ಮೈಸೂರು

ಮಸಣೀಕಮ್ಮ ಬ್ರಹ್ಮ ರಥೋತ್ಸವ

Published On :

ಪಿರಿಯಾಪಟ್ಟಣ: ಪಟ್ಟಣದ ಗ್ರಾಮ ದೇವತೆಗಳಲ್ಲಿ ಒಂದಾದ ಶ್ರೀ ಮಸಣೀಕಮ್ಮ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ದೇವಾಲಯದಲ್ಲಿ ಬೆಳಗ್ಗಿನಿಂದಲೇ ದೇವರಿಗೆ ವಿಶೇಷ ಪೂಜೆಗಳು ಹೋಮ ನಡೆಯಿತು. ವಿವಿಧ ಬಗೆಯ ಹೂವುಗಳಿಂದ ಶೃಂಗರಿಸಿದ್ದ ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ರಥವನ್ನು ಎಳೆಯಲಾಯಿತು. ರಥೋತ್ಸವಕ್ಕೆ ಕೇವಲ ತಾಲೂಕು ಹಾಗೂ ರಾಜ್ಯದಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿ ಭಕ್ತಿ ಸಮರ್ಪಿಸಿದರು.
ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳ ಹಸಿವು ಹಾಗೂ ಬಾಯಾರಿಕೆ ನೀಗಿಸಲು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ, ಕೊಸಂಬರಿ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಜಾತ್ರೆಗೆ ಬಂದ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಅಲ್ಲದೆ 40 ಕ್ಕೂ ಹೆಚ್ಚು ಕೌಂಟರ್‌ಗಳಲ್ಲಿ ಸಂಘ ಸಂಸ್ಥೆಗಳ ವತಿಯಿಂದ ನಡೆದ ಪ್ರಸಾದದ ವ್ಯವಸ್ಥೆ ವಿಶೇಷವಾಗಿತ್ತು.

ರೈತರಿಗೆ ಕೃಷಿ ಕೇಂದ್ರದ ಸಲಹೆ
ಮೈಸೂರು:
ಜಿಲ್ಲೆಯಲ್ಲಿ ಮಾ.14 ರವರೆಗೆ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಚದುರಿದಂತೆ ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರ ತಿಳಿಸಿದೆ. ಬದನೆಕಾಯಿ ಬಿಡುವ ಹಂತದಲ್ಲಿ ಟೊಂಗೆ ಮತ್ತು ಕಾಯಿ ಕೊರಕ ರೋಗ ಕಾಣಿಸಿಕೊಳ್ಳಲಿದೆ. ಇದರ ನಿಯಂತ್ರಣಕ್ಕೆ ಒಣಗಿದ ಟೊಂಗೆಗಳನ್ನು ಹುಳುವಿನ ಸಮೇತ ಕಿತ್ತು ನಾಶಪಡಿಸಬೇಕು. ಮಾಹಿತಿಗೆ ಡಾ.ಸಿ. ಗೋವಿಂದರಾಜು  ಎನ್. ನರೇಂದ್ರಬಾಬು  ಮೊ. 8095227713 ಸಂಪರ್ಕಿಸ ಬಹುದು.

ಬೈಕ್ ಡಿಕ್ಕಿ- ಮಹಿಳೆ ಸಾವು
ಕೆ.ಆರ್. ನಗರ:
ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಮಂಚನಹಳ್ಳಿ ಬಳಿ ಗುರುವಾರ ಜರುಗಿದೆ.
ದೊಡ್ಡಕೊಪ್ಪಲು ಗ್ರಾಮದ ರಾಮೇಗೌಡರ ಪತ್ನಿ ನಾಗಮ್ಮ (62) ಮೃತಪಟ್ಟವರು. ಬೈಕ್ ಸವಾರ ಪರಾರಿಯಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೊಸಕೋಟೆ: ರಥೋತ್ಸವ
ಸುತ್ತೂರು:
ನಂಜನಗೂಡು ತಾಲೂಕಿನ ಎಸ್. ಹೊಸಕೋಟೆ ಗ್ರಾಮದಲ್ಲಿ ಶ್ರೀ ಕಪಿಲೇಶ್ವರ ಹಾಗೂ ಕಾಳಿಕಾಂಬ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯಲ್ಲಿ ಹೊಸಕೋಟೆ ಸುತ್ತಮುತ್ತಲ ಗ್ರಾಮಗಳ ಸಾವಿರಾರ ಭಕ್ತರು ಪಾಲ್ಗೊಂಡು ವಿವಿಧ ಕಲಾತಂಡಗಳು ಭಾಗವಹಿಸಿ ಕಲಾ ಪ್ರದರ್ಶನ ನೀಡಿದರು.

