ದೇಶ

ಮೋದಿಗೆ ಹಿರಿಕಿರಿ ಸವಾಲು

ಮೋದಿಗೆ ಹಿರಿಕಿರಿ ಸವಾಲು
Published On :

ನವದೆಹಲಿ: ಮನೆ ತುಂಬ ಹಿರಿಯರೇ ಇರುವುದರಿಂದ ಭಾವಿ ಪ್ರಧಾನಿ ನರೇಂದ್ರ ಮೋದಿ ಅವರಿಗೀಗ ಸಂಪುಟ ರಚನೆಯೇ ದೊಡ್ಡ ಸವಾಲು. ಬಿಜೆಪಿಗೆ ಸಿಕ್ಕಿರುವುದು 'ಮೋದಿ ಗೆಲವು' ಆಗಿರುವುದರಿಂದ ಸಂಪುಟ ರಚನೆಯಲ್ಲಿ ಮುಕ್ತ ಸ್ವಾತಂತ್ರ್ಯ ಸಿಗುತ್ತದೆ ಎನ್ನುವುದು ನಿರ್ವಿವಾದ. ಆದರೂ ಹಳಬರನ್ನು ಕಡೆಗಣಿಸದೆ, ಹೊಸಬರಿಗೂ ಅವಕಾಶ ಕಲ್ಪಿಸುವುದು ಸುಲಭದ ಮಾತಂತೂ ಅಲ್ಲ.
ಹಿರಿಯ ನಾಯಕ ಆಡ್ವಾಣಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಬಹುತೇಕ ಒಪ್ಪಿಸುವ ಮೂಲಕ ದೊಡ್ಡ ಸಂಕಷ್ಟವೊಂದನ್ನು ಮೋದಿ ನಿವಾರಿಸಿಕೊಂಡಿದ್ದಾರೆ. ಅದರೆ ಗೆದ್ದಿರುವ ಹಿರಿಯರಲ್ಲಿ ಹೆಚ್ಚಿನವರು ವಾಜಪೇಯಿ ಸಂಪುಟದಲ್ಲಿಯೂ ಸಚಿವರಾಗಿದ್ದವರು. ಕೆಲವರು ಮಾಜಿ ಮುಖ್ಯಮಂತ್ರಿಗಳು, ಹಲವರು ಪಕ್ಷದ ರಾಜ್ಯಾಧ್ಯಕ್ಷರಾಗಿ ದುಡಿದವರು. ಅವರನ್ನೆಲ್ಲ ಸಮಾಧಾನಿಸುವುದು ಹೇಗೆ ಎನ್ನುವುದೇ ಪ್ರಶ್ನೆ.
ಮೋದಿ ಆಪ್ತರ ಪ್ರಕಾರ, ಸಂಪುಟದಲ್ಲಿ ಹಳಬರು, ಹೊಸಬರಿಗೆ ಸಮಾನ ಅವಕಾಶ ನೀಡಲಾಗುತ್ತದೆ. ಇದೇ ಮೊದಲ ಸಲ ಗೆದ್ದವರಿಗೆ ಆದ್ಯತೆ ನೀಡುವುದು ಮೋದಿ ಬಯಕೆ. ಹಿರಿತಲೆಗಳ ಪೈಕಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಶಾಂತಕುಮಾರ್, ಬಿ.ಎಸ್.ಯಡಿಯೂರಪ್ಪ, ಗೋಪಿನಾಥ ಮುಂಡೆ, ಬಿ.ಸಿ.ಖಂಡೂರಿ, ರವಿಶಂಕರ್ ಪ್ರಸಾದ್ ಸಚಿವರಾಗುವುದು ಖಚಿತ. ಸುಷ್ಮಾ ರಕ್ಷಣೆ, ಜೇಟ್ಲಿ ಗೃಹ, ಹಣಕಾಸು ಅಥವಾ ವಿದೇಶಾಂಗ ಖಾತೆ ಪಡೆಯಬಹುದು. ಮುರಳಿ ಮನೋಹರ ಜೋಶಿ, ಅನಂತಕುಮಾರ್, ಯಶವಂತ ಸಿನ್ಹಾ, ಉಮಾಭಾರತಿ, ವೆಂಕಯ್ಯ ನಾಯ್ಡು ಅವರನ್ನು ಹೇಗೆ ಸಂಭಾಳಿಸುವುದು ಎನ್ನುವ ಪ್ರಶ್ನೆ ಮೋದಿ ಮುಂದಿದೆ. ಇವರೆಲ್ಲ ಸಂಪುಟ ಸೇರಲು ತುದಿಗಾಲಲ್ಲಿ ನಿಂತವರೇ. ಸಂಪುಟ ರಚನೆ ವಿಚಾರದಲ್ಲಿ ಆರ್‌ಎಸ್‌ಎಸ್ ಸಹಕಾರವನ್ನೂ ಮೋದಿ ಪಡೆಯುವ ಸಾಧ್ಯತೆಗಳಿವೆ. ಕೇಂದ್ರ ಸಂಪುಟ ಪ್ರಧಾನಿ ಸೇರಿ ಗರಿಷ್ಠ 81 ಸದಸ್ಯರನ್ನು ಒಳಗೊಳ್ಳಬಹುದು.
