ಶಾಲೆ ಹಸ್ತಾಂತರ: ನಿಲ್ಲದ ಹೋರಾಟ
ಮೈಸೂರು: ಮಹಾರಾಣಿ ಮಾದರಿ ಕನ್ನಡ ಶಾಲೆಯ (ಎನ್ಟಿಎಂಎಸ್) ಜಾಗವನ್ನು ವಿವೇಕ ಸ್ಮಾರಕ ನಿರ್ಮಾಣಕ್ಕೆ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ಸಂಬಂಧ ಪರ ಹಾಗೂ ವಿರುದ್ಧ ಪ್ರತಿಭಟನೆಯು ಬುಧವಾರವೂ ಮುಂದುವರಿಯಿತು.
ಶಾಲೆ ಉಳಿಸಬೇಕು ಎಂದು ಕನ್ನಡ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು 10 ದಿನ ಪೂರೈಸಿದೆ. ಮತ್ತೊಂದೆಡೆ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮದ ಸ್ವಾಧೀನಕ್ಕೆ ಒಪ್ಪಿಸಲು ಒತ್ತಾಯಿಸಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣ ಸಮಿತಿಯವರು ಪ್ರತಿಭಟನೆ ಮುಂದುವರಿಸಿದ್ದಾರೆ.
ದಸಂಸ ಬಣಗಳ ಧರಣಿ: ಕನ್ನಡ ಕ್ರಿಯಾ ಸಮಿತಿಯ 10ನೇ ದಿನದ ಹೋರಾಟವನ್ನು ಬೆಂಬಲಿಸಿ ದಲಿತ ಸಂಘರ್ಷ ಸಮಿತಿಯ ವಿವಿಧ ಬಣದವರು ಧರಣಿ ನಡೆಸಿದರು. ವಿವೇಕ ಸ್ಮಾರಕ ನಿರ್ಮಾಣಕ್ಕೆ ಶಾಲೆ ಜಾಗವನ್ನು ಹಸ್ತಾಂತರಿಸುವ ಹಿಂದಿನ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಬೇಕು. ರಿಯಲ್ ಎಸ್ಟೇಟ್ ದಂಧೆಗೆ ಈ ಜಾಗವನ್ನು ಬಳಸಿಕೊಳ್ಳುವ ಹುನ್ನಾರ ಇದೆ ಎಂದು ಆರೋಪಿಸಿದರು.
ಅಂಬೇಡ್ಕರ್ ಭವನದ ಸಮೀಪದಲ್ಲೇ ವಿವೇಕ ಸ್ಮಾರಕ ನಿರ್ಮಿಸಿದರೆ ಘರ್ಷಣೆ ಆಗಬಹುದು. ಅಂಬೇಡ್ಕರ್ ಭವನ ನಿರ್ಮಾಣ ಸಹಿಸದ ಪಟ್ಟಭದ್ರರು ಪಾರಂಪರಿಕ ಶಾಲೆ ಧ್ವಂಸಗೊಳಿಸಲು ಕುತಂತ್ರ ನಡೆಸುತ್ತಿದ್ದಾರೆ ಎಂದರು.
ದಸಂಸ ಮುಖಂಡರಾದ ನಿಂಗರಾಜ ಮಲ್ಲಾಡಿ, ಮಲ್ಲೇಶ್ ಚುಂಚನಹಳ್ಳಿ, ದೇವಗಳ್ಳಿ ಸೋಮಶೇಖರ್, ರಾಜಶೇಖರ ಕೋಟೆ, ಬೆಲವತ್ತ ರಾಮಚಂದ್ರ, ಮಣಿಯಯ್ಯ, ಎಚ್.ಬಿ. ದಿವಾಕರ್, ಮಲ್ಲಹಳ್ಳಿ ನಾರಾಯಣ, ಶ್ರೀನಿವಾಸ್, ಹನುಮಂತು, ಕಾಂತರಾಜು, ಮಹದೇವಸ್ವಾಮಿ, ಶ್ರೀಕಂಠ, ರಾಜಶೇಖರ, ಸುರೇಶ್, ಪುಟ್ಟಸ್ವಾಮಿ, ರಾಜಣ್ಣ, ಜಯಲಕ್ಷ್ಮಿ, ಸೋಮಯ್ಯ ಮಲೆಯೂರು ಇದ್ದರು.
ಹಸ್ತಾಂತರಕ್ಕೆ 24 ಗಂಟೆ ಗಡುವು: ವಿವೇಕ ಸ್ಮಾರಕ ನಿರ್ಮಾಣಕ್ಕೆ ಶಾಲೆಯ ಜಾಗವನ್ನು ಹಸ್ತಾಂತರಿಸಲು ಒತ್ತಾಯಿಸಿ ಸ್ವಾಮಿ ವಿವೇಕಾನಂದ ಸ್ಮಾರಕ ಸಮಿತಿಯ ನೇತೃತ್ವದಲ್ಲಿ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿದರು.
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ನಿರಂಜನ ಮಠದ ಎದುರು ಪ್ರತಿಭಟಿಸಿದ ಬಳಿಕ ಡಿಡಿಪಿಐ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿ ಮುತ್ತಿಗೆ ಹಾಕಿದ ಅವರು, ಶಾಲೆಯ ಬೀಗದ ಕೀಯನ್ನು 24 ಗಂಟೆಯೊಳಗೆ ರಾಮಕೃಷ್ಣ ಆಶ್ರಮಕ್ಕೆ ಒಪ್ಪಿಸಬೇಕು ಎಂದು ಗಡುವು ನೀಡಿದರು.
ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಮಾತನಾಡಿ, ಸ್ವಾಮಿ ವಿವೇಕಾನಂದರು ಬೆಳಗಾವಿ ಮತ್ತು ಮೈಸೂರಿಗೆ ಭೇಟಿ ನೀಡಿದ್ದರು. ಬೆಳಗಾವಿಯಲ್ಲಿ ವಿವೇಕಾನಂದರು ತಂಗಿದ್ದ ಎರಡೂ ಸ್ಥಳಗಳಲ್ಲಿ ಈಗ ಸ್ಮಾರಕ ನಿರ್ಮಾಣವಾಗಿದೆ. ಆದರೆ, ಕೆಲವರ ಸ್ವಹಿತಾಸಕ್ತಿಯಿಂದ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಾಗಿಲ್ಲ. ಕನ್ನಡ ಶಾಲೆ ಉಳಿಸುವ ನೆಪದಲ್ಲಿ ವಿವೇಕಾನಂದರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ನಗರದಲ್ಲಿ ಹಲವು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಎನ್ಟಿಎಂ ಶಾಲೆಯ ಕುರಿತು ಮಾತನಾಡುವ ಹೋರಾಟಗಾರರು ಆಗ ಎಲ್ಲಿ ಹೋಗಿದ್ದರು? ಎನ್ಟಿಎಂ ಶಾಲೆಯಲ್ಲಿ ಕೇವಲ 12 ಮಕ್ಕಳಿದ್ದಾರೆ. ಹೀಗಾಗಿ ಹಿಂದಿನ ಸರ್ಕಾರವು ಶಾಲೆಯನ್ನು ದೇವರಾಜ ಶಾಲೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಈ ನಿರ್ಧಾರವನ್ನು ಬದಲಿಸುವ ನೈತಿಕ ಅಧಿಕಾರ ಈಗಿನ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ಹೇಳಿದರು.
ಶಾಲೆ ಹಸ್ತಾಂತರ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಎಂದು ಶಾಲಾ ಮಕ್ಕಳ ಪೋಷಕರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮೈಸೂರಿನ ನ್ಯಾಯಾಲಯವು ರದ್ದುಗೊಳಿಸಿದೆ. ಹೀಗಾಗಿ, ಶಾಲೆಯ ಜಾಗವನ್ನು ಆಶ್ರಮಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಎಚ್.ಆರ್. ಬಸಪ್ಪ ಮನವಿ ಸ್ವೀಕರಿಸಿ ಮಾತನಾಡಿ, ಮೈಸೂರು ನ್ಯಾಯಾಲಯದ ತಡೆಯಾಜ್ಞೆ ಅರ್ಜಿಯ ವಜಾ ಮಾಡಿರುವ ಮಾಹಿತಿಯನ್ನು ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ. ಇಲಾಖೆ ನೀಡುವ ಆದೇಶಕ್ಕಾಗಿ ಕಾಯುತ್ತಿರುವುದಾಗಿ ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ 24 ಗಂಟೆಯೊಳಗೆ ಶಾಲೆ ಜಾಗ ಹಸ್ತಾಂತರಿಸದಿದ್ದರೆ ಡಿಡಿಪಿಐ ಕಚೇರಿ ಎದುರು ಧರಣಿ ನಡೆಸುವಾಗಿ ಎಚ್ಚರಿಸಿದರು.
ಈಗ ಬಿಜೆಪಿಯವರ ಬೆಂಬಲ ಸಹ ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬಿಜೆಪಿ ಮುಖಂಡರು, ಪಾಲಿಕೆ ಸದಸ್ಯರು ಸಹ ಕೈಜೋಡಿಸಿದ್ದರು.
ಸಾಹಿತಿ ಡಾ.ಸಿಪಿಕೆ, ಎಂಡಿಎ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ, ವಕೀಲ ಸಿ.ವಿ. ಕೇಶವಮೂರ್ತಿ, ನಗರಪಾಲಿಕೆ ಸದಸ್ಯರಾದ ಡಿ.ನಾಗಭೂಷಣ್, ಶಿವಕುಮಾರ್, ಎಚ್.ವಿ. ರಾಜೀವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