ಪೌರ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಮೈಸೂರು:
ನಮ್ಮ ಬೇಡಿಕೆಗಳಿಗೆ ನಗರಪಾಲಿಕೆ ಆಯುಕ್ತರು ಒಂದು ವಾರದಲ್ಲಿ ಸ್ಪಂದಿಸದಿದ್ದಲ್ಲಿ ಮಾನವ ಹಕ್ಕು ಆಯೋಗಕ್ಕೆ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ದೂರು ನೀಡಲಾಗುತ್ತದೆ ಎಂದು ಸಫಾಯಿ ಕರ್ಮಚಾರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಂ.ವಿ. ವೆಂಕಟೇಶ್ ಎಚ್ಚರಿಸಿದ್ದಾರೆ.
ಇತ್ತೀಚೆಗೆ ಮ್ಯಾನ್‌ಹೋಲ್‌ನಲ್ಲಿ ಓರ್ವ ಪೌರ ಕಾರ್ಮಿಕ ಮೃತಪಟ್ಟಿದ್ದು ಹಾಗೂ ಸ್ವಚ್ಛತೆ ಯಂತ್ರ ಬಳಸಿ ಒಳಚರಂಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮತ್ತೊಬ್ಬ ಪೌರ ಕಾರ್ಮಿಕನಿಗೆ ಕಾಲು ಬೆರಳು ತುಂಡಾಗಿದ್ದು, ಈ ಎಲ್ಲ ದುರ್ಘಟನೆಗೆ ನಗರಪಾಲಿಕೆ ಆಯುಕ್ತರೇ ನೇರ ಹೊಣೆಗಾರರಾಗುತ್ತಾರೆ. ಇಲ್ಲಿಯವರೆಗೆ ಕಾರ್ಮಿಕರಿಗೆ ಕಾನೂನು ಪ್ರಕಾರ ಸಿಗುವಂತಹ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಒಳಚರಂಡಿಯಲ್ಲಿ ಇರುವ ಸ್ವಚ್ಛತಾ ಯಂತ್ರಗಳು ಸುಮಾರು 15 ರಿಂದ 20 ವರ್ಷಗಳ ಹಳೆಯ ಯಂತ್ರಗಳಾಗಿದ್ದು, ಹೊಸ ಯಂತ್ರ ಬಳಸುವಂತೆ ಹಾಗೂ ಯಂತ್ರದ ಸಹಾಯದಿಂದ ಕೆಲಸ ನಿರ್ವಹಿಸುವವರಿಗೆ ವಿಮಾ ಯೋಜನೆ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.

ಸಬ್ಸಿಡಿ ಸಹಿತ ಸಿಲಿಂಡರ್: ಅಭಿನಂದನೆ

ಮೈಸೂರು: ಸಬ್ಸಿಡಿ ಸಹಿತ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಒದಗಿಸಲು ಆದೇಶಿಸಿರುವ ಕೇಂದ್ರ ಯುಪಿಎ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ಜೆ.ಎನ್. ಲಕ್ಷ್ಮಣ್ ಅಭಿನಂದಿಸಿದ್ದಾರೆ. ಆದರೆ ಆಧಾರ್ ಕಾರ್ಡ್ ಜೋಡಣೆ ಮಾಡಿದ್ದರಿಂದ ಸರ್ಕಾರದ ಹಾಗೂ ಬ್ಯಾಂಕ್‌ಗಳ ಆಡಳಿತಾತ್ಮಕ ವೆಚ್ಚದ ಹೊರೆ ಗ್ರಾಹಕರ ಮೇಲೆ ಬೀಳುತ್ತಿತ್ತು. ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಅನಾನುಕೂಲವಾಗುತ್ತಿತ್ತು.ಇದರಿಂದ ಗ್ರಾಹಕರಿಗೆ ಮುಕ್ತಿ ದೊರಕಿಸಿ ಕೊಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕೀಟ ಬಾಧೆ: ಔಷಧಿ ಸಿಂಪಡಿಸಿ
ಮೈಸೂರು: ತಾಲೂಕಿನ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೇಸಿಗೆ ಬತ್ತದ ಬೆಳೆಗೆ ಎಲೆ ಮಡುಚುವ ಕೀಟ ಮತ್ತು ಕಾಂಡ ಕೊರಕ ಕೀಟಗಳ ಬಾಧೆ ಅಲ್ಲಲ್ಲಿ ಕಂಡು ಬಂದಿರುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಹೇಳಿದ್ದಾರೆ.
ರೈತರು ಬತ್ತದ ಹೊಲಗಳಲ್ಲಿ ಕೀಟ ಬಾಧೆ ಕಂಡುಬಂದಲ್ಲಿ ಹೊಲಗಳಿಗೆ ಕ್ಲೋರೊಪೈರಿಫಾಸ್ 2 ಎಂ.ಎಲ್‌ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳಗಿನ ಜಾವ ಅಥವಾ ಸಂಜೆ ವೇಳೆಯಲ್ಲಿ ಸಿಂಪಡಿಸಬೇಕೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಕಸಬಾ, ಮೈಸೂರು ದೂ. 2448567 ಸಂಪರ್ಕಿಸಬಹುದು.

