ಪೋಷಕರ ಮಡಿಲು ಸೇರಿದ ಮಗು
ಮೈಸೂರು: ಪೋಷಕರ ನಿರ್ಲಕ್ಷ್ಯದಿಂದ ಬೇರೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯು ಮಂಗಳವಾರ ಪೋಷಕರಿಗೆ ಒಪ್ಪಿಸಿದೆ.ಶಕ್ತಿನಗರದ ಕೊಳಚೆ ಪ್ರದೇಶದ ನಿವಾಸಿಯ ನಾಲ್ಕು ವರ್ಷದ ಗಂಡು ಮಗು ನಾಪತ್ತೆಯಾಗಿತ್ತು. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಆರ್ಎಲ್ಎಚ್ಪಿ ಸಂಸ್ಥೆಯ ಮಕ್ಕಳ ಸಹಾಯವಾಣಿಗೆ ಕರೆ ಬಂದಿದ್ದರಿಂದ, ಕಾರ್ಯಕರ್ತರು ಮಗುವನ್ನು ರಕ್ಷಿಸಿ ಬಾಪೂಜಿ ಮಕ್ಕಳ ಆಶ್ರಮಕ್ಕೆ ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಂಗಳವಾರ ಮಗುವನ್ನು ಹಾಗೂ ಮಗುವನ್ನು ಕರೆದೊಯ್ದಿದ್ದ ಮಹಿಳೆಯನ್ನು ಪೊಲೀಸರು ಹಾಜರುಪಡಿಸಿದರು. ಸಮಿತಿಯು ವಿಚಾರಣೆ ನಡೆಸಿ ಹೇಳಿಕೆ ಪಡೆದು, ಮಗುವನ್ನು ಪೋಷಕರಿಗೆ ಒಪ್ಪಿಸಿದೆ. ಈ ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಿ ಮಾ.8ರೊಳಗೆ ಸಮಿತಿಗೆ ವರದಿ ನೀಡುವಂತೆ ಮಕ್ಕಳ ಕಲ್ಯಾಣ ಸಮಿತಿಯು ಉದಯಗಿರಿ ಠಾಣೆ ಪೊಲೀಸರಿಗೆ ಸೂಚಿಸಿದೆ. ಅಲ್ಲದೆ, ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಸೇರಿಸಲು ಹಾಗೂ ತೊದಲಿಸಿ ಮಾತನಾಡುವ ಮಗುವಿಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಿದೆ.
ಎತ್ತಿನಹೊಳೆ ಉಪಯೋಗಕಾರಿ
ಮೈಸೂರು: ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಯೋಜನೆಯಿಂದ ತುಮಕೂರು, ಕೋಲಾರ, ಚಿಕ್ಕ ಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಮತ್ತಿತರ ಪ್ರದೇಶಗಳಿಗೆ ಕುಡಿಯುವ ನೀರು ದೊರಕಿದಂತಾಗಿದೆ ಎಂದು ಸಮಾಜ ಸೇವಕ ಎನ್.ಜನಾರ್ದನ್ ಹೇಳಿದ್ದಾರೆ. ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಯೋಜನೆಯನ್ನು ಹಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಯೋಜನೆ ಜಾರಿಯಾಗದಂತೆ ತಡೆದಿದ್ದರು. ಅದರಲ್ಲೂ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಪೇಜಾವರ ಶ್ರೀಗಳಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲೆಯ ಫಾದರ್ಗಳು ಇದರ ವಿರುದ್ಧ ನಿಂತಿದ್ದರು. ಇದನ್ನು ಲೆಕ್ಕಿಸದ ಸಿದ್ದರಾಮಯ್ಯ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ. ಈ ಮೇಲ್ಕಂಡ ಜಿಲ್ಲೆಗಳ ಜನರಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಧರ್ಮಕ್ಷೇತ್ರಗಳು ಬೆಳೆದಿವೆ. ಇದನ್ನರಿತು ಮುಂದಾದರೂ ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತರು ಬರುವುದನ್ನೇ ನಿಲ್ಲಿಸಬೇಕಾಗುತ್ತದೆ. ಅದರಿಂದ ಧರ್ಮಕ್ಷೇತ್ರಗಳ ಹುಂಡಿಗಳು ಖಾಲಿಯಾಗುತ್ತವೆ ಎಂದು ಎಚ್ಚರಿಸಿದ್ದಾರೆ.
ಸಾಮೂಹಿಕ ಷಷ್ಟ್ಯಬ್ದಿಶಾಂತಿ
ಮೈಸೂರು: ನಗರದ ಕೆ.ಆರ್. ಮೊಹಲ್ಲಾದ ಕೆ.ಎಂ. ಪ್ರವೀಣ್ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ಎಲ್ಲ ಜನಾಂಗದವರಿಗೂ ಮಾ. 23ರಂದು ನಂಜರಾಜ ಬಹದ್ದೂರ್ ಛತ್ರದಲ್ಲಿ ಸಾಮೂಹಿಕ ಷಷ್ಟ್ಯಬ್ದ ಪೂರ್ತಿ ಶಾಂತಿ ನಡೆಸಲಾಗುವುದು. ಷಷ್ಟ್ಯಬ್ದಪೂರ್ತಿ ಶಾಂತಿ ಆಚರಿಸಿಕೊಳ್ಳುವವರಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಸೀರೆ, ಪಂಚೆ, ಪೂಜಾ ಸಾಮಗ್ರಿಗಳನ್ನು ಕೊಡಲಾಗುವುದು. ಆಸಕ್ತರು ಮಾ. 15ರೊಳಗೆ ಕೃಷ್ಣಮೂರ್ತಿಪುರಂನ ರಾಮಮಂದಿರದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.
ರೈತರಿಗೆ ಸಲಹೆ
ಮೈಸೂರು: ಜಿಲ್ಲೆಯಲ್ಲಿ ಮಾ. 5ರಿಂದ 7ರವರೆಗೆ ಮೋಡ ಕವಿದ ವಾತಾರವರಣವಿದ್ದು, ಚದುರಿದಂತೆ ಅಲ್ಲಲ್ಲಿ ತುಂತುರು ಮಳೆ ಬರುವ ಸಾಧ್ಯತೆಯಿದೆ ಎಂದು ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ತಿಳಿಸಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಕೆಲವು ಸಲಹೆ ಸೂಚನೆ ನೀಡಿದ್ದಾರೆ. ಸಪೋಟ ಅಥವಾ ಸೀಬೆಗೆ ಕಪ್ಪು ಶಿಲೀಂದ್ರ ತಗುಲಿದ್ದರೆ ಅದರ ನಿಯಂತ್ರಣಕ್ಕೆ 20 ಗ್ರಾಂ ಕಾನ್ ಪ್ಲೋರ್ ಹಿಟ್ಟನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಮಾವು ಬೆಳೆಗೆ ಜಿಗಿಹುಳು ಮತ್ತು ಬೂದಿ ರೋಗ ಬಾಧಿಸಿದ್ದರೆ, 1.5 ಮಿ.ಲೀ. ರೋಗರ್ ಜತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸುವುದು. ಬತ್ತಕ್ಕೆ ಸತುವಿನ ಕೊರತೆ ಕಂಡುಬಂದಲ್ಲಿ ಎಕರೆಗೆ 8 ಕೆಜಿ ಸತುವಿನ ಸಲ್ಫೇಟ್ ರಸಗೊಬ್ಬರದ ಜತೆ ಮಿಶ್ರಣ ಮಾಡಿ ಚೆಲ್ಲುವಂತೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

