ಯುವರಾಜ ಕಾಲೇಜಿನ ಹೈಡ್ರಾಮಾ
ಮೈಸೂರು: ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಪಾವತಿಸಲು ಸೂಚಿಸಿರುವುದನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಲು ಮುಂದಾಗಿ, ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದು ಬಿಡುಗಡೆಗೊಳಿಸಿರುವ ಘಟನೆ ಯುವರಾಜ ಕಾಲೇಜಿನಲ್ಲಿ ಸೋಮವಾರ ನಡೆದಿದೆ.
ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹೆಚ್ಚುವರಿ ಶುಲ್ಕ ಪಾವತಿಸಲು ಸೂಚಿಸಿರುವುದನ್ನು ಖಂಡಿಸಿ ಎಐಡಿವೈಒ ಮತ್ತು ಎಐಡಿಎಸ್ಒ ಸಂಘಟನೆಗಳ ನೇತೃತ್ವದಲ್ಲಿ ಯುವರಾಜ ಕಾಲೇಜು ವಿದ್ಯಾರ್ಥಿಗಳು ಕಳೆದ 5 ದಿನದಿಂದ ತರಗತಿ ಬಹಿಷ್ಕರಿಸಿ ಪ್ರತಿಭಟಿಸುತ್ತಿದ್ದರು.
ಅದರಂತೆ ಸೋಮವಾರ ಸಹ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಪ್ರತಿಭಟಿಸಲು ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲ ಡಾ.ಎಚ್. ನಂಜೇಗೌಡ ಅವರು, ಸರ್ಕಾರ ಹಾಗೂ ಮೈಸೂರು ವಿವಿ ಕುಲಪತಿ ಆದೇಶದಂತೆ ಹೆಚ್ಚುವರಿ ಶುಲ್ಕ ಜಾರಿಗೊಳಿಸಲಾಗಿದೆ. ಹೀಗಾಗಿ ಪ್ರತಿಭಟನೆ ಹಿಂಪಡೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ಬೇರೆ ಕಾಲೇಜಿನಲ್ಲಿ ಇಲ್ಲದ ಹೆಚ್ಚುವರಿ ಶುಲ್ಕ ಇಲ್ಲಿ ಯಾಕೆ ಪಾವತಿಸಬೇಕು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲಾಗದ ಪ್ರಾಂಶುಪಾಲರು, ಪೊಲೀಸರನ್ನು ಕರೆಸಿ ಕ್ರಮ ಕೈಗೊಳ್ಳಲು ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆಲವು ವಿದ್ಯಾರ್ಥಿ ಮುಖಂಡರನ್ನು ಪಿಸಿಆರ್ ವಾಹನಕ್ಕೆ ಹತ್ತಿಸಿದರು.
ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪಿಸಿಆರ್ ವಾಹನಕ್ಕೆ ಮುತ್ತಿಗೆ ಹಾಕಿ ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ಪೊಲೀಸರು, ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿದರು.
ಪೊಲೀಸರನ್ನು ಕರೆಸಿದ ಪ್ರಾಂಶುಪಾಲರ ಕ್ರಮದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಪ್ರಾಂಶುಪಾಲ ಡಾ.ಎಚ್. ನಂಜೇಗೌಡ ಅವರಿಗೆ ಘೇರಾವ್ ಹಾಕಿದರು. ವಿದ್ಯಾರ್ಥಿಗಳ ಆಕ್ರೋಶಕ್ಕೆ ಮಣಿದ ಪ್ರಾಂಶುಪಾಲರು, ಬೇಡಿಕೆಯನ್ನು ಪರಿಗಣಿಸುವುದಾಗಿ ಹಾಗೂ ಅಂಕಪಟ್ಟಿಗಳನ್ನು ಯಾವುದೇ ಷರತ್ತಿಲ್ಲದೆ ವಿತರಿಸುವುದಾಗಿ ಭರವಸೆ ನೀಡಿದರು.
ಎಐಡಿವೈಒ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮೇಟಿ, ಜಿಲ್ಲಾ ಕಾರ್ಯದರ್ಶಿ ಸುನಿಲ್, ಮುಖಂಡರಾದ ನಾಗೇಶ್, ಸುಮ, ಅವಿನಾಶ್, ಪ್ರಮೋದ್, ದೇವಭರತ್ ಇದ್ದರು.
ಪ್ರಾಂಶುಪಾಲರು ಹೇಳುವುದೇನು?
2013-14ನೇ ಸಾಲಿನ ದಾಖಲಾತಿ ಸಮಯದಲ್ಲಿ ಹಿಂದುಳಿದ ವರ್ಗದ 650 ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಪಡೆದಿರುತ್ತಾರೆ. ಸರ್ಕಾರದ ಆದೇಶದ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವರು 2013ರ ಜ.23ರಿಂದ ನ.11ರವರೆಗೆ ಶುಲ್ಕ ವಿನಾಯಿತಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ. ಅದರಂತೆ 650 ವಿದ್ಯಾರ್ಥಿಗಳ ಪೈಕಿ 444 ಮಂದಿ ಮಾತ್ರ ಆನ್ಲೈನ್ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಅರ್ಹತೆ ಇಲ್ಲದ ಹಿನ್ನೆಲೆಯಲ್ಲಿ ಇಲಾಖೆಯು 211 ಅರ್ಜಿಗಳನ್ನು ತಿರಸ್ಕರಿಸಿ, 233 ಅರ್ಜಿಗಳನ್ನು ಮಾತ್ರ ಪುರಸ್ಕರಿಸಿದೆ. ಈ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯವರು ವಿನಾಯಿತಿ ಹಣ ವನ್ನು 2012-13ನೇ ಸಾಲಿನವರೆಗೂ ಕಾಲೇಜಿನ ಖಾತೆಗೆ ಭರಿಸುತ್ತಿದ್ದರು. 2013-14ನೇ ಸಾಲಿನಿಂದ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದೆ.ಈ ವಿಷಯದ ಬಗ್ಗೆ ಕ್ರಾಫರ್ಡ್ ಭವನದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದಾಗ ಮೈಸೂರು ವಿವಿ ಅಂಗಸಂಸ್ಥೆ ಪ್ರಾಂಶುಪಾಲರು ವ್ಯತ್ಯಾಸದ ಹಣ ಪಾವತಿಸಿಕೊಳ್ಳುವಂತೆ ಕುಲಸಚಿವರು ಆದೇಶಿಸಿದ್ದಾರೆ. ಅದರಂತೆ ವ್ಯತ್ಯಾಸ ಶುಲ್ಕವನ್ನು ಕಾಲೇಜಿಗೆ ಪಾವತಿಸಲು ವಿದ್ಯಾರ್ಥಿಗಳಿಗೆ ಸೂಚನಾ ಫಲಕದಲ್ಲಿ ಪ್ರಕಟಿಸುವುದರ ಮೂಲಕ ತಿಳಿಸಿರುವುದಾಗಿ ಯುವರಾಜ ಕಾಲೇಜು ಪ್ರಾಂಶುಪಾಲ ಡಾ. ನಂಜೇಗೌಡ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