ಬಿಜೆಪಿ, ಜೆಡಿಎಸ್ ಹೇಳಿಕೆಗೆ ಖಂಡನೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ  ಸಾಮಾಜಿಕ ಕಳಕಳಿಯನ್ನು ಸಹಿಸದೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಜನರನ್ನು ದಿಕ್ಕು ತಪ್ಪಿಸುವ ಕೀಳು ರಾಜಕೀಯ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಿ. ಮಾದಯ್ಯ ಖಂಡಿಸಿದ್ದಾರೆ. ದೇವೇಗೌಡರು ಲೋಕಸಭೆಗೆ ಒಂದೇ ಹಂತದಲ್ಲಿ ಚುನಾವಣೆ ಕುರಿತು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಗಮನಿಸಿದರೆ, ಜೆಡಿಎಸ್‌ನಲ್ಲಿ ಕಾರ್ಯಕರ್ತರ ಕೊರತೆ ಇರುವುದು ಗೋಚರವಾಗುತ್ತಿದೆ ಎಂದಿದ್ದಾರೆ.

ನಾಳೆ ರಾಗ ರಸ ರಂಗು
ಪಂ. ತಾರಾನಾಥ್ ಫೌಂಡೇಷನ್ ಸಂಸ್ಥೆ ಮಾ. 15ರ ಸಂಜೆ 7ಕ್ಕೆ ರಂಗಾಯಣದ ವನರಂಗದಲ್ಲಿ ರಾಗ ರಸ ರಂಗು ಸರೋದ್ ಸೊಬಗು ವೀಣೆಯ ಬೆಡಗು ಕಾರ್ಯಕ್ರಮ ಆಯೋಜಿಸಿದೆ. ಪಂ. ರಾಜೀವ್ ತಾರಾನಾಥ್  ಸರೋದ್ ನುಡಿಸಲಿದ್ದು, ವಿದ್ವಾನ್ ಡಿ. ಬಾಲಕೃಷ್ಣ ವೀಣೆ ನುಡಿಸುವರು. ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮೃದಂಗ ಮತ್ತು ಪಂಡಿತ್ ಉದಯರಾಜ್ ಕರ್ಪೂರ್ ತಬಲ ನುಡಿಸುವರು. ಪ್ರವೇಶ ಉಚಿತ ಎಂದು ತಾರಾನಾಥ್ ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಅಭಿನಂದನೆ
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಖಿಲ ಭಾರತ ಸರ್ವಜ್ಞ ಸಾಂಸ್ಕೃತಿಕ ಪ್ರತಿಷ್ಠಾನ ಮಾ. 15ರ ಸಂಜೆ 4ಕ್ಕೆ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸಮ್ಮೇಳನಾಧ್ಯಕ್ಷರಿಗೆ ಅಭಿನಂದನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಿದೆ. ಲೇಖಕಿ ನಾಗಲಕ್ಷ್ಮಿ ಹರಿಹರೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. 12ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಕೆ. ಬೈರವಮೂರ್ತಿ, ಚಾಮರಾಜನಗರ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ, ಹಾಂಕಾಂಗ್ ವಿಶ್ವಕನ್ನಡ ಸಮ್ಮೇಳನದ ಅಧ್ಯಕ್ಷ ಡಾ. ಮಳಲಿ ವಸಂತಕುಮಾರ್ ಮತ್ತು ಯಕ್ಷಗಾನ ಮತ್ತು ಬಯಲಾಟ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಿ.ಎಸ್. ಭಟ್ಟ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದು, ಲೇಖಕ ಬನ್ನೂರು ಕೆ. ರಾಜು ಮತ್ತು ಜಯಪ್ಪ ಹೊನ್ನಾಳಿ ಅಭಿನಂದಿಸುವರು. ಮಕ್ಕಳ ತಜ್ಞ ಡಾ.ಎಚ್.ಬಿ. ರಾಜಶೇಖರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ರಂಗನಾಥ್ ಮೈಸೂರು ಕವಿಗೋಷ್ಠಿ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.