ಬೇಣಿ ವಿರುದ್ಧ ಎಫ್ಐಆರ್

ಗೊಂಡಾ: ಚುನಾವಣಾ ಆಯೋಗದ ಎಚ್ಚರಿಕೆಯ ನಡುವೆಯೂ ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ ಪದೇ ಪದೆ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದಾರೆ. ಶನಿವಾರ ಮತ್ತೆ ಅವರು ಅದೇ ತಪ್ಪು ಮಾಡಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಉತ್ತರಪ್ರದೇಶದ ಗೊಂಡಾದಲ್ಲಿ ಮಾತನಾಡಿದ್ದ ಬೇಣಿ, 'ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಸೃಷ್ಟಿಸುವ, ಅವರನ್ನು ವಿಭಜಿಸುವ ಮೋದಿ ಅವರು ನಿಜಕ್ಕೂ ಮನುಷ್ಯರೇ? ಖಂಡಿತಾ ಅಲ್ಲ, ಅವರೊಬ್ಬ ರಾಕ್ಷಸ' ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಛಾಪಿಯಾ ಪೊಲೀಸ್ ಠಾಣೆಯಲ್ಲಿ ಬೇಣಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಆಯೋಗಕ್ಕೆ ಪಾಕ್ ಶ್ಲಾಘನೆ
ಇಸ್ಲಾಮಾಬಾದ್: ಭಾರತದ ಚುನಾವಣೆ ಆಯೋಗವನ್ನು ನೋಡಿ ಪಾಕ್ ಕಲಿಯಬೇಕು. ಹೀಗೆಂದು ಹೇಳಿದ್ದು ಬೇರ್ಯಾರೂ ಅಲ್ಲ, ಪಾಕಿಸ್ತಾನದ ಜಮಾತ್-ಎ-ಇಸ್ಲಾಮಿ ಪಕ್ಷದ ವರಿಷ್ಠ ಸಿರಾಜ್ ಉಲ್ ಹಖ್. ಭಾರತದಲ್ಲಿ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯನ್ನು ನಡೆಸುತ್ತಿರುವ ಬಗೆಯನ್ನು ಶ್ಲಾಘಿಸಿದ ಹಖ್, ಭಾರತದ ಆಯೋಗವು ರಾಜಕೀಯ ಹಾಗೂ ಸೇನಾ ಪ್ರಭಾವದಿಂದ ಕಾರ್ಯನಿರ್ವಹಿಸುವುದಿಲ್ಲ. ಪಾಕಿಸ್ತಾನದ ಸಂಸ್ಥೆಯೂ ಇದೇ ರೀತಿ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ.
ಪತ್ರಿಕಾಗೋಷ್ಠಿ ಸ್ಥಳ ಪರೀಕ್ಷೆ
ಅಹಮದಾಬಾದ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮತಗಟ್ಟೆಯೊಂದರ ಬಳಿಯೇ ಸುದ್ದಿಗೋಷ್ಠಿ ನಡೆಸಿ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸ್ಥಳವನ್ನು ಅಹಮದಾಬಾದ್ನ ಕ್ರೈಂ ಬ್ರಾಂಚ್ ಅಧಿಕಾರಿಗಳು ಪರಿಶೀಲಿಸಿದ್ದಾರೆ. ತನಿಖೆಯು ಪ್ರಗತಿಯಲ್ಲಿದ್ದು, ಮೋದಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದು ನಿಜವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಬಾ ವಿರುದ್ಧ ಕೇಸು ದಾಖಲಿಸಿ
ಜೋಧ್ಪುರ: 'ರಾಹುಲ್ ಹನಿಮೂನ್' ಹೇಳಿಕೆ ನೀಡಿದ ಯೋಗಗುರು ರಾಮ್ದೇವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿ ಎಂದು ಜೋಧ್ಪುರದ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಜೋಧ್ಪುರದ ವಿಜಯ್ ರಾವ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಹಿರಿಯ ಮತದಾರನಿಗೆ ಭಯ
ಕಲ್ಪಾ: 'ಈ ಬಾರಿ ನನಗೆ ಸ್ವಲ್ಪ ನರ್ವಸ್(ತಳಮಳ) ಆಗುತ್ತಿದೆ'. ಇದು ದೇಶದ ಮೊದಲ ಮತದಾರನ ಮಾತು. 1951ರ ಮೊದಲ ಚುನಾವಣೆಯಿಂದ ಈವರೆಗೆ ತಪ್ಪದೇ ಮತದಾನ ಮಾಡುತ್ತಾ ಬಂದಿರುವ ಹಿಮಾಚಲಪ್ರದೇಶದ ಶ್ಯಾಮ್ ನೇಗಿ (97) ಅವರು, ಈ ಬಾರಿ ನನಗೆ ಸ್ವಲ್ಪ ನರ್ವಸ್ ಆಗುತ್ತಿದೆ ಎಂದಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ವರ್ಷ ಅವರ ಬಗ್ಗೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ಮಾಡಿವೆ, ಜಾಹೀರಾತೊಂದರಲ್ಲೂ ನೇಗಿ ಕಾಣಿಸಿಕೊಂಡಿದ್ದಾರೆ. ಜತೆಗೆ ಹಿಮಾಚಲ ಚುನಾವಣಾ ಆಯೋಗ ಸನ್ಮಾನಿಸಲು ತೀರ್ಮಾನಿಸಿದೆ. ಹಾಗಾಗಿ ಅವರಿಗೆ ತಳಮಳ ಉಂಟಾಗುತ್ತಿದೆಯಂತೆ.
