ಮೈಸೂರು

ಸಂಗೀತ ಸಾಧಕರಿಗೆ ಸನ್ಮಾನ

Published On :

ಮೈಸೂರು: ಅಂಧರಾದರೂ ಪರಿಶ್ರಮ ವಹಿಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದು, ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನ ನೀಡುತ್ತಿರುವ ಮೂರು ಮಂದಿ ಸಂಗೀತ ಶಿಕ್ಷಕರನ್ನು ಭಾನುವಾರ ನಾದಬ್ರಹ್ಮ ಸಂಗೀತ ಸಭಾದಲ್ಲಿ ಸನ್ಮಾನಿಸಲಾಯಿತು. ಶ್ರೀರಾಮ್ ಶಿಷ್ಯವೃಂದ ಮಹಾಸಂಸ್ಥಾನದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಂಗೀತ ಶಿಕ್ಷಕರ ಸಂಘದ ಅಧ್ಯಕ್ಷ ವಿದ್ವಾನ್ ಸಿದ್ದರಾಜು, ಮೈಸೂರು ಮಹಾರಾಣಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ಕೆ.ಆರ್. ಶ್ರೀಧರ್ ಹಾಗೂ ನಂಜನಗೂಡಿನ ಸರ್ಕಾರಿ ಶಾಲೆಯ ಸಂಗೀತ ಶಿಕ್ಷಕಿ ವಿದುಷಿ ಮಂಜಳಾ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ವಕೀಲ ದೇವಯ್ಯ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದೇವರ ನಾಮ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಕಾರ್ಯಕ್ರಮವನ್ನು ಶ್ರೀರಾಮ ಗುರೂಜಿ ಉದ್ಘಾಟಿಸಿದರು. ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಯಶಸ್ವಿನಿ ಸೋಮಶೇಖರ್, ಸಂಸ್ಥೆಯ ಗೌರವಾಧ್ಯಕ್ಷ ಎಲ್. ಶ್ರೇಯಸ್, ಉಪಾಧ್ಯಕ್ಷ ಸುದರ್ಶನ್ ರಾಮ್ ಇದ್ದರು. ಈ ಸಂದರ್ಭದಲ್ಲಿ ನೇತ್ರದಾನ ನೋಂದಣಿ ಕಾರ್ಯ ನಡೆಯಿತು.

ಬ್ಯೂಟಿಷಿಯನ್ ಉದ್ಯೋಗ ಮೇಳ
ಮೈಸೂರು: ಲೇಬರ್ ಸಂಸ್ಥೆ ವತಿಯಿಂದ ಜೀವನಾಧಾರ ಕೇಂದ್ರದಲ್ಲಿ ಇತ್ತೀಚೆಗೆ ಬ್ಯೂಟಿಷಿಯನ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಬಿ.ಜೆ. ವಿಜಯಕುಮಾರ್ ಚಾಲನೆ ನೀಡಿದರು. ಉದ್ಯೋಗ ಅಧಿಕಾರಿ ಜಾನ್ಸನ್ ಅತಿಥಿಯಾಗಿ ಭಾಗವಹಿಸಿದ್ದರು. ಮೇಳದಲ್ಲಿ ಹೆಸರಾಂತ ಸಂಸ್ಥೆಗಳಾದ ಸ್ಪಾರ್ಕ್ ಬ್ಯೂಟಿ ಜೋನ್, ವಿವೆಲ್ಲಾ, ಪ್ಲೆಸೆಂಟ್ ಬ್ಯೂಟಿ ಜೋನ್, ಅಹಲ್ಯಾ ಬ್ಯೂಟಿ ಕೇರ್ ಮುಂತಾದ ಸಂಸ್ಥೆಗಳು ಪಾಲ್ಗೊಂಡು ಕೌಶಲ್ಯವುಳ್ಳ ಕಲಾವಿದರನ್ನು ಆಯ್ಕೆ ಮಾಡಿಕೊಂಡವು. ಆಸಕ್ತರು ಮೊ. 72040 725651 ಸಂಪರ್ಕಿಸಬಹುದು.

ವಿಶ್ವ ಟೆನ್ನಿಸ್ ದಿನಾಚರಣೆ
ಮೈಸೂರು ಟೆನ್ನಿಸ್ ಕ್ಲಬ್ ವತಿಯಿಂದ ವಿಶ್ವ ಟೆನ್ನಿಸ್ ದಿನವನ್ನು ಸೋಮವಾರ ಆಚರಿಸಲಾಯಿತು.   ಚಾಮರಾಜಪುರಂನ ಕ್ಲಬ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಗರ ಪಾಲಿಕೆ ಸದಸ್ಯ ಎಸ್. ಬಾಲು ಉದ್ಘಾಟಿಸಿದರು. ಹೆಸರಾಂತ ವೈದ್ಯ ಡಾ.ಎಸ್.ಎನ್ ಮೋತಿ ಟೆನ್ನಿಸ್ ಆಡುವ ಮೂಲಕ ಕ್ರೀಡೆ ಚಾಲನೆಗೊಳಿಸಿದರು.  ಕ್ಲಬ್ ಅಧ್ಯಕ್ಷ ಡಾ.ಎನ್.ಎಂ. ಶ್ರೀನಿವಾಸ್. ಖಜಾಂಚಿ ಎಂ. ಅಶೋಕ್ ಶೆಣೈ, ಗೌರವ ಕಾರ್ಯದರ್ಶಿಗಳಾದ ವಿ.ಎಸ್.ಕೆ ಅರಸ್ ಮತ್ತು ಎಲ್.ಎಂ. ಮನೋಜ್‌ಕುಮಾರ್, ಸದಸ್ಯರಾದ ಎಂ.ವಿ. ಪ್ರಮೋದ್, ಆರ್.ಎನ್. ರಮೇಶ್, ಕೆ. ಮುದ್ದೇಗೌಡ  ಹಾಗೂ ಬಿ. ಪ್ರಶಾಂತ್ ಇದ್ದರು.

