ಕುಡಿತದಿಂದ ಜೀವನ ಸರ್ವನಾಶ
ಕ.ಪ್ರ.ವಾರ್ತೆ ಸುತ್ತೂರು ಮಾ. 9
ಅಮೂಲ್ಯವಾದ ಮಾನವ ಜೀವನವನ್ನು ಸರ್ವನಾಶ ಮಾಡುವ ಅಮಲು ರೋಗದಿಂದ ನಮಗೆ ನಾವೇ ಮೋಸ ಹೋಗುತ್ತೇವೆ ಎಂದು ಬೆಂಗಳೂರಿನ ನೇಮಕಾತಿ ಮತ್ತು ತರಬೇತಿ ವಿಭಾಗದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಎಸ್.ಟಿ. ರಮೇಶ್ ಅಭಿಪ್ರಾಯಪಟ್ಟರು.
ಜೆಎಸ್ಎಸ್ ಮಹಾವಿದ್ಯಾಪೀಠ ಹಾಗೂ ಜೆಎಸ್ಎಸ್ ಮಹಿಳಾ ಕಾಲೇಜಿನ ಸಹಯೋಗದಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಏರ್ಪಡಿಸಿದ್ದ ಕುಡಿತ ಬಿಡಿಸುವ ಉಚಿತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅಮಲು ರೋಗಿಯಾಗಿದ್ದವರು ಅವಮಾನ ಪಡಬೇಕಾಗಿಲ್ಲ. ರೋಗ ಗುಣವಾಗಬೇಕಾದರೆ ಅದರ ಇರುವಿಕೆಯನ್ನು ಗುರುತಿಸುವುದು ಮುಖ್ಯ. ನಾನೊಬ್ಬ ಅಮಲು ರೋಗಿ ಎಂಬುದನ್ನು ಸಾರ್ವಜನಿಕವಾಗಿ ಘೋಷಿಸುವ ಮೂಲಕ ಅದರಿಂದ ಮುಕ್ತರಾಗಲು ಮಾರ್ಗ ಹುಡುಕಿಕೊಂಡಿದ್ದೀರಿ. ತಪ್ಪದೇ ಮದ್ಯ ವ್ಯಸನ ಸಭೆಗೆ ಹಾಜರಾಗಿ, ಸೇವೆ ಮಾಡಲು ತೊಡಗಿಸಿಕೊಂಡು, ನಿತ್ಯ ಭಗವಂತನ ಧ್ಯಾನ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಸಮಾಜ ಸೇವೆ ಮಾಡಿ: ಕೊಡಗಿನ ಕನ್ನಡ ಮಠ ಮತ್ತು ಬೆಟ್ಟದಪುರದ ಸಲೀಲಾಖ್ಯ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮಿ ಆಶೀರ್ವಚನ ನೀಡಿ, ಕಡೆಗೀಲು ಇಲ್ಲದೆ ಬಂಡಿ ಓಡಲು ಹೇಗೆ ಸಾಧ್ಯವಿಲ್ಲವೋ ಅಂತೆಯೇ ನಮ್ಮ ಜೀವನ ಬಂಡಿ ಸಾಗಲು ನುಡಿ ಗಡಣವೇ ಕಡೆಗೀಲಂತಾಗಿದೆ. ಮದ್ಯ ವ್ಯಸನ ಮುಕ್ತರಾಗುವ ನಿಮ್ಮ ದೃಢ ಸಂಕಲ್ಪದಿಂದಾಗಿ ನೀವಷ್ಟೆ ಅಲ್ಲ, ಇಡೀ ಕುಟುಂಬವೇ ಸಂತಸ ಪಡುವಂತಾಗಿದೆ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಮಾತನಾಡಿ, ಅಮಲು ರೋಗಿಗಳು ಮದ್ಯ ವ್ಯಸನದಿಂದ ಮುಕ್ತರಾಗುವ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. ಜಿಲ್ಲೆಯ ವಿವಿಧೆಡೆ ಶಿಬಿರಗಳನ್ನು ನಡೆಸಲು ಸಂಸ್ಥೆ ಸಿದ್ಧವಿದೆ. ವಿದ್ಯೆ ಇರಲಿ ಇಲ್ಲದಿರಲಿ ನಿಮ್ಮಲ್ಲಿ ಬುದ್ಧಿ ಇದೆ. ಶಿಬಿರದಿಂದ ನಿಮ್ಮ ಆತ್ಮವಿಶ್ವಾಸ ವೃದ್ಧಿಸಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೀವು ಸಮಾಜ ಸೇವೆ ಮಾಡಲು ಮುಂದಾಗುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಟಿ.ಡಿ. ಸುಬ್ಬಣ್ಣ, ಆಲ್ಕೋಹಾಲಿಕ್ ಅನಾನಿಮಸ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಟ್ರಸ್ಟಿ ಶ್ರೀಕಾಂತ್, ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಲೋಕೇಶ್ ಮೂರ್ತಿ ಇದ್ದರು. ಶಿಬಿರಾರ್ಥಿಗಳಾದ ಮಹದೇವನಾಯಕ, ಸಿ. ರಮೇಶ್, ಸ್ವಾಮಿಗೌಡ, ನಾಗಶೆಟ್ಟಿ, ದೊರೆಸ್ವಾಮಿ, ಉಮೇಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರದಲ್ಲಿ 72 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಕಾಂತ್, ಷಣ್ಮುಗಂ, ನಾಗರಾಜ್, ರಮೇಶ್ ಶೆಟ್ಟಿ, ಆಂಡ್ರ್ಯೂಸನ್, ಲಕ್ಷ್ಮೀನಾರಾಯಣ, ಸಂಪಂಗಿ ಪಾಲ್ಗೊಂಡಿದ್ದರು. ಬಿ.ಆರ್. ಪಂಚಾಕ್ಷರಿ ಸ್ವಾಗತಿಸಿದರು. ಡಾ. ಎಂ.ಪಿ. ಸೋಮಶೇಖರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

