

ಮೈಸೂರು: ತೀವ್ರ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಪ್ರಕರಣ ಸಂಬಂಧ ಮೈಸೂರು ಪೊಲೀಸರು ಪ್ರಮುಖ ಆರೋಪಿ ಅಬೀದ್ ಪಾಷಾ ಎಂಬಾತನನ್ನು ಶನಿವಾರ ಬಂಧಿಸಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬೀದ್ ಪಾಷಾ ಕೋಮು ಘರ್ಷಣೆಯ ಹಿನ್ನಸೆಯಲ್ಲಿ ಆರ್ ಎಸ್ ಎಸ್ ಹಿನ್ನಲೆ ಹೊಂದಿದ್ದ ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ಹತ್ಯೆಗೈದಿದ್ದ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇಂದು ಆಬೀದ್ ಪಾಷಾನನ್ನು ಮೈಸೂರಿಲ್ಲಿ ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಆರೋಪಿ ಆಬೀದ್ ಪಾಷಾ ಹುಣಸೂರಿನ ಬಜಾರ್ ರಸ್ತೆ ನಿವಾಸಿಯಾಗಿದ್ದು, ಇಂದು ಬೆಳಗ್ಗೆ ಆರೋಪಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಆಗಸ್ಟ್ 12ರ ತನಕ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಬಂಧಿತ ಆರೋಪಿ ಅಬೀದ್ ಪಾಷಶಾ ವಿರುದ್ಧ ಸುಮಾರು 7 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಹುಣಸೂರಿನ ಉದ್ಯಮಿ ಮೋಹನ್ ಕುಮಾರ್ ಅವರ ಪುತ್ರ ಸುಧೀಂದ್ರ ಹಾಗೂ ಆತನ ಸ್ನೇಹಿತ ವಿಘ್ನೇಶ್‌ನನ್ನು 2011ರ ಜೂನ್‌ನಲ್ಲಿ ಹಣಕ್ಕಾಗಿ ಅಪಹರಣ ಮಾಡಿ ಕೊಲೆ ಮಾಡಿದ ಆರೋಪ ಕೂಡ ಅಬೀದ್ ಪಾಷಾ ಮೇಲಿದೆ. ಈ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ಅಬೀದ್‌ನ ಮೂವರು ಸಹಚರರನ್ನು ಬಂಧಿಸಿದ್ದರು ಮತ್ತು ನ್ಯಾಯಾಲಯಕ್ಕೆ ಅಬೀದ್ ನಾಪತ್ತೆಯಾಗಿದ್ದಾನೆ ಎಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ರಾಜು ಪ್ರಮುಖ ಸಾಕ್ಷಿಯಾಗಿದ್ದರು. ಇದೇ ಹಿನ್ನಲೆಯಲ್ಲಿ ಅವರನ್ನು ಹತ್ಯೆಗೈಯ್ಯಲಾಗಿದೆಯೇ ಎಂಬ ಶಂಕೆ ಕೂಡ ವ್ಯಕ್ತವಾಗಿತ್ತು.
ಪೊಲೀಸ್ ಮೂಲಗಳ ಪ್ರಕಾರ ರಾಜು ಹತ್ಯೆ ಬಳಿಕ ಅಬೀದ್ ಪಾಷಾ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ. ಬಳಿಕ ಕೆಲವು ದಿನಗಳ ಹಿಂದೆ ಮೈಸೂರಿನ ಉದಯಗಿರಿಗೆ ಬಂದು ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.