ಪೊಲಿಟಿಕಲ್ ಸಿಂಡ್ರೋಮ್

ರಾಜಕಾರಣದಲ್ಲೇನೋ ರಾಸಾಯನಿಕವಿದೆ. ಏನೋ ಒಂದು ಅಮಲಿದೆ. ಕೆಲವು ಕಾಲ ಅದು ಎಲ್ಲವನ್ನೂ ಮರೆಸಿಬಿಡುತ್ತದೆ. ಅಧಿಕಾರವೇರಿದ ನಾಯಕರನ್ನೇ ಗಮನಿಸಿ. ಅವರಿಗೆ ಸಮಾಜದ ಅಭಿವೃದ್ಧಿ ನೆನಪಾಗುವುದಿಲ್ಲ, ಚುನಾವಣೆಗೆ ಮುನ್ನ ಬಿಡುಗಡೆ ಮಾಡಿದ ಪ್ರಣಾಳಿಕೆ ನೆನಪಾಗುವುದಿಲ್ಲ, ಕ್ಷೇತ್ರದ ಮತದಾರನ ಮುಖ ಒಮ್ಮೆಯೂ ಅವರೊಳಗೆ ಪುನಃ ಸರಿದಾಡುವುದಿಲ್ಲ. ಈ ಮರೆವಿಗೆಲ್ಲ ಕಾರಣ ಪೊಲಿಟಿಕಲ್ ಸಿಂಡ್ರೋಮ್.
ಸ್ಟೆತೋಸ್ಕೋಪ್ ಹಿಡಿದರೂ ವೈದ್ಯಲೋಕಕ್ಕಿದು ಗೊತ್ತಾಗದ ಕಾಯಿಲೆ. ನಿಮ್ಮ ಅರಿವಿಗೆ ಬಂದಿದೆಯೋ ಇಲ್ಲವೋ. ಕಳೆದ ಮೂರ್ನಾಲ್ಕು ತಿಂಗಳಿಂದ ಈ ಪೊಲಿಟಿಕಲ್ ಸಿಂಡ್ರೋಮ್ ನಮ್ಮನ್ನೂ ಕಾಡಿದೆ. ಅದೇ ಅಮಲು ನಮ್ಮೊಳಗೆ ಆಲೆಮನೆ ರೀತಿ ಸುತ್ತಾಡಿದೆ. ಆ ರಾಜಕಾರಣಿಗಳಿಗೆ ಕಾಡುತ್ತಿದ್ದ ವಿಚಿತ್ರ ಮರೆವಿನ ಕಾಯಿಲೆ, ನಮ್ಮಲ್ಲೂ ಅನೇಕ ಸಂಗತಿಗಳನ್ನು ಮರೆಸಿದೆ. ಒಮ್ಮೆ ಯೋಚಿಸಿ, ಈ ಮೂರ್ನಾಲ್ಕು ತಿಂಗಳಲ್ಲಿ ರಾಜಕಾರಣದಿಂದಾಗಿ ನಾವು ಮರೆತ ಸಂಗತಿಗಳೆಷ್ಟು?
ದೆಹಲಿ ಎಂದಾಕ್ಷಣ ಹಿಂದಾದರೆ ಕೆಂಪುಕೋಟೆಯೋ, ಆಗ್ರಾದ ತಾಜ್ಮಹಲ್ಲೋ ಥಟ್ಟನೆ ನೆನಪಾಗುತ್ತಿತ್ತು. ಕೆಲವು ದಿನಗಳಿಂದ ಅವುಗಳೆಲ್ಲ ಅಳಿಸಿಹೋಗಿವೆ ಅಂತನ್ನಿಸುತ್ತಿಲ್ಲವೆ? ಕೇಜ್ರಿವಾಲ್ ಯಾವಾಗ ಆ ಸ್ಮಾರಕಗಳ ಸ್ಥಳಕ್ಕೆ ಕರಚೀಫ್ ಇಟ್ಟರು? ಹೋಗಲಿ, ಕೊನೇಪಕ್ಷ ಅವರು 'ದೆಹಲಿ' ಪದದೊಳಗೆ ಪ್ರವೇಶಿಸಿದ ಮೊದಲ ದಿನವಾದರೂ ನೆನಪಿಗೆ ಬಂತಾ?