ಗಿರಿರಾಜ್ಗೆ ಜಾಮೀನಿಲ್ಲ
ದಿಯೋಗಡ: ಪ್ರಚೋದನಕಾರಿ ಭಾಷಣ ಮಾಡಿ ವಿವಾದಕ್ಕೀಡಾಗಿರುವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಾರ್ಖಂಡ್ನ ಕೋರ್ಟ್ ತಿರಸ್ಕರಿಸಿದೆ. ವಾರದ ಹಿಂದಷ್ಟೇ ಸಿಂಗ್ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದ್ದ ದಿಯೋಗಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಂಕಜ್ ಶ್ರೀವಾಸ್ತವ ಅವರು ಶನಿವಾರ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದಾರೆ.
50 ಲಕ್ಷ ದಾಟದ ಚು. ವೆಚ್ಚ
ಬಾಗಲಕೋಟೆ: ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳು ಖರ್ಚಿನ ವಿಚಾರದಲ್ಲಿ ಅತ್ಯಂತ ಜಾಗರೂಕತೆ ಪ್ರದರ್ಶಿಸಿದ್ದಾರೆ. ಚುನಾವಣಾ ಆಯೋಗವು ಅಭ್ಯರ್ಥಿಗಳ ವೆಚ್ಚವನ್ನು 70 ಲಕ್ಷಕ್ಕೆ ಸೀಮಿತಗೊಳಿಸಿತ್ತು. ಆದರೆ ಜಿಲ್ಲೆಯ ಆರು ಪ್ರಮುಖ ಅಭ್ಯರ್ಥಿಗಳಲ್ಲಿ ಯಾರೊಬ್ಬರ ಚುನಾವಣಾ ವೆಚ್ಚವೂ ಅರ್ಧ ಕೋಟಿ ದಾಟಿಲ್ಲ! ಕಾಂಗ್ರೆಸ್ನ ಅಜಯಕುಮಾರ ಸರನಾಯಕ 36,29,532, ಪಕ್ಷೇತರ ಅಭ್ಯರ್ಥಿ ಶಂಕರ ಬಿದರಿ 27,88,901, ಬಿಜೆಪಿಯ ಗದ್ದಿಗೌಡರ 13,00,938, ಆಮ್ ಆದ್ಮಿ ಪಕ್ಷದ ಖುತುಬುದ್ದೀನ್ ಖಾಜಿ 4,96,387, ಸಂಯುಕ್ತ ಜನತಾದಳದ ಕಣಬೂರು ಸದಾಶಿವಪ್ಪ ಸಿದಮಲ್ಲಪ್ಪ 4,39,800 ವೆಚ್ಚ ಮಾಡಿದ್ದಾರೆ. ಜೆಡಿಎಸ್ನ ರವಿ ಹುಣಶ್ಯಾಳ ಅವರು 1,74,910 ವೆಚ್ಚ ಮಾಡಿದ್ದಾರೆ! ಈ ವೆಚ್ಚವು ಅಭ್ಯರ್ಥಿಗಳು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವುದಾಗಿದೆ. ಇದೇ ಅಂತಿಮವಲ್ಲ. ಚುನಾವಣಾ ಅಧಿಕಾರಿಗಳು ತಾವು ನಿಗಾವಹಿಸಿದ ಮತ್ತೊಂದಿಷ್ಟು ವೆಚ್ಚವನ್ನು ಅಭ್ಯರ್ಥಿಗಳ ಪಟ್ಟಿಗೆ ಸೇರ್ಪಡೆ ಮಾಡಿಸುವ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ಅಧಿಕಾರಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