ಪಕ್ಷದ ಹೊರಗಿನ ತಜ್ಞರನ್ನು ಸಂಪುಟಕ್ಕೆ ಸೇರಿಸಿಕೊಂಡು ಅವರಿಗೆ ಹಣಕಾಸು, ಸಾರಿಗೆ, ಹೆದ್ದಾರಿ, ರೈಲ್ವೆ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಮೊದಲಾದ ಪ್ರಮುಖ ಖಾತೆಗಳನ್ನು ನೀಡುವ ಇರಾದೆಯೂ ಮೋದಿ ಮನದಲ್ಲಿದೆ. ಈಗಾಗಲೇ ಹಣಕಾಸು ಖಾತೆಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಕೆ.ವಿ.ಕಾಮತ್ ಅವರ ಹೆಸರು ಚಾಲ್ತಿಯಲ್ಲಿದೆ.
ಇನ್ನು ಖಾತೆ ಮತ್ತು ಸ್ಥಾನ ಹಂಚಿಕೆ ವಿಚಾರದಲ್ಲಿ ಮಿತ್ರಪಕ್ಷಗಳನ್ನು ಓಲೈಸುವ ಅನಿವಾರ್ಯತೆ ಮೋದಿ ಅವರಿಗಿಲ್ಲ. ಆದಾಗ್ಯೂ ಬಹುಕಾಲದ ಮಿತ್ರ ಶಿವಸೇನೆಗೆ ಮಹತ್ವದ ಒಂದೆರಡು ಖಾತೆಗಳನ್ನು ಮೋದಿ ನೀಡಬಹುದು. ಇದೇ ಔದಾರ್ಯವನ್ನು ಶಿರೋಮಣಿ ಅಕಾಲಿದಳ, ಟಿಡಿಪಿ, ಎಲ್‌ಜೆಪಿ ಮೊದಲಾದ ಪಕ್ಷಗಳ ವಿಚಾರದಲ್ಲಿ ಮೋದಿ ತೋರುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ. 'ನಾವೀಗ ಚೌಕಾಸಿ ಮಾಡುವ ಸ್ಥಿತಿಯಲ್ಲಿಲ್ಲ. ನಮಗೆ ಸಂಪುಟದಲ್ಲಿ ಎಷ್ಟು ಸ್ಥಾನ ನೀಡುತ್ತಾರೆಯೋ ಅಷ್ಟನ್ನು ಒಪ್ಪಿಕೊಳ್ಳುವುದು ಅನಿವಾರ್ಯ' ಎಂದು ಟಿಡಿಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಮೋದಿಯಿಂದ ಕಲಿಯಬಹುದಾದ ಮ್ಯಾನೇಜ್‌ಮೆಂಟ್ ಐದು ಪಾಠಗಳು
ಪೊಸಿಷನಿಂಗ್
ಕಂಪನಿಯೊಂದರ ಉತ್ಪನ್ನ ಯಶಸ್ವಿಯಾಗಬೇಕಾದರೆ ಅದು ಹೊಸತಾಗಿರಬೇಕು. ಜನರ ಕಣ್ಣಿಗೆ ಆಕರ್ಷಕವಾಗಿ ಕಾಣುವಂತಿರಬೇಕು. ಇದೆಲ್ಲಕ್ಕಿಂತ ಹೆಚ್ಚಾಗಿ ಆ ಉತ್ಪನ್ನದ ಅಗತ್ಯ ಕಾಣಬೇಕು. ಈ ಚುನಾವಣೆಯಲ್ಲಿ ಮೋದಿ ಎಲ್ಲರಿಗೂ ಪರಿಚಿತ ಮುಖ. ಆದರೆ, ಅವರು ತಮ್ಮನ್ನು ತಾವು ಜನರ ಮುಂದೆ ಪ್ರಸ್ತುತಪಡಿಸಿದ್ದು, ಹೊಸ ವ್ಯಕ್ತಿಯಾಗಿ ತೋರಿಸಿಕೊಂಡದ್ದು ಮತ್ತು ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ನೀಡಿದ ಭರವಸೆ ವಿಶಿಷ್ಟವಾಗಿತ್ತು. ಹಾಗಾಗಿ 10 ವರ್ಷಗಳಲ್ಲಿ ನೋಡಿದ್ದನ್ನೇ ನೋಡಿದ್ದ ಜನ ಹೊಸತನ್ನು ಸಹಜವಾಗಿಯೇ ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿದರು.