ಉಪನ್ಯಾಸ ಮಾಲೆ
ಮೈಸೂರು ವಿವಿ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಯುಜಿಸಿ ನಾವೀನ್ಯತೆ- ಉಪನ್ಯಾಸ ಮಾಲೆ ಪ್ರಯುಕ್ತ ಮಾ. 5ರ ಬೆಳಗ್ಗೆ 11.30ಕ್ಕೆ ತೋಟಗಾರಿಕೆ ವಿಜ್ಞಾನ ಪ್ರಾಧ್ಯಾಪಕ ಡಾ. ಕಾಳಿದಾಸ ಶೆಟ್ಟಿ ಉಪನ್ಯಾಸ ನೀಡುವರು.

ಬಸವಲಿಂಗಯ್ಯಗೆ ಪಿತೃವಿಯೋಗ
ಹುಣಸೂರು: ತಾಲೂಕಿನ ಉಯಿಗೊಂಡನಹಳ್ಳಿ ನಿವಾಸಿ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬಸವಲಿಂಗಯ್ಯ ಅವರ ತಂದೆ ಅಂಕಯ್ಯ (90) ಸೋಮವಾರ ನಿಧನರಾದರು. ಅಂತ್ಯಕ್ರಿಯೆಯು ಮಂಗಳವಾರ ಗ್ರಾಮದ ತೋಟದಲ್ಲಿ ನಡೆಯಲಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ, ಹನಗೋಡು ಜಿಪಂ ಸದಸ್ಯೆ ಕೆ. ಲಲಿತಾ ದೇವೇಗೌಡ, ಹರೀಶ್‌ಗೌಡ ಸಂತಾಪ ಸೂಚಿದ್ದಾರೆ.

ಚೌಡಯ್ಯ ನೇಮಕ
ಕೆ.ಆರ್. ನಗರ: ರಾಜ್ಯ ಜೆಡಿಎಸ್ ಅಂಗವಿಕಲರ ವಿಭಾಗದ ಕಾರ್ಯದರ್ಶಿಯಾಗಿ ಮಾರ್ಚಹಳ್ಳಿಯ ಡಿ. ಚೌಡಯ್ಯ ನೇಮಕವಾಗಿದ್ದಾರೆ.

ಬ್ಯಾಂಕ್‌ಗೆ ಆಯ್ಕೆ
ಎಚ್.ಡಿ. ಕೋಟೆ: ತಾಲೂಕಿನ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಶಂಕರಲಿಂಗೇಗೌಡ ಹಾಗೂ ಉಪಾಧ್ಯಕ್ಷರಾಗಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಯರ ಸಪ್ತಾಹ
ನಂಜನಗೂಡು: ರಾಯರ ಮೂಲ ಮಠ ಎಂದೇ ಹೆಸರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಯರ ಪಟ್ಟಾಭಿಷೇಕ, ವರ್ಧಂತಿ, ಉತ್ಸವಗಳು ಒಂದು ವಾರ ಕಾಲ ವಿಜೃಂಭಣೆಯಿಂದ ಜರುಗಲಿದೆ ಎಂದು ವ್ಯವಸ್ಥಾಪಕ ಕೆ. ಸುಧಾಕರ ತಿಳಿಸಿದರು. ಮೂಲ ಮಠದಲ್ಲಿ ಸೋಮವಾರ ಶ್ರೀ ಗುರುರಾಯರು ಸನ್ಯಾಸತ್ವ ಸ್ವೀಕರಿಸಿದ ದಿನವಾದ ಇಂದು ಶ್ರೀ ರಾಯರಿಗೆ ಪಟ್ಟಾಭಿಷೇಕ, ಮೂಲ ವಿಗ್ರಹಕ್ಕೆ ರಾಯರ ಚಿನ್ನದ ಕವಚ, ಗುಡಿಯ ಸುತ್ತ ಹೂವಿನ ಅಲಂಕಾರ, ಮಾಡಲಾಗಿತ್ತು. ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಒಂದು ವಾರ ಶ್ರೀ ಮಠದಲ್ಲಿ ರಾಯರಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ, ಹೋಮ- ಹವನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು. ವ್ಯವಸ್ಥಾಪಕ ಸುಧಾಕರ, ಧರ್ಮಾಧಿಕಾರಿ ವ್ಯಾಸರಾಜಾಚಾರ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.