ಹಾಗೆಯೇ ಗುಜರಾತ್ ಎಂದರೆ ಇನ್ನು ನಿಮಗೇನಾದರೂ ಮೊದಲಿನಂತೆ ಶೇ.100ರಷ್ಟು ಮಹಾತ್ಮ ಗಾಂಧಿ ನೆನಪಾಗುತ್ತಿದ್ದಾರಾ? ಅದೂ ಇಲ್ಲ. ಅಲ್ಲೀಗ ನರೇಂದ್ರ ಮೋದಿ ಪ್ರವೇಶ. ಇನ್ನು ಗಾಂಧೀಜಿಯನ್ನು ನೆನಪಿಗೆ ತರುವಂಥ ಎರಡು ಸಂಗತಿಗಳಷ್ಟೇ ಜೀವಂತ. ಒಂದು ಅಕ್ಟೋಬರ್ 2, ಮತ್ತೊಂದು ಭಾರತದ ಸ್ವಾತಂತ್ರ್ಯ.
ಇನ್ನು ನಮ್ಮ ಮೋದಿಯವರು ಕೇವಲ 'ಗಾಂಧಿ'ಸೀಟನ್ನಷ್ಟೇ ಆಕ್ರಮಿಸಿಲ್ಲ. 'ನೇತ್ರಬ್ರಹ್ಮ' ಡಾ.ಎಂ.ಸಿ. ಮೋದಿ, ಝೆರಾಕ್ಸ್ನಲ್ಲಿ ಕ್ರಾಂತಿ ಎಬ್ಬಿಸಿದ ಡಾ. ಬಿ.ಕೆ. ಮೋದಿ ಇವರಿಬ್ಬರನ್ನೂ ನರೇಂದ್ರ ಮೋದಿ ಒತ್ತುವರಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನವರಂಗ್ ಸರ್ಕಲ್ಲಿನಲ್ಲೇ ಅನೇಕರು, 'ನರೇಂದ್ರ ಮೋದಿ ಹಾಸ್ಪಿಟಲ್ ದಾರಿ ಇದು' ಅಂತ ಮೋದಿ ಆಸ್ಪತ್ರೆ ಕಡೆ ಕೈತೋರಿಸಲು ಶುರುಮಾಡಿದ್ದಾರೆ ಜನ. ಇನ್ನು ಕೆಲವೇ ದಿನಗಳಲ್ಲಿ ಮೋದಿ ಝೆರಾಕ್ಸ್ ಕೂಡ, ನರೇಂದ್ರ ಮೋದಿಯವರದ್ದೇ ಅನ್ವೇಷಣೆ ಎಂಬ ವದಂತಿ ವಾಸ್ತವದ ಬಣ್ಣ ಹಚ್ಚಿಕೊಳ್ಳಲಿದೆ.
ಅದೆಲ್ಲ ಹೋಗಲಿ, ಒಂದೊಳ್ಳೆ ಸಿನಿಮಾ ನೋಡಲು ಟಾಕೀಸಿನ ಕಡೆಗೆ ಮುಖಮಾಡದೆ ಎಷ್ಟು ದಿನವಾಯಿತು? 'ಶೋಲೆ 3ಡಿ'ಯಲ್ಲಿ ಬಂದಿದ್ದು ಯಾವ ಪ್ರಮಾಣದಲ್ಲಿ ಸುದ್ದಿಯಾಯಿತು? 'ಹೈವೇ', 'ಯಂಗಿಸ್ತಾನ್'ನಂಥ ಹಿಂದಿ ಸಿನಿಮಾಗಳ ಗಳಿಕೆಯಾದರೂ ಎಷ್ಟಾಯಿತು? 'ಚೆನ್ನಾಗಿದೆಯಂತೆ, ಚೆನ್ನಾಗಿಲ್ವಂತೆ' ಅಂತ ಹೋದಲ್ಲೆಲ್ಲ ಮಾತಾಡಿಕೊಂಡ ಕನ್ನಡದ 'ಉಳಿದವರು ಕಂಡಂತೆ' ಚಿತ್ರವನ್ನು ವಿಮರ್ಶಕರು, ಅಭಿಮಾನಿಗಳ ಹೊರತಾಗಿ ಎಷ್ಟು ಮಂದಿ ನೋಡಿದರು? ಟಿವಿ ಆನ್ ಮಾಡಿದರೆ, ಪೇಪರ್ ತೆರೆದರೆ ರಾಜಕೀಯವೇ ಮನರಂಜನೆಯಾಗಿ ಕಾಡಿದ ಪ್ರೇಕ್ಷಕನಿಗೆ ಸಿನಿಮಾ ನೆನಪಾಗದೇ ಇರಲು ಪೊಲಿಟಿಕಲ್ ಸಿಂಡ್ರೋಮೇ ಕಾರಣವಾಯಿತೇ?
ಇನ್ನು ಸಾಹಿತ್ಯದ ಕಡೆಗೆ ಹೊರಳೋಣ. ಈ ಕೆಲವು ದಿನಗಳಲ್ಲಿ ಯು.ಆರ್. ಅನಂತಮೂರ್ತಿಯವರೆಂದರೆ 'ಸಂಸ್ಕಾರ', ಕಾರ್ನಾಡರೆಂದರೆ 'ತುಘಲಕ್' ಅಂತ ಶುದ್ಧ ಸಾಹಿತ್ಯಪ್ರೇಮಿಯಾಗಿ ನೆನಪಿಸಿಕೊಂಡ ಒಂದು ದಿನ ಹೇಳಿ? ಇಲ್ಲ, ಆ ಕೃತಿ ಜಾಗದಲ್ಲೆಲ್ಲ ಕಾಂಗ್ರೆಸ್ಸು ಬಂದಿದೆ, ಅವರ ಹೇಳಿಕೆಗಳ ವಿರುದ್ಧ ನಡೆದ ಸಮರಗಳು ಜಾಗ ಪಡೆದುಕೊಂಡವು. ಎಸ್.ಎಲ್. ಭೈರಪ್ಪ ಎಂದಾಗ ಮನಸ್ಸಿನ ಮುಂದೆ ಬಿಜೆಪಿ ಬಾವುಟ ಹಾರಾಡಿದೆ. ಅಂದರೆ, ಈ ರಾಜಕಾರಣ ನಮ್ಮ ಸೃಜನಶೀಲತೆಯನ್ನೂ ಬಲಿ ತೆಗೆದುಕೊಂಡಿದೆ.
ಇದೇ ಏಪ್ರಿಲ್ನಲ್ಲಿ ಮಗನ ರಿಸಲ್ಟ್ ಕೇಳುವ ಉತ್ಸಾಹ ನಮ್ಮೊಳಗೆ ಎಷ್ಟಿತ್ತು? ಈ ಚುನಾವಣೆ ವೇಳೆ ಅವನ ಭವಿಷ್ಯವನ್ನೂ ನಾವು ಲೈಟಾಗಿ ತೆಗೆದುಕೊಂಡೆವಾ? ಕೆಲವು ವರ್ಷಗಳಿಂದ ಏಪ್ರಿಲ್ ಎಂದರೆ, 'ಐಪಿಎಲ್' ಅಂತಲೇ ಆಗಿತ್ತು. ಆದರೆ, ಈ ಬಾರಿ ನಮ್ಮ ಮೆಚ್ಚಿನ ತಂಡ ನೆನಪಾಗಿದ್ದೆಷ್ಟು? ಟಿ20 ವರ್ಲ್ಡ್ಕಪ್ನ ಫೈನಲ್ ದಿನವೂ ನಮ್ಮನ್ನು ರಾಜಕೀಯವೇ ಕಾಡಿತ್ತೆಂದರೆ, ಭಾರತ ಗೆದ್ದು ಮಾಡಬೇಕಾದ್ದೇನಿತ್ತು?