ಸಾಮಾಜಿಕ ಜಾಲತಾಣ ನಿರ್ವಹಣೆ
ಈ ಚುನಾವಣೆ ನಿಜವಾಗಿ ನಡೆದದ್ದು ಸಾಮಾಜಿಕ ಜಾಲತಾಣಗಳಲ್ಲಿ. ಪ್ರಚಾರಾಂದೋಲನದ ಭಾಗವಾಗಿ ಪಕ್ಷದ ಮುಖಂಡರು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹೆಚ್ಚು ಕ್ರಿಯಾಶೀಲರಾಗುವಂತೆ ಮೋದಿ ಸೂಚಿಸಿದರು. ಜತೆಗೆ, ಯುವ ಜನರೊಂದಿಗೆ ಹೆಚ್ಚು ಸಂಪರ್ಕದಲ್ಲಿರುವಂತೆ ನೋಡಿಕೊಂಡರು. ಅಂತರ್ಜಾಲದಲ್ಲಿ  ಬಿಜೆಪಿಯ ಪ್ರಚಾರಾಲೋಂದನ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಇಡೀ ಇಂಟರ್ನೆಟ್ ಕೇಸರೀಕರಣ ಆಗಿತ್ತು ಎಂದು ಇಂಡಿಯಾ ಟುಡೆ ನಡೆಸಿದ ಸರ್ವೆ ಹೇಳಿತ್ತು.
ಸಮಯದ ಆಯ್ಕೆ
ಜನಸಾಮಾನ್ಯ ಬೆಲೆ ಏರಿಕೆಯಿಂದ ತತ್ತರಿಸಿದ್ದಾಗ ಮೋದಿ ತಮ್ಮ ಪ್ರಚಾರಾಂದೋಲನ ಆರಂಭಿಸಿದರು. ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಅಭಯ ಹಸ್ತ ನೀಡುವ ವಿಶ್ವಾಸ ವ್ಯಕ್ತಪಡಿಸಿದರು. ಜಾಹೀರಾತು ಆಂದೋಲನ, ಪ್ರಚಾರ ಚಟುವಟಿಕೆಗಳು, ಚಾಯ್‌ಪೆ ಚರ್ಚಾ, 3ಡಿ ಹೋಲೋಗ್ರಾಂ ಭಾಷಣಗಳು ಹೆಚ್ಚು ಜನರನ್ನು ತಲುಪಿದವು. ಇದು ಕಾಂಗ್ರೆಸ್‌ಗೆ ಸಾಧ್ಯವಾಗಲೇ ಇಲ್ಲ.
ಸಂವಹನ ತಂತ್ರ
ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದರ ಬೆಂಬಲದೊಂದಿಗೆ ತಮ್ಮ ಪ್ರಚಾರಾಂದೋಲನಕ್ಕೆ ಗಮನ ಸೆಳೆಯುವ ಪಂಚ್‌ಲೈನ್‌ಗಳನ್ನು ಅಳವಡಿಸಿಕೊಂಡರು ಮೋದಿ. 'ಜನತಾ ಮಾಫ್ ನಹೀ ಕರೇಗೀ', ಅಬ್ ಕಿ ಬಾರ್ ಮೋದಿ ಸರ್ಕಾರ್‌', 'ಅಚ್ಚೆ ದಿನ್ ಆನೇ ವಾಲೇ ಹೇ' ನಂಥ ಹೇಳಿಕೆಗಳು ಜನರನ್ನು ಸುಲಭವಾಗಿ ಆಕರ್ಷಿಸಿದವು. ಈ ಎರಡು ಪಂಚ್‌ಲೈನ್‌ಗಳು ಎರಡು ವರ್ಗದ ಜನರನ್ನು ತಲುವಂತಿದ್ದವು. ಮೊದಲನೆಯದು ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರು, ಎರಡನೆಯ ವರ್ಗ ಯುವಜನರು.
ಶಕ್ತಿ, ದೌರ್ಬಲ್ಯ, ಅವಕಾಶವಾದ
10 ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಒಂದರ ಹಿಂದೊಂದರಂತೆ ತಪ್ಪುಗಳನ್ನು ಮಾಡುತ್ತಲೇ ಇತ್ತು. ಕಾಂಗ್ರೆಸ್‌ನ ಈ ತಪ್ಪುಗಳನ್ನು ಮೋದಿ ಹತ್ತಿರದಿಂದ ಗಮನಿಸುತ್ತಾ ಬಂದರು. ಕಾಂಗ್ರೆಸ್ ತಪ್ಪುಗಳನ್ನು ತಮಗೆ ಹಾಗೂ ಪಕ್ಷಕ್ಕೆ ಲಾಭದಾಯಕವಾಗಿ ಬಳಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.