ್ವದ ವಿರೋಧಿಗಳು. ಇಂಥವರ ವಿರುದ್ಧ ಹೋರಾಟ ನಡೆಸಬೇಕು ಎಂದರು.
ತಂತ್ರಜ್ಞಾನ ವಿಜ್ಞಾನವಲ್ಲ ಎಂಬುದನ್ನು ಅರಿಯಬೇಕು. ಇಂದು ಮೊಬೈಲ್, ಕಂಪ್ಯೂಟರ್ ಮುಂತಾದ ತಂತ್ರಜ್ಞಾನ ಬಳಕೆ ಹೆಚ್ಚಾಗಿದ್ದು, ಇದು ದುರುಪಯೋಗವಾದರೆ ಮಾನವನ ನಾಶ ಖಚಿತ. ಮೊಬೈಲ್ನಲ್ಲಿಯೇ ತಲ್ಲೀನರಾಗಿ, ಕೇವಲ ಸುಖಮಯ ಬದುಕಿಗೆ ಜೋತು ಬಿದ್ದಿರುವ ಯುವಜನಾಂಗ ತಂತ್ರಜ್ಞಾನ ಹಾಗೂ ಮಠಧರ್ಮಗಳ ಹುನ್ನಾರಗಳ ಬಗ್ಗೆ ಎಚ್ಚರ ವಹಿಸಿ, ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆಶಿಸಿದರು.
ಸರ್ವಾಧಿಕಾರಿ ಆತಂಕ: ತಲ್ಲಣಗಳು ಎಲ್ಲ ಕಾಲಕ್ಕೂ ಇರುವುದು ಸಹಜ. ಆದರೆ ಸರ್ವಾಧಿಕಾರಿ ಧೋರಣೆ ಎಲ್ಲಿ ಇರುತ್ತದೋ ಅಲ್ಲಿ ತಲ್ಲಣಗಳು ಕಾಣದು. ಸರ್ವಾಧಿಕಾರಿಯಾಗಿದ್ದ ರಷ್ಯಾದ ಹಿಟ್ಲರ್ ಹಾಗೂ ಜರ್ಮನಿಯ ಸ್ಟ್ಯಾಲಿನ್ ಅವರ ಆಡಳಿತ ವೈಖರಿಯೇ ಇದಕ್ಕೆ ಉದಾಹರಣೆ. ಅಂತೆಯೇ ಈಗ ಭಾರತದಲ್ಲಿ ಮೋದಿ ಸರ್ವಾಧಿಕಾರಿಯಾಗುವ ಆತಂಕವಿದೆ. ಅವರೊಬ್ಬ ಅಪಾಯಕಾರಿ ಮನುಷ್ಯ ಎಂದರು.
ಕಲೆ ಹಾಗೂ ಸಾಹಿತ್ಯಕ್ಕೆ ಸೃಜನಶೀಲತೆ ಇರಬೇಕು ಎನ್ನುವಂತೆ ಸಾಮಾಜಿಕ ಬದ್ಧತೆಯೂ ಅವಶ್ಯಕ. ನಾನು ಈ ದೇಶದ ಭಾಗವಾಗಿದ್ದೇನೆ ಎಂದು ಭಾವಿಸಬೇಕು. ಈ ದಿಸೆಯಲ್ಲಿ ಕುವೆಂಪು ಅವರ ಸಾಹಿತ್ಯದಲ್ಲಿ ವೈಚಾರಿಕತೆ ಹಾಗೂ ರಾಜಕೀಯ ಚಿಂತನೆ ಕಾಣಬಹುದು. ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಶಿವರಾಂ ಕಾರಂತ ಇವರೆಲ್ಲ ಅದ್ಭುತ ಸಾಹಿತಿಗಳು ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ರಂಗಕರ್ಮಿಗಳಾದ ರಾಜಶೇಖರ ಕದಂಬ, ಬಿ.ಎಂ. ರಾಮಚಂದ್ರ, ನಂದಾ ಹಳೆಮನೆ ಇದ್ದರು.
ವಿಚಾರ ಮಂಡನೆ: ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಹಳೆಮನೆಯವರ ಸಾಹಿತ್ಯದಲ್ಲಿ ಎಡಪಂಥೀಯ ಚಿಂತನೆಗಳ ಸ್ವರೂಪ ಎಂಬ ವಿಷಯ ಕುರಿತು ಚಿಂತಕ ಪ್ರೊ.ಕೆ.ಪಿ ವಾಸುದೇವನ್, ಸಮಕಾಲೀನ ಸಂದರ್ಭಕ್ಕೆ ಹಳೆಮನೆಯವರ ಸ್ಪಂದನೆ ಎಂಬ ವಿಷಯ ಕುರಿತು ಮೈಸೂರು ವಿವಿಯ ಪ್ರಸಾರಾಂಗ ನಿರ್ದೇಶಕ ಪ್ರೊ.ಸಿ. ನಾಗಣ್ಣ ಮಾತನಾಡಿದರು.ರಂಗಭೂಮಿಯ ಹೊಸ ಸಾಧ್ಯತೆಗಳು ಎಂಬ ವಿಷಯ ಕುರಿತು ನಟರಾಜ ಹೊನ್ನವಳ್ಳಿ, ರಂಗಭೂಮಿಯ ಬದಲಾಗುತ್ತಿರುವ ಸ್ವರೂಪಗಳು ಎಂಬ ವಿಷಯ ಕುರಿತು ಹುಲಿಗಪ್ಪ ಕಟ್ಟಿಮನಿ ಹಾಗೂ ಪ್ರಸ್ತುತ ರಾಜಕಾರಣದಲ್ಲಿ ಆಧುನಿಕ ತಂತ್ರಜ್ಞಾನ ತರುವ ತಲ್ಲಣಗಳು ಮತ್ತು ಬದಲಾವಣೆಗಳು ಎಂಬ ವಿಷಯ ಕುರಿತು ರಂಗತಜ್ಞ ಪ್ರಕಾಶ್ ಬೆಳವಾಡಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