ಸಿನಿಮಾ ನಟ- ನಟಿಯರೆಂದರೆ ಅವರ ಒಂದೊಳ್ಳೆ ಚಿತ್ರವೋ, ನಾವು ರಸಿಕರಾಗಿದ್ದರೆ ಅವರ ಅರೆನಗ್ನ ನೃತ್ಯವೋ ನೆನಪಿಗೆ ಬರುತ್ತಿತ್ತು. ಆದರೆ, ಈಗ ಚಿತ್ರತಾರೆಯರೆಂದರೆ, ಸೀರೆಯುಟ್ಟ ರಾಜಕೀಯ ಮಣಿಗಳು ನೆನಪಾಗುತ್ತಾರೆ. ರಾಜಕೀಯ ಸಮುದ್ರವನ್ನು ಸೇರುತ್ತಿರುವ ಅವರು ನಮ್ಮ ಅಭಿಮಾನವನ್ನು ಅದೇ ಕಡಲಿನಲ್ಲಿ ನೆನೆಸಿ ಸಾಯಿಸಿಬಿಟ್ಟರಾ?
ಬಾಬ್ರಿ ಮಸೀದಿ ಧ್ವಂಸ ಹೇಳಿಕೆ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಆಶ್ವಾಸನೆಗಳ ಆರ್ಭಟದಲ್ಲಿ ಎಷ್ಟು ಜನರಿಗೆ 'ಶ್ರೀರಾಮ ನವಮಿ'ಯ ದಿನಾಂಕ ನೆನಪಿತ್ತು? ಮೆಣಸಿನಕಾಯಿ ಬೋಂಡಾ ಬಾಯಿಗಿಟ್ಟಾಗಲೂ 'ರಾಖಿ ಸಾವಂತ್'ಳ ಹಸಿಮೆಣಸಿನಕಾಯಿ ಚಿಹ್ನೆ ನೆನಪಾಗುತ್ತಿದೆ. ಈ ರಾಜಕೀಯ ರೋಗ ಎಷ್ಟು ಖಾರ!
ಹೋಗಲಿ, ಈ ಮೂರ್ನಾಲ್ಕು ತಿಂಗಳಲ್ಲಿ ನಾವೆಷ್ಟು ಧಾರಾವಾಹಿಗಳನ್ನು ನೋಡಿದ್ದೀವಿ? ಒಂದು ದಿನ ಧಾರಾವಾಹಿ ತಪ್ಪಿದರೆ ನೆಕ್ಲೇಸ್ಸನ್ನೇ ಕಳಕೊಂಡ ಹಾಗೆ ಆಡುತ್ತಿದ್ದ ಹೆಂಡತಿ, ಈಗ ಗಂಡ ರಾಜಕೀಯದ ಚರ್ಚೆಯನ್ನು ಹಾಕಿ ಕೂತರೂ ಜಗಳವಾಡದೆ ಸುಮ್ಮನೆ ಕೂತಿದ್ದಾಳೆ. ಇವಿಷ್ಟೇ ಅಲ್ಲ, ಆಕೆಗೆ ತೆಂಗಿನಕಾಯಿ ಎಂದಾಕ್ಷಣ ಕೆಜೆಪಿಯೂ ನೆನಪಾಗುತ್ತಿದೆಯಂತೆ.
ಇಷ್ಟು ದಿನ ಯಾವುದಾದರೂ ಹೊಸತನ್ನು ಟ್ವಿಟ್ಟರ್ನಲ್ಲಿ, ಫೇಸ್ಬುಕ್ನಲ್ಲಿ ಅಂಟಿಸುತ್ತಿದ್ದ ನಾವು ಈ ಕೆಲವು ದಿನಗಳಲ್ಲಿ ರಾಜಕೀಯದ ಸಂಗತಿಗಳನ್ನೇ ತೂರಿಬಿಡುತ್ತಿದ್ದೇವೆ. ಎಲ್ಲೋ ಒಂದು ಕಡೆ ನಮ್ಮ ನಾಯಕರಂತೆ ನಾವೂ ಮಾರಾಟವಾಗಿಬಿಟ್ಟೆವಾ? ಅಥವಾ ನಮ್ಮೊಳಗಿನ ಪೊಲಿಟಿಕಲ್ ಸಿಂಡ್ರೋಮೇ ಅಂಥದ್ದೊಂದನ್ನು ಬರೆಯಲು ಸೂಚಿಸುತ್ತಿತ್ತಾ?
ಅವೆಲ್ಲ ಹೋಗಲಿ... ದಿನದಲ್ಲಿ ನೀವು ನಿಮ್ಮ ಹೆಂಡತಿ ಮಕ್ಕಳ ಮುಖವನ್ನು ಎಷ್ಟು ಬಾರಿ ನೋಡಿದ್ದೀರಿ ಹಾಗೂ ಪ್ರಧಾನಮಂತ್ರಿ ಅಭ್ಯರ್ಥಿಗಳ ಮುಖವನ್ನು ಎಷ್ಟು ಬಾರಿ ನೋಡಿದ್ದೀರಿ? ಈ ರಾಜಕೀಯ ನಮ್ಮ ಆಪ್ತರನ್ನೂ ಮರೆಸಿತ್ತು. ಕೆಲವು ದಿನಗಳ ಹಿಂದೆ ಕಥೆಗಾರ ಜೋಗಿ, ಅಂಬರೀಷ್ ಆರೋಗ್ಯ ಕೈಕೊಟ್ಟಾಗ 'ಅಂಬಿಗೆ ನಿಜಕ್ಕೂ ಬಂದಿರುವುದು ಪೊಲಿಟಿಕಲ್ ಸಿಂಡ್ರೋಮ್' ಎಂದಿದ್ದರು. ಅವರ ಆರೋಗ್ಯ ಕೆಡಲು ಅದೇ ಕಾರಣವಾಯಿತು ಎಂದು ಪ್ರತಿಪಾದಿಸಿದ್ದರು. ಬಹುಶಃ ನಮ್ಮೊಳಗೂ ಪೊಲಿಟಿಕಲ್ ಸಿಂಡ್ರೋಮ್ನ ವೈರಸ್ಗಳು ನುಗ್ಗಿದವಾ? ಸಿಂಗಾಪುರಕ್ಕೆ ನಾವೂ ಹಾರಬೇಕಾ?
ನಮ್ಮೊಳಗೆ ಆಪ್ತ ಗೂಡು ಕಟ್ಟಿದ್ದ ಎಲ್ಲದರ ಮೇಲೂ ಈ ರಾಜಕೀಯ ದಾಳಿ ಮಾಡಿ ಕೊಂದಿದೆ. ಆದರೂ, ನಮಗೆ ಅದರ ಆರಾಧನೆ ಬೇಕು. ಇವತ್ತು ಎಲೆಕ್ಷನ್ ಮುಗಿಯುತ್ತದೆ. ಈ ರೋಗಕ್ಕೂ ಇವತ್ತು ಕೊನೆಯ ದಿನ. ನಾಳೆಯಿಂದ ಸ್ವಸ್ಥರಾಗಿ ಉಸಿರಾಡೋಣ.
-ಕೀರ್ತಿ ಕೋಲ್ಗಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